ಶರಣ ಕೋಲ ಶಾಂತಯ್ಯ
ಲಿಂಗಾಯತ ಅಮರ ಗಣಾಧೀಶ್ವರರ ಪಂಕ್ತಿಯಲ್ಲಿ ಒಬ್ಬನಾಗಿರುವ ಈತ ಹಿರಿಯ ಶರಣ ಹಾಗೂ ವಚನಕಾರ. ಬಸವಣ್ಣ, ಬಿಜ್ಜಳರ ಸಮಕಾಲೀನ. ಬಿಜ್ಜಳನಲ್ಲಿ ಕಟ್ಟಿಗೆ ಅಥವಾ ಕೋಲನ್ನು ಹಿಡಿವ ಕಾಯಕವನ್ನು ನಡೆಸುತ್ತಿದ್ದುದರಿಂದ ಈತನ ಹೆಸರಿನ ಹಿಂದೆ ಕೋಲು ವಿಶೇಷಣವಾಗಿ ಬಂದಿರಬಹುದೆಂದು ಹೇಳಬಹುದಾಗಿದೆ.
ಅಂಕಿತ: ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
ವಚನ ರಚನೆಯಿಂದ ಸಾಹಿತ್ಯದಲ್ಲಿಯೂ ಹಿರಿಯ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾನೆ. ಈಗ ದೊರೆತಿರುವಂತೆ ಈತನ ವಚನಗಳ ಸಂಖ್ಯೆ 103 ಇವುಗಳಲ್ಲಿ 67 ಸಾಮಾನ್ಯವಚನಗಳು, 36 ಬೆಡಗಿನ ವಚನಗಳು. ಭಕ್ತಿಯ ಸ್ವರೂಪ, ಸದ್ಗುಣಗಳ ರೀತಿ, ಆಷಾಢಾಭೂತಿಗಳ ಟೀಕೆ ಇತ್ಯಾದಿ ವಿಷಯಗಳು ವಚನಗಳಲ್ಲಿ ಪ್ರತಿಪಾದಿತವಾಗಿವೆ. ಕೆಲವು ವಚನಗಳಲ್ಲಿ ತಮ್ಮ ಗೋಪಾಲ ವೃತ್ತಿಯ ಪರಿಭಾಷೆಯನ್ನು ಅರ್ಥಪೂರ್ಣವಾಗಿ ಇವರು ಬಳಸಿಕೊಂಡಿದ್ದಾರೆ. ಎಲ್ಲ ವಚನಕಾರರಂತೆ ಇವರು ಷಟ್ಸ್ಥಲ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಭಕ್ತನಾದವನ ಜಡೆಮುಡಿಗಳು ಎಂತೇ ಇರಲಿ ಆತನ ನಡೆನುಡಿ ಸಿದ್ಧಾಂತವಾದರೆ ಸಾಕು. ಅವನಿಗೆ ಅವಸೋಂಕು ಬಂದರೂ ಭಾವ ಶುದ್ಧವಾಗಿರಬೇಕು.-ಎಂಬಿವೇ ಮೊದಲಾದ ವಿವಿಧ ನೀತಿಗಳನ್ನು ಹಲವಾರು ಉತ್ತಮ ಉಪಮೆಗಳ ಮೂಲಕ ನಿರೂಪಿಸಿದ್ದಾನೆ .
ವೇಶ್ಯೆಯ ಸಂಗ ದ್ರವ್ಯದ ಕೇಡು, ದಾಸಿಯ ಸಂಗ ಮಾನಹಾನಿಗೆ ಮೊದಲು; ಆಂದಣಗಿತ್ತಿಯ ಮಾತು ಬಂದಿಕಾರ ಜಗಳದಂತೆ, ಕಂಡವರಲ್ಲಿ ತಂದು ಮಾಡುವವನ ಮಾಟ ಸಾಕಿ ಕೊಂದಿಹನ ದಯದಂತೆ; ಮಾಡಿ ಆಡಲೇತಕ್ಕೆ, ಸಲಹಿಕೊಲಲೇತಕ್ಕೆ, ಬಿತ್ತಿ ಕೀಳಲೇತಕ್ಕೆ, ಕಟ್ಟಿ ಒಡೆಯಲೇಕೆ? ಮಾಡಿ ಮಾಡಿ ಮನಗುಂದುವ ನೀಡಿ ನೀಡಿ ನಿಜಗುಂದುವಣ ಬೇಡ-ಎಂದು ಹೇಳುವ ಈತನ ನೀತಿ ನಿರೂಪಣೆಯ ಶೈಲಿ ಉತ್ತಮ ಮಟ್ಟದ್ದಾಗಿದೆ.
ವಚನ ವಿಶ್ಲೇಷಣೆ
ಜಡೆ ಮುಡಿ ಬೋಳು ಹೇಗಿದ್ದರೇನು
ನಡೆ ನುಡಿ ಸಿದ್ದಾಂತವಾದಡೆ ಸಾಕು
ಆತ ಪರಂಜ್ಯೋತಿ ಗುರವಹ
ಆ ಇರುವ ನಿನ್ನ ನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ವ್ಯಕ್ತಿಯು ಜಗತ್ತಿನಲ್ಲಿರುವ ಯಾವುದೇ ಜಾತಿ, ಮತ, ದೇವರ ಬಗೆಗಿನ ಸಂಪ್ರದಾಯಗಳ ಆಚರಣೆಗಳಲ್ಲಿ ತೊಡಗಿದ್ದರು ತನ್ನ ನಿತ್ಯ ಜೀವನದಲ್ಲಿ ಸಾಮಾಜಿಕವಾಗಿ ಒಳ್ಳೆಯ ನಡೆ ನುಡಿಯಿಂದ ಬಾಳುವುದು ಎಲ್ಲಕ್ಕಿಂತ ಮಿಗಿಲಾದುದು, ಎಲ್ಲಕ್ಕಿಂತ ದೊಡ್ಡದು ಎಂಬ ಸಂಗತಿಯನ್ನು ವಿವರಿಸಿದ್ದಾರೆ.
ಪಶುಪಾಲನ ವೃತ್ತಿಯನ್ನು ಕೈಕೊಂಡಿದ್ದ ಈತನ ಹೆಸರು ವಚನಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಸಕಲಪುರಾತನರ ಮೂರು ವಿಧದ ಕಟ್ಟುಗಳಲ್ಲಿ ಮೊದಲನೆಯದು ಈತನ ವಚನಗಳಿಂದ ಆರಂಭವಾಗುತ್ತಿರುವುದು ವಿಶೇಷವೆನಿಸಿದೆ. ಚೆನ್ನಬಸವ ಪುರಾಣ, ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರರತ್ನಾಕರ ಮೊದಲಾದ ಕೃತಿಗಳಲ್ಲಿ ಈತನಿಗೆ ಸಂಬಂಧಿಸಿದ ಕಥೆ ನಿರೂಪಿತವಾಗಿದೆ.
ಅಲಗನೇರಿ ಹುವ್ವ ಕೊಯಿದು
ಬಾವಿಯ ನುಂಗಿ ನೀರ ಕುಡಿದು
ಅಣ್ಣ ಹಾಕಿ ಮರನ ಮೆದ್ದವನಾರಯ್ಯ?
ಹೆತ್ತವನ ಕೊಂದು ಅರಿಗಳ ಕೆಳೆಗೊಂಡು
ಬದುಕಿದವನಾರೆಂಬುದ ನಿನ್ನ ನೀನರಿ
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
ವಚನದ ಮೊದಲ ಭಾಗದಲ್ಲಿ ಭಕ್ತನಾಗಿದ್ದವನು ಷಟ್ ಸ್ಥಳ ಸಾಧನೆ ಮಾಡಿ ಶರಣರಾದ ಅನುಭವದ ಬಗ್ಗೆ ಹೇಳಿದರೆ, ಎರಡನೆಯ ಭಾಗದಲ್ಲಿ ಆ ವ್ಯಕ್ತಿಯ ಬೆಳವಣಿಗೆಯ ಪೂರ್ವದಲ್ಲಿನ ಭವಿ-ತನದ ಬಗ್ಗೆ ಹೇಳಿದ್ದಾರೆ. ಅರಿಷಡ್ವರ್ಗಳಾದ ಕಾಮ, ಕ್ರೋಧ, ಲೋಭ, ಮದ, ಮತ್ಸರ ಮೋಹಗಳ ಬಾಧೆಯಿಂದ ಅರಿವೆಂಬ ತಂದೆಯನ್ನೇ ಕೊಂದವರು ಯಾರು? ಎಂದು ಹೇಳಿ ಮೊದಲು ನಿನ್ನ ನೀನು ತಿಳಿದುಕೋ ಎಂದು ಹೇಳುತ್ತಾ, ಲಿಂಗ ತತ್ವವನ್ನು ವಿಶ್ವಾತ್ಮಕ ಶಕ್ತಿ- ನಿರಾಕಾರ, ನಿರಂಜನ, ನಿರ್ಮಲವೇ ಆಗಿರುವ ಆ ಶಕ್ತಿ ಎಂಬ ಸಂಗತಿಯನ್ನು ಇಲ್ಲಿ ನೆನಪಿಗೆ ತಂದು ಕೊಡುವ ಮೂಲಕ ಈ ವಚನವು ಶರಣ ಪಥದ ಸಾಫಲ್ಯ ಹಾಗೂ ಪೂರ್ವದಲ್ಲಿನ ಅಜ್ಞಾತ ಸ್ಥಿತಿ ಎರಡನ್ನೂ ತುಲನಾತ್ಮಕವಾಗಿ ತೂಗಿ ತೋರುವ ವಚನದ ಸಾಲುಗಳಲ್ಲಿ ಶರಣರ ಅನುಭವ ಹಾಗೂ ಅನುಭಾವ ಸೂಕ್ಷ್ಮವಾಗಿ ಹೆಣೆದು ಭವಿ ಭಕ್ತನ ಅಂತರವನ್ನು ಅರ್ಥವತ್ತಾಗಿ ಮನಗಣಿಸುತ್ತದೆ. ಒಟ್ಟಿನಲ್ಲಿ ವ್ಯಕ್ತಿಯ ಕಾಯಕ ತತ್ವ ಮತ್ತು ಅಂತರಂಗ ಶುದ್ದಿ ಎಲ್ಲಕ್ಕಿಂತ ದೊಡ್ಡದು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ವಿದ್ಯಾ ರೆಡ್ಡಿ ಗೋಕಾಕ.