spot_img
spot_img

ಅಧಿಕಾರಿಗಳ ಹೆಗಲ ಮೇಲೆ ನಿಂತಿದೆ ನಾಗನೂರಿನ ಸಮರ್ಥ ಶಾಲೆ

Must Read

- Advertisement -

ಅಡ್ಡ ಗೋಡೆಯ ಮೇಲೆ ದೀಪ ಇಡುವ ಕ್ಷೇತ್ರ ಶಿಕ್ಷಣಾಧಿಕಾರಿ

ಮೂಡಲಗಿ: ಯಾರಾದರೂ ನಮ್ಮಂಥವರು ಶಾಲೆ ಆರಂಭಿಸಬೇಕೆಂದು ಹೊರಟರೆ ನಿಯಮಗಳ ಜಾಲ ಬೀಸಿ ಅಡ್ಡಗಾಲು ಹಾಕು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಸಮರ್ಥ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯ ವಿಷಯದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶಾಲೆಗೆ ಪರವಾನಿಗೆ ನೀಡಿದ್ದು ಕಂಡುಬರುತ್ತಿದೆ.

ಈ ಬಗ್ಗೆ ಮುಖ್ಯವಾದ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಚಿಕ್ಕೋಡಿಯ ಡಿಡಿಪಿಐಯವರು ಸದರಿ ಶಾಲೆಯ ಬಗ್ಗೆ ಯಾಕೆ ಮೃದು ಧೋರಣೆ ತಾಳಿದ್ದಾರೆನ್ನುವುದು ಒಂದು ಪ್ರಶ್ನೆಯಾದರೆ ಬಹುಶಃ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಅವರು ಈ ಶಾಲೆಯ ಬೆನ್ನೆಲುಬಾಗಿ ಇದ್ದಾರೆ ಎಂಬ ಪ್ರಚಾರ ಈ ಅಧಿಕಾರಿಗಳ ಕೈಕಾಲು ಕಟ್ಟಿದೆಯೆಂಬುದು ಒಂದು ಉತ್ತರ ಇರಬಹುದು.

- Advertisement -

ಮೊದಲಾಗಿ, ಸಮರ್ಥ ಶಾಲೆಯು ಅನಿತಾ ಮಹಿಳಾ ಸ್ವ ಸಹಾಯ ಸಂಘದಿಂದ ಪ್ರಾರಂಭಿತವಾದ ಶಾಲೆ ಈಗ ಅದೇ ಸಂಘ ಗ್ರಾಮೀಣ ಅಭಿವೃದ್ಧಿ ಸಂಘವಾಗಿದೆ. ಗ್ರಾಮೀಣ ಅಭಿವೃದ್ಧಿ ಹೆಸರಿನಲ್ಲಿ ಅದರಲ್ಲಿ ಇರುವ ಅಧ್ಯಕ್ಷ, ಸದಸ್ಯರ ಅಭಿವೃದ್ಧಿಯಂತೂ ಭರಪೂರ ಆಗುತ್ತಿದೆತೆಂಬುದು ಕೆಲವು ದಾಖಲೆಗಳ ಪ್ರಕಾರ ಸಾಬೀತಾಗಿದೆ. ಆ ವಿಷಯಕ್ಕೆ ನಂತರ ಬರೋಣ.

ಸದರಿ ಸಮರ್ಥ ಶಾಲೆ ನಿಂತಿರುವುದು ಕೆನಾಲ್ ಪಕ್ಕದಲ್ಲಿ ಇರುವ ಹೊಲದಲ್ಲಿ ಶಾಲೆಗೆ  ಹೋಗಲು ಸರಿಯಾದ ದಾರಿಯಿಲ್ಲ. ಮಳೆಗಾಲದಲ್ಲಿ ಶಾಲಾ ವಾಹನ ಮಕ್ಕಳನ್ನು ತುಂಬಿಕೊಂಡು ಹೊಯ್ದಾಡುತ್ತ ಶಾಲೆಗೆ ಹೋಗುತ್ತದೆ, ಬರುತ್ತದೆ. ಹೊಲದ ನಡುವೆ ಇರುವ ಶಾಲೆಗೆ ಕಾಂಪೌಂಡ್ ಇಲ್ಲ. ವಿಚಿತ್ರವೆಂದರೆ, ಈ ಶಾಲೆಗೆ ಭೇಟಿ ನೀಡಿದ ತ್ರಿಸದಸ್ಯ ಸಮಿತಿಯು ಇಲ್ಲಿ ತಂತಿಯ ಬೇಲಿ ಇದೆ ಅಂತ ವರದಿ ನೀಡಿದೆ. ಇದರಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಇದ್ದಾರೆ !

ಇನ್ನು ಶಾಲೆ ಇರುವ ಕ್ಷೇತ್ರ ಬಿನ್ ಶೇತ್ಕಿ ಆಗಿಲ್ಲ. ಜಿಲ್ಲಾಧಿಕಾರಿಗಳ ಆದೇಶದಂತೆ ಎರಡು- ಮೂರು ವರ್ಷಗಳಲ್ಲಿ ಎನ್ ಎ ಆಗಬೇಕಿತ್ತು ಆಗಿಲ್ಲ. ಅಥವಾ ಸಂಘಕ್ಕೆ ಜಾಗವನ್ನು ೩೦ ವರ್ಷಗಳ ಲೀಸ್ ಮೇಲೆ ಬಿಟ್ಟು ಕೊಡಬೇಕು ಅದೂ ಆಗಿಲ್ಲ. ಶಾಲಾ ಕಟ್ಟಡ ಕಟ್ಟಲು ಮೊದಲು ನೀಡಿದ ನಕ್ಷೆಯ ಪ್ರಕಾರ ಆಗಿಲ್ಲ, ಮಕ್ಕಳಿಗೆ ಶೌಚಾಲಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದೆ. ಪಕ್ಕಾ ಶೌಚಾಲಯವಿಲ್ಲ.

- Advertisement -

ಶಿಕ್ಷಕರಿಗೆ ಚೆಕ್ ಮೂಲಕ ವೇತನ ನೀಡಲಾಗುತ್ತದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ. ಯಾಕೆಂದರೆ, ಮಾಹಿತಿ ಹಕ್ಕಿನಡಿ ನಾವು ಕೇಳಿದ ಎಲ್ಲಾ ಮಾಹಿತಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ‘ ಅಡ್ಡ ಗೋಡೆಯ ಮೇಲೆ ದೀಪ’ ಇಟ್ಟಂತೆ ಉತ್ತರ ಕೊಡುತ್ತಿದ್ದಾರೆ.

ಒಂದು ಶಾಲೆಯ ಆರಂಭಕ್ಕೆ ಸಂಘದವರು ಅರ್ಜಿಯ ಜೊತೆ ಸಲ್ಲಿಸಿರುವ ದಾಖಲೆಗಳು ಮೂಡಲಗಿ ಬಿಇಓ ಕಚೇರಿಯಲ್ಲಿ ಇಲ್ಲವೆಂದು ಅವರು ಹೇಳುತ್ತಾರೆ ! ಏನಾದರೂ ಮಾಹಿತಿ ಕೇಳಿದರೆ ಈಗಿನ ಮಾಹಿತಿ ಕೊಡುತ್ತಾರೆ. ಉದಾಹರಣೆಗೆ ಶಾಲೆಯ ಆರಂಭದಲ್ಲಿ ಅಗ್ನಿ ಶಾಮಕ ದಳದ ಪ್ರಮಾಣಪತ್ರ ಪಡೆಯಬೇಕಾದದ್ದು ಕಡ್ಡಾಯವಾಗಿದೆಯೆಂಬುದು ಇಲಾಖೆಯ ನಿಯಮ. ಆದರೆ ಪ್ರಮಾಣ ಪತ್ರ ಕೇಳಿದರೆ ಇದೇ ೨೦೨೨ ರ ಆಗಷ್ಟ್ ನಲ್ಲಿ ಪಡೆದುಕೊಂಡ ಪ್ರಮಾಣ ಪತ್ರ ಇದೆ. ಅಂದರೆ ಕಳೆದ ಆರೇಳು ವರ್ಷ ಅಗ್ನಿ ಶಾಮಕ ದಳದ ಪ್ರಮಾಣ ಪತ್ರವಿಲ್ಲ, ಅಗ್ನಿಯ ಮುಂಜಾಗ್ರತಾ ಕ್ರಮಗಳೂ ಇಲ್ಲವೆಂದಾಯಿತು. ಇಂಥ ಶಾಲೆಗೆ ಕಣ್ಣು ಮುಚ್ಚಿ ಪರವಾನಿಗೆ ನೀಡುವ ಕಾರಣ ಏನು ಎಂಬುದನ್ನು ಅಧಿಕಾರಿಗಳು ಹೇಳಬೇಕಾಗಿದೆ.

ಶಾಲೆಯನ್ನು ತೆರೆಯುವುದು ಈಗ ಶುದ್ಧ ಬಿಸಿನೆಸ್ ಆಗಿಬಿಟ್ಟಿದೆ. ಶಾಲೆಯ ಹೆಸರಿನಲ್ಲಿ, ಗ್ರಾಮೀಣ ಅಭಿವೃದ್ಧಿ ಹೆಸರಿನಲ್ಲಿ  ಸಂಸದರು,ರಾಜ್ಯಸಭಾ ಸದಸ್ಯರು ಹಾಗೂ ದಾನಿಗಳಿಂದ ಹಣ ಪಡೆಯುವ ದಂಧೆ ಹೆಚ್ಚಾಗಿಬಿಟ್ಟಿದೆ. ಆದರೆ ಪಡೆದುದಕ್ಕೆ ದಾಖಲೆ ನೀಡುವ ಹಾಗೂ ಹಣವನ್ನು ಖರ್ಚು ಮಾಡಿದ್ದಕ್ಕೆ ದಾಖಲೆ ನೀಡುವ ಪರಿಪಾಠವೇ ಇಲ್ಲಿ ಮರೆಯಾಗಿದೆಯೇನೋ ಎನ್ನುವಂತೆ ಆಗಿದೆ. ಅನಿತಾ ಗ್ರಾಮೀಣ ಅಭಿವೃದ್ಧಿ ಸಂಘ ಹಾಗೂ ಅನಿತಾ ಮಹಿಳಾ ಸ್ವಸಹಾಯ ಸಂಘದ ಹೆಸರಿನಲ್ಲಿ ಹಣದ ಅವ್ಯವಹಾರ ಆಗಿರುವ ಸ್ಪಷ್ಟ ದಾಖಲೆಗಳು ಲಭ್ಯವಾಗಿವೆ. ಇದರಲ್ಲಿ ಶಾಮೀಲಾದವರು ಕೂಡ ಇಷ್ಟರಲ್ಲೇ ಬಿಲದಿಂದ ಹೊರಬರಲಿದ್ದಾರೆ.

ಆದರೆ ಈ ಶಿಕ್ಷಣ ಇಲಾಖೆಯ ಅಧಿಕಾರಿಗಳೇಕೆ ಈ ಸಮರ್ಥ ಶಾಲೆಗೆ ಈ ರೀತಿಯ ಪರವಾನಿಗೆ ನೀಡಿದರೆಂಬುದು ಗೊತ್ತಾಗಬೇಕಾಗಿದೆ. ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿಡಿಪಿಐಯವರು ಮುತುವರ್ಜಿ ವಹಿಸಿ ಈ ಶಾಲೆಯ ಬಣ್ಣವನ್ನು ಬದಲಾಯಿಸಬೇಕಾಗಿದೆ. ಇಲ್ಲದಿದ್ದರೆ ಇದೇ ರೀತಿ ಅವರು ಎಲ್ಲಾ ಶಾಲೆಗಳಿಗೆ ತಮ್ಮ ಹೆಗಲು ಕೊಟ್ಟಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಆದರೆ ಅನೈತಿಕತೆಯ, ಭ್ರಷ್ಟಾಚಾರದ ಬುನಾದಿಯ ಮೇಲೆ ಬೆಳೆದು ನಿಂತ ಶಾಲೆ ಮಕ್ಕಳಿಗೆ ಯಾವ ರೀತಿಯ ನೈತಿಕ ಶಿಕ್ಷಣ ನೀಡಬಹುದು ಎಂಬ ಗುಮಾನಿಯೇಳುತ್ತದೆ.

ಈ ಶಾಲೆಯ ಬಗ್ಗೆ ಶಿಕ್ಷಣ ಮಂತ್ರಿಗಳು, ಲೋಕಾಯುಕ್ತರು ಗಮನಹರಿಸುವ ಮೊದಲು ಈ ಸ್ಥಳೀಯ ಅಧಿಕಾರಿಗಳು ಎಚ್ಚತ್ತುಕೊಳ್ಳಬೇಕಾಗಿದೆ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group