ಶರಣಸತಿ ಲಿಂಗಪತಿ ಭಾವದ ಗಜೇಶ ಮಸಣಯ್ಯ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹನ್ನೆರಡನೇಯ ಶತಮಾನ ಅನೇಕ ವೈಶಿಷ್ಟ್ಯಗಳಿಂದ ಮೆರೆದ ಒಂದು ಮಹತ್ವಪೂರ್ಣಕಾಲ. ಅಂದು ಅಸಂಖ್ಯಾತ ಶರಣಶರಣೆಯರು ತಮ್ಮ ಸ್ವತಂತ್ರ ಮನೋಭಾವ ಸ್ವಚ್ಚಂದ ವಿಚಾರ, ಅಪಾರ ಲೋಕಾನುಭವ ಹಾಗೂ ಅನುಪಮ ಪ್ರತಿಭೆಗಳಿಂದ ಸಾಹಿತ್ಯ ಕ್ಷೇತ್ರಗಳಲ್ಲಿ ವಿನೂತನ ಕ್ರಾಂತಿಯನ್ನೆಸಗಿದರು. ಅವರ ಕ್ರಾಂತಿಯ ಫಲವಾಗಿ ಹೊಸ ವಸ್ತು, ರೂಪ, ಭಾಷೆ, ತಂತ್ರಗಳು ಸಾಹಿತ್ಯ ರಂಗವನ್ನು ಪ್ರವೇಶಿಸಿದವು. ಹಲವಾರು ಹೊಸ ಸಾಹಿತ್ಯಪ್ರಕಾರಗಳು ಪ್ರಕಾಶಕ್ಕೆ ಬಂದವು. ಅವುಗಳಲ್ಲಿ “ವಚನ” ಅವರ ಅಚ್ಚ ನಿರ್ಮಿತಿ.
ವಿಶ್ವಸಾಹಿತ್ಯಕ್ಕೆ ಕನ್ನಡ ಅರ್ಪಿಸಿದ ಅಪೂರ್ವ ಕೊಡುಗೆ. ಇಂತಹ ವಚನ ಸಾಹಿತ್ಯ ನಿರ್ಮಾಣಕ್ಕೆ ಕಾರಣೀಕರ್ತರಾದ 12 ನೇ ಶತಮಾನದ ಶರಣರು, ತಮ್ಮ ನಡೆ ನುಡೆಯನ್ನು ಒಂದಾಗಿಸಿ ಆದ್ಯಾತ್ಮಿಕ ಶಿಖರಕ್ಕೇವನ್ನೇರಿ, ಎಲ್ಲರಿಗೂ ಆದರ್ಶಪ್ರಾಯವಾಗಿ ಅನುಕರಣೀಯರಾಗಿದ್ದಾರೆ. ಕೆಲವು ಶರಣರು ಎಲ್ಲರಿಗೂ ಅತ್ಯಂತ ಚಿರಪರಿಚಿತರಾದರೆ ಇನ್ನು ಕೆಲವರದು ಅಳಿಲು ಸೇವೆ. ಆದರೆ ಎಲ್ಲರ ಕೊಡುಗೆಗೂ ಅಷ್ಟೇ ತೂಕ, ಅಷ್ಟೇ ಬೆಲೆ. ಅಂಥ ಶರಣ ಸಮೂಹದಲ್ಲಿ ಅಷ್ಟೊಂದು ಪ್ರಚಾರ ಪಡೆಯದ ಪ್ರತಿಭಾವಂತ ವಚನಕಾರ ಗಜೇಶ ಮಸಣಯ್ಯ.
ಡಾ ಫ ಗು ಹಳಕಟ್ಟಿ ಅವರು ಇವರ ಹೆಸರು ಗಣಸಹಸ್ರದಲ್ಲಿ ಬಂದಿದೆ ಅವರು ಬಹುಶಃ ಬಸವೇಶ್ವರನ ಕಾಲದವರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಡಾ ಫ.ಗು ಹಳಕಟ್ಟಿ ಅವರು ಕನ್ನಡನಾಡಿನಲ್ಲಿ ಎರಡು ಕರಜಗಿ ಗ್ರಾಮಗಳಿವೆ. ಇವುಗಳಲ್ಲಿ ಅಕ್ಕಲಕೋಟ ಸಂಸ್ಥಾನದಲ್ಲಿಯ ಕರಜಗಿಯೇ ಮಸಣಯ್ಯನದೆಂದು ನಮಗೆ ತೋರುತ್ತದೆ. ಈಚೆಗೆ ಪ್ರಸಿದ್ಧವಾದ ಶಿಲಾಹಾರರ ಒಂದು ಶಿಲಾಗ್ರಾಮಶಾಸನದಿಂದ ಮಸಣಯ್ಯನ ಇಷ್ಟದೇವತೆಯಾದ ಗಜೇಶ್ವರ ದೇವಾಲಯವು ಈ ಕರಜಗೆಯಲ್ಲಿಯೇ ಇದ್ದುದು ಗೊತ್ತಾಗುತ್ತದೆ. ಇದಲ್ಲದೇ ಈ ಗ್ರಾಮದಲ್ಲಿ ಗಜೇಶ್ವರ ಎಂಬ ಹೆಸರಿನ ದೇವಾಲಯವೂ ಈಗಲೂ ಇರುತ್ತದೆ. ಈ ಗ್ರಾಮದಿಂದ ಪೂರ್ವಕ್ಕೆ 40 ಮೈಲುಗಳ ಮೇಲೆ ಮನಹಳ್ಳಿ ಎಂಬ ಗ್ರಾಮವಿದ್ದು ಅಲ್ಲಿ ಮಸಣಯ್ಯನ ದೇವಾಲಯವೂ ಉಂಟು. ಇಲ್ಲಿ ಮಸಣಯ್ಯನು ಕೆಲಕಾಲ ವಾಸಿಸಿರಬಹದೆಂದು ತೋರುತ್ತದೆ. ಈ ಗ್ರಾಮದಿಂದ 6 ಮೈಲುಗಳ ಮೇಲೆ ತೊರೆ ಅಥವಾ ಬೆಣ್ಣೆ ತೊರೆ ಎಂಬ ಹೆಸರಿನ ಒಂದು ದೊಡ್ಡ ಹಳ್ಳವು ಹರಿಯುತ್ತದೆ. ಮಸಣಯ್ಯನು ಲಿಂಗಪೂಜೆಗೋಸ್ಕರ ಕುಳಿತ ನದಿಯು ಇದೇ ಆಗಿರಬಹುದೆಂದು ತೋರುತ್ತದೆ. ಇವೆಲ್ಲ ಸಂಗತಿಗಳನ್ನುನಿರೀಕ್ಷಿಸಿದಲ್ಲಿ ಮಸಣಯ್ಯನ ಗ್ರಾಮವು ಅಕ್ಕಲಕೋಟೆಗೆ ಸಮೀಪವಿರುವ ಕರಜಗೆಯೇ ಇರುತ್ತದೆಂದು ತೋರುತ್ತದೆ ಎಂದು ಹೇಳಿದ್ದಾರೆ.
ಕಾರಜಗಿ ಎಂಬ ಗ್ರಾಮದಲ್ಲಿ ಗಜೇಶ ಮಸಣಯ್ಯನೆಂಬ ಶರಣನಿದ್ದ. ಲಿಂಗಪೂಜೆ ಜಂಗಮದಾಸೋಹ ಅವನ ನಿತ್ಯ ಕಾಯಕವಾಗಿತ್ತು. ಏಕಚಿತ್ತದಿಂದ ಲಿಂಗಪೂಜೆಯಲ್ಲಿ ನಿರತನಾದಾಗ ಬಾಹ್ಯ ಜಗತ್ತಿನ ಪರಿಜ್ಞಾನ ಅವನಿಗೆ ಇರುತ್ತಿರಲಿಲ್ಲ. ಹೀಗಿರುವಾಗ ಒಂದು ದಿವಸ ಮಸಣಯ್ಯನಿಗೆ ಗುರುದರ್ಶನ ಪಡೆಯಬೇಕೆಂಬ ಅಪೇಕ್ಷೆಯಾಯಿತು. ತನ್ನ ಊರಿಂದ ಗುರುವಿದ್ದ ಊರಿಗೆ ಹೊರಟ. ಮಾರ್ಗ ಮಧ್ಯದಲ್ಲಿ ಒಂದು ನದಿ ಬಂದಿತು. ಅದರ ದಂಡೆಯ ಮೇಲೆ ಬೆಳೆದ ಗಿಡಬಳ್ಳಿ, ಜುಳು ಜುಳು ಹರಿವ ಶುಭ್ರ ಜಲ, ಲತೆ, ಪುಷ್ಪರಾಶಿ, ಪ್ರಶಾಂತ ವಾತಾವರಣ ಅವನನ್ನು ಲಿಂಗಪೂಜೆಗೆ ಪ್ರಚೋದಿಸಿತು ಒಂದು ಮರದಡಿಯಲ್ಲಿ ತಳಿರಹಾಸಿಗೆ ಹಾಸಿ ಪೂಜೆಯಲ್ಲಿ ನಿರತನಾದ. ಧ್ಯಾನ ಸಮಾಧಿಯಲ್ಲಿ ಲೀನನಾದ. ಆಗ ಅವನ ಲಿಂಗಪೂಜಾನಿಷ್ಠೆಯನ್ನು ನೋಡಬೇಕೆಂದು ಪರಶಿವನು ಒಂದು ಪರೀಕ್ಷೆ ಒಡ್ಡಿದ. ಆಕಾಶದಲ್ಲಿ ಕಾರ್ಮೋಡ ಕವಿಯಿತು, ಗುಡುಗು ಸಿಡಿಲು ಆರ್ಭಟಿಸಿದವು. ಮಿಂಚು ಹೊಡೆಯಿತು, ಗಾಳಿ ಬೀಸಿತು ಸ್ವಲ್ಪ ಸಮಯಲ್ಲಿಯೇ ಮಳೆ ಧಾರಕಾರವಾಗಿ ಸುರಿಯಲಾರಂಭಿಸಿತು. ಬಿರುಗಾಳಿಯ ಭಯಂಕರ ಹೊಡೆತಕ್ಕೆ ಗಿಡಮರಗಳು ತತ್ತರಿಸಿ ನೆಲಕ್ಕುರಳಿದವು ಮಳೆಯ ಈ ರೌದ್ರತೆಯನ್ನು ಕಂಡು ಜನರ ಎದೆ ನಡುಗಿತು. ಆದರೆ ಮಸಣಯ್ಯನಿಗೆ ಇದಾವುದರ ಪರಿವೆಯೂ ಇಲ್ಲ. ಹಾಗೇ ಮೂರು ಜಾವ ಏಕಪ್ರಕಾರವಾಗಿ ಮಳೆ ಸುರಿದರೂ ಅವನ ಮನ ಕದಲಲಿಲ್ಲ ಏಕಾಗ್ರತೆ ಭಂಗಗೊಳ್ಳಲಿಲ್ಲ, ನಿಷ್ಠೆ ನೀರಾಗಲಿಲ್ಲ. ಸ್ವಲ್ಪವೂ ಅಲುಗದೆ ಶಿಲಾಮೂರ್ತಿಯಂತೆ ಕುಳಿತು ಲಿಂಗದೇವನೊಡನೆ ಲೀಲೆಯಾಡತೊಡಗಿದ್ದ. ಅಷ್ಟರಲ್ಲಿ ಮಳೆ ನಿಂತಿತು. ನದಿ ತುಂಬಿ ಹರಿಯತೊಡಗಿತು. ನೋಡನೋಡುವಷ್ಟರಲ್ಲಿಯೇ ಅದು ತನ್ನ ಗಾತ್ರವನ್ನು ಹಿಗ್ಗಿಸಿ ಬೋರ್ಗರೆಯುತ್ತ ಮಸಣಯ್ಯ ಕುಳಿತಲ್ಲಿಗೆ ಧುಮ್ಮಿಕ್ಕಿತು ಆದರೂ ವಿಚಲಿತನಾಗಲಿಲ್ಲ. ಅವನ ಲಿಂಗನಿಷ್ಠೆಯ ನಿಬ್ಬೆರಗನ್ನು ಕಂಡು ನದಿ ತಾನೇ ಅವನು ಕುಳಿತ ಸ್ಥಳವನ್ನು ಮಾತ್ರ ಬಿಟ್ಟು ಹಿಂದೆ ಇಬ್ಭಾಗವಾಗಿ ಅಗಲಿ ಮತ್ತೆ ಮುಂದೆ ಒಂದಾಗಿ ಕೂಡಿ ಹರಿಯತೊಡಗಿತು. ಇದನ್ನು ಕಂಡು ಜನ ಅಚ್ಚರಿಪಟ್ಟರು. ಲಿಂಗನಿಷ್ಠಭಕ್ತರಿಗೆ ಶರಧಿ ಅಂಜುವದು ಎಂದು ಕೊಂಡಾಡಿದರು.
ಧ್ಯಾನಸಮಾಧಿಯಿಂದ ಎಚ್ಚೆತ್ತ ಮಸಣಯ್ಯನಿಗೆ ಅದುವರೆಗೆ ನಡೆದುದೆಲ್ಲ ಕನಸಿನಲ್ಲಿ ಕಂಡಂತೆ ಭಾಸವಾಯಿತು. ಧ್ಯಾನತೃಪ್ತನಾಗಿ ಆನಂದದಿಂದ ತನ್ನ ಇಷ್ಟದೈವ ಮಹಾಲಿಂಗ ಗಜೇಶ್ವರನನ್ನು ಮನದುಂಬಿ ಸ್ತುತಿಸತೊಡಗಿದ ಹೀಗೆ ಬಹುಕಾಲ ಲಿಂಗಾರ್ಚನೆಯಲ್ಲಿ ತೊಡಗಿ ಲಿಂಗಾಂಗ ಸಾಮರಸ್ಯವನ್ನು ಹೊಂದಿದನೆಂದು ಪುರಾಣದಲ್ಲಿ ಬರುತ್ತದೆ.
ಈ ಪವಾಡ ಸಾದೃಶ್ಯ ಕಥೆಯಲ್ಲಿ ಉತ್ತ್ರೇಕ್ಷೆಯಿದ್ದರೂ ಮಸಣಯ್ಯನ ಊರು ಕರಜಗಿ, ಅವನ ಇಷ್ಟದೈವ ಗಜೇಶ್ವರ. ಅವನೊಬ್ಬ ನಿಷ್ಠಾವಂತ ಲಿಂಗಪೂಜಕನಾಗಿದ್ದ ಎಂಬಂಥ ಸತ್ಯ ಸಂಗತಿಗಳೂ ಬೆರೆತಿವೆ. ನದಿ ಅವನು ಪೂಜೆಗೆ ಕುಳಿತ ಸ್ಥಳವನ್ನು ಮಾತ್ರ ಬಿಟ್ಟು ಇಬ್ಭಾಗವಾಗಿ ಮತ್ತೆ ಮುಂದೆ ಕೂಡಿ ಹರಿಯಿತು ಎಂಬುದು ಅವನ ಪೂಜಾನಿಷ್ಠೆ, ಅಚಲಭಕ್ತಿಯನ್ನು ಎತ್ತಿ ತೋರಿಸಲು ಕಟ್ಟಿದ ಕಥೆಯಾಗಿರಬೇಕು. ಏನಿದ್ದರೂ ಮಸಣಯ್ಯ ಒಬ್ಬ ಐತಿಹಾಸಿಕ ವ್ಯಕ್ತಿ. ಅದಕ್ಕೆ ಇಲ್ಲಿಯವರೆಗೆ ಉಳಿದುಬಂದಿರುವ ವಚನಗಳೇ ಸಾಕ್ಷಿ.
ಮಸಣಯ್ಯ ಶರಣನಾಗಿದ್ದಂತೆ ಸಂಸಾರಿಯೂ ಆಗಿದ್ದ. ಮಸಣಯ್ಯ ಪ್ರಿಯಗಜೇಶ್ವರಾ ಎಂಬ ಅಂಕಿತದಲ್ಲಿ ವಚನ ರಚಿಸಿದ ವಚನಕಾರ್ತಿಯೇ ಆತನ ಸತಿ. ಹಸ್ತಪ್ರತಿಗಳಲ್ಲಿ ಈಕೆಯನ್ನು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಎಂದು ಕರೆಯಲಾಗಿದೆ. ಆದರೆ ಹೆಸರು ಮಾತ್ರ ಇದವರೆಗೆ ದೊರೆತಿಲ್ಲ. ಎಲ್ಲವೂ ಸತಿಪತಿ ಭಾವದ ಉತ್ಕಟತೆಯನ್ನು ಪ್ರಕಟಿಸುತ್ತವೆ. ಸರಳ ಭಾಷೆ, ಮಧುರ ಭಾವ, ಕಾವ್ಯಾತ್ಮಕ ಶೈಲಿಯಿಂದಾಗಿ ತುಂಬ ಅಕರ್ಷಕವೆನಿಸಿವೆ. ಈ ಸತಿಪತಿಗಳಿಬ್ಬರೂ ಅನಭಾವಿಗಳಾಗಿ ಶರಣ ಜೀವನ ನಡೆಸುತ್ತಾ ಲೌಕಿಕ ಪರಲೌಕಿಕಗಳೆರಡರ ಸುಂದರ ಸಮನ್ವಯವನ್ನು ಸಾಧಿಸಿದ್ದರೆಂದು ಕಂಡು ಬರುತ್ತದೆ.
ಒಟ್ಟಿನಲ್ಲಿ ಸತಿಪತಿ ಭಾವ ಮತ್ತು ಲಿಂಗನಿಷ್ಠೆಯ ವಚನಗಳನ್ನು ಬರೆದಿರುವ ಮಸಣಯ್ಯ ಐಕ್ಯಸ್ಥಲ ಮುಟ್ಟಿದ ಶಿವಯೋಗ ಸಾಧಕ ಎಂದು ಹಳಕಟ್ಟಿಯವರು ಗುರುತಿಸಿದ್ದಾರೆ. ಅಕ್ಕಲಕೋಟೆ ಸಂಸ್ಥಾನದ ಕರ್ಜಗಿ ಗ್ರಾಮಕ್ಕೆ ಸೇರಿದ ಈತ, ಶರಣಸತಿ ಲಿಂಗಪತಿ ಭಾವದ ಶ್ರೇಷ್ಠ ವಚನಕಾರ. ಕಲ್ಯಾಣದ ಶರಣರ ಜೊತೆ ಅನುಭಾವ ಗೋಷ್ಠಿಗಳಲ್ಲಿ ಪಾಲ್ಗೊಂಡ ಈತ, ಕೊನೆಗಾಲದಲ್ಲಿ ಗುಲಬರ್ಗಾ ಜಿಲ್ಲೆ ಅಳಂದ ತಾಲೂಕಿನ ಮನಹಳ್ಳಿ ಎಂಬ ಗ್ರಾಮದಲ್ಲಿ ಇದ್ದು, ಅಲ್ಲಿಯೇ ಐಕ್ಯನಾದನೆಂದು ತಿಳಿಯುತ್ತದೆ.
ಗಜೇಶಮಸಣಯ್ಯ ಶ್ರೇಷ್ಠ ಸಂಸಾರಿ, ಶರಣ ಆಗಿದ್ದಂತೆ ಒಬ್ಬ ಉತ್ತಮ ವಚನಕಾರನೂ ಆಗಿದ್ದಾನೆ. ತನ್ನ ಹೆಸರಿನೊಂದಿಗೆ ಗಜೇಶ ಎಂಬ ಇಷ್ಟದೈವದ ಹೆಸರನ್ನೇ “ ಮಹಾಲಿಂಗ ಗಜೇಶ್ವರ” ಎಂದು ಅಂಕಿತವನ್ನಾಗಿ ಇರಿಸಿಕೊಂಡು ಉತೃಷ್ಟವಾದ ವಚನಗಳನ್ನು ರಚಿಸಿದ್ದಾನೆ. ಈಗ ಒಟ್ಟು 70 ವಚನಗಳು ದೊರೆತಿವೆ. ಅವುಗಳಲ್ಲಿ ವ್ಯಕ್ತವಾಗಿರುವ ಎಲ್ಲವೂ ಸತಿಪತಿ ಭಾವದ ಉತ್ಕಟತೆಯನ್ನು ಪ್ರಕಟಿಸುತ್ತವೆ. ಸರಳ ಭಾಷೆ, ಮಧುರ ಭಾವ, ಕಾವ್ಯಾತ್ಮಕ ಶೈಲಿಯಿಂದಾಗಿ ತುಂಬ ಅಕರ್ಷಕವೆನಿಸಿವೆ. ಪ್ರತಿಭೆ, ವ್ಯಕ್ತಿತ್ವ, ಮನೋಭಾವ, ಮಧುರ ಶೈಲಿಗಳನ್ನು ಗಮನಿಸಿದರೆ ಮಸಣಯ್ಯನೊಬ್ಬ ಮೇಲ್ಮಟ್ಟದ ವಚನಕಾರನೆಂಬುದು ಸ್ಪಷ್ಟವಾಗುತ್ತದೆ.
ಗಜೇಶ ಮಸಣಯ್ಯನ ವಚನಗಳು ಲಿಂಗಾಂಗ ಸಾಮರಸ್ಯದಿಂದ ಕೂಡಿವೆ. ಸತಿ ಪತಿ ಭಾವ ಅವುಗಳ ಪ್ರಮುಖ ಲಕ್ಷಣ. ಸಾಧಕ ಹೆಣ್ಣಿರಲಿ ಅಥವಾ ಗಂಡಿರಲಿ ತಾನು ಸತಿ, ಲಿಂಗವೇ ಪತಿ ಎಂದು ಭಾವಿಸಿ ಆಚರಿಸುವುದು ಈ ಭಾವದ ವೈಶಿಷ್ಟ್ಯ. ಮಸಣಯ್ಯನ ಒಟ್ಟು ವಚನಗಳನ್ನು ಐದು ವಿಭಾಗಗಳಾಗಿ ವಿಂಗಡಿಸಿ ವಿವೇಚಿಸಬಹುದು.
1. ಲಿಂಗಪತಿಗಾಗಿ ಶರಣಸತಿಯ ಹಂಬಲ
2. ಲಿಂಗಪತಿಯನ್ನು ಶರಣಸತಿ ಒಲಿಸಿಕೊಳ್ಳುವ ರೀತಿ
3. ಲಿಂಗಪತಿಯೊಡನೆ ಶರಣಸತಿ ಬೆರೆತಿರುವುದು
4. ಲಿಂಗಪತಿಯಲ್ಲಿ ಶರಣಸತಿ ಸಮರಸಹೊಂದಿ ಸುಖಿಸುವುದು
5. ಲಿಂಗಪತಿಯಲ್ಲಿ ಶರಣಸತಿ ಬೆರೆತು ಬೇರಿಲ್ಲದಂತಾಗುವುದು.
ಮೊದಲ ಭಾಗದ ವಚನಗಳಲ್ಲಿ ಭಗವಂತನನ್ನು ಬೆರೆಯಬೇಕೆಂಬ ಭಕ್ತನ ಹಂಬಲ, ತವಕ ವ್ಯಕ್ತವಾಗಿದ್ದರೆ ಎರಡನೇಯದರಲ್ಲಿಅವನನ್ನು ಒಲಿಸಿಕೊಳ್ಳುವ ಉಪಾಯ, ರೀತಿ ನೀತಿಗಳ ನಿರೂಪಣೆಯಿದೆ. ಮೂರನೇಯದರಲ್ಲಿ ಅವನೊಡನೆ ಬೆರೆಯುವ ಬಗೆ, ನಾಲ್ಕನೇಯದರಲ್ಲಿ ಬೆರೆತ ಮೇಲೆ ಆಗುವ ಆನಂದ, ಕೊನೆಯದರಲ್ಲಿ ಅವನೊಡನೆ ಬೆರೆತು ಬೇರಿಲ್ಲದಂತಾಗುವ ಸಾಮರಸ್ಯ ಅಥವಾ ಐಕ್ಯಸ್ಥಿತಿಯ ವರ್ಣನೆ ಬಂದಿದೆ.
ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.
ಪರಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು,
ಮಹಾಲಿಂಗ ಗಜೇಶ್ವರದೇವಾ,
ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ
ಜೀವಾತ್ಮ ಮತ್ತು ಪರಮಾತ್ಮನ ಮಧ್ಯದ ಸತಿಪತಿ ಭಾವದಲ್ಲಿ ಜೀವಾತ್ಮನಾದವನು ಪರಮಾತ್ಮನಿಂದ ಏನನ್ನೂ ಬಯಸುವುದಿಲ್ಲ. ‘ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ’ ಎಂದು ಪರಮಾತ್ಮನಾದ ಮಹಾಲಿಂಗ ಗಜೇಶ್ವರದೇವರಿಗೆ ಜೀವಾತ್ಮನಾದ ಮಸಣಯ್ಯ ಹೇಳುತ್ತಿದ್ದಾರೆ. ಈ ವಚನದಲ್ಲಿ ‘ಪರಮಪದವಿ’ ಮತ್ತೆ ಮತ್ತೆ ಬರುತ್ತದೆ. ಪರಮಾತ್ಮನು ಏಕಮೇವಾದ್ವಿತೀಯ, ಅತ್ಯುನ್ನತ, ಪರಮಾತ್ಮನೇ ಜಗತ್ತಿನ ರಹಸ್ಯವನ್ನು ತಿಳಿಸಬಲ್ಲವ, ಆದ್ದರಿಂದಲೇ ಗಜೇಶಮಸಣಯ್ಯನವರು ರಹಸ್ಯಭೇದದ ಅತ್ಯುನ್ನತ ಪದವಿಯನ್ನು ಪರಮಾತ್ಮನ ಕೊರಳಿಗೆ ಕಟ್ಟುತ್ತಾರೆ. ಪರಮಾತ್ಮನೇ ಮಹಾಜ್ಞಾನಿ. ಅಂತೆಯೆ ಪರಮಪದವಿಯನ್ನು ಆತನ ತಲೆಗೆ ಸುತ್ತುತ್ತಾರೆ. ಪರಮಾತ್ಮನೇ ಮಹಾಕರುಣಾಳು ಈ ಕಾರಣದಿಂದ ಪರಮಪದವಿಯನ್ನು ಅವನ ಎದೆಯಲ್ಲಿಡುತ್ತಾರೆ. ಜೀವಾತ್ಮ ಸತಿಗೆ ತನ್ನ ಪರಮಾತ್ಮ ಪತಿಯೇ ಎಲ್ಲದರಲ್ಲೂ ಶ್ರೇಷ್ಠ ಎಂದು ಹೇಳಬೇಕಾಗಿದೆ. ಗಜೇಶ ಮಸಣಯ್ಯನವರು ಅದನ್ನಿಲ್ಲಿ ಅನ್ಯೋಕ್ತಿಯ ಮೂಲಕ ಹೇಳುತ್ತಾರೆ. ಮಸಣಯ್ಯನವರ ವಚನಗಳ ಮೇಲೆ ಗ್ರಾಮೀಣ ಗರತಿಯರ ಮುಗ್ಧತೆ ಮತ್ತು ಮಾಧುರ್ಯದ ಪ್ರಭಾವ ದಟ್ಟವಾಗಿದೆ. ‘‘ನನಗೆ ಯಾವ ಪದವಿಯೂ ಬೇಡ, ನಿಮ್ಮ ತೊತ್ತುಸೇವೆಯೇ ಸಾಕು’’ ಎಂಬುದು ಮುಗ್ಧತೆಯ ಪ್ರತೀಕ. ಇದು ಸಾಧ್ವಿಯರ ಅರ್ಪಣಾ ಮನೋಭಾವದ ಮಾತು ಕೂಡ ಆಗಿದೆ. ಗಜೇಶಮಸಣಯ್ಯನವರು ಅಂಥ ಗರತಿಯರ ಸರಳ ಮತ್ತು ನಿರಾಳ ವ್ಯಕ್ತಿತ್ವವನ್ನು ಅರಿತುಕೊಂಡಿದ್ದರಿಂದಲೇ ದೇವರೊಡನೆ ಈ ವಿಶಿಷ್ಟವಾದ ಸಲುಗೆಯಿಂದ ಕೂಡಿದ ಮಧುರಭಾವದ ವಚನಗಳನ್ನು ಬರೆಯಲು ಸಾಧ್ಯವಾಯಿತು. ಗಜೇಶ ಮಸಣಯ್ಯನವರ ಮಧುರಭಕ್ತಿಯ ವಚನಗಳು ಓದುಗರ ಮನದಲ್ಲಿ ಮಾಧುರ್ಯದ ಹೊನಲನ್ನೇ ಹರಿಸುತ್ತವೆ. ನಿಸ್ವಾರ್ಥದಿಂದ ಕೂಡಿದ ಉತ್ಕಟ ಪ್ರೇಮಭಾವವನ್ನು ಮೂಡಿಸುತ್ತವೆ.
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ?
ಅವರನೊಲ್ಲೆನೆಂದಡೆ ಸಾಲದೆ?
ಮಹಾಲಿಂಗ ಗಜೇಶ್ವರನ ಶರಣರನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ!
ನಾವು ಪ್ರೀತಿಸಿದವರನ್ನು ಕೊಲ್ಲುವುದಕ್ಕೆ, ಮಸೆದು ಹರಿತಮಾಡಿದ ಕತ್ತಿ ಯಾಕೆ ಬೇಕು, `ನೀನು ನನಗೆ ಬೇಡ’ ಅನ್ನುವ ಮಾತೇ ಸಾಕು. ಹಾಗೆಯೇ ಮಹಾಲಿಂಗ ಗಜೇಶ್ವರನ ಶರಣರಿಂದ ಬೇರೆಯಾದರೆ ಸಾಕು, ನನ್ನ ಸ್ಥಿತಿ ತುಪ್ಪದಲ್ಲಿ ನಂದಿಸಿದ ಕಿಚ್ಚಿನಂತಾಗುತ್ತದೆ.
ಪ್ರಿಯಜನರ ವಿರಹವನ್ನು ಕುರಿತು ಹೇಳುವ ತೀವ್ರವಾದ ಮಾತುಗಳು ಇವು. ಮಹಾಲಿಂಗ ಗಜೇಶ್ವರನಿಗೆ ಪ್ರಿಯರಾದವರನ್ನು ದೂರಮಾಡಿಕೊಂಡರೂ ಬೆಂಕಿಯನ್ನು ಆರಿಸಲೆಂದು ತುಪ್ಪ ಹಾಕಿದಂತಾಗುವಾಗ, ಇನ್ನು ಅವನಿಂದಲೇ ದೂರವಾಗಿ ಹೇಗೆ ಉಳಿಯಲಿ? ಅವನು ನನ್ನನ್ನು ಬೇಡವೆಂದರೆ ಏನು ಮಾಡಲಿ? ಈ ಆತಂಕ ತೀವ್ರವಾಗಿ, ಆದರೆ ಸರಳ ನೇರ ನುಡಿಗಳಲ್ಲಿ ವ್ಯಕ್ತವಾಗಿದೆ.
ಇಬ್ಬರ ಮೈಮನ ನೋಟ ನುಡಿ ಎಲ್ಲವೂ ಒಂದಾಗುತ್ತದೆ. ಇಬ್ಬರೂ ಸಾಮರಸ್ಯ ಸುಖದ ಚರಮಸೀಮೆಯನ್ನು ದಾಟುತ್ತಾರೆ ಬಹಿರಂಗದ ವಿಕಾರಗಳೆಲ್ಲ ಮಾಯವಾಗುತ್ತವೆ. ಲಿಂಗಪತಿ ಈಗ ಅಂತರಂಗದಲ್ಲಿ ಬೆರೆಯುತ್ತಾನೆ. ಆಗ ಅವಳಿಗಾದ ಅನುಭವ, ಸ್ಥಿತಿಗತಿಗಳನ್ನು ಅವಳ ಬಾಯಿಯಿಂದಲೇ ಕೇಳಬೇಕು
ಎನ್ನ ಕಡೆಗಣ್ಣು ಕೆಂಪಾಯಿತವ್ವಾ.
ಎನ್ನ ನಳಿತೋಳು ಉಡುಗಿದವವ್ವಾ.
ಇಕ್ಕಿದ ಹವಳದ ಸರ ಬೆಳುಹಾದವವ್ವಾ.
ಮುಕ್ತಾಫಳ ಹಾರದಿಂದ ಆನು ಬೆಂದೆನವ್ವಾ.
ಇಂದೆನ್ನ ಮಹಾಲಿಂಗ ಗಜೇಶ್ವರನು
ಬಹಿರಂಗವನೊಲ್ಲದೆ ಅಂತರಂಗದಲಿ ನೆರೆದ ಕಾಣೆಅವ್ವಾ!
ಹೀಗೆ ಲಿಂಗಪತಿಯೊಡನೆ ಅಂತರಂಗದಲ್ಲಿ ಬೆರೆದು ಬೇರಿಲ್ಲದಂತಾಗಿ ಸುಖಿಸಿದ ಶರಣಸತಿ ಕೊನೆಗೆ ತನ್ನ ಇರುವನ್ನು ಸಂಪೂರ್ಣ ಅವನಲ್ಲಿ ಇಲ್ಲವಾಗಿಸುತ್ತಾಳೆ ತಾನೇ ಲಿಂಗವಾಗುತ್ತಾಳೆ. ಅವನಲ್ಲಿ ಬೆರೆತು ಅಭೇದ ಸ್ಥಿತಿಯನ್ನು ಹೊಂದಿದಾಗ ಪತಿ ಯಾರು ಎಂಬುದೇ ತಿಳಿಯುವುದಿಲ್ಲ ಎರಡೂ ಒಂದಾಗುತ್ತವೆ. ಹಾಗೆ ಒಂದಾದ ಸ್ಥಿತಿಯನ್ನು ಹೇಳಲೂ ಬಾರದು ಕೇಳಲೂಬಾರದು
ಆತನ ಬೆರಸಿದ ಕೂಟವನೇನೆಂದು ಹೇಳುವೆನವ್ವಾ,
ಹೇಳಲೂಬಾರದು, ಕೇಳಲೂಬಾರದು;
ಏನ ಹೇಳುವೆನವ್ವಾ, ಶಿಖಿ ಕರ್ಪೂರ ಬೆರಸಿದಂತೆ.
ಮಹಾಲಿಂಗ ಗಜೇಶ್ವರನ ಕೂಡಿದ ಕೂಟವ
ಹೇಳಲು ಬಾರದವ್ವಾ.
ಲಿಂಗಪತಿಯಲ್ಲಿ ಶರಣಸತಿಯು ಐಕ್ಯವು ʼಆಲಿಕಲ್ಲ ಪುತ್ಥಳಿ ಕರಗಿ ಅಪ್ಪುವಿನೊಡಗೂಡಿದಂತಾಗುತ್ತದೆʼ ಜ್ಯೋತಿ ಪರಂಜ್ಯೋತಿಯಲ್ಲಿ ಬೆರೆತು ಹೋಗುತ್ತದೆ. ಬಯಲಿನಲ್ಲಿ ಬಯಲು ಕೂಡಿ ಕುರುಹಳಿದು ಪರಮಶಾಂತಿ ಮಾತ್ರ ಉಳಿಯುತ್ತದೆ.
ಹೀಗೆ ಲಿಂಗಾಂಗ ಸಾಮರಸ್ಯವನ್ನು ಬೋಧಿಸುವ ತನ್ನ ಎಲ್ಲ ವಚನಗಳಲ್ಲಿ ಮಸಣಯ್ಯ ಬಳಸಿದ ಪ್ರತಿಮೆ, ದೃಷ್ಟಾಂತ ಉಪಮೆ ಒಂದೊಂದು ಔಚಿತ್ಯಪೂರ್ಣ, ಮಧುರ ಭಾವಕ್ಕೆ ತಕ್ಕ ಲಲಿತಭಾಷೆ, ಸಂಬೂಧನಾತ್ಮಕ ತಂತ್ರ ಹದವರಿತು ಬೆರೆತು ಅವನ ವಿಚಾರಗಳನ್ನು ಹೆಚ್ಚು ಆತ್ಮೀಯವಾಗಿಸಿವೆ.
ಮಸಣಯ್ಯನು ಕಂಡು ಬರುವ ಮತ್ತೊಂದು ವಿಶೇಷ ಗುಣವೆಂದರೆ ಚಿಕ್ಕ ಚಿಕ್ಕ ನುಡಿಗಳಲ್ಲಿ ವಿಶಾಲ ಅರ್ಥವನ್ನು ತುಂಬುವ ಕಲೆಗಾರಿಕೆ. ಅವನ ಕೆಲವು ಮಾತುಗಳಂತೂ ಗಾದೆ ಪಡೆನುಡಿಗಳಂತೆ ಸೂತ್ರಪ್ರಾಯವಾಗಿವೆ. ಅವುಗಳಲ್ಲಿ ವಿಚಾರ ವೈಭವ ಮೆಚ್ಚುವಂತಹದು. ʼಇದ್ದಿಲು ಹಿಂಡಿದಡೆ ರಸವುಂಟೇ? ʼಉಪ್ಪಿಲ್ಲದೂಟ ಸಪ್ಪೆ ಕಾಣಿರೋʼ ʼ ಒಲಿದವರ ಕೊಲುವಡೆ ಮಸೆದು ಕೊರಲಗೇಕವ್ವಾ, ಅವರನೊಲ್ಲೆನೆಂದರೆ ಸಾಲದೆ? ʼದರದಲ್ಲಿದ್ದವರ ನೆನೆವರಲ್ಲದೆ ಸಮೀಪದಲ್ಲಿದ್ದವರನಾರೂ ನೆನೆವರಿಲ್ಲʼ ಮಾತಂಗಿಯ ಹೊಳೆವಲ್ಲಿ ಉತ್ತಮನ ನೆಳಲು ಸುಳಿದಡೆ ರೂಹು ಹೊಲೆಯನಾಗಬಲ್ಲುದೆ? ʼ ʼಉರಗನ ಬಾಯ ಕಪ್ಪೆಯಂತೆ ಸಂಸಾರʼ ಇಂದಿನಿಂದಿನ ಸುಖ ಇಂದಿಂಗೆ ಪರಿಣಾಮʼ ʼಹೆಣಗುವಾಗ ಮೈಯೆಲ್ಲಾ ಕೈಯಾಗಿ ಹೆಣಗಬೇಕುʼ ಎಂಬಂತಹ ಮಾತುಗಳು ಮಸಣಯ್ಯನ ಲೋಕಾನುಭವ, ಸೂಕ್ಷ್ಮ ದೃಷ್ಟಿಯ ಪ್ರತೀಕವಾಗಿವೆ.
ಒಟ್ಟಿನಲ್ಲಿ ಗಜೇಶ ಮಸಣಯ್ಯ ವಿಶಿಷ್ಟ ಭಾವ- ಸ್ವಭಾವ, ವಚನ ರಚನೆ, ಹಾಗೂ ಭಾಷಾ ಶೈಲಿಗಳಿಂದ ವಚನಕಾರರಲ್ಲಿ ಒಬ್ಬ ವಿಶಿಷ್ಟ ವ್ಯಕ್ತಿಯಾಗಿ ತನ್ನದೇ ಆದ ಸ್ಥಾನವನ್ನು ಗಳಿಸಿಕೊಂಡಿದ್ದಾನೆ
ಡಾ.ದಾನಮ್ಮ ಚನಬಸಪ್ಪ ಝಳಕಿ
ಬೆಳಗಾವಿ