ಇಂದು ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನ. ಅವರ ನೆನಪಿನಲ್ಲಿ ನಮ್ಮೂರಿನತ್ತ ಒಮ್ಮೆ ತಿರುಗಿ ನೋಡಿದರೆ ಹಾಸನ ಜಿಲ್ಲೆಯ ಹೇಮಾವತಿ ನದಿ ತೀರದ ಗೊರೂರು ನಮ್ಮೂರು. ಇದು ನಾಡಿನ ಇತರ ಎಷ್ಟೋ ಊರುಗಳಂತೆ ಒಂದು ಸಾಮಾನ್ಯ ಊರು. ಆದರೂ ನಮ್ಮೂರಿಗೆ ದೊರೆತಿರುವ ಪ್ರಸಿದ್ಧಿಗೆ ಕಾರಣರಾದವರಲ್ಲಿ ಡಾ. ಗೊರೂರರು ಪ್ರಮುಖರು.
ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ ಇದ್ದರೆ ಬೆಳೆಯುತ್ತಾ ಆ ವ್ಯಕ್ತಿತ್ವ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ. ಅದು ಅವರ ಗಾಂಧಿ ಜೀವನ ಚಿಂತನೆ. ಡಾ. ಗೊರೂರರ ಜೀವಸತ್ವ ಇರುವುದು ಹಳ್ಳಿ ಮತ್ತು ಗಾಂಧಿ ಚಿಂತನೆಯ ರಚನಾತ್ಮಕ ಸಂಯೋಗದಿಂದ. ಅವರು ಶಾಲಾ ಕಾಲೇಜಿನ ಶಿಕ್ಷಣವಿಲ್ಲದೆ ಜೀವನದಲ್ಲಿ ಕಲಿತ್ತಿದ್ದೆ ಹೆಚ್ಚು. ದೇಶಸೇವೆಗೆ ಸಂಬಂಧಿಸಿದ ಅನೇಕ ಕೆಲಸ ಮಾಡುತ್ತಾ ಅನುಭವ ಗಳಿಸಿ ಪುಸ್ತಕ ಬರೆಯುತ್ತಾ ಕೀರ್ತಿವಂತರಾದರು. ಒಬ್ಬ ವ್ಯಕ್ತಿಯಿಂದ ಒಂದು ಗೊರೂರು ಧನ್ಯತೆ ಪಡೆದಿದೆ.
ಹಾಸನ ತಾಲ್ಲೂಕು ಹೇಮಾವತಿ ತೀರದ ಗೊರೂರಿನಲ್ಲಿ ತಾ. 4-7-2004ರಂದು ಜನಿಸಿದ ಜಿ.ಕೆ.ರಾಮಸ್ವಾಮಿ ಅವರ 1 ರಿಂದ 5 ಕನ್ನಡ ಲೋಯರ್ ಸೆಕಂಡರಿವರೆಗಿನ ವಿದ್ಯಾಭ್ಯಾಸ ಗೊರೂರಿನಲ್ಲಿ ನಡೆಯಿತು. ಆ ಕಾಲದಲ್ಲಿ ಚಿಕ್ಕ ಹಳ್ಳಿಯಾಗಿದ್ದ ಗೊರೂರಿನಲ್ಲಿ ಇದ್ದಿದ್ದು ಇಷ್ಟೇ ತರಗತಿ. ಐದನೆಯ ಫಾರಂ ಓದುತ್ತಿರುವಾಗಲೇ ರಾಮಸ್ವಾಮಿಯವರು ಮಹಾತ್ಮ ಗಾಂಧೀಜಿಯವರ ಹೆಸರನ್ನು ಕೇಳಿದ್ದರು. ತಮಗೆ ಗಾಂಧೀಜಿಯ ಬಗ್ಗೆ ಅಧಿಕೃತ ವಿಷಯ ಗೊತ್ತಾದ ಬಗ್ಗೆ ಒಂದು ಕಡೆ ಹೀಗೆ ಬರೆಯುತ್ತಾರೆ.
ಗಾಂಧೀಜಿ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿ ಮೂರ್ನಾಲ್ಕು ವರ್ಷ ಕಳೆದಿದ್ದರು. ಮೊದಲು ಗಾಂಧೀಜಿಯ ಹೆಸರು ನನ್ನ ಕಣ್ಣಿಗೆ ಬಿದ್ದುದು ಅವರೊಬ್ಬ ರಾಜಕೀಯ ಪವಾಡ ಪುರುಷರೆಂಬುದಾಗಿಯೇ. ಅಲ್ಲಿಯವರೆಗೆ ನಾನು ಹೆಚ್ಚಾಗಿ ಕೇಳಿದ್ದುದು ಬಾಲಗಂಗಾಧರ ತಿಲಕರ ಹೆಸರನ್ನು ಮಾತ್ರ. ಅಂದಿನ ದಿನಗಳಲ್ಲಿ ಬ್ರಿಟಿಷ್ ಆಡಳಿತದ ದೌರ್ಜನ್ಯ ಕುರಿತಂತೆ ಪತ್ರಿಕೆಗಳಲ್ಲಿ ವರದಿಗಳು ಬರುತ್ತಿದ್ದವು. ರೌಲತ್ ಆಕ್ಟ್, ಜಲಿಯನ್‍ವಾಲಾಬಾಗ್ ಹತ್ಯಾಕಾಂಡ ಇವು ಭಾರತೀಯರನ್ನು ರೊಚ್ಚಿಗೆಬ್ಬಿಸಿದ್ದವು. 1929 ಆಗಸ್ಟ್ 7 ರಂದು ಲೋಕಮಾನ್ಯ ಟಳಕರು ನಿಧನರಾದರು. ನಾನು ಕ್ಲಾಸ್‍ನ್ನು ಬಿಟ್ಟು ಇತರ ವಿದ್ಯಾರ್ಥಿಗಳೊಂದಿಗೆ ನಗರದಲ್ಲಿ ಮೆರವಣಿಗೆ ಹೊರಟೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ವಿದೇಶಿ ಬಟ್ಟೆ ಸುಟ್ಟು ಎಲ್ಲಾ ವಿದ್ಯಾರ್ಥಿಗಳು ಖಾದಿ ತೊಟ್ಟೆವು.. ಗಾಂಧೀಜಿ ರಾಷ್ಟ್ರನಾಯಕರಾಗಿ ಮುಂದಾಳತ್ವ ವಹಿಸಿಕೊಂಡರು. 1919ರಲ್ಲಿ ರಾಷ್ಟ್ರೀಯ ಚಳವಳಿ ಮುಗಿಲು ಮುಟ್ಟಿತು. ಗಾಂಧೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಗುಜರಾತ್ ವಿದ್ಯಾಪೀಠ ಸೇರಿ ಆಶ್ರಮದಲ್ಲಿ ಇರುವ ಯೋಚನೆ ಬರುತ್ತಿದ್ದಂತೆ ಗೊರೂರರು ಅಹಮದಾಬಾದಿಗೆ ಹೊರಟರು. ಗುಜರಾತ್ ವಿದ್ಯಾಪೀಠದಲ್ಲಿ ವ್ಯಾಸಂಗಕ್ಕೆ ಸೇರಿದರು.
ನಾನು (ಗೊರೂರು ಅನಂತರಾಜು) ಕಳೆದ ವರ್ಷ ಗುಜರಾಜ್ ಪ್ರವಾಸ ಕೈಗೊಂಡು ಗುಜರಾತ್ ವಿದ್ಯಾಪೀಠ ವೀಕ್ಷಿಸುವಾಗ ತಟ್ಟನೆ ಡಾ.ಗೊರೂರರು ನೆನಪಾದರು. ಅಲ್ಲಿ ಪ್ರವೇಶದ್ವಾರದಲ್ಲಿ ನಿಂತು ಪೋಟೋ ತೆಗೆಸಿಕೊಂಡೆನು. ನನ್ನೊಟ್ಟಿಗೆ ಬೇರೆ ಊರುಗಳಿಂದ ಬಂದಿದ್ದ ಪ್ರವಾಸಿಗರಿಗೆ ಗೊರೂರರ ವಿಷಯ ತಿಳಿಸಿ ಎಲ್ಲರೂ ಸಂತೋಷದಿಂದ ಜೊತೆಗೂಡಿದರು.
ಗಾಂಧೀಜಿಯವರ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಗಾಂಧೀಜಿ ನನ್ನ ಹೃದಯದಲ್ಲಿಯೇ ಕುಳಿತಿದ್ದ ಜ್ಯೋತಿ ಆಗಿದ್ದರು ಎಂದು ಗೊರೂರರು ಮಹಾತ್ಮರನ್ನು ಸ್ಮರಿಸಿದ್ದಾರೆ. ಗಾಂಧೀಜಿ 1946 ರಲ್ಲಿ ಮದ್ರಾಸಿನಲ್ಲಿದ್ದಾಗ ಅವರೊಂದಿಗೆ ಹತ್ತು ದಿನ ಕಳೆದರು. ಅನಂತರ ಪಳನಿ, ಮಧುರೈ ಮೊದಲಾದ ಕ್ಷೇತ್ರಗಳಲ್ಲಿ ಗಾಂಧೀಜಿಯವರೊಂದಿಗೆ ಪ್ರವಾಸ ಕೈ ಗೊಂಡರು. ಈ ಪ್ರವಾಸ ಕಥನ ಗಾಂಧೀಜಿಯವರ ದಕ್ಷಿಣ ಯಾತ್ರೆ ಎಂಬ ಪುಸ್ತಕದಲ್ಲಿದೆ.
ನವಜೀವನ ಯಂಗ್ ಇಂಡಿಯ ಪತ್ರಿಕೆಗಳಿಗೆ ಕಂಪೋಜಿಟರ್ ಆಗಿ ಕೆಲಸಕ್ಕೆ ಸೇರಿ ಮದರಾಸ್ ಲೋಕಮಿತ್ರ ಪತ್ರಿಕೆಯ ಉಪ ಸಂಪಾದಕರಾದರು. ಬೆಂಗಳೂರಿನ ಕೆಂಗೇರಿಯಲ್ಲಿ ಗುರುಕುಲಾಶ್ರಮದ ವ್ಯವಸ್ಥಾಪಕರಾಗಿ ಮಾಸ್ತರಾಗಿದ್ದರು. ಖಾದಿ ವಸ್ತ್ರಾಲಯದಲ್ಲಿ ಮಾರಾಟಗಾರರಾಗಿ ಖಾದಿ ಬೋರ್ಡಿನಲ್ಲಿ ಮ್ಯಾನೇಜರ್ ಆಗಿದ್ದರು. 1938 ರಲ್ಲಿ ಗೊರೂರಿನಲ್ಲಿ ಸಾಮಾನ್ಯ ವ್ಯಕ್ತಿಯಾಗಿ ಕೃಷಿಕ ಜೀವನದೊಂದಿಗೆ ಸಾಹಿತ್ಯ ಕೃಷಿ ಪ್ರಾರಂಭಿಸಿ ಗೊರೂರಿನಲ್ಲಿ ಯುವಕರನ್ನು ಸಂಘಟಿಸಿ ಮೈಸೂರು ಗ್ರಾಮ ಸೇವಾ ಸಂಘವನ್ನು ಸ್ಥಾಪಿಸಿ ಖಾದಿ ಪ್ರಚಾರ, ವಯಸ್ಕರ ಶಿಕ್ಷಣ, ಗ್ರಾಮ ಕೈಗಾರಿಕೆ ಮೊದಲಾಗಿ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಎಣ್ಣೆಗಾಣ, ಕೈಕಾಗದ, ಮೂಳೆಪುಡಿ, ಬೆಲ್ಲ, ಕೊಟ್ಟದ ಅಕ್ಕಿ, ಜೇನು ಸಾಕಣೆ, ಕಿತ್ತಳೆನಾರಿನ ಪ್ಯಾಕಿಂಗ್ ದಾರ, ತಾಟಿಬೆಲ್ಲ, ಚಾಪೆ ತಯಾರಿಸುವ ಗ್ರಾಮೋದ್ಯೋಗ ಆರಂಭವಾಯಿತು. ಗೊರೂರರ ಈ ಎಲ್ಲ ಕೆಲಸಗಳಲ್ಲಿಯೂ ಸಂಪತ್ತಯ್ಯಂಗಾರ್ ಸೇರಿ ಊರಿನ ಪ್ರಮುಖರು ಬೆಂಬಲ ನೀಡಿದರು.
ಗೊರೂರಿನಲ್ಲಿ 40 ದಿವಸ ವಯಸ್ಕರ ಶಿಕ್ಷಣ ಶಿಬಿರ ಏರ್ಪಡಿಸಿ ಪುತಿನ, ತೀನಂಶ್ರೀ ಕರೆಸಿದರು. ಆಗ ಸರ್ಕಾರ ಗೊರೂರರನ್ನು ಜಿಲ್ಲಾ ಆಡಳಿತ ಸಮಿತಿಗೆ, ಸ್ಥಳೀಯ ಶಿಕ್ಷಣ ಸಮಿತಿಗೆ ನಾಮಕರಣ ಮಾಡಿತು. 1939 ರಲ್ಲಿ ಸತ್ಯಾಗ್ರಹ ಕಾಲದಲ್ಲಿ ಸಲಹೆ ಕೊಡಲು ಗೊರೂರರೂ ಒಬ್ಬ ಸದಸ್ಯರಾಗಿದ್ದರು. 1941 ರಲ್ಲಿ ವಾರ್ಧಾದಲ್ಲಿ ಜರುಗಿದ ಎಐಸಿಸಿ ಸಭೆಯಲ್ಲಿ ಭಾಗವಹಿಸಿದ್ದರು. ಕ್ವಿಟ್ ಇಂಡಿಯ ಚಳವಳಿಯಲ್ಲಿ ಪೊಲೀಸರು ಗೊರೂರರನ್ನು ಬಂಧಿಸಿ ಹಾಸನ, ಶಿವಮೊಗ್ಗ, ಸಾಗರ ಮತ್ತು ಬೆಂಗಳೂರು ಸೆರೆಮನೆಗಳಲ್ಲಿ 14 ತಿಂಗಳು ಜೈಲಿನಲ್ಲಿ ಕಳೆದರು. ಸೆರೆಮನೆಯಲ್ಲಿ ಇದ್ದಾಗ ಹಳ್ಳಿಯ ಬಾಳು ಕೃತಿ ಅಚ್ಚಾಗುತ್ತಿತ್ತು. ಸೆರೆಮನೆ ಸೇರಿ ಮೂರು ವಾರಗಳಲ್ಲಿ ಟಾಲ್‍ಸ್ಟಾಯ್‍ರವರ ಕಾಸಕ್ಸ್ ಕಾದಂಬರಿಯನ್ನು ಮಲೆನಾಡವರು ಎಂಬ ಹೆಸರಿನಿಂದ ಅನುವಾದಿಸಿದರು. ಒಂದು ವಾರದೊಲ್ಲಿ ಪುಜರ್ನನ್ಮ ಕಾದಂಬರಿ ಬರೆದರು. ಸ್ವಾತಂತ್ರ್ಯವೇ ಧರ್ಮ ಎಂಬ ಕೃತಿಯ ಬಹುಭಾಗ 1942 ರಲ್ಲಿ ಸೆರೆಮನೆಯಲ್ಲಿ ಬರೆದಿದ್ದು. ಇವರು ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಸಂಪಾದಿಸಿದ ಇನ್ನೊಂದು ಮುಖ್ಯ ಸಂಗ್ರಹ ಕೋಲಾಟದ ಪದಗಳು. ವಾರದ ಬಿಡುವಿನ ದಿನದಲ್ಲಿ ಕೈದಿಗಳೆಲ್ಲರೂ ಒಟ್ಟಾಗಿ ಸೇರಿ ಭಜನೆ ಕೀರ್ತನೆ ಕೋಲಾಟದ ಪದ ಹಾಡುತ್ತಿದ್ದರು. ಗೊರೂರರು ನಾಲ್ಕಾರು ವಾರ ಅವರನ್ನು ಆಶ್ರಯಿಸಿ ಈ ಹಾಡುಗಳನ್ನು ಬರೆದುಕೊಂಡರು. ಸೆರೆಮನೆಯಿಂದ ಬಿಡುಗಡೆಯಾಗಿ ಜನಜಾಗೃತಿಗಾಗಿ ರಾಷ್ಟ್ರೀಯ ಗ್ರಂಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ರಾಷ್ಟ್ರೀಯ ಸಾಹಿತ್ಯ ಸಮಿತಿ ಸ್ಥಾಪಿಸಿದರು. ಸತಿ ಕಸ್ತೂರಿಬಾ, ಮಹದೇವ ದೇಸಾಯಿಯವರ ಕೃತಿಗಳು, ಮೌಲನಾ ಅಬುಲ್ ಕಲಾಂ ಅಜಾದ್, ಸ್ವಾತಂತ್ರ್ಯವೇ ಧರ್ಮ, ತಾಯ್ನುಡಿಯಲ್ಲಿ ಶಿಕ್ಷಣ ಇವೇ ಗ್ರಂಥಗಳನ್ನು ಪ್ರಕಟಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದರೂ ದೇಶೀಯ ಸಂಸ್ಥಾನಗಳ ಮಹಾರಾಜರು ತಮ್ಮ ಪ್ರಜೆಗಳಿಗೆ ಸ್ವಾತಂತ್ರ್ಯ ಕೊಡಲಿಲ್ಲ. ಅದಕ್ಕಾಗಿ ಬೇರೆ ಚಳವಳಿ ಬಲಿದಾನಗಳೇ ಬೇಕಾದವು. ಚಲೋ ಪ್ಯಾಲೆಸ್ ಚಳವಳಿಯಲ್ಲಿ ಗೊರೂರರ ಹಿರಿಯ ಮಗ ರಾಮಚಂದ್ರ ತುಮಕೂರಿನಲ್ಲಿ ಪೊಲೀಸರ ಗುಂಡಿಗೆ ಬಲಿಯಾದ. ವಿಷಯ ತಿಳಿದ ಗೊರೂರರು ನನ್ನ ಮಗ ಹುತಾತ್ಮನಾಗಿದ್ದಾನೆ. ಮುಂದಿನ ತಲೆಮಾರು ಅವನನ್ನು ನೆನೆಯುತ್ತದೆ ಎಂದರು. ಮೈಸೂರಿನಲ್ಲಿ ಪ್ರಜಾಸರ್ಕಾರ ಸ್ಥಾಪನೆಯಾದ ಮೇಲೆ ಗೊರೂರು 12 ವರ್ಷ ಕಾಲ ರಾಜ್ಯದ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಈ ಸಂದರ್ಭ ಗೊರೂರರು ಮಾಡಿದ ಕೆಲಸಗಳಲ್ಲಿ ಕರ್ನಾಟಕದ ಏಕೀಕರಣದ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಮಾಡಿದ ಭಾಷಣ, ಕನ್ನಡ ನಿಘಂಟು ಕನ್ನಡ ವಿಶ್ವಕೋಶ ಇವುಗಳ ರಚನೆಗಾಗಿ ಮಸೂದೆ ಮಂಡಿಸಿ ಕಾರ್ಯಗತ ಮಾಡಿಸಿದ್ದು.
ಗೆಳೆಯ ಉಡುವೇರೆ ಡಿ.ಸುಂದರೇಶ್ ಇದೇ ಜುಲೈ 7 ಭಾನುವಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಗೊರೂರಿನಲ್ಲಿ ಏರ್ಪಡಿಸುತ್ತಿದ್ದಾರೆ. ಈ ದಿಶೆಯಲ್ಲಿ ನಮ್ಮೂರನ್ನು ಹಿಂತಿರುಗಿ ನೋಡಿದಾಗ ಎಷ್ಟೋ ಸಂಗತಿಗಳು ನೆನಪಾದವು. ಅದರಲ್ಲಿ ಡಾ. ಗೊರೂರರ ಮನೆಯನ್ನು ಸ್ಮಾರಕ ಭವನ ಮಾಡುವುದು. ಆದರೆ ಗೊರೂರರು ಆ ಕಾಲದಲ್ಲೇ ಬೇರೊಬ್ಬರಿಗೆ ಮಾರಿದ್ದು ಅದನ್ನು ಹಿಂತಿರುಗಿ ಪಡೆದು ಈ ಕೆಲಸ ನೆರವೇರಿಸಲು ಇಂದಿಗೂ ಸಾಧ್ಯವಾಗಿಲ್ಲ. ಅಂದಿನ ನಮ್ಮ ಪ್ರಯತ್ನಗಳು ವಿಫಲವಾದವು. ಒಂದು ಊರಿನ ಅಭಿವೃದ್ಧಿ ಎಂದರೆ ಕೇವಲ ರಸ್ತೆ ಚರಂಡಿ ಅಷ್ಟೆ ಸಾಕೆ ? ಒಂದು ಊರ ಬದುಕಿನಲ್ಲಿ ದೇವಸ್ಥಾನಗಳು, ಹಬ್ಬ ಆಚರಣೆಗಳು, ಜಾತ್ರೆ ನಾಟಕ ಸಾಂಸ್ಕøತಿಕ, ಜನಪದ ಹೀಗೆ ಎಲ್ಲವೂ ಹಾಸುಹೊಕ್ಕಾಗಿರುತ್ತವೆ. ನಾವು ವಿದ್ಯಾರ್ಥಿಗಳಾಗಿದ್ದಾಗ ಇಲ್ಲಿಯ ಹೇಮಾವತಿ ಮನರಂಜನಾ ಮಂದಿರದಲ್ಲಿ ರಾಜ್ಯೋತ್ಸವ ಗಣರಾಜ್ಯೋತ್ಸವ ಸ್ವಾತಂತ್ರ್ಯ ದಿನಾಚರಣೆಗೆ ವಿವಿಧ ಕ್ರೀಡಾ ಸ್ಫರ್ಧೆ, ಕ್ರಿಕೇಟ್, ರಾತ್ರಿ ಮನರಂಜನಾ ಮಂದಿರದಲ್ಲಿ ನಾಟಕ ಡ್ಯಾನ್ಸ್‍ಗಳು ನಡೆಯುತ್ತಿದ್ದವು. ಇನ್ನೂ ಹೆಚ್ಚಿನದಾಗಿ ಕಾರ್ಯಕ್ರಮ ನಡೆಯಲೆಂಬ ಸದುದ್ಧೇಶದಿಂದ ಹೇಮಾವತಿ ವಸತಿ ಕಾಲೋನಿಯಲ್ಲಿ ಒಂದು ಮನರಂಜನಾ ಮಂದಿರ ಬಹಳ ವರ್ಷಗಳ ಹಿಂದೆಯೇ ನಿರ್ಮಿಸಿದ್ದರೂ ಅದು ಸಾರ್ವಜನಿಕ ಬಳಕೆಗೆ ದೊರಕದೇ ಹಾಳಾಗುತ್ತಿದೆ. ನಾಟಕಕ್ಕೆ ಬೇಡ ಕನಿಷ್ಟ ಅಲ್ಲಿ ಮದುವೆ ಸಮಾರಂಭಕ್ಕೆ ಸೂಕ್ತವಾಗಿ ಬಳಕೆ ಮಾಡಿಕೊಳ್ಳಬೇಕಿದೆ.
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, 3ನೇ ಕ್ರಾಸ್, ಹಾಸನ.