spot_img
spot_img

ಮೂಡಲಗಿ ತಾಲೂಕಿನತ್ತ ಸುಳಿಯದ ಮುಖ್ಯಮಂತ್ರಿ

Must Read

- Advertisement -

ನಾಡದೊರೆಗೆ ಮನದಟ್ಟು ಮಾಡಿಕೊಡಲು ತಾಲೂಕಾಡಳಿತ ವಿಫಲ

ಮೂಡಲಗಿ – ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಲವಾರು ಹಳ್ಳಿಗಳು ಮಹಾಪೂರಕ್ಕೆ ತುತ್ತಾಗಿವೆ, ಎಕರೆಗಟ್ಟಲೆ ಬೆಳೆ ನಾಶವಾಗಿದೆ, ಹಲವಾರು ಮನೆಗಳು ಬಿದ್ದಿದ್ದು ಜನತೆ ಬೀದಿಗೆ ಬಂದಿದ್ದಾರೆ, ಗರ್ಭಿಣಿ ಮಹಿಳೆಯರು ಚಿಕ್ಕಮಕ್ಕಳು ಮಹಾಪೂರದ ಹೊಡೆತಕ್ಕೆ ಹೈರಾಣಾಗಿ ಹೋಗಿದ್ದಾರೆ ಇದನ್ನೆಲ್ಲ ನೋಡಲು ಮೊದಲೇ ಯಾವ ನಾಯಕರೂ ಬಂದಿರಲಿಲ್ಲ, ನಾಡದೊರೆಯಾದರೂ ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು ಗೋಕಾಕದ ತನಕ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಗೋಕಾಕದಿಂದ ಅತ್ತಕಡೆಯೇ ಹೋಗಿದ್ದಾರೆ.

ಮೂಡಲಗಿ ತಾಲೂಕಿನ ವಡೇರಹಟ್ಟಿ, ಹುಣಶ್ಯಾಳ, ಮುಸಗುಪ್ಪಿ, ತಿಗಡಿ, ಸುಣಧೋಳಿ, ಭೈರನಟ್ಟಿ ಸೇರಿದಂತೆ ಅನೇಕ ಗ್ರಾಮಗಳು ಘಟಪ್ರಭಾ ನದಿಯ ಮಹಾಪೂರದಲ್ಲಿ ಮುಳುಗಡೆಯಾಗಿದ್ದು ೨೦೧೯ ರ ಪ್ರವಾಹ ನೆನಪಿಸುವಂತೆ ಊರಿಗೆ ಊರೇ ಮುಳುಗಿ ಜನರ ಬದುಕನ್ನು ಬೀದಿಗೆ ತಂದಿದೆ ಮಹಾಪ್ರವಾಹ.

- Advertisement -

ತಾವು ಕಟ್ಟಿದ ಮನೆಯನ್ನು ಬಿಟ್ಟು ಮಹಿಳೆಯರು ಮಕ್ಕಳೊಡನೆ, ಪ್ರೀತಿಯ ಜಾನುವಾರುಗಳೊಂದಿಗೆ ಗಂಜಿ ಕೇಂದ್ರದಲ್ಲಿ ಉಳಿಯುವ ಪರಿಸ್ಥಿತಿ ಹಲವು ಆಸ್ತಿವಂತರಿಗೂ ಬಂದಿದ್ದು ವಿಧಿಯ ಆಟದ ಮುಂದೆ ಯಾರದೇನೂ ನಡೆಯುವುದಿಲ್ಲ ಎಂಬ ಮಾತು ಅಕ್ಷರಶಃ ನಿಜವಾಗಿದೆ. ಮೂಡಲಗಿ ತಾಲೂಕಿನ ಮುಸಗುಪ್ಪಿ, ಹುಣಶ್ಯಾಳಗಳಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಜನರ ಯೋಗಕ್ಷೇಮ ನೋಡಿಕೊಳ್ಳಲು ತಾಲೂಕಾಡಳಿತ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿತ್ತು. ರಾಜಕೀಯ ನಾಯಕರು ಮಾತ್ರ ತಮ್ಮ ಬಿಜಿ ಸೆಡ್ಯೂಲ್ ಬಿಟ್ಟು ಬರುವುದೋ ಬೇಡವೋ ಎಂದು ವಿಚಾರ ಮಾಡಿ ಅಳೆದು ತೂಗಿ ಯಾವಾಗ ಬಂದು ಹೋದರೋ ಜನತೆಯ ಗಮನಕ್ಕೇ ಬರಲಿಲ್ಲ. ಆದರೆ ಇದೇ ಸೋಮವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಡುತ್ತಾರೆ ಎಂದಾಗ ಸಂತ್ರಸ್ತ ಜನರ ಕಣ್ಣಲ್ಲಿ ಆಶಾವಾದ ಪುಟಿದದ್ದು ನಿಜ.
ಆದರೆ ಮುಖ್ಯಮಂತ್ರಿಗಳು ಗೋಕಾಕದ ಮುಳುಗಡೆ ಪ್ರದೇಶಗಳಿಗಷ್ಟೇ ಭೇಟಿಕೊಟ್ಟರು, ಜನರ ನೋವು ಆಲಿಸಿದರು ಕೆಲವು ಕಡೆ ಪರಿಹಾರವನ್ನೂ ಘೋಷಣೆ ಮಾಡಿದರು. ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಅಲ್ಲಿಯೇ ಇದ್ದು ತಮ್ಮ ಕ್ಷೇತ್ರದ ಪ್ರವಾಹ ಪರಿಸ್ಥಿತಿಯನ್ನು ವಿವರಿಸಿದರೂ ಸಿದ್ಧರಾಮಯ್ಯ ಮೂಡಲಗಿ ತಾಲೂಕಿಗೂ ಸ್ವಲ್ಪ ಭೇಟಿ ಕೊಟ್ಟಿದ್ದರೆ ಸಂತ್ರಸ್ತರ ಮೊಗದಲ್ಲಿ ಸಂತಸ ಕಾಣಬಹುದಾಗಿತ್ತೇನೋ….
ಪ್ರವಾಹ ಸಂತ್ರಸ್ತರಾಗಲಿ ಯಾವುದೇ ರೀತಿಯ ಸಂತ್ರಸ್ತರಾಗಲಿ ಅವರಿಗೆ ತಕ್ಷಣದ ಪರಿಹಾರವೆಂದರೆ ನಾಯಕರು ಭೇಟಿಯಾಗಿ ಧೈರ್ಯ ಸಾಂತ್ವನ ಹೇಳಬೇಕಾದದ್ದು. ಮೂಡಲಗಿ ತಾಲೂಕಿನ ಪ್ರವಾಹ ಸಂತ್ರಸ್ತರ ವಿಷಯದಲ್ಲಿ ಮಾತ್ರ ಈ ಸಲ ಹೀಗಾಗಲಿಲ್ಲ. ಈಗ ಮುಖ್ಯಮಂತ್ರಿ ಗಳೇ ಬಂದರೂ ಇವರ ಕಡೆಗೆ ತಿರುಗಿ ಕೂಡ ನೋಡಲಾರದೆ ಹೋಗಿದ್ದು ಮಾತ್ರ ತೀರಾ ಖಂಡನೀಯ.

ಮೂಡಲಗಿ ತಾಲೂಕಿನ ತಿಗಡಿ ಸೇತುವೆ ಈಗ ತೆರದುಕೊಂಡಿದ್ದು ರಾಜ್ಯ ಹೆದ್ದಾರಿ ಎಲ್ಲವೂ ಹದಗೆಟ್ಟು ಹೋಗಿದೆ. ಸೇತುವೆಯ ಮೇಲೆ ನೀರು ಬಂದಿದ್ದರಿಂದ ಹಿನ್ನೀರು ಹೆಚ್ಚಾಗಿ ಮುಸಗುಪ್ಪಿ ಊರೇ ಮುಳುಗಿ ಜನರ ಬದುಕು ಹದಗೆಟ್ಟು ಹೋಗಿದೆ. ಇನ್ನು ಇವು ರಿಪೇರಿಯಾಗಬೇಕಾದರೆ ರಾಜಕಾರಣಿಗಳ ಇಚ್ಛಾಶಕ್ತಿಯಲ್ಲಿ ಹೆಚ್ಚಳ ಕಾಣಬೇಕು. ಚುನಾವಣೆಯಲ್ಲಿ ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಅಂತೆಲ್ಲ ಭರವಸೆ ಕೊಡುವ ನಾಯಕರುಗಳು ಇಂಥ ಸಂದರ್ಭದಲ್ಲಿ ಜನರತ್ತ ಬರದೇ ಇರುವುದು ಅಕ್ಷಮ್ಯ.

ಮುಖ್ಯಮಂತ್ರಿ ಗಳ ಪ್ರವಾಸ ಕೆಲವು ದಿನಗಳ ಹಿಂದೆಯೇ ನಿಗದಿಯಾಗಿರುತ್ತದೆ. ಅದರಲ್ಲಿ ತಮ್ಮ ಕ್ಷೇತ್ರ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸುವುದು ಸ್ಥಳೀಯ ನಾಯಕರ ಕರ್ತವ್ಯ. ತಮ್ಮ ಪ್ರದೇಶದ ಹೆಸರು ಅದರಲ್ಲಿ ಇಲ್ಲದಿದ್ದರೆ ಹೇಳಿ ಹಾಕಿಸುವುದು ಕೂಡ ಜನತೆಗೆ ಮಾಡುವ ಉಪಕಾರವೇ. ಜಿಲ್ಲಾಡಳಿತ, ತಾಲೂಕಾಡಳಿತ ಹಾಗೂ ಸ್ಥಳೀಯ ಆಡಳಿತಗಳೂ ಕೂಡ ಚುರುಕಾಗಿ ಕೆಲಸ ಮಾಡಿ ತಂತಮ್ಮ ಗ್ರಾಮಗಳಲ್ಲಿನ ನೆರೆ ಪರಿಸ್ಥಿತಿಯ ಗಂಭಿರತೆಯನ್ನು ಸರ್ಕಾರಕ್ಕೆ ಮುಟ್ಟುವಂತೆ, ಅದರ ಕಣ್ಣು ಕಿವಿ ತೆರೆದುಕೊಳ್ಳುವಂತೆ ವರದಿ ಮಾಡಿದ್ದರೆ ಮುಖ್ಯಮಂತ್ರಿಗಳು ಈ ಕಡೆ ಬರುತ್ತಿದ್ದರೇನೋ. ಇದಲ್ಲದೆ ಸಮಾಜ ಸುಧಾರಣೆಯ ನೆಪದಲ್ಲಿ ಹೆಸರು ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿ ಕ್ಷೇತ್ರದ ಮೂಲೆ ಮೂಲೆಯನ್ನೂ ಪ್ರಚಾರಕ್ಕಾಗಿ ಜಾಲಾಡುವ ಸೋ ಕಾಲ್ಡ್ ಸಮಾಜ ಸುಧಾರಕರೂ ನೆರೆ ಸಂತ್ರಸ್ತರ ನೆರವಿಗೆ ಬಂದಿರುವ ಉದಾಹರಣೆ ಎಲ್ಲೂ ಕಾಣುತ್ತಿಲ್ಲ. ಚುನಾವಣೆಯ ಸಮಯದಲ್ಲಿ ಹಳ್ಳಿ ಹಳ್ಳಿಗಳ ಮೂಲೆಗಳನ್ನೂ ಬಿಡದವರು ಇಂಥ ಸಂದರ್ಭದಲ್ಲೇಕೆ ಜನರ ಅಳಲು ಕೇಳಲು ಹಿಂಜರಿಯಬೇಕು ?

- Advertisement -

ಈಗ ಮೂಡಲಗಿ ತಾಲೂಕಿನ ಪ್ರವಾಹದ ನಿಜ ಪರಿಸ್ಥಿತಿ ನಾಡದೊರೆಯ ಕಿವಿ, ಕಣ್ಣು ತಲುಪಲಿಲ್ಲ. ಇದಕ್ಕೆ ಕಾರಣರಾರು ?ಮೂರಾಬಟ್ಟೆಯಾದ ಜನರ ಬದುಕು ಸುಧಾರಣೆ ಕಾಣುವುದು ಯಾವಾಗ ? ಇದಕ್ಕೆ ಸ್ಪಷ್ಟೀಕರಣ ಕೊಡುವವರು ಯಾರು ?

ಉಮೇಶ ಬೆಳಕೂಡ
ಮೂಡಲಗಿ
9448863309

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group