spot_img
spot_img

ವರ್ಣಮಯ ಬದುಕು ಆನಂದಮಯ

Must Read

- Advertisement -

ಮುದ್ದು ಕಂದಮ್ಮ ರಚ್ಚೆ ಹಿಡಿದು ಅಳುವಾಗ ಅದರ ಕೈಯಲ್ಲಿ ಬಣ್ಣದ ಗೊಂಬೆಯನ್ನು ಕೊಟ್ಟರೆ ಸಾಕು ತಕ್ಷಣಕ್ಕೆ ಅಳು ನಿಲ್ಲಿಸಿ ನಗು ಚೆಲ್ಲುತ್ತದೆ. ಬಣ್ಣದ ಆಕರ್ಷಣೆಯೇ ಅಂಥದು. ಬಣ್ಣವಿಲ್ಲದ ಬದುಕನ್ನು ಊಹಿಸಲು ಸಾಧ್ಯವೇ ಇಲ್ಲ. ಎನ್ನುವಷ್ಟರ ಮಟ್ಟಿಗೆ ಬಣ್ಣ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಬಣ್ಣಗಳು ತಮ್ಮ ಪ್ರಭಾವಲಯವನ್ನು ಅಷ್ಟೊಂದು ವ್ಯಾಪಕವಾಗಿ ವಿಸ್ತರಿಸಿಕೊಂಡಿವೆ. ದಿನಗಳೆದಂತೆ ನಾವೂ ಅವುಗಳ ಮೋಡಿಗೆ ಹೆಚ್ಚು ಹೆಚ್ಚು ಬೀಳಿತ್ತಲೇ ಇದ್ದೇವೆ.ನಮ್ಮಲ್ಲಿ ಬಣ್ಣಗಳಿಲ್ಲದೇ ಹಬ್ಬದ ರಂಗು ಹೆಚ್ಚುವುದೇ ಇಲ್ಲ. ನವರಾತ್ರಿಯಲ್ಲಿ ಶಕ್ತಿ ದೇವತೆಗೆ ಹಲವಾರು ರತ್ನ ಖಚಿತ ವಜ್ರ ವೈಡೂರ್ಯ ಒಡವೆಗಳ ಅಲಂಕಾರದೊಂದಿಗೆ ದಿನಕ್ಕೊಂದು ಬಣ್ಣದ ಸೀರೆ ಉಡಿಸಿ ಪೂಜೆಗೈಯ್ಯುವ ಸತ್ಸಂಪ್ರದಾಯ ಇಂದು ನಿನ್ನೆಯದಲ್ಲ. ಹಿಂದಿನಿಂದಲೂ ಬಣ್ಣದ ನಂಟು ನಮ್ಮ ಸಂಸ್ಕೃತಿಯಲ್ಲಿ ಕಂಡು ಬರುತ್ತದೆ. ಕೇವಲ ದಿನ ನಿತ್ಯದ ಜೀವನದಲ್ಲಿ ಅಲ್ಲ ಹಬ್ಬ ಹರಿದಿನಗಳಲ್ಲೂ ಅವುಗಳದೇ ಹಿರಿಮೆ.ಬಣ್ಣಗಳಿಂದಲೇ ಮೆರಗು, ಸಂಭ್ರಮ ಹೆಚ್ಚುವುದು ಖಂಡಿತ. ಇದು ಬಣ್ಣಗಳೊಂದಿಗೆ ನಾವು ಹೊಂದಿದ ಒಡನಾಟದ ಮೇಲೆ ಬೆಳಕು ಚೆಲ್ಲುತ್ತದೆ.

ಆಶ್ಚರ್ಯಕರ ಸಂಗತಿಗಳು:

ಬಣ್ಣಗಳೊಂದಿಗೆ ತಳಕು ಹಾಕಿಕೊಂಡ ಕೆಲ ಸಂಗತಿಗಳು ಮತ್ತು ನಂಬಿಕೆಗಳು ನಮ್ಮ ಹುಬ್ಬೇರಿಸುವಂತೆ ಮಾಡುತ್ತವೆ. ಬಣ್ಣಗಳಲ್ಲಿ ಕೆಲವನ್ನು ಶುಭ ಇನ್ನೂ ಕೆಲವನ್ನು ಅಶುಭವೆಂದು ವರ್ಗೀಕರಿಸಲಾಗಿದೆ. ಕಪ್ಪು ಬಣ್ಣ ಅಶುಭ ಬಣ್ಣದ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಕಪ್ಪು ಬಣ್ಣವನ್ನು ತಿರಸ್ಕರಿಸುವ ದೂಷಿಸುವ ಮನೋಭಾವ ಮೊದಲಿನಿಂದಲೂ ಬಂದಿದೆ. ಕಪ್ಪು ಬಣ್ಣದೊಂದಿಗೆ ನೀಲಿ ಬಣ್ಣವನ್ನು ಶನಿ ಗ್ರಹದ ಬಣ್ಣವೆಂದು ಹೇಳಲಾಗುತ್ತಿದೆ. ಏಳು ದಿನಗಳು ಏಳು ಗ್ರಹಗಳು ಏಳು ಬಣ್ಣಗಳು ಎಂಬ ನಿಯಮವನ್ನು ಪಾಲಿಸುವ ಜನರೂ ಕಾಣ ಸಿಗುತ್ತಾರೆ. ಸೋಮವಾರ -ಹಾಲಿನ ಬಣ್ಣ, ಮಂಗಳವಾರ- ಕೆಂಪು, ಬುಧವಾರ- ಹಸಿರು, ಗುರುವಾರ-ಹಳದಿ, ಶುಕ್ರ -ಬಿಳಿ, ಶನಿ – ನೀಲಿ, ರವಿವಾರ – ಆಯಾ ದಿನಗಳಿಗೆ ತಕ್ಕಂತೆ ಬಣ್ಣದ ಉಡುಪು ಧರಿಸಿದರೆ ಶುಭವಾಗುವುದು ಯಶಸ್ಸು ಸಿಗುವುದು ಎನ್ನುವ ನಂಬಿಕೆಯೂ ಇದೆ.ಅಪರೂಪಕ್ಕೊಮ್ಮೆ ಆಗಸದಲ್ಲಿ ಮೂಡುವ ಕಾಮನಬಿಲ್ಲನ್ನು ವಯೋಮಾನ ಭೇದವಿಲ್ಲದೇ ಎಲ್ಲರೂ ಕೌತುಕತೆಯಿಂದ ಕಣ್ಣರಳಿಸಿ ನೋಡುತ್ತಾರೆ. ಕೆಲವರಿಗೆ ಕೆಲ ಬಣ್ಣಗಳು ಇಷ್ಟವಾದರೆ ಅದೇ ಬಣ್ಣಗಳು ಹಲವರಿಗೆ ಹಿಡಿಸುವುದಿಲ್ಲ. ಬಣ್ಣದ ಇಷ್ಟಾನಿಷ್ಟಗಳು ಅವರವರ ವೈಯುಕ್ತಿಕ ಇಷ್ಟವಾಗಿವೆ.

ಅಂದ ಚೆಂದದ ರೂಪ:

ಬದುಕಿಗೊಂದು ಅಂದ ಚೆಂದದ ರೂಪ ಕೊಡುವ ಬಣ್ಣದ ಲೋಕ ಎಲ್ಲರಿಗೂ ಇಷ್ಟ. ಎಲ್ಲರೂ ತಮ್ಮ ಬದುಕನ್ನು ವರ್ಣಮಯವಾಗಿಸಿಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಒಂದೊಂದು ಬಣ್ಣವೂ ಒಂದೊಂದು ರೀತಿಯಲ್ಲಿ ಮನಸ್ಸಿಗೆ ಮುದ ನೀಡುವಂಥದ್ದು. ಪ್ರಕೃತಿಯಲ್ಲಿ ಅರಳುವ ಪ್ರತಿ ಹೂವಿನ ಬಣ್ಣ ನೋಡುವುದೇ ಕಣ್ಣಿಗಾನಂದ. ಪ್ರತಿಯೊಬ್ಬರೂ ಮೆಚ್ಚುವ ಬಣ್ಣಗಳು ಬೇರೆ ಬೇರೆ ಬಣ್ಣ ಮೆಚ್ಚುಗೆಯ ಆಧಾರದ ಮೇಲೂ ವ್ಯಕ್ತಿತ್ವವನ್ನು ಮತ್ತು ಅಭಿರುಚಿಗಳನ್ನು ಮನೋವಿಜ್ಞಾನಿಗಳು ಕಂಡುಕೊಳ್ಳುವರು.

- Advertisement -

ವಿವಿಧ ಕಡೆ ವಿವಿಧ ಬಣ್ಣಗಳು:

ಮನೆಗೆ ಸರಿಯಾದ ಬಣ್ಣ ಬಳಸಬೇಕೆಂದು ತಲೆ ಕೆಡಿಸಿಕೊಳ್ಳುತ್ತೇವೆ. ವಾಸ್ತು ತಜ್ಞರ ಪ್ರಕಾರ ಪೂರ್ವಕ್ಕೆ ನಸುಗೆಂಪು, ಪಶ್ಚಿಮಕ್ಕೆ ನೀಲಿ, ಉತ್ತರಕ್ಕೆ ಚಿಗುರೆಲೆ ಹಸಿರು, ದಕ್ಷಿಣಕ್ಕೆ, ಕುಂಕುಮ ಬಣ್ಣ, ಆಗ್ನೇಯಕ್ಕೆ ಬಿಳಿ ಮುತ್ತಿನ ಬಣ್ಣ, ಈಶಾನ್ಯಕ್ಕೆ ಬಂಗಾರದ ಬಣ್ಣ ಇಲ್ಲವೇ ಲಿಂಬೆ ಹಳದಿ ಬಣ್ಣ, ನೈಋತ್ಯಕ್ಕೆ ನೇರಳೆ ಬಣ್ಣ, ವಾಯುವ್ಯಕ್ಕೆ ಕೆನೆ ಬಣ್ಣ ಇಲ್ಲವೇ ಬಿಳಿ ಬಣ್ಣ, ಅಡುಗೆ ಕೋಣೆಗೆ ಕಿತ್ತಳೆ ಬಣ್ಣ, ಸ್ನಾನ ಗೃಹ ಶೌಚಾಲಯಕ್ಕೆ ಕೆನೆ ಬಣ್ಣ ಉತ್ತಮ. ಪ್ರಾಣಿ ಪಕ್ಷಿಗಳನ್ನು ಸಾಕುವಲ್ಲಿ ನಸು ನೀಲಿ ಅಥವಾ ಹಸಿರು ಬಣ್ಣ ವಾಹನ ನಿಲುಗಡೆಯ ಪ್ರದೇಶದಲ್ಲಿ ಗುಲಾಬಿ ಬಣ್ಣ ಇಲ್ಲವೇ ನಸು ಕೆಂಪು ಪ್ರಯೋಜನಕಾರಿ ಎಂಬುದು ತಜ್ಞರ ವಿಚಾರ.

ಕಾಯಿಲೆ ಶಮನಕ್ಕೆ:

ಹಸಿರು ಜೀರ್ಣಾಂಗಕ್ಕೆ ಉಪಯೋಗಕಾರಿ ಅಜೀರ್ಣ ದೋಷಕ್ಕೆ ಪರಿಹಾರ ನೀಡುವುದು. ಕರುಳಿಗೆ ಸಂಬಂಧ ಪಟ್ಟ ರೋಗಗಳನ್ನು ಉಪಶಮನಗೊಳಿಸುವುದು. ಪಿತ್ತ ಕೋಶ ಶ್ವಾಸ ಕೋಶ ಹೃದಯ ಸಂಬಂಧಿ ರೋಗಗಳು ಶೀಘ್ರ ಗುಣಮುಖರಾಗಲು ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಹಳದಿ ಬಣ್ಣ ಸಹಕರಿಸುವುದು. ಕೆಂಪು ಬಣ್ಣ ಪಾದಕ್ಕೆ ಹಿತಕಾರಿ. ಶಿರ ಮತ್ತು ಮೆದುಳಿಗೆ ಸದಾ ಕ್ರಿಯಾಶೀಲವಾಗಿಡುವುದರಲ್ಲಿ ನೀಲಿ ಬಣ್ಣ ಮಹತ್ತರ ಪಾತ್ರ ವಹಿಸುವುದು.

ಹಳದಿ:

ಸಂತಸ ಬುದ್ಧಿಶಕ್ತಿ ಜೀವನೋತ್ಸಾಹದಂಥ ಸಕಾರಾತ್ಮಕತೆಯನ್ನು ಹೆಚ್ಚಿಸುವುದರ ಜೊತೆಗೆ ಹಸಿವು ಆಶಾವಾದವನ್ನು ಸೂಚಿಸುತ್ತದೆ. ಹೊಂಗಿರಣವನ್ನು ಹೋಲುವ ಹಳದಿ ಬಣ್ಣ ನೋಡುಗರಲ್ಲಿ ಮಾನಸಿಕ ಚಟುವಟಿಕೆಗಳನ್ನು ಪ್ರೇರೇಪಿಸತಕ್ಕದು. ದಟ್ಟ ಹಳದಿ ಕಣ್ಣಿಗೆ ರಾಚುತ್ತದೆ. ತಿಳಿ ಹಳದಿ ಬಣ್ಣ ನವೋಲ್ಲಾಸವನ್ನು ಮೂಡಿಸಿ ಮತ್ಸರ ಮತ್ತು ಕಾಯಿಲೆಯನ್ನು ಹೋಗಲಾಡಿಸುವುದು.

- Advertisement -

ಕೆಂಪು:

ರಕ್ತ ಹಾಗೂ ಬೆಂಕಿಯನ್ನು ಹೋಲುವ ಕೆಂಪು ಬಣ್ಣ ಪ್ರದರ್ಶನ ಹಾಗೂ ಅಪಾಯಕಾರಿ ಸಂಕೇತದಂತೆ ಭಾವನಾತ್ಮಕ ಉದ್ದೇಶಿತವಾಗಿಯೂ ಬಳಸಲ್ಪಡುವುದು. ಶೀಘ್ರ ನಿರ್ಧಾರ ತೆಗೆದುಕೊಳ್ಳಲು ಸಹಕಾರಿ. ತುಡಿತ ಪ್ರೀತಿ ಮತ್ತು ಸೂಕ್ಷ್ಮತೆಗಳನ್ನು ಸೂಚಿಸುವುದು. ಧೈರ್ಯ ಸಿಟ್ಟಿನ ಧ್ಯೋತಕ ಹಾಗೆಯೇ ಇದು ನಾಯಕತ್ವಕ್ಕೂ ಪೂರಕ.

ನೀಲಿ:

ಆಹಾರ, ಬಟ್ಟೆ, ಫ್ಯಾಷóನ್, ತುರ್ತು ಸೇವೆ, ಸಾರ್ವಜನಿಕ ಸಂಬಂಧಗಳಲ್ಲಿ ಇದರ ಬಳಕೆ ಸೂಕ್ತ. ನಂಬಿಕೆ, ಜಾಣ್ಮೆ ಆತ್ಮವಿಶ್ವಾಸ ಬುದ್ಧಿಮತ್ತೆ ವೃತ್ತಿಪರತೆ ಸತ್ಯ ಸಮಾಧಾನ ಗೌರವ ಭಾವಗಳನ್ನು ಮೂಡಿಸುತ್ತದೆ. ಕಡು ನೀಲಿ- ಜ್ಞಾನ ಏಕತೆ ಗಂಭೀರತೆಯ ಸಂಕೇತವಾದರೆ ತಿಳಿ ನೀಲಿ ಆರೋಗ್ಯ ಶಾಂತಿಗೆ ಪೂರಕವಾದುದು.

ಹಸಿರು:

ವಸಂತನ ಆಗಮನವನ್ನು ಸೂಚಿಸುವ ಹಸಿರು ಬಣ್ನ ಔಷಧಿ ವಿಜ್ಞಾನ ಮಾನವೀಯ ಸಂಪನ್ಮೂಲಗಳಲ್ಲಿ ಬಳಕೆಯಾಗುತ್ತದೆ.

ತಾಜಾತನ ಫಲವತ್ತತೆ ಸುರಕ್ಷತೆ ಪರಿಸರ ಸ್ನೇಹಿಯ ಜೊತೆಯಲ್ಲೇ ವೈಭವೀಕೃತವನ್ನೂ ಮೆರೆಯುತ್ತದೆ. ಕಡು ಹಸಿರು- ಗುರಿ ದುರಾಸೆ ಮತ್ಸರವನ್ನು ಬಿಂಬಿಸುತ್ತದೆ.

ಕಿತ್ತಳೆ:

ಪ್ರವಾಸೋದ್ಯಮದಲ್ಲಿ ಹೆಚ್ಚಾಗಿ ಬಳಕೆಯಾಗುವ ಸೂರ್ಯನ ಹೊಳೆಯುವಿಕೆಯನ್ನು ಹೋಲುವ ಕಿತ್ತಳೆ ಬಣ್ಣದಲ್ಲಿ ಕೆಂಪು ಬಣ್ಣದ ಶಕ್ತಿ ಹಳದಿ ಬಣ್ಣದ ಸಂತೋಷ ಅಡಗಿದೆ.ಮೆದುಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸುವುದು. ಹಸಿವು ಪ್ರಚೋದಕದಂತೆ ಕಾರ್ಯನಿರ್ವಹಿಸುವುದು. ಸಮತೋಲಿತ ಆಹಾರದ ಸೂಚಕ.

ನೇರಳೆ:

ಸ್ವಾತಂತ್ರ್ಯ ಸೃಜನಶೀಲತೆ ರಹಸ್ಯ ಮಾಂತ್ರಿಕತೆಯ ಭಾವಗಳನ್ನು ಸೂಸುತ್ತದೆ. ಸಮೀಕ್ಷೆಯ ಪ್ರಕಾರ ಶೇ 75 ರಷ್ಟು ಯುವಕರು ಕಿತ್ತಳೆ ಬಣ್ಣವನ್ನು ಇಷ್ಟ ಪಡುತ್ತಾರೆ. ಕಡು ನೇರಳೆ ದುಃಖ ಹಾಗೂ ಖಿನ್ನತೆ ತರುವುದು.

ಕಂದು:

ಗಟ್ಟಿತನ, ತಾಳ್ಮೆಯ ಸಂಕೇತ. ಕಣ್ಣಿಗೆ ಮತ್ತು ಚರ್ಮಕ್ಕೆ ಮಿಶ್ರಣ ಬೆಚ್ಚಗಿನ ಅನುಕೂಲಕರ ಪ್ರಭಾವವನ್ನು ಬೀರುವುದು. ತಿಳಿ ಕಂದು ಗೆಳೆತನ ಮತ್ತು ಪ್ರಾಮಾಣಿಕತೆಗೆ ಸಹಕಾರಿ.

ಕಪ್ಪು:

ರಸ್ತೆ ಆಸ್ತಿ ಗಣಿಗಾರಿಕೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. ಶಕ್ತಿ ಔಪಚಾರಿಕತೆಗೆ ಪ್ರಚೋದಿಸಿದಂತೆ ಸಾವು ಭಯದಂಥ ನಕಾರಾತ್ಮಕತೆಗೂ ಎಡೆಮಾಡಿಕೊಡುತ್ತದೆ.

ಬಿಳಿ:

ಉತ್ತಮತೆ ಮುಗ್ಧತೆ ಪಾವಿತ್ರ್ಯತೆ ಸ್ವಚ್ಛತೆ ಪರಿಪೂರ್ಣತೆಗೆ ಹೆಸರಾದ ಬಿಳಿ ಬಣ್ಣ ಸಕಾರಾತ್ಮಕತೆಗೆ ಪ್ರಭಾವಶಾಲಿ ಬಣ್ಣ. ಆಪ್ತ ಸಮಾಲೋಚನೆ ಔಷಧಿ ವಿಜ್ಞಾನಗಳಲ್ಲಿ ಹೆಚ್ಚು ಉಪಯುಕ್ತ.

ವರ್ಣಮಯ ಬದುಕು ಆನಂದಮಯ:

ಬಣ್ಣಕ್ಕೆ ಸೋಲದ ಮನಸ್ಸುಗಳೇ ಇಲ್ಲ. ಬದುಕಿನ ಎಲ್ಲ ಆಯಾಮಗಳಲ್ಲೂ ಬಣ್ಣಗಳು ಆವರಿಸಿಕೊಂಡಿವೆ. ಪ್ರತಿಯೊಬ್ಬರ ಬದುಕಿನಲ್ಲಿ ಬೇರೆ ಬೇರೆ ಬಣ್ಣಗಳು ವಿಭಿನ್ನ ಸಂಕೇತಿಕವಾಗಿ ಪ್ರತಿನಿಧಿಸುವಂತೆ ಬೇರೆ ಬೇರೆ ತರದ ಏರಿಳಿತಗಳು ಇರುತ್ತವೆ. ಪ್ರತಿ ಬಣ್ನವೂ ತನ್ನದೇ ಆದ ವಿಶಿಷ್ಟ ಸಂಪೂರ್ಣ ವಿಭಿನ್ನವಾದ ನೋಟವನ್ನು ಹೊಂದಿದೆಯೋ ಹಾಗೆ ಪ್ರತಿಯೊಬ್ಬರ ಬದುಕಿನಲ್ಲಿ ಸುಖ ತರುವುದು ದುಃಖ ನೀಡುವುದು ತಟಸ್ಥ ಭಾವನೆ, ಅತೃಪ್ತ ಭಾವ ಹುಟ್ಟಿಸುವುದು. ಲಾಭ ನಷ್ಟ ಉಂಟು ಮಾಡುವುದು ಹೀಗೆ ನಾನಾ ನಮೂನೆಯ ಪರಿಣಾಮಗಳಿಗೆ ಎಡಮಾಡುತ್ತವೆ. ಯಾವ ಬಣ್ಣವನ್ನೂ ನಮಗೆ ಸಂಪೂರ್ಣ ದೂರವಿಡಲು ಸಾದ್ಯವಿಲ್ಲ. ಎಲ್ಲ ಬಣ್ಣಗಳನ್ನು ಅನುಭವಿಸುವುದು ಕಡ್ಡಾಯ. ಅದು ಕಪ್ಪಾಗಿದ್ದರೂ ಸರಿ ಕೆಂಪಾಗಿದ್ದರೂ ಸರಿ. ಸುಖ ದುಃಖಗಳ ಸಮ್ಮಿಲನವೇ ಜೀವನ. ಸುಖ ಮಾತ್ರ ಬೇಕೆಂದರೆ ನಡೆಯದು. ಬದುಕಿನಲ್ಲಿ ನಾನಾ ಬಣ್ಣಗಳಿವೆ. ಅವು ಇದ್ದರೆ ಮಾತ್ರ ವರ್ಣಮಯ ಬದುಕು ಆನಂದಮಯವಾಗಲು ಸಾಧ್ಯ.


ಜಯಶ್ರೀ.ಜೆ. ಅಬ್ಬಿಗೇರಿ
ಬೆಳಗಾವಿ

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group