‘ಸಂ ತೋಷ ಹಂಚಿಕೊಂಡರೆ ಹೆಚ್ಚಾಗುತ್ತದೆ. ದುಃಖ ಹಂಚಿಕೊಂಡರೆ ಕಡಿಮೆ ಆಗುತ್ತದೆ.’ ಅನ್ನುವ ಮಾತನ್ನು ನಾವೆಲ್ಲ ಕೇಳಿದ್ದೇವೆ ಮತ್ತೆ ಅನುಭವಿಸಿಯೂ ಇರುತ್ತವೆ. ದುಃಖ ಹಂಚಿಕೊಂಡರೆ ಮನಸ್ಸು ನಿರಾಳವಾಗುತ್ತದೆಂಬುದು ಎಷ್ಟು ಸತ್ಯವೋ ಹೇಳಬಾರದವರ ಮುಂದೆ ಹೇಳಿಕೊಂಡರೆ ನೋವು ನೂರ್ಮಡಿಯಾಗುವುದು ಅಷ್ಟೇ ಸತ್ಯ. ನಮ್ಮ ದುಃಖ ಕೇಳಿಸಿಕೊಂಡು ಮುಂದೆ ಮರುಗುವ ಕೆಲವರು ನಮ್ಮ ನೋವನ್ನು ಬೇರೆಯವರ ಮುಂದೆ ಯಾವಾಗ ಹೇಳಿಯೇನೋ ಎಂದು ಕಾಯುತ್ತಿರುತ್ತಾರೆ. ಇನ್ನೂ ಕೆಲವರು ಊರ ತುಂಬ ಡಂಗುರ ಸಾರಿ ನಮ್ಮ ಸ್ಥಿತಿಯನ್ನು ಆಡಿಕೊಳ್ಳುವವರ ಬಾಯಿಗೆ ಹಾಕಲು ಹವಣಿಸುತ್ತಿರುತ್ತಾರೆ. ವಿಘ್ನ ಸಂತೋಷಿಗಳಿಗೆ ನಮ್ಮ ಅಸಹಾಯಕತೆ ಹಬ್ಬದೂಟದ ಹರುಷವನ್ನು ನೀಡುತ್ತದೆ. ದುಃಖ ಕೇಳಿಸಿಕೊಳ್ಳುವವರು ನಮ್ಮ ಹಿತೈಷಿಗಳಾಗಿದ್ದರೆ ದುಃಖಕ್ಕೆ ಪರಿಹಾರ ಸೂಚಿಸುತ್ತಾರೆ. ಪರಿಹಾರ ಬಲ್ಲದವರಾಗಿರದಿದ್ದರೆ ಸಾಂತ್ವನವನ್ನು ಸೂಚಿಸುತ್ತಾರೆ.
ಅಷ್ಟಕ್ಕೂ ನಮ್ಮ ವೃತ್ತಿ ಬದುಕಿನ ಇಲ್ಲವೇ ವೈಯಕ್ತಿಕ ಅಸಹಾಯಕತೆಗಳನ್ನು, ಕುಟುಂಬದಲ್ಲಿರುವ ಭಿನ್ನಾಭಿಪ್ರಾಯಗಳನ್ನು ಕಂಡಕಂಡವರ ಮುಂದೆ ಹಿಡಿದು ಅವಮಾನ ಮಾಡಿಸಿಕೊಳ್ಳುವುದೇನು ಚೆನ್ನ? ಅಂಗೈ ತೋರಿಸಿ ಅವಮಾನ ಮಾಡಿಸಿಕೊಂಡಂತೆ ಅಲ್ಲದೇ ಮತ್ತೇನು? ಭಿನ್ನಾಭಿಪ್ರಾಯವಿರುವ ವ್ಯಕ್ತಿಗಳೆಲ್ಲ ಕೂಡಿ ಒಂದೆಡೆ ಬಾಳುವುದೇ ಕುಟುಂಬವಲ್ಲವೇ? ಹೀಗಿರುವಾಗ ಮನೆಯ ನಾಲ್ಕು ಗೋಡೆಗಳ ನಡುವೆ ಇರಬೇಕಾದುದನ್ನು ಹೊಸ್ತಿಲಾಚೆ ಹಾಕಿದರೆ ಮುಗಿದೇ ಹೋಯಿತು. ಅದು ಜನರ ಬಾಯಲ್ಲಿ ರೆಕ್ಕೆಪುಕ್ಕ ಹಚ್ಚಿಕೊಂಡು ಏನೇನೋ ರೂಪ ಪಡೆದುಕೊಳ್ಳುತ್ತದೆ. ಕೊನೆಗೆ ಅದು ನಮ್ಮ ಕಿವಿಗೆ ಬಿದ್ದು ನೋವಿನ ಬೆಂಕಿಗೆ ತುಪ್ಪ ಸುರಿಯುತ್ತದೆ.
ತಮ್ಮ ಮನೆಯ ದೋಸೆ ತೂತು ಎಂದು ತಿಳಿದಿದ್ದರೂ ಬೇರೆಯವರ ಮನೆಯ ದೋಸೆಯನ್ನು ಮಸಾಲೆ ದೋಸೆಯಂತೆ ಜಗಿದು ಜಗಿದು ತಿನ್ನುತ್ತ ಆನಂದಿಸುತ್ತಾರೆ. ನೋವು ಹೆಚ್ಚಿಸುವವರು, ಮಸಿ ಬಳೆಯುವವರು ಬೇರೆಲ್ಲೋ ಇರುವುದಿಲ್ಲ ನಿಕಟವರ್ತಿಗಳೇ ಆಗಿರುತ್ತಾರೆ. ಹೀಗಾಗಿ ಅಂಥವರಲ್ಲಿ ದುಃಖ ಹಂಚಿಕೊಳ್ಳುವುದು ಅವಮಾನದ ಬಾವಿಗೆ ಜಿಗಿಯುವುದು ಎರಡೂ ಒಂದೇ. ಆದ್ದರಿಂದ ದುಃಖವನ್ನು ಹೇಳಿಕೊಳ್ಳಬಾರದವರ ಮುಂದೆ ಹೇಳಿದರೆ ಅವರು ಅದನ್ನೇ ದಾಳವನ್ನಾಗಿಸಿಕೊಂಡು ನಮ್ಮನ್ನು ಬಂಧಿಸಿಬಿಡುತ್ತಾರೆ. ಆದ್ದರಿಂದ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವುದಕ್ಕಿಂತ ದುಃಖ ಅನುಭವಿಸದವರು ಯಾರೂ ಇಲ್ಲವೆಂದು ತಿಳಿದು ದುಃಖಗಳನ್ನು ಮೆಟ್ಟಿ ನಿಲ್ಲಬೇಕು. ಅದರೊಂದಿಗೆ ಗೌಪ್ಯವಾಗಿಟ್ಟಷ್ಟು ಒಳ್ಳೆಯದು.
ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ
ಇಂಗ್ಲೀಷ್ ಉಪನ್ಯಾಸಕರು
೯೪೪೯೨೩೪೧೪೨