spot_img
spot_img

ಈ ಸಾವಕಾರರಿಂದಾಗಿ ನಮಗ ನೀರಿನ ಸಮಸ್ಯಾ ಇಲ್ದಂಗಾಗೇತಿ

Must Read

- Advertisement -

ರೈತನೊಬ್ಬನ ಮನದಾಳದ ಮಾತು

ಮೂಡಲಗಿ: ಈ ಸಾವಕಾರರಿಂದಾಗಿ ೨-೩ ವರ್ಷದಿಂದ ನಮಗ ನೀರಿನ ಸಮಸ್ಯಾ ಇಲ್ಲದಾಂಗಾಗೇತಿ ನೋಡ್ರಿ ….ಎಂದು ಮುಗ್ಧತೆಯಿಂದ ಆ ರೈತ ಹೇಳುತ್ತಿದ್ದರೆ ಯಾವ ಸಾವಕಾರ್ರು ಎಂದು ಕೇಳಬೇಕೆನಿಸಿತಾದರೂ ಇಲ್ಲಿ ಅರಭಾವಿ ಕ್ಷೇತ್ರದಲ್ಲಿ ಸಾವಕಾರರೆಂದು ಖ್ಯಾತರಾಗಿರುವವರು ಶಾಸಕ ಬಾಲಚಂದ್ರ ಜಾರಕಿಹೊಳಿಯವರಲ್ಲದೆ ಮತ್ಯಾರು ಎಂಬ ಪ್ರಶ್ನೆ ಹೊಳೆದು ಹೋಯಿತು.

ಅಂತದ್ದೇನಾಗಿದೆ ಎಂದು ಅದೇ ರೈತನನ್ನು ಕೇಳಿದರೆ, ಆತ ನಿಂತಿದ್ದು ಒಂದು ಸಣ್ಣ ಕಾಲುವೆಯಲ್ಲಿ ಅದೇ ನೀರಿನಲ್ಲಿ ಕೈಯಾಡಿಸುತ್ತ ತನ್ನ ಹೊಲವೆಲ್ಲ ನೀರು ಹಾಯ್ದು ಸಂತೃಪ್ತವಾದ ಭಾವದಲ್ಲಿ ಮಾತನಾಡುತ್ತ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಘಟಪ್ರಭಾ ಎಡದಂಡೆ ಕಾಲುವೆಯ ರೈತರಿಗೆ ಸಮಯಾನುಸಾರ ನೀರಿನ ಅನುಕೂಲ ಮಾಡಿಕೊಟ್ಟ ಬಗ್ಗೆ ಪ್ರಾಮಾಣಿಕವಾಗಿ ಹೇಳಿಕೊಂಡ.

- Advertisement -

ಸುಮಾರು ಐದು ವರ್ಷಗಳಿಗಿಂತ ಮೊದಲಿನ ಪರಿಸ್ಥಿತಿ ಅವಲೋಕಿಸಿದರೆ, ಕಾಲುವೆ ನೀರಿಗಾಗಿ ರೈತ ಹಪಹಪಿಸುತ್ತಿದ್ದ. ಮಳೆಗಾಲ, ಚಳಿಗಾಲದಲ್ಲಿ ಕಾಲುವೆ ತುಂಬಿ ಹರಿಯುತ್ತಿತ್ತು. ಆದರೇನು ? ಆಗ ಬೆಳೆಗಳಿಗೆ ಹೆಚ್ಚು ನೀರು ಬೇಕಾಗುತ್ತಿರಲಿಲ್ಲ. ಬೇಕಾದರೂ ಎಲ್ಲ ಬಾಂವಿ, ಬೋರ್ ವೆಲ್ ಗಳಲ್ಲಿ ನೀರಿರುತ್ತಿತ್ತು. ಸಮಸ್ಯೆ ಆರಂಭವಾಗೋದು ಫೆಬ್ರುವರಿ ತಿಂಗಳ ನಂತರ. ಇನ್ನೇನು ಕೆನಾಲ್ ನೀರು ಬಂದ್ ಆಗುತ್ತದೆ. ಹಿಂಗಾರಿ ಬೆಳೆಗಳಿಗೆ ನೀರುಣಿಸುವುದು ಹೇಗೆ ಎಂಬುದು ಪ್ರತಿವರ್ಷದ ಚಿಂತೆಯಾಗಿತ್ತು. ಕಾಲುವೆ ನೀರು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಬಂದ್ ಆದರೆ ಮತ್ತೆ ಹರಿದು ಬರುವುದು ಜುಲೈ ತಿಂಗಳಲ್ಲಿ. ಅಲ್ಲಿಯವರೆಗೆ ರೈತರ ಬೆಳೆಗಳು ಹಾಗೂ ರೈತರ ಮುಖಗಳನ್ನು ನೋಡಲಾಗುತ್ತಿರಲ್ಲ. ಅಂಥ ಬೇಸಿಗೆಯಲ್ಲಿ ಯಾವನ ಬೆಳೆ ಹಸಿರಾಗಿತ್ತೋ ಅವನೇ ದೊಡ್ಡ ರೈತ ! ಅಂದರೆ ನೀರಿನಿಂದ ಸಮೃದ್ಧ ! ಪ್ರತಿವರ್ಷ ಕಾಲುವೆಗೆ ನೀರು ಬಿಡಿಸಿಕೊಂಡು ಬರಲು ಶಾಸಕರ ಹತ್ತಿರ ರೈತರು ದೌಡಾಯಿಸುತ್ತಿದ್ದರು.

ಇತ್ತೀಚಿನ ವರ್ಷಗಳಲ್ಲಿ ಒಂದು ಬದಲಾವಣೆಯಾಗಿದೆ. ಅದೇನೆಂದರೆ, ಕಾಲುವೆ ನೀರನ್ನು, ಚಳಿಗಾಲದಲ್ಲಿ ಹದಿನೈದು ದಿನಗಳು ಬಂದ್ ಮಾಡಿ ಹದಿನೈದು ದಿನ ನೀರು ಹರಿಸುವುದು. ಇದರಿಂದ ಕಾಲುವೆಯಲ್ಲಿ ವಿನಾಕಾರಣ ನೀರು ಹರಿದು ಹೋಗುವುದು ನಿಂತಿದೆ ! ಉಳಿತಾಯದ ನೀರನ್ನೇ ಬೇಸಿಗೆಯಲ್ಲಿ ದನಕರುಗಳಿಗಾಗಿ ಕುಡಿಯಲು ಬಿಡುತ್ತಾರೆ. ಇದರಿಂದ ಬಾವಿಗಳು, ಬೋರ್ ಗಳ ನೀರು ತಳ ಸೇರುವುದಿಲ್ಲ. ಹಿಂಗಾರಿ ಬೆಳೆಗಳಿಗೂ ಸಮೃದ್ಧ ನೀರು !

- Advertisement -

ಹಿಡಕಲ್ ಜಲಾಶಯದ ಅಧಿಕಾರಿಗಳ ಜೊತೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ದೂರದೃಷ್ಟಿಯ ಈ ಯೋಚನೆ ಇಂದು ರೈತರಿಗೆ ಬಹು ಉಪಯೋಗಿಯಾಗಿದೆ. ಇಂದು ರೈತರು ಮನದುಂಬಿ ಮಾತನಾಡುವಂತಾಗಿದೆ.

ರೈತರ ಸಮಸ್ಯೆಗಳ ಬಗ್ಗೆ ಸಾವಕಾರ್ರು ಮೊದಲಿನಿಂದಲೂ ಗಮನ ಕೊಡುತ್ತಲೇ ಇದ್ದಾರೆ. ಆದರೆ ಕ್ಷೇತ್ರದಲ್ಲಿ ಗೊಬ್ಬರ, ಬೀಜ ಹಾಗೂ ಬೆಳೆ ಔಷಧಿಗಳ ಹೆಸರಿನಲ್ಲಿ ರೈತರಿಗೆ ಬೆಲೆಯ ವಿಷಯದಲ್ಲಿ ಶೋಷಣೆ ಮಾಡಲಾಗುತ್ತಿದೆ. ಹೆಚ್ಚಿನ ಬೆಲೆ ವಿಧಿಸುವುದಲ್ಲದೆ ಉದ್ರಿ ತಂದಾಗ ಬಾಕಿಗೆ ಸಿಕ್ಕಾಪಟ್ಟೆ ಬಡ್ಡಿ ವಸೂಲು ಮಾಡಲಾಗುತ್ತಿದೆ. ಇದರ ಬಗ್ಗೆ ಶಾಸಕರು ಗಮನ ಹರಿಸಬೇಕು. ರೈತ ಸಂಪರ್ಕ ಕೇಂದ್ರ ತೆರೆದು ಎಲ್ಲ ಯೋಜನೆಗಳು ರೈತರಿಗೆ ತಲುಪುವಂತೆ ಮಾಡಬೇಕೆಂಬುದು ರೈತವರ್ಗದ ಆಶಯವಾಗಿದೆ.

ಬೆಳೆ ಬೆಳೆಯುವುದಷ್ಟೇ ಅಲ್ಲದೆ ರೈತನ ಉಪ ಕಸುಬುಗಳಾದ ಕೋಳಿ ಫಾರ್ಮ್, ಹಂದಿ ಸಾಕಣೆ, ಆಡು ಸಾಕಣೆ, ದನಗಳ ಸಾಕಣೆಯಂಥ ಉದ್ಯೋಗಗಳಿಗೆ ನೆರೆಹೊರೆಯ ಹೊಟ್ಟೆ ಕಿಚ್ಚಿನ ವ್ಯಕ್ತಿಗಳಿಂದ ತೊಂದರೆಗಳು ಬಾರದಂತೆ ತಡೆಯಲೂ ಕೂಡ ಶಾಸಕರು ಮುತುವರ್ಜಿ ವಹಿಸಬೇಕಾಗಿದೆ. ಅನಧಿಕೃತವಾಗಿ, ನಿಯಮಗಳನ್ನು ಉಲ್ಲಂಘಿಸಿ ಶಾಲೆಗಳನ್ನು ತೆರೆದು ರೈತರಿಗೆ ಕಾಟ ಕೊಡುವವರನ್ನು ನಿರ್ಬಂಧಿಸಬೇಕು. ಅಂಥ ಶಾಲೆಗಳಿಗೆ ದುಡ್ಡು ತಿಂದು ಪರವಾನಿಗೆ ನೀಡುವ ಶೈಕ್ಷಣಿಕ ಅಧಿಕಾರಿಗಳ ಮೇಲೆ ಶಾಸಕರು ಸೂಕ್ತ ಕ್ರಮ ಜರುಗಿಸಬೇಕು. ಸ್ವಸಹಾಯ ಸಂಘ, ಗ್ರಾಮೀಣಾಭಿವೃದ್ಧಿ ಸಂಘಗಳ ಹೆಸರಿನಲ್ಲಿ ಸಂಘದ ಹಣವನ್ನು ಸುಳ್ಳು ಯೋಜನೆಗಳಿಗೆ ಖರ್ಚು ಮಾಡಿ ಗುಳುಂ ಮಾಡುತ್ತಿರುವವರನ್ನು ಮಟ್ಟ ಹಾಕಿ ರೈತರನ್ನು ಕಾಪಾಡಬೇಕಾಗಿದೆ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group