spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಶಿವಯೋಗಿ ಸಿದ್ಧರಾಮರು

12ನೇ ಶತಮಾನದ ಶರಣ ಕ್ರಾಂತಿಯ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಪ್ರಮುಖ ಹೆಸರುಗಳಲ್ಲಿ ಶಿವಯೋಗಿ ಸಿದ್ದರಾಮರ ಹೆಸರು ಅತಿ ಮಹತ್ವದ್ದಾಗಿದೆ. ಕರ್ಮ ಯೋಗದಿಂದ ಶಿವಯೋಗಕ್ಕೆ ಏರಿದ ಸಿದ್ದರಾಮ ಅದ್ಭುತ ಸಂಘಟಕ. ಸಾವಿರಾರು ಕಾರ್ಮಿಕರನ್ನು ಲೋಕೋಪಯೋಗಿ ಕೆಲಸಗಳಲ್ಲಿ ತೊಡಗಿಸಿ ತಾವೂ ದುಡಿಯುತ್ತಿದ್ದರು ಬಡವರ, ದೀನ ದಲಿತರ ,ಪಶು ಪ್ರಾಣಿಗಳ ಬಗ್ಗೆ ಆತನಿಗೆ ಅಪಾರ ಅಂತಃಕರಣ ಕಳಕಳಿ ಅನನ್ಯ.

ಸಿದ್ದರಾಮರ ಚರಿತೆ ಎಂದರೆ ಮಾನವನ ವಿಕಾಸ ಗತಿಗೆ ವ್ಯಕ್ತಿತ್ವ ವಿಕಸನಕ್ಕೆ ಒಳ್ಳೆಯ ಉದಾಹರಣೆ. ಸಿದ್ದರಾಮರ ವ್ಯಕ್ತಿತ್ವದ ವಿಕಾಸ ಮಾನವ ಅಂತಃಶಕ್ತಿಯ ಊಧ್ವ೯ಮುಖಿಬೆಳವಣಿಗೆ !ದೈವಿ ಶಕ್ತಿ’ ಸಂಭೂತನಾದರೂ ಜಡನಾಗಿದ್ದ ಸಿದ್ದರಾಮ ತಮ್ಮ ಜೀವನದಲ್ಲಿ ನಡೆದ ಘಟನೆಗಳಿಂದ,ಪ್ರಭಾವಬೀರಿದ ವ್ಯಕ್ತಿಗಳಿಂದ ಹಂತ ಹಂತವಾಗಿ ಪ್ರಗತಿಪಥದಲ್ಲಿ ಸಾಗಿದರು. ದನ ಕಾಯಲು ಹೋದಾಗ ಮೇಳೆಯ ಬಳಿ ಕಂಡ ಲಿಂಗ ಅವರ ಗಮನ ಸೆಳೆಯಿತು. ಕಾಡು ಪುಷ್ಪ ಪತ್ರೆಗಳ ತಂದು ಅದನ್ನು ಪೂಜಿಸಿ ತಾನು ತಂದಿದ್ದ ಬುತ್ತಿಯನ್ನು ಎಡೆ ಮಾಡಿ ತಿನ್ನುವಾಗ ಅವರಲ್ಲಿ ಭಕ್ತಿಯ ಸೆಲೆಯೊಡದಿತ್ತು.ಮಲ್ಲಯ್ಯನೆಂಬ ಜಂಗಮ ಕಾಣಿಸಿಕೊಂಡು ಮೊಸರನ್ನ ತರಲು ಹೇಳಿ ನಂತರ ಕಾಣೆಯಾದಾಗ ಆ ಭಕ್ತಿ ಸ್ಪೋಟಗೊಂಡಿತು. ಜಡತೆ ತೊಲಗಿ ಭಕ್ತಿ ಸ್ಪುರಿಸಿತು.ಅದು ದೃಢಗೊಳ್ಳುತ್ತಾ ಹೋಯಿತು.ಆ ಭಕ್ತಿಯಸೆಳೆತಕ್ಕೆ ಸಿಲುಕಿ ಶ್ರೀಶೈಲದವರೆಗೂ ಹೋಗುತ್ತಾರೆ. ಶ್ರೀಶೈಲದಲ್ಲೂ ತಾನು ಕಾಣ ಬಯಸಿದ ಜಂಗಮಮೂರ್ತಿ ಸಿಕ್ಕಲಿಲ್ಲವೆಂದಾಗ ಆತ್ಮಾರ್ಪಣೆಗೂ ಸಿದ್ಧರಾದರು.ಅವರ ಸಮರ್ಪಣ ಭಕ್ತಿಗೆ ಭಗವಂತನ ಸಾಕ್ಷಾತ್ಕಾರವಾಗುತ್ತದೆ.ಶಿವನ ಆದೇಶ ಮತ್ತು ಅನುಗ್ರಹ ಪಡೆದ ಸಿದ್ದರಾಮರು ಸೊನ್ನಲಿಗೆಯನ್ನು ಶ್ರೀಶೈಲವನ್ನಾಗಿ ಮಾಡುವ ಕರ್ಮಯೋಗದಲ್ಲಿ ತೊಡಗಿಸಿಕೊಳ್ಳುತ್ತಾರೆ.

- Advertisement -

ಉನ್ನತ ಕಾರ್ಯಕ್ಕೆ ನಿಯೋಜಿತನಾದ ಮೃಣ್ಮಯಿಯಾದ ಆತನ ವ್ಯಕ್ತಿತ್ವ ಚಿನ್ಮಯಿಯಾಗಿ ವಿಕಾಸವಾಗ ತೊಡಗಿತು -ಸೇವಾ ಮುಖವಾಗಿ ಅವರ ವ್ಯಕ್ತಿತ್ವಧರ್ಮ ಕಾರ್ಯಗಳಲ್ಲಿ ಹೊರಗೆ ಮಾತ್ರ ಬೆಳೆಯಿತು. ಪ್ರಭುದೇವರ ಸಂಪರ್ಕ, ಮಾರ್ಗದರ್ಶನದಿಂದ ಬಸವಾದಿ ಶರಣರ ಒಡನಾಟದಿಂದ ಸಂಪೂರ್ಣ ವಿಕಾಸ ಹೊಂದಿತು. ಮೃಣ್ಮಯಿಯಾದ ಸಿದ್ದರಾಮರು ಚಿನ್ಮಯಿಯಾದರು.

1130 ರಲ್ಲಿ ಸೊನ್ನಲಿಗೆ ಎಂಬ ಪುಟ್ಟ ಗ್ರಾಮದಲ್ಲಿ ಕುಡವಕ್ಕಲಿಗ ಮುದ್ದೇಗೌಡ ಹಾಗೂ ಸುಗ್ಗವ್ವೆ ಯವರ ದಾಂಪತ್ಯದಲ್ಲಿ ಅರಳಿದ , ಸದಾ ಅಂತರ್ಮುಖಿಯಾಗಿ ಇರುತ್ತಿದ್ದ ಧೂಳಿ ಮಾಂಕಾಳನು ಒಡ್ಡ ರಾಮನಾಗಿ ಆಮೇಲೆ ಸಿದ್ದರಾಮನಾಗಿ ಕೊನೆಗೆ ಶಿವಯೋಗಿ ಸಿದ್ದರಾಮ ರಾಗಿ ಬಹಿರಂಗ ಅಂತರಂಗಗಳೆರಡರಲ್ಲೂ ಬೆಳಗಿದರು.

ಸಿದ್ದರಾಮರ ಲೋಕೋಪಕಾರಕ ಮಹಾಮಣಿಹದಿಂದ ಆಕರ್ಷಿತರಾಗಿ ಬಂದ ಅಪಾರ ಶಿಷ್ಯರಲ್ಲಿ ಹಾವಿನಾಳ ಕಲ್ಲಯ್ಯನವರ ಹೆಸರು ಎದ್ದು ಕಾಣುತ್ತದೆ. ಶ್ರೀಶೈಲ ದಿಂದ ಸೊನ್ನಲಿಗೆ ಗೆ ಬಂದ ಸಿದ್ದರಾಮ ಭಕ್ತಿ ಯೋಗದಿಂದ ಕರ್ಮ ಯೋಗದ ಕಡೆಗೆ ತಿರುವು ಪಡೆಯುತ್ತದೆ.”ಸಾಕಾರದೊಳು ನಿಷ್ಠೆ, ಭೂತಂಗಳೂಳು ಅನುಕಂಪ” ಎಂಬ ಭಾವ ಬಲಿಯುತ್ತದೆ.

- Advertisement -

ಕಾಯಕದಲ್ಲಿ ಶಿವನನ್ನು ಕಾಣುವ ಸಂಕಲ್ಪ ಹೊಂದಿ ಚಾಮಲದೇವಿ ಹಾಗೂ ಅಣ್ಣ ಬೊಮ್ಮಯ್ಯನ ಸಹಾಯದಿಂದ ಭವ್ಯ ದೇಗುಲಗಳು ಅವುಗಳ ಸುತ್ತ ಉದ್ಯಾನಗಳು, ಪುಷ್ಕರಣೆಗಳುವುಚಿತ  ಊಟೋಪಚಾರಕ್ಕೆ ಛತ್ರಗಳು ನಿರ್ಮಾಣವಾದವು. ಕೆರೆಕಟ್ಟೆಗಳನ್ನುನಿರ್ಮಿಸಿ ,ಭಾವಿಗಳನ್ನು ತೋಡಿಸಿ ಸಕಲ ಜೀವಾವಳಿಯ ದಾಹ ಹಿ೦ಗಿಸುವುದು. ಯೋಗ ಮಜ್ಜನ ಚೌಕಗಳನ್ನು ಗೋಶಾಲೆಗಳನ್ನು ಅರವಟ್ಟಿಗೆಗಳನ್ನು, ನಿರ್ಮಿಸಿದ ದೇಗುಲಗಳಲ್ಲಿ ಸ್ಥಾವರ ಲಿಂಗ ಪ್ರತಿಷ್ಠಾಪನೆ ಮಾಡಿ ಜನರನ್ನು ಭಕ್ತಿ ಸಂಪನ್ನರಾಗಿ ಮಾಡುವುದು, ನಿರ್ಗತಿಕರಿಗೆ ಜೀವನ ಮಾರ್ಗ ಕಲ್ಪಿಸುವುದು ಬಡವರಿಗೆ ನೆರವಾಗುವುದು ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದು ಹಣದ ಅವಶ್ಯಕತೆ ಇರುವವರಿಗೆ,ಸಾಲದ ಶೂಲದಿಂದ ಜರ್ಜರಿತರಾದ ಬಡವರಿಗೆ ಋಣ ಪರಿಹಾರಕ್ಕೆ ನೆರವಾಗುವುದು ಇಂಥ ಸಮಾಜ ಸೇವೆಗಳಿಂದ ಲೋಕದ ಜನರ ಬವಣೆಗಳನ್ನು ನೀಗುವೆನೆಂದು ಹೊರಟ ಸಿದ್ದರಾಮರ ಜನಪರ, ಜೀವ ಪರ ಕಾಳಜಿ ಭೂತಾನುಕಂಪೆಗೆ ಸಾಕ್ಷಿಯಾಗಿ ನಿಂತವು. ಆದರೆ ವಿಪರ್ಯಾಸವೆಂದರೆ ತಮ್ಮ ಅರಿವಿಗೆ ಬಾರದಂತೆ ಲೋಕ ಚಿಕ್ಕ ಸಂಸಾರವನ್ನು ಸಡಲಿಸಿ ದೊಡ್ಡ ಸಂಸಾರವನ್ನು ಕಟ್ಟಿಕೊಂಡರು! ಬದುಕು ಯಾಂತ್ರಿಕವಾಯಿತು. ಆತ್ಮ ನಿರೀಕ್ಷಣೆಗೆ ಪುರುಸೊತ್ತಿಲ್ಲದೆ ಸಾವಿರಾರು ಗುಡ್ಡರೊಡನೆ ತಾವು ಸಹ ಭಾಗಿಯಾಗಿ ಬಿಡುವಿಲ್ಲದೆ ದುಡಿಯ ತೊಡಗಿದರು.

ಹೀಗಿರುವಾಗ ಸಿದ್ದರಾಮಯ್ಯರ ಜೀವನದಲ್ಲಿ ಮಹತ್ತರ ಬದಲಾವಣೆ ಉಂಟಾದದ್ದು ಅಲ್ಲಮರ ಆಗಮನದಿಂದ,ಬಾಹ್ಯದಲ್ಲಿ ಮಾಡುತ್ತಿದ್ದ ಲೋಕೋಪಕಾರಕ ಕೆಲಸಗಳೆಲ್ಲವೂ ನಿರರ್ಥಕ ಎಂಬ ಹೊಸ ಎಚ್ಚರವನ್ನು ಸಿದ್ದರಾಮರಲ್ಲಿ ಮೂಡಿಸುತ್ತಾರೆ.

“ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನ್ನಿಕ್ಕಿ
ಕೆರೆಯ ಕಟ್ಟಿಸಿದರೆ ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಜವೂ ಸಾಧ್ಯವಾಗದು, ಗುಹೇಶ್ವರನರಿಯದ ಶರಣಂಗೆ ಆಗುವ ಫಲವೂ ಇಲ್ಲ”

ತನುವಿನಲ್ಲಿ ಸ್ಥಿರವಾದ ಕೆರೆಯನ್ನು ಕಟ್ಟಿ ಅದರಲ್ಲಿ ಪರಮಾನಂದ ಜಲವನ್ನು ತುಂಬಿ ಆ ಆನಂದದ ಅಮೃತವನ್ನು ಒಮ್ಮೆ ಸೇವನೆ ಮಾಡಿದರೆ ಮತ್ತೆ ನೀರಡಿಕೆಯಾಗದು.

ಈ ದಿವ್ಯ ಸಂದೇಶ ಸಿದ್ದರಾಮರನ್ನು ಚಿಂತನೆಗೆ ಒಳಗು ಮಾಡಿತು.ಅಲ್ಲಮರೊಡಗಿನ ಚಿಂತನ ಮಂಥನಗಳಿಂದ ಅವರ ಅನುಭಾವಿಕ ತರ್ಕಗಳಿಂದ ಸಿದ್ದರಾಮರ ಮನದಲ್ಲಿ ಮೂಡಿದ ಸಂಶಯಗಳು ಕರಗಿ ಹೋಗಿ ಮನಸ್ಸು ನಿರಾಳವಾಯಿತು.

ಮುಂದೆ ಅಲ್ಲಮರ ಜೊತೆಯಲ್ಲಿ ಕಲ್ಯಾಣಕ್ಕೆ ಹೋಗಿ ಅನುಭವ ಮಂಟಪದಲ್ಲಿ ಭಾಗವಹಿಸಿದ್ದು ಹಾಗೂ ಚನ್ನಬಸವಣ್ಣನವರಿಂದ ಲಿಂಗ ದೀಕ್ಷೆಯನ್ನು ಪಡೆದು ಬಹುಕಾಲ ಕಲ್ಯಾಣದಲ್ಲಿ ಇದ್ದು ಕಪಿಲಸಿದ್ಧ ಮಲ್ಲಿಕಾರ್ಜುನ ,ಕಪಿಲಸಿದ್ಧ ಮಲ್ಲಯ್ಯ ಎಂಬ ಅಂಕಿತದೊಂದಿಗೆ ಸಾವಿರಾರು ವಚನಗಳನ್ನು ರಚಿಸಿದರು ಯೋಗಿನಾಥ ಎಂಬ ಅಂಕಿತದೊಂದಿಗೆ ತ್ರಿವಿಧಿ ಗಳನ್ನುರಚಿಸಿದರು. “ಆರವತ್ತೆಂಟು ಸಹಸ್ರ ವಚನಗಳನ್ನು ಹಾಡಿ ಹಾಡಿ ಸೋತಿತೆನ್ನಮನ “ಎಂದು ಹೇಳುವುದರ ಮೂಲಕ ಅರವತ್ತೆಂಟು ಸಹಸ್ರ ವಚನಗಳನ್ನು ರಚಿಸಿದೆನೆಂಬ ಸೂಚನೆಯನ್ನು ನೀಡಿದ್ದಾರೆ.ಅಂತರಂಗದ ಸಂಘರ್ಷವನ್ನು ಅಲ್ಲದೆ ಶರಣ ಸಂಘದಲ್ಲಿ ಸ್ಥಳದ ಅನುಭವ ಮಾರ್ಗದಲ್ಲಿ ನಡೆಯಬೇಕೆಂಬ ಹಂಬಲ ತನ್ನ ಅಂತರಂಗ ಬಹಿರಂಗಗಳನ್ನು ವಿಮರ್ಶೆಗೆ ಒಟ್ಟಿಕೊಳ್ಳುವ ಪ್ರಾಮಾಣಿಕತೆ ಇತ್ಯಾದಿ ವಿಚಾರಗಳು ಅವರ ವಚನಗಳಲ್ಲಿ ಅನಾವರಣಗೊಂಡಿವೆ ಸಿದ್ದರಾಮರ ವಚನಗಳಲ್ಲಿ ಎಲ್ಲಿಯೂ ಏರುದನಿ ಇಲ್ಲ ಸಾಮಾಜಿಕ ಅಸಂಗತಗಳನ್ನು ಕಟುವಾಗಿ ಟೀಕಿಸುವುದಿಲ್ಲ. ಶೂನ್ಯಪೀಠದ ಮೂರನೇ ಅಧ್ಯಕ್ಷನಾಗಿ ತಾನೊಬ್ಬ ಸಮಾಜವನ್ನು ತಿದ್ದುವ ಮಾರ್ಗದರ್ಶಿಕನಾದ ಗುರು ಎಂಬ ಗತ್ತಿನಿಂದ ಮಾತನಾಡುವುದಿಲ್ಲ ಅದರ ಬದಲು ಜಗದ ಕಲ್ಯಾಣದೊಳಗೆ ಆತ್ಮ ಕಲ್ಯಾಣವನ್ನು ಸಾಧಿಸುವ ಬಗ್ಗೆ, ಅಪಾರ ಕಾಳಜಿ ಅನುಕಂಪ ತುಂಬಿದ ದನಿ ಅವರ ವಚನಗಳಲ್ಲಿ ಹರಳುಗಟ್ಟಿರುವುದನ್ನು ನಾವು ಕಾಣಬಹುದು.

ಸಿದ್ದರಾಮರು ಕಲ್ಯಾಣದಿಂದ ಹಿಂತಿರುಗಿ ಕರ್ಮಭೂಮಿ ಸೊನ್ನಲಿಗೆಗೆ ಬಂದು ಜನರಕಷ್ಟ ಕಾರ್ಪಣ್ಯಗಳನ್ನುಪರಿಹರಿಸುತ್ತಾ ಅವರಿಗೆ ಧೈರ್ಯವನ್ನು ಹೇಳುತ್ತಾ ಮನಸ್ಸಿನ ಪ್ರಸನ್ನತೆಯನ್ನು ಕಾಪಾಡಿಕೊಂಡ ಅವರ ಸಮತಾ ದೃಷ್ಟಿ ಅನುಪಮವಾದದ್ದು.
“ಆರೇನಂದರೂ ಓರಂತಿರ್ಪುದೆ ಸಮತೆ
ಆರು ಜರಿದರೂ ಅವರೆನ್ನ ಮನದ ಕಾಳಿಕೆಯ ಕಳೆದರೆಂಬುದೇಸಮತೆ
ಆರು ಸ್ತೋತ್ರ ಮಾಡಿದರೂ ಅವರನ್ನ ಜನ್ಮದ ಹಗೆಗಳೆಂಬುದೇ ಸಮತೆ
ಇಂತಿದು ಗುರು ಕಾರುಣ್ಯ ಮನವಚನ ಕಾಯದಲ್ಲಿ ಅವಿರತ ವಿಲ್ಲದೆ
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ ನಿಮ್ಮವರ ನೀವೆಂಬುದೇ ಸಮತೆ”

ಇದು ಸಿದ್ದರಾಮರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಆದರ್ಶ.ಅಂತೆಯೇ ಅವರು ಶರಣ ಸಮೂಹದಲ್ಲಿ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿದವರು.
ಮಹಾನ್ ಶಿವಶರಣ ಸಿದ್ದರಾಮಯ್ಯರನ್ನು ಕುರಿತು ರಚಿತವಾದಷ್ಟು ವಿಪುಲ ಸಂಖ್ಯೆಯ ಶಾಸನಗಳು ಬೇರೆ ಯಾವ ಶರಣರನ್ನು ಕುರಿತು ರಚಿತವಾಗಿಲ್ಲ ಕರ್ನಾಟಕದ ಜನರ ಬದುಕಿನಲ್ಲಿ ಸಿದ್ದರಾಮಯ್ಯ ಮಾಡಿದ ಗಾಢವಾದ ಪ್ರಭಾವಕ್ಕೆ ಇದು ನಿದರ್ಶನವೆಂದು ಹೇಳಬಹುದು ಇವುಗಳ ಜೊತೆಗೆ ಹರಿಹರ ರಾಘವಾಂಕರಿಂದ ಮೊದಲುಗೊಂಡು ಇತ್ತೀಚಿನ ಜಯದೇವಿತಾಯಿ ಲಿಗಾಡೆಯವರಿಗೆ 30ಕ್ಕೂ ಹೆಚ್ಚಿನ ಕವಿ ಕೃತಿಗಳಲ್ಲಿ ಸಿದ್ದರಾಮರು ನಿರೂಪಿತವಾಗಿದೆ.
ಕೊನೆಯಲ್ಲಿ ಜಯದೇವಿತಾಯಿ ಅವರ ಒಂದು ಸಿದ್ದರಾಮರ ಸ್ತುತಿಯೊಂದಿಗೆ ಈ ನನ್ನ ಪುಟ್ಟ ಲೇಖನವನ್ನು ಮುಗಿಸ ಬಯಸುತ್ತೇನೆ:

ಯೋಗಿ ಬಂದಿದಾರೇನ,ಬಾಗಿ ಶರಣಾದೇನ
ಯೋಗದ ಕೀಲ ತಿಳಿಸುವರೇನ,
ಯೋಗದ ಕೀಲ ತಿಳಿಸುವರೇನ
ಸಿದ್ದರಾಮ
ರಾಗಭೋಗದ ಆಚೆ ವೈವರೇನ ?

ಪ್ರೊ.ಶಾರದಾ ಪಾಟೀಲ ( ಮೇಟಿ)
ಬಾದಾಮಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಹೊಡೆದವರ ಬಡಿದವರ ಗುರುಹಿರಿಯರೆಂದೆನ್ನು ಬೈದವರ ಬಂಧುಗಳು ಬಳಗವೆನ್ನು ಹಿಂದೆ ನಿಂದಿಸಿದವರ ಮಿತ್ರಮಂಡಲಿಯೆನ್ನು ಸೈರಣೆಗೆ ಸಮವಿಲ್ಲ -- ಎಮ್ಮೆತಮ್ಮ ಶಬ್ಧಾರ್ಥ ಸೈರಣೆ = ತಾಳ್ಮೆ ಗುರುಗಳು ತಂದೆತಾಯಿಗಳು‌ ಹೊಡೆದು ಬಡಿದು ಬುದ್ಧಿ ಕಲಿಸುತ್ತಾರೆ. ಹಾಗೆ ಯಾರೆ...
- Advertisement -

More Articles Like This

- Advertisement -
close
error: Content is protected !!
Join WhatsApp Group