ಬೈಲಹೊಂಗಲ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹ ನೀಡಿದರೆ ಅವರು ಖಂಡಿತವಾಗಿಯೂ ದೊಡ್ಡ ಸಾಧನೆ ಮಾಡುತ್ತಾರೆ ಎಂದು ಕೇಂದ್ರ ಬಸವ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಮೋಹನ ಬಸನಗೌಡ ಪಾಟೀಲ ಹೇಳಿದರು.
ಅವರು ತಾಲೂಕಿನ ಬೈಲವಾಡದ ಶ್ರೀ ಸಿದ್ಧಬಸವೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜ್ಯಮಟ್ಟದ ಕಿತ್ತೂರು ಉತ್ಸವದ ನಿಮಿತ್ತ ಕಿತ್ತೂರು ರಾಣಿ ಚನ್ನಮ್ಮನ ಜೀವನ ಮತ್ತು ಸಾಧನೆ ವಿಷಯದ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ಶಾಲೆಯ ವಿದ್ಯಾರ್ಥಿನಿ ಕುಮಾರಿ ಪ್ರಿಯಾ ಶಿವಾನಂದ ಸಾಣಿಕೊಪ್ಪ ಅವರನ್ನು ಕೇಂದ್ರ ಬಸವ ಸಮಿತಿ ವತಿಯಿಂದ ಸನ್ಮಾನಿಸಿ ಮಾತನಾಡಿದರು.
ಶ್ರದ್ಧೆ, ನಿಷ್ಠೆ, ಪರಿಶ್ರಮದಿಂದ ಮಕ್ಕಳು ನಿರಂತರ ಪ್ರಯತ್ನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಯಶಸ್ಸು ಹುಡುಕಿಕೊಂಡು ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್. ಠಕ್ಕಾಯಿ ಮಾತನಾಡಿ, ಸೋಲು ಗೆಲುವಿನ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಆಸಕ್ತಿಯಿಂದ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಹಿಂಜರಿಕೆಯನ್ನು ಬಿಟ್ಟಾಗ ಮಾತ್ರ ಮಕ್ಕಳು ಏನಾದರೂ ಹೊಸದನ್ನು ಕಲಿಯಲು ಸಾಧ್ಯ ಎಂದು ಅವರು ಹೇಳಿದರು. ವಿದ್ಯಾರ್ಥಿನಿಗೆ ಪ್ರೇರಣೆ ನೀಡಿ ಸೂಕ್ತ ಮಾರ್ಗದರ್ಶನ ಮಾಡಿದ ಶಿಕ್ಷಕರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಶ್ರೀ ಸಿದ್ಧಬಸವೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಎಂ.ಸಿ.ಪಾಟೀಲ ಮಾತನಾಡಿ ಹುಡುಕಿಕೊಂಡು ಬಂದು ಸಾಧನೆ ಮಾಡಿದ ವಿದ್ಯಾರ್ಥಿನಿಯನ್ನು ಸತ್ಕರಿಸಿ ಅಭಿನಂದಿಸಿದ್ದು ನಮಗೆಲ್ಲ ಖುಷಿ ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು. ಉತ್ತಮ ಶಿಕ್ಷಣ ಒದಗಿಸಿ ಎಲ್ಲ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡುವ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳನ್ನು ತಯಾರು ಮಾಡುವ ಸದುದ್ದೇಶ ನಮ್ಮದಾಗಿದೆ ಎಂದು ಅವರು ಹೇಳಿದರು.
ಕುಮಾರಿ ಸುಕನ್ಯಾ ಕಲ್ಲಪ್ಪ ಸುಂಕದ ಮಾತನಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ ಪ್ರಿಯಾ ಸಾಣಿಕೊಪ್ಪ ನಮಗೆಲ್ಲ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪಿಕೆಪಿಎಸ್ ಸಿಇಒ ಎಸ್.ಬಿ.ಸಂಪಗಾವಿ, ರುದ್ರಗೌಡ ಪಾಟೀಲ, ಶಿಕ್ಷಕರಾದ ಆರ್. ಎಸ್. ಹೊಸಮನಿ, ಎಂ.ಎಸ್. ಮತ್ತಿಕೊಪ್ಪ, ವಿ.ಸಿ.ಪಾಟೀಲ, ಆರ್.ಎಂ. ಸಯ್ಯದ್, ಎಸ್.ಎಂ.ಪಾಟೀಲ, ಪಿ.ಎನ್. ಬೋಳಗೌಡ್ರ ಉಪಸ್ಥಿತರಿದ್ದರು.ಕುಮಾರಿ ಶ್ರೇಯಾ ಆನಿಗೋಳ ಪ್ರಾರ್ಥಿಸಿದರು. ಶಿಕ್ಷಕಿಯರಾದ ಎಂ.ಬಿ. ಗಿಡಗೇರಿ ಸ್ವಾಗತಿಸಿದರು. ಮಂಗಳಾ ಗೆಜಪತಿ ನಿರೂಪಿಸಿದರು. ಪ್ರಧಾನ ಗುರುಗಳಾದ ಎಸ್.ಬಿ.ಬಂಡಿಗಿ ವಂದಿಸಿದರು.