spot_img
spot_img

ಅಳು ನೀ ಅಳು, ಅತ್ತು ಹಗುರಾಗಿ ಹೊತ್ತು ತಿರುಗಬೇಡಿ

Must Read

spot_img
- Advertisement -

ಹೆಣ್ಣು ಮಕ್ಕಳು ಅಳುವುದಕ್ಕೆ ಫೇಮಸ್ಸು. ಕಣ್ಣಲ್ಲಿ ಜಲಪಾತವೇ ಇರುತ್ತೆ. ಸ್ವಲ್ಪ ಜೋರಾಗಿ ಮಾತನಾಡಿದರೂ ಸಾಕು. ಬುಳು ಬುಳು ಅಂತ ಅತ್ತು ಬಿಡುತ್ತಾರೆ. ಸಿನಿಮಾದಲ್ಲೂ ಅಷ್ಟೇ ಭಾವನಾತ್ಮಕ ದೃಶ್ಯಗಳು ಬಂದಾಗ ಗಳ ಗಳ ಅಂತ ಅತ್ತು ಬಿಡುತ್ತಾರೆ ಕೇಳಿದರೆ ನನಗೆ ಅಳು ತಡೆದುಕೊಳ್ಳಲಾಗುವದಿಲ್ಲ ಅಂತಾರೆ. ನಾನು ಹಾಗಲ್ಲಪ್ಪ ಎಲ್ಲರ ಜೊತೆಯಲ್ಲಿದ್ದಾಗ ಎಷ್ಟೇ ಕಷ್ಟವೆನಿಸಿದರೂ ಅಳುವದೇ ಇಲ್ಲ. ನಗು ಸೀನ್ ನೋಡಿ ಸ್ನೇಹಿತರೊಂದಿಗೆ ಬಾಯಿ ತೆರೆದು ಜೋರಾಗಿ ನಕ್ಕು ನಲೀತೀನಿ ಆದರೆ ಅಳು ದೃಶ್ಯಗಳಲ್ಲಿ ತುಂಬಾನೆ ನಿಯಂತ್ರಿಸಿಕೊಳ್ಳುತ್ತೇನೆ. ಇದು ಹುಡುಗರ ಅಂಬೋಣ. ಅಳುವಿಗೆ ಗಂಡು ಹೆಣ್ಣು ಭೇದ ಭಾವವಿಲ್ಲ. ಶ್ರೀಮಂತರು ಬಡವರು ಎಲ್ಲರೂ ಸಮಾನರು. ನಗು ಅಳು ನಿಸರ್ಗ ಸಹಜವಾದುವುಗಳು. ಮನುಷ್ಯನ ಸಂತೋಷ ದುಃಖಗಳನ್ನು ಸೂಚಿಸುವ ಸಂಕೇತಗಳು.

ಜೀವನವೇ ಭಾವನೆಗಳ ಸಂಗಮ. ಹೀಗಿರುವಾಗ ಭಾವನೆಗಳಿಗೆ ಸ್ಪಂದಿಸದಿದ್ದರೆ ಹೇಗೆ? ಅಳು ಒತ್ತರಿಸಿ ಬಂದಾಗ ಬಾಯಿ ಕಟ್ಟಿಕೊಂಡು ಸುಮ್ಮನಿರೋದು ಸರಿಯೆ? ಜನರಿದ್ದಾಗ ಕಣ್ಣೀರು ಹಾಕಿದರೆ ಅಳುಬುರುಕ /ಕಿ ಅಂತ ಆಡಿಕೊಳ್ಳುತ್ತಾರೆ. ಗಂಟಲು ಉಬ್ಬಿದರೂ ಅದ್ಹೇಗೋ ನಿಯಂತ್ರಿಸಿಕೊಂಡು ಹೃದಯದಲ್ಲಿಯೇ ಅದುಮಿ ಮುಚ್ಚಿಟ್ಟುಕೊಳ್ಳುವದು ಎಲ್ಲರ ಮುಂದೆ ನಾನು ತುಂಬಾ ಗಟ್ಟಿ ಇದ್ದಿನಿ ಅಂತ ಜಂಭ ಕೊಚ್ಚಿಕೊಳ್ಳುವವರೂ ಇದ್ದಾರೆ.

ಕಣ್ಣೀರು ಹಾಕುವದು ದುರ್ಬಲ ಸಂಗತಿ ಎನ್ನುವದು ನಮ್ಮಲ್ಲಿ ಬೇರೂರಿರುವ ನಂಬಿಕೆ ಅದರಲ್ಲೂ ಗಂಡಸರು ಅಳಲೇಬಾರದು. ಅತ್ತರೆ ಮರ್ಯಾದೆ ಹೋಗುತ್ತೆ ಅಂತಾರೆ. ಹೀಗಾಗಿ ಗಂಡಸರಾಗಿದ್ದಕ್ಕೆ ಎಷ್ಟೇ ನೋವಾದರೂ ಪ್ರೀತಿ ಪಾತ್ರರನ್ನೂ ಕಳೆದುಕೊಂಡಾಗಲೂ ಸಂಪೂರ್ಣ ದುಃಖ ನಿವಾರಿಸಿಕೊಳ್ಳಲಾಗುವಷ್ಟು ಅಳದೇ ಒಂದೆರಡು ಹನಿ ಕಣ್ಣೀರು ಸುರಿಸಿ ದುಃಖವನ್ನು ನುಂಗಿಕೊಳ್ಳುವ ಶಿಕ್ಷೆ.

- Advertisement -

ಅಳದೇ ಇರುವವರನ್ನು ನಮ್ಮ ಸಮಾಜ ತುಂಬಾ ಗಟ್ಟಿ ವ್ಯಕ್ತಿ ಅಂತ ಹಣೆಪಟ್ಟಿ ಹಚ್ಚುತ್ತೆ..ನಿಜಾಂಶವೆಂದರೆ ಅಳದವನು ಮಾನಸಿಕವಾಗಿ ತುಂಬಾನೆ ದುರ್ಬಲ ವ್ಯಕ್ತಿ ಎಂದು ಸಂಶೋಧನೆಗಳು ಸಾಬೀತುಪಡಿಸಿವೆ. ನೋವನ್ನು ಕಣ್ಣೀರಿನ ಮೂಲಕ ಹೊರ ಹಾಕುವವನು ಮಾನಸಿಕವಾಗಿ ಗಟ್ಟಿಯಾಗಿರುತ್ತಾನೆ. ಕಣ್ಣೀರು ಹಾಕುವದರಿಂದ ನೋವು ಬೇಗ ಮರೆಯುತ್ತಾನೆ ಎಂಬುದು ಮಾನಸಿಕ ತಜ್ಞರ ಮಾತು.

ಆಟದ ಸಮಯದಲ್ಲಿ ಆಟ, ಪಾಠದ ಸಮಯದಲ್ಲಿ ಪಾಠ ಹಾಗೇನೆ ನಗುವಾಗ ನಗಬೇಕು ಅಳುವಾಗ ಅಳಬೇಕು. ಅಳಬೇಕು ಅಂದರೆ ಹುಚ್ಚು ಅಂತ ಬೈಯ್ಯುತ್ತಾರೆ. ಜೀವನದಲ್ಲಿ ನಗಬೇಕಷ್ಟೇ. ನಗು ದಿವ್ಯ ಔಷಧಿ ಎಂಬುದು ಹಲವರ ವಾದ. ನಗುವಿನ ಹಾಗೆ ಅಳುವೂ ದಿವ್ಯ ಔಷಧಿ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅಳದಿದ್ದರೆ ಭಾವನೆಗಳನ್ನು ಅದುಮಿಟ್ಟು ಮನಸ್ಸು ಕೋಮಲವಾಗಿರದೇ ಗಟ್ಟಿಯಾದ ಕಲ್ಲಂತಾಗುತ್ತೆ. ಮನದಲ್ಲಿ ಧಗ ಧಗ ಉರಿಯುವ ಪರ್ವತವನ್ನು ಹೊತ್ತುಕೊಂಡು ತಿರುಗುವದಕ್ಕಿಂತ ಅತ್ತು ಹಗುರವಾಗುವದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳಿತು.

ಒಂದೊಂದು ಕರುಣಾಜನಕ ಪ್ರಸಂಗದಲ್ಲಿ ಮನ ಕಲುಕುವ ಪ್ರಸಂಗಗಳನ್ನು ನೋಡಿದಾಗ ಅಳು ಒಳಗಿಂದ ಒತ್ತರಿಸಿಕೊಂಡು ಇನ್ನೇನು ನಿಯಂತ್ರಿಸಲಾಗುವದಿಲ್ಲ ಅನ್ನುವ ಹಾಗೆ ಕಾರಂಜಿಯಂತೆ ಹೊರಗೆ ಚಿಮ್ಮುತ್ತೆ. ಆಗ ಅದನ್ನು ನಿಯಂತ್ರಿಸಲು ಹೋಗಬೇಡಿ ಅತ್ತು ಬಿಡಿ. ಮನಸ್ಸು ನಿರಾಳವಾಗುತ್ತೆ ಮನೆಯ ಕಸವನ್ನು ಆಗಾಗ ಹೊರ ಹಾಕಿ ಸ್ವಚ್ಛಗೊಳಿಸುವಂತೆ ಮನಸ್ಸನ್ನು ಕಸದ ಬುಟ್ಟಿ ಮಾಡಿಕೊಳ್ಳಬೇಡಿ. ಮನದ ಕಸವನ್ನು ಹೊರ ಹಾಕಿ ಹಗುರವಾಗಿ

- Advertisement -

ಪೂರ್ವಾಗ್ರಹ ಪೀಡಿತರಾಗಿ ಅಥವಾ ಬೇರೆಯವರ ಮೇಲೆ ದ್ವೇಷ ಸಾಧಿಸಲು ನನ್ನದೇ ಸರಿ ಎಂದು ಸಾಧಿಸುವದಕ್ಕೆ ನೀವು ನಗದೇ ಇರಬೇಡಿ. ಮನೆಯಲ್ಲಿ ಸಣ್ಣ ಮಗುವೊಂದು ಜೋಕ್ ಮಾಡಿದಾಗ ವಿನೋದ ಪ್ರಸಂಗಳು ನಡೆದಾಗ ಯಜಮಾನನಾದವನು ಮುಖವನ್ನು ಉಮ್ಮ ಎಂದು ಊದಿಸಿಕೊಂಡು ಕೂತಿದ್ದರೆ ಏನು ಚೆನ್ನ. ಗಾಂಭೀರ್ಯತೆ ಪ್ರದರ್ಶಿಸುವದು ಯಜಮಾನಿಕೆಯ ಲಕ್ಷಣ ಅಂದರೆ ಕೌಟುಂಬಿಕ ಜೀವನದ ಖುಷಿ ಕಳೆದುಕೊಂಡಂತೆ ಸರಿ. ಹಮ್ಮು- ಬಿಮ್ಮು ತೊರೆದು ಬಾಯಗಲ ಮಾಡಿ ನಕ್ಕು ಬಿಡುವದು ಒಳಿತು. ಹಾಗೆ ಯಜಮಾನಿಕೆಯಲ್ಲಿ ನೋವಿನ ಪ್ರಸಂಗಗಳಲ್ಲಿ ಕಣ್ಣಾಲಿಗಳು ತೇವಗೊಳ್ಳುವ ಸಂದರ್ಭ ಬಂದಾಗಲೂ ಮನಸ್ಸು ಗಟ್ಟಿ ಮಾಡಿ ಕುಳಿತುಕೊಳ್ಳದೇ ಕೆನ್ನೆಯನ್ನು ತೋಯಿಸಿಕೊಂಡು ನಿರಾಳವಾಗಿ.

ಕಚೇರಿಯಲ್ಲಿ ಅಥವಾ ಸ್ನೇಹಿತರ ಗುಂಪಿನಲ್ಲಿ ನಿಮಗಾಗದವರು ನಗೆ ಚಟಾಕೆಗಳನ್ನು ಹಾರಿಸಿದಾಗ ಮುಖ ಗಂಟಿಕಕ್ಕಿಕೊಂಡು ಎತ್ತಲೋ ನೋಡದೇ ಆ ಕ್ಷಣ ನಕ್ಕು ಬಿಡಿ. ಪುಸ್ತಕ ಓದುವಾಗ ಸಿನಿಮಾ ನೋಡುವಾಗ ಯಾವುದೇ ಪ್ರಸಂಗ ನಿಮಗೆ ಅಳು ತರಿಸಿದರೆ ಮನ ತೆರೆದು ಅತ್ತು ಬಿಡಿ. ಓದು ಮತ್ತು ಸಿನಿಮಾಗಳಿರುವದು ಕೇವಲ ಮನರಂಜನೆಗಲ್ಲ. ನಮ್ಮಲ್ಲಿ ಹುದುಗಿರುವ ಭಾವನೆಗಳನ್ನು ಬಡೆದಿಬ್ಬಿಸಿ ನವಿರಾದ ಭಾವನೆಗಳನ್ನು ಅರಳಿಸಲು. ನಿಜವಾದ ಮಾನವೀಯತೆಯನ್ನು ಆನಂದಿಸಲು ಮರೆಯದಿರಿ.

ಒಳ್ಳೆಯದು ಎಲ್ಲಿಂದಲೇ ಬಂದರೂ ಸ್ವಾಗತಿಸಿ ನಗುವಾಗ ಬಾಯಿ ಕಿವಿಗೆ ಮುಟ್ಟುವ ಹಾಗೆ ನಕ್ಕು ಆನಂದಿಸಿ. ಅಳು ಬಂದಾಗ ಪುಟ್ಟ ಮಗುವಿನಂತೆ ಏನೂ ಯೋಚಿಸದೇ ಅತ್ತು ಬಿಡಿ. ಜೀವನದಲ್ಲಿ ಏಳು ಬೀಳು ಇದ್ದದ್ದೆ. ಗೆದ್ದಾಗ ನಕ್ಕು ಸಂಭ್ರಮಿಸಿ.ಬಿದ್ದಾಗ ಅತ್ತು ಸಾವರಿಸಿಕೊಂಡು ಮತ್ತೆ ಎದ್ದು ನಿಲ್ಲಿ. ಕಷ್ಟವೆನಿಸಿದಾಗ ಅತ್ತು ಮನಸ್ಸು ಹಗುರವಾಗಿಸಿಕೊಂಡು ಹೊಸ ಧೈರ್ಯದಿಂದ ಖುಷಿಯೆಡೆಗೆ ಹೆಜ್ಜೆ ಹಾಕಿ.


ಜಯಶ್ರೀ.ಜೆ. ಅಬ್ಬಿಗೇರಿ
ಎಲ್ ಐ ಜಿ 179
ಮಹಾಂತೇಶ ನಗರ
ಬೆಳಗಾವಿ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group