spot_img
spot_img

ಬಿಡಾರದಹಳ್ಳಿ ಬೂದೇಶ್ವರಸ್ವಾಮಿಮಠ ಪ್ರಶಾಂತ ಧಾರ್ಮಿಕ ಕ್ಷೇತ್ರ

Must Read

- Advertisement -

ಹಾಸನದಿಂದ 17 ಕಿ.ಮೀ. ದೂರದಲ್ಲಿ ನಿಟ್ಟೂರಿನಿಂದ ಎರಡು ಕಿ.ಮೀ. ಅಂತರದಲ್ಲಿ ಇರುವ ಬಿಡಾರದಹಳ್ಳಿ ಬೂದೇಶ್ವರ ಕ್ಷೇತ್ರ ಪವಾಡ ಪುರುಷರ ಪುಣ್ಯಕ್ಷೇತ್ರವೆಂದು ಹೆಸರಾಗಿದೆ.

ಇಲ್ಲಿಗೆ ಈ ಹಿಂದೆ ಶಿವರಾತ್ರಿಗೆ ನಾನು ನನ್ನ ಪತ್ನಿ ಶಕುಂತಲೆಯೊಂದಿಗೆ ಒಮ್ಮೆ ಭೇಟಿ ನೀಡಿದ್ದೆನು. ಅದಕ್ಕೂ ಮೊದಲು ನಿಟ್ಟೂರಿನಿಂದ ಎರಡು ಕಿ.ಮೀ. ದೂರದ ಯಲಗುಂದ ಗ್ರಾಮದಲ್ಲಿ 2018ರಲ್ಲಿ ನಡೆದ 5ನೇ ಹಾಸನ ತಾ. ಸಾಹಿತ್ಯ ಸಮ್ಮೇಳನಾದ್ಯಕ್ಷನಾಗಿ ನಾನು (ಗೊರೂರು ಅನಂತರಾಜು) ಇಲ್ಲಿಗೆ ಬಂದಿದ್ದೆನಾದರೂ ಮಠಕ್ಕೆ ಬಂದಿರಲಿಲ್ಲ. ಮೊನ್ನೆ ಬೂದೇಶ್ವರಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಅವಕಾಶ ದೊರಕಿದ್ದು ಹೆಚ್.ಜಿ.ಗಂಗಾಧರ್ ಅವರಿಂದ. ಅವರು ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ನಿರೂಪಣೆಗೆ ಕರೆದಿದ್ದರು.

ದುದ್ದ ಹೋಬಳಿಗೆ ಸೇರಿದ ಬೂದೇಶ್ವರ ಮಠದಲ್ಲಿ ಇರುವ ಬೂದಪ್ಪನವರ ಗದ್ದಿಗೆ ಪೂಜೆ ವಿಶೇಷ ರೀತಿಯಲ್ಲಿ ನಡೆಯುತ್ತದೆ. ಪ್ರತಿ ಅಮಾವಾಸ್ಯೆ ಮತ್ತು ಪೂರ್ಣಿಮೆಯಲ್ಲಿ ಸಾಧುಸಂತರು ಭಕ್ತಾದಿಗಳು ಇಲ್ಲಿ ಸೇರಿ ರಾತ್ರಿ ಭಜನೆ ಮಾಡುತ್ತಾರೆ. ಇಲ್ಲಿ ನೆಲೆಸಿದ್ದ ಬೂದಪ್ಪನವರು ಮತ್ತು ಅವರ ಶಿಷ್ಯ ತೋಟಪ್ಪನವರು ಮಾನವ ಉದ್ದಾರದ ಲೀಲಾ ಮಹಿಮೆಗಳಿಂದ ಜನಮನಕ್ಕೆ ಹತ್ತಿರವಾದ ಪವಾಡ ಕಥೆಗಳು ಪ್ರಚಲಿತವಿದೆ. ಬೂದಪ್ಪನವರ ಮೂಲ ಹೆಸರು ಬಸಪ್ಪರೆಂದು ಇವರು ತಮ್ಮ 40-45ನೇ ವಯಸ್ಸಿನಲ್ಲಿ ಶ್ರೀರಾಮಲಿಂಗೇಶ್ವರ ಕ್ಷೇತ್ರಕ್ಕೆ ಬಂದು ಸೇರಿ ಇಲ್ಲಿನ ವನದಲ್ಲಿ ಸಿಕ್ಕುವ ಗಿಡಮೂಲಿಕೆಗಳಿಂದ ಔಷಧಿ ತಯಾರಿಸಿ ತಮ್ಮಲ್ಲಿಗೆ ಬರುವ ರೋಗಿಗಳಿಗೆ ಉಚಿತವಾಗಿ ಔಷಧಿ ನೀಡುತ್ತಾ ಜನರಿಗೆ ಪ್ರಿಯರಾದರು.

- Advertisement -

ಕಾಲಾಂತರದಲ್ಲಿ ದೇಶ ಪರ್ಯಟನವನ್ನು ಮುಗಿಸಿಕೊಂಡು ಬಂದು ಬಿಡಾರದಹಳ್ಳಿಯ ಬಿದಿರು ಮೆಳೆಯೊಂದರಲ್ಲಿ ಕುಳಿತು ಭಗವಂತನಲ್ಲಿ ದ್ಯಾನಾಸಕ್ತರಾದರು. ಒಮ್ಮೆ ತೋಟಪ್ಪನವರು ಸದ್ಗುರು ಬೂದಪ್ಪನವರಲ್ಲಿ ಪ್ರಾರ್ಥಿಸಿ ಈ ಕ್ಷೇತ್ರದಲ್ಲಿ ಬೆಳಗಿ ಆಶ್ರಿತರ ಕಷ್ಟಗಳನ್ನು ನಿವಾರಿಸಬೇಕೆಂದು ಕೋರಿದರು. ತಕ್ಷಣವೇ ಬೂದಪ್ಪನವರು ಸದಾಕಾಲವೂ ಮಠವು ಬೆಳಗಬೇಕಾದರೆ ಸದಾ ನಂದಾದೀಪ ಉರಿಯಬೇಕು ಎಂದರಂತೆ.! ಸದಾಕಾಲವೂ ಉರಿಯುವ ದೀಪಕ್ಕೆ ಎಣ್ಣೆ ಎಷ್ಟು ಬೇಕು ಎನ್ನಲು ನೀವು ಮೊದಲು ದೀವಿಗೆ ಹಚ್ಚಿ ಆನಂತರ ಭಕ್ತಾದಿಗಳು ಬೆಳಗಿಸುತ್ತಾರೆ ಎಂದು ಅಪ್ಪಣೆ ಮಾಡಿದರು.

ಕೂಡಲೇ ಒಂದು ದೀವಿಗೆಗೆ ಬೂದಪ್ಪನವರು ಕಮಂಡಲೋದಕವನ್ನು ಹಾಕಿ ಹತ್ತಿಯ ಬತ್ತಿಯನ್ನಿಟ್ಟು ದೀವಿಗೆ ಹಚ್ಚಿದರು. ಆಗಲೇ ಅನೇಕ ಭಕ್ತಾದಿಗಳೂ ಎಣ್ಣೆಯ ಗದಿಗೆಗಳನ್ನು ತಂದೊಪ್ಪಿಸಿದರು. ಈಗಲೂ ಭಕ್ತಾದಿಗಳು ಎಣ್ಣೆಯ ಬುದ್ದಲಿಗಳನ್ನು ತಂದು ಒಪ್ಪಿಸುತ್ತಾರೆ. ಅಂದಿನಿಂದಲೂ ಹಗಲು ರಾತ್ರಿ ಎನ್ನದೆ ನಂದಾದೀವಿಗೆಯು ಆರದಂತೆ ಉರಿಯುತ್ತಲೆ ಇರುವುದಾಗಿ ದಿವಂಗತ ವೈ.ಎಸ್. ಶಿವರುದ್ರಪ್ಪನವರು ಶ್ರೀರಾಮಲಿಂಗಕ್ಷೇತ್ರ ಮಹಿಮೆ ಕೃತಿಯಲ್ಲಿ ಬರೆದಿದ್ದನ್ನು ಹಿಂದೆಯೇ ಓದಿದ್ದೆನು.

ಈಗಲೂ ಮಠದಲ್ಲಿ ಬೂದಪ್ಪ ಮತ್ತು ತೋಟದಪ್ಪರವರ ಗದ್ದುಗೆಯನ್ನು ಭಕ್ತಿಪೂರ್ವಕ ಪೂಜಿಸಿ ಭಜಿಸುತ್ತಾರೆ. ನಾವು ಹೋದ ದಿನ ಅಮಾವಾಸ್ಯೆ ಅದು ಶ್ರೀ ಶನೇಶ್ಚರ ಜಯಂತಿ ದಿನವೂ ಹೌದು. ಹಾಸನದಲ್ಲಿ ನಮ್ಮ ಮನೆ ಎದುರಿಗೆ ಶ್ರೀ ಶನೇಶ್ಚರ ದೇವಸ್ಥಾನವಿದೆ. ಅಂದು ಇಲ್ಲಿ ಮದ್ಯಾಹ್ನ ವಿಶೇಷ ಅಲಂಕಾರ ಪೂಜೆ ಹೋಮ ಹವನ ಇತ್ತಾಗಿ ಮದ್ಯಾಹ್ನ ಇದರಲ್ಲಿ ಭಾಗಿಯಾಗಿ ಸಂಜೆ ಹೊತ್ತಿಗೆ ಶ್ರೀ ಬೂದೇಶ್ವರ ಕ್ಷೇತ್ರಕ್ಕೆ ನಾವು ಕಲಾವಿದರು ಟೆಂಪೋದಲ್ಲಿ ಪ್ರಯಣಿಸಿದ್ದೆವು. ಹಸಿರು ಗಿಡಮರ ಹೊಲಗದ್ದೆಗಳ ಪ್ರಶಾಂತ ವಾತಾವರಣದಲ್ಲಿ ದೇಗುಲ ಪರಿಸರ ಸಾಕಷ್ಟು ಅಭಿವೃದ್ಧಿ ಹೊಂದಿದೆ.

- Advertisement -

ಮುಖ್ಯದ್ವಾರದ ಪ್ರವೇಶಿಕೆಯಲ್ಲಿ ಕೈಕಾಲು ತೊಳೆದು ಶುಚಿಯಾಗಿ ಒಳಪ್ರವೇಶಿಸಲು ನಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಪ್ರವೇಶದ್ವಾರದ ರಾಜಗೋಪುರ ಆಕರ್ಷಕವಾಗಿ ದೇಗುಲ ಪರಿಸರಕ್ಕೆ ವಿಶೇಷ ಕಳೆ ತಂದಿದೆ. ಕೈಕಾಲು ತೊಳೆದುಕೊಂಡು ಸೀದಾ ದೇವಾಲಯಕ್ಕೆ ಹೋದೆವು. ಗರ್ಭಗುಡಿಯಲ್ಲಿ ಬೂದೇಶ್ವರಸ್ವಾಮಿ ಗದ್ದಿಗೆ, ತೋಟಪ್ಪನವರ ಮತ್ತು ಪಾರ್ವತಮ್ಮನವರ ಗದ್ದಿಗೆ ಇದೆ. ತಲೆಬಾಗಿ ಗರ್ಭಗುಡಿ ಒಳಹೊಕ್ಕು ಒಂದು ಸುತ್ತು ಬಂದೆವು. ದೇವಾಲಯ ಆವರಣ ಕಾಂಕ್ರೀಟ್ ನೆಲದಿಂದ ಅಚ್ಚುಕಟ್ಟಾಗಿದೆ. ಸುತ್ತಲೂ ವಿಶಾಲ ಕಾಂಪೌಂಡು ಗೋಡೆಯ ಭದ್ರತೆ ಇದೆ. ದೇವಸ್ಥಾನದಲ್ಲಿ ಹಳೆಯ ಸೇದೋಬಾವಿ ಇದೆ. ಒಳಾಂಗಣದಲ್ಲಿ ಈಶ್ವರನ ಪ್ರತಿಮೆ ಪ್ರಧಾನ ಆಕರ್ಷಣೆಯಾಗಿದೆ. ನವಗ್ರಹ ದೇವಸ್ಥಾನವೂ ನಂದಿಕಂಬವೂ ಇದೆ. ರಸ್ತೆಯ ಆಚೆ ಬದಿಯಲ್ಲಿ ಸಮುದಾಯ ಭವನ ಅಥವಾ ಚೌಲ್ಟ್ರಿ ಇದ್ದು ಇಲ್ಲಿ ದಾಸೋಹ ನಡೆಯುತ್ತದೆ. ಬಹುಶಃ ಇತರೆ ದಿನಗಳಲ್ಲಿ ಮದುವೆ ಮುಂಜಿ ಕಾರ್ಯ ನಡೆಯಬಹುದು. ನಾವು ಹಾಡುಗಾರಿಕೆ ಮುಗಿಸಿ ಊಟಕ್ಕೆ ಹೋದಾಗ ಸಾವಿರಾರು ಬಂದಿದ್ದ ಭಕ್ತ ಮಹಾಶಯರೆಲ್ಲರಿಗೂ ಭೋಜನ ವ್ಯವಸ್ಥೆ. ಅನ್ನ ಸಾಂಬರು ಚಿತ್ರನ್ನ ಪಾಯಸ ಹಪ್ಪಳ ಉಪ್ಪಿನಕಾಯಿ ಅಚ್ಚುಕಟ್ಟಾಗಿ ಹೊಟ್ಟೆ ತುಂಬಲು ಇಷ್ಟು ಸಾಕು.

ಇಲ್ಲಿಯ ದೇವಾಲಯ ಆವರಣದಲ್ಲಿ ಗಿಡಮರ ಸಾಕಷ್ಟಿವೆ. ವಿಶೇಷವಾಗಿ ಗಮನ ಸೆಳೆದಿದ್ದು ರುದ್ರಾಕ್ಷಿ ಮರ, ಸಾಗಲಿಂಗ ಪುಪ್ಪ ಇವು ಅಪರೂಪದ್ದು. ಬನ್ನಿಕಟ್ಟೆ ಬಿಲ್ವಪತ್ರೆ ಮರ ಕೂಡ ಇದೆ. ಮೈಸೂರು ದಸರಾ ಸಂದರ್ಭ ಬನ್ನಿ ಪೂಜೆ ಕೂಡ ನಡೆಯುವುದಾಗಿ ತಿಳಿಯಿತು. ಮಠ ಎಂದಾಕ್ಷಣ ಇಲ್ಲಿ ಯಾರದಾರೂ ಸ್ವಾಮೀಜಿಯವರು ಇರಬಹುದೆಂದು ಊಹಿಸುವಂತಿಲ್ಲ. ಆದರೆ ಶ್ರೀಮಠದಲ್ಲಿ ಆಡಳಿತ ಮಂಡಳಿ ಇದ್ದು ಅದು ಇಲ್ಲಿನ ಎಲ್ಲಾ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದೆ. ನಾನು ಊಟ ಮುಗಿಸಿ ಬರುವಾಗ ಬಹು ಎತ್ತರದ ಪೈಪ್‍ಗೆ ಅಳವಡಿಸಿದ್ದ ಸ್ಪೀಕರ್‍ನಲ್ಲಿ ಭಜನೆ ಹಾಡು ಕೇಳಿಬರುತ್ತಿತ್ತು. ಆಗಲೇ ನಮ್ಮ ತಂಡದವರ ಸುಗಮ ಸಂಗೀತ ಮುಗಿದು ಭಕ್ತ ಸಮೂಹದ ಅಮೋಘ ಭಜನೆ ಪ್ರಾರಂಭವಾಗಿತ್ತು. ಹತ್ತಾರು ಮಂದಿಯ ಸಮೂಹ ಭಜನೆಗೆ ಹತ್ತಾರು ಮಂದಿಯ ದಮಡಿ ತಾಳ ಮೇಳ ಮೇಳೈಸಿತ್ತು.

ಗೊರೂರು ಅನಂತರಾಜು, ಹಾಸನ.
ಮೊಬೈಲ್: 9449462879.
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group