“ಒಳಗೊಳಗೆ ಮೌನವಾಗಿದ್ದ, ಹೆಪ್ಪುಗಟ್ಟದ ಬಯಕೆಗಳು ಚಿಗುರೊಡೆದು ಮರವಾಗುವ ಆಸೆಯನ್ನು ಹೊತ್ತು, ಬದುಕಿನ ಪಯಣದಲಿ ಏಕಾಂಗಿಯಾಗದೆ, ಸ್ನೇಹ ಪ್ರೀತಿಗಳನ್ನು
ಅಪ್ಪಿಕೊಂಡು, ದೂರ ಪಯಣಕೆ ಕೈ ಕುಲುಕಿ, ಹೆಜ್ಜೆ ಹಾಕಬೇಕಿದೆ” ಎಂಬ ಅದಮ್ಯ ಜೀವನ ಪ್ರೀತಿಯನ್ನು ಬಿತ್ತರಿಸುವ ಭಾವಗಳ ಸಂಗಮಕಾವ್ಯ, ಡಾ. ಶಶಿಕಾಂತ ಪಟ್ಟಣವರು ರಚಿಸಿದ ಕವನ ಸಂಕಲನ “ಬೇಲಿ ಮೇಲಿನ ಹೂವು”.
೬೩ ಕವನಗಳ ಸಂಗ್ರಹದ ಈ ಕೃತಿ ರಿಯಾ ಬುಕ್ ಹೌಸ್, ಮೈಸೂರ ಪ್ರಕಾಶನದ ಕೃತಿ. ಕನ್ನಡ ಸಂಘ ಪುಣೆಯ ಉಪಾಧ್ಯಕ್ಷರಾದ ಶ್ರೀಮತಿ ಇಂದಿರಾ ಸಾಲಿಯಾನ್‌ರವರ ಮೆಚ್ಚುಗೆಯ ಅಭಿಮತ, ಮಹಾರಾಷ್ಟ ರಾಜ್ಯ ಘಟಕದ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸೋಮಶೇಖರ ಜಮಶೆಟ್ಟಿಯವರ ಬೆನ್ನುಡಿಯೊಂದಿಗೆ ಕೃತಿ ಲೋಕಾರ್ಪಣೆಗೊಂಡಿದೆ.
ಔಷಧ ವೈದ್ಯಕೀಯ ವಿಜ್ಞಾನಿಯಾಗಿದ್ದು ಪ್ರವೃತ್ತಿಯಲ್ಲಿ ಕನ್ನಡ ಭಾಷೆ ಸಾಹಿತ್ಯವನ್ನು ಅಪ್ಪಿಕೊಂಡವರು. ವಚನ, ರಗಳೆ, ಷಟ್ಪದಿ, ಕಂದಗಳ ಅಭ್ಯಾಸ, ಕನ್ನಡ ಇಂಗ್ಲೀಷ್ ಸಾಹಿತ್ಯದ ಓದು, ನವೋದಯ, ನವ್ಯ ಪ್ರಗತಿ ಶೀಲ ದಲಿತ ಬಂಡಾಯೋತ್ತರ ಸಾಹಿತ್ಯದ ಅಧ್ಯಯನ ಶ್ರೀಯುತರ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ
ಸಹಾಯಕಾರಿಯಾಗಿದೆ. ಮಹಾಮಾರಿ ಸಾಂಕ್ರಾಮಿಕ ಕರೋನಾ ರೋಗಕ್ಕೆ ತುತ್ತಾಗಿ ಜೀವ ಕಳೆದುಕೊಂಡ ಜೀವಗಳಿಗೆ ಈ ಸಂಕಲನವನ್ನು ಅರ್ಪಿಸಿದ್ದಾರೆ. ಈಗಾಗಲೇ ಹದಿನೆಂಟು ಕವನ ಸಂಕಲನಗಳು ಪ್ರಕಟಗೊಂಡಿದ್ದು ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಸಂಗತಿ. ಈಗಾಗಲೇ ಅನೇಕ ಕವನಗಳು ರಾಗಸಂಯೋಜನೆಗೊಂಡು ಯು-ಟ್ಯೂಬ್ ಚಾನಲ್‌ನಲ್ಲಿ ಬಿತ್ತರಗೊಂಡಿವೆ.
ಕವಿ ಒಬ್ಬ ಸಂಶೋಧಕ; ಅವನು ಆತ್ಮ ಸಂಶೋಧಕ, ತನ್ನನ್ನು ತನ್ನ ಅಂತರಂಗವನ್ನು ಮುಂದಿಟ್ಟು ಕೊಂಡು ಚಿಂತನೆ – ಮಂಥನಗೈಯುವ ಭಾವುಕತನದ ಭಾಷಾತಜ್ಞ.
ಹೀಗೆ ಮಾಡಿದಾಗಲೇ ಅವನ ವ್ಯಕ್ತಿತ್ವಕ್ಕೊಂದು, ಅವನ ಸಾಹಿತ್ಯಕ್ಕೊಂದು ವೈಶಿಷ್ಟತೆ ಕಾಣಲು ಸಾಧ್ಯ, ಆತ್ಮ ನಿರೀಕ್ಷಣೆ ವ್ಯಕ್ತಿತ್ವವನ್ನು ಬೆಳೆಸುವ ಮಹತ್ವದ ಸಾಧನೆಯಾಗಿದೆ. ಕವಿ
ಡಾ.ಶಶಿಕಾಂತರವರು ತಮ್ಮ ಬದುಕಿನ ಹೆಜ್ಜೆಗಳನ್ನು ಅಸ್ತಿತ್ವದ ಗುರುತುಗಳಾಗಿಸಿದ್ದಾರೆ. ಕವನಗಳಲ್ಲಿ ಅನುಭವದ ಪ್ರಾಮಾಣಿಕತೆ ಹೃದಯಸ್ಪರ್ಶಿಯಾಗಿದೆ.
ಮೋಹಕಶೈಲಿಯ, ಪ್ರೀತಿ-ಪ್ರೇಮಗಳ ಅನುಭವದಲ್ಲಿ ಮಿಂದೆದ್ದ ಮನಸ್ಸು ಸ್ನೇಹದ ಸೂಕ್ಷö್ಮ ಪರಿಧಿಗಳನ್ನು ಬಿತ್ತರಿಸುತ್ತದೆ.
ಭಾವಭದ್ರತೆಯನ್ನು ನೀಡಿದ ಗೆಳತಿಯ ನೆನಪು, “ನಿನ್ನದೇ ನೆನಪು” ಕವನದಲ್ಲಿ ನೂರುಕನಸುಗಳಾಗಿ ಕಾಡಿವೆ. “ಎದೆಗೆ ಹಚ್ಚೆ ಹಾಕಿಸಿದ ಹುಚ್ಚನಾಗಿದ್ದೇನೆ, ನಿನ್ನ ಚೆಲುವಿಕೆಗೆ” ಎನ್ನುವಲ್ಲಿ ಪ್ರೇಮದ ನಿಶೆ, ಹೃದಯ ಗೂಡಿನಲಿ, ಕನಸುಗಳ ಕಲರವದಲ್ಲಿ, ಭಾವ ಪುಷ್ಪಗಳಾಗಿ ಹುಟ್ಟಿದವು ಕವನಗಳು ಸ್ನೇಹ ಪ್ರೀತಿಯಲ್ಲಿ ಎನ್ನುತ್ತಾರೆ. ಪ್ರೀತಿಯ ತೀವ್ರತೆ, ಸ್ಪಂದನೆ, ಭಾವಗಳ ತುಡಿತ ಮಿಡಿತ ಸ್ಪಂದನೆಗಳಿಗೆ, ಕೊನೆಯಿಲ್ಲ. ಚೆಲುವಾಗಿ ಒಲವಿನ ಭಾಷೆಯಾಗಿ ಹೊರಹೊಮ್ಮಿದೆ. ಪ್ರೇಮಸಮಾಗಮದ ಸುಖಭಾವ ಕಂಡ ಕವಿ, ಅಗಲಿಕೆಯ ನೋವನ್ನು ಬಿಂಬಿಸುವ ಕಾವ್ಯ “ಮೌನಕ್ಕೆ ಶರಣಾದೆ”. ಅವನಿಲ್ಲದ ಕ್ಷಣ ಕ್ಷಣಗಳು ಒದ್ದೆಯಾದ ಭರವಸೆಯ ಕಣ್ಣುಗಳು, ಒಲವಿನ ಅಗಲಿಕೆಯ
ವಿರಹದ ನೋವಿನ ಚಿತ್ರಣವಿದು. ಕೊನೆಯಿಲ್ಲದ ಬದುಕಿನ ಪಯಣದಲಿ ಕನಸುಗಳು ಎಂದೂ ಸಾಯುವುದಿಲ್ಲ ಎಂಬ ಭರವಸೆಯ ಬೆಳಕು ಕವಿಯದ್ದು.
“ಸಾವಿಲ್ಲದ ಕಂಗಳಲಿ ಚಿಗುರುವ ಕನಸುಗಳಿಗೆ ಎಂದೂ
ಕೊನೆಯಿಲ್ಲ. (ನಮ್ಮ ಬದುಕು) “ಶುಭ ಮುಂಜಾವಿನಲಿ”.
ಜಂಗಮವಾಣಿ ವಾಟ್ಸ್ ಆ್ಯಪ್ ಧ್ವನಿಗೆ ಕಾಯುವಿಕೆಯ ಕವನದಲ್ಲಿ ಒಂದು ಮಧುರತೆ, ಸೊಗಸುಗಾರಿಕೆ, ಕಾತರತೆ, ಕನಸುಗಳು ಮುಪ್ಪುರಿಗೊಂಡಿವೆ. ಗೆಳತಿಯ ನೆನಪೇ ಒಂದು
ನಂದಾದೀಪದಂತೆ.
“ಬಾಳ ಪಯಣದ ಸ್ಪೂರ್ತಿ ಆಕೆ”, ಆತನ ಬದುಕು, ಗೆಲುವುಗಳಿಗೆ “ಚೆಲುವಾಗಿ, ಬಲವಾಗಿ, ಉಸಿರಾಗಿ ನಿಂತಾಕೆ ನೀನು” “ಏನಿಲ್ಲ” ಎಂಬ ಕವಿತೆಯಲ್ಲಿ ಒಡಮೂಡಿದೆ.
ಕಾವ್ಯಕನ್ನಿಕೆಯನ್ನು ಪ್ರೇಯಸಿಯಾಗಿಸಿಕೊಂಡ ಕವಿ ಹೃದಯ ಸದಾ ಅವಳಿಗಾಗಿ, ಅವಳ ಭಾವಬಿಗಿತಕ್ಕೆ ಅಪ್ಪುಗೆಗೆ ಹಂಬಲಿಸಿದ ರೀತಿ ಅತ್ಯಂತ ಮನೋಹರ (ಹೊಸ ಚಿಗುರು) “ಪ್ರೇಮ” ಅದು ಕೇವಲ ಬಡಬಡಿಕೆಯಲ್ಲ, ಅದು ಬಾಳ ಪಯಣದ ಬೆನ್ನುಡಿಯಾಗಿಸಬೇಕೆಂಬ ಆಶಾಭಾವವೇ! “ನೀನು ಭಾವ” ಕವಿತೆಯಲ್ಲಿ ಕಾಣುವಂಥದ್ದು. ಪ್ರೀತಿ ಸ್ನೇಹಗಳ ಒಂದು ಮನೋಭೂಮಿಕೆಯನ್ನು ಸೃಷ್ಟಿಸಿದ್ದಾರೆ. ಭಾವ ಭಾವನೆಗಳನ್ನು ಭಾಷೆಯಲ್ಲಿ ಕಟ್ಟಿಕೊಡುವಲ್ಲಿ ಸಿದ್ದಹಸ್ತರು, ಬೆಚ್ಚಗಿನ ಪ್ರೀತಿಯ ಆಶಯಗಳನ್ನು, ಖಾಸಗಿ ಅಂತರಂಗದ ಗುಟ್ಟನ್ನು, ವೈಯಕ್ತಿಕತೆಯನ್ನು ಸಾರ್ವತ್ರಿಕಗೊಳಿಸುವಲ್ಲಿ ಕನಸಿನ ಭಾಷೆಯಾಗಿಸಿದ್ದಾರೆ. ಕಾವ್ಯ ನಿರ್ಮಿತಿ ಸುಳಿಗಾಳಿಯಂತೆ ಸೂಸಿ ಬೀಸಿ ಬಂದದ್ದು.
“ಕಾವ್ಯ ಮಾತನ್ನು ಜ್ಯೋತಿಯಾಗಿಸುವ ಕೃತಿ ಪಾಶ್ಚಾತ್ಯ ಸಾಹಿತ್ಯದಲ್ಲಿ ಪ್ರೇಮವಿದೆ, ನಮ್ಮಲ್ಲಿ ಶೃಂಗಾರ ಮಾತ್ರವಿದೆ”, ಎನ್ನುವ ಡಾ.ಪೋಲಂಕಿ ರಾಮಮೂರ್ತಿಯವರ ಮಾತು
ಚಿಂತನಾರ್ಹವಾದದ್ದು. ಶೃಂಗಾರ ಸುಖ ಪಡೆಯುವ ಅನುಭವ, ಪ್ರೇಮ ಒಬ್ಬರಿಗೊಬ್ಬರು ಬಾಳಿನಲ್ಲಿ ಮಿಳಿತವಾಗುವಿಕೆ, ಎರಡು ಬಾಳುಗಳು ಒಂದಾಗುವಿಕೆ. ಈ ಪ್ರೇಮಸವಾರಿ ಕವಿಗೆ ಆಶ್ಚರ್ಯ ಅದ್ಭುತಭಾವ ಸ್ಫುರಣೆ. “ಯಾವಮೋಹದ ಮಾಯೆ ಬಲೆಯಲಿ ಸ್ನೇಹ ಪ್ರೀತಿಯು ಅರಳಿತು”. ಭಾವ ತೀವ್ರತೆಗೆ, ಬದುಕಿನ ಭಾವಭದ್ರತೆಗೆ ಸದಾ ಹಂಬಲಿಸುವ ಕವಿಯ ಮನಸ್ಸು ಅದಕ್ಕಾಗಿ ಒಲವಿನ ಗೂಡಲ್ಲಿ ಕಾದು ಕುಳಿತ ‘ಪ್ರೇಮ ಪಕ್ಷಿ’. ಹೆಪ್ಪುಗಟ್ಟಿದ ಬಯಕೆ ನೂರು. “ಭಾವಬಸಿರು ಮೊಳಕೆಯೊಡೆದಿದೆ, ಹಸಿರು ಹಾಸಿಗೆ
ಚಿಗುರು ಮಾವು, ಮತ್ತೆ ನಕ್ಕಿತು ದುಂಡು ಮಲ್ಲಿಗೆ. .” ಎಂಬಲ್ಲಿ ಪ್ರೇಮಪಕ್ಷಿ ಹಾಡುವ ಪ್ರಣಯ ಗೀತೆಯ ಸ್ಥಾಯೀಭಾವಕ್ಕೆ
ಸಂಚಾರಿಯಾಗಿ ಪ್ರಕೃತಿ ಚೆಲ್ಲುವರೆದಿದೆ.
ಅದಕ್ಕೆ ಜೀವದ ಉಸಿರಾದ ಗೆಳತಿಯನ್ನು ಕಂಡದ್ದು “ನೀನೊಂದು ಪುಸ್ತಕ”ವಾಗಿ ಅಲ್ಲಿ ಯಾರು ಓದಲಿ ಬಿಡಲಿ, ಬಿಡೆಯಿಲ್ಲದ ಹೆಜ್ಜೆ ಸಾಲುಗಳು. “ಭಾವಗಳು ತೆರೆದ ಪುಟ, ಒಡಲ ಬೇಗುದಿಗೆ, ಬದುಕ ಕಟ್ಟಿಕೊಂಡವಳು, ಕಡಲ ಪ್ರೀತಿಯ ಹಂಚಿದವಳು. ಯಾರಿವಳು? ಮಾನ ಸಮ್ಮಾನ ಪ್ರಶಸ್ತಿಗಾಗಿ ಬರೆದ ಪುಸ್ತಕವಲ್ಲ, ನುಂಗಿ ನೋವ ನಗೆಯ ಬೀರಿದವಳು. . .
ಭಾವಗಳ ತೆರೆದ ಪುಟ ಅವಳು” ಎಂಬಲ್ಲಿ ಆ ಜೊತೆಗಾತಿಯ, ಬದುಕಿನ ಹೆಜ್ಜೆಗಳನ್ನು ಕವಿ ಕಟ್ಟಿಕೊಡುವ, ಅವಳ ಎತ್ತರದ ನಿಲುವನ್ನು, ವ್ಯಕ್ತಿತ್ವವನ್ನು ತೆರೆದ ಪುಸ್ತಕವಾಗಿಸಿದ್ದಾರೆ. ಕವಿಯ ಕಾವ್ಯಕೃಷಿಗೆ, ಭಾವಭದ್ರತೆಯಾಗಿ ಸದಾ ಗೆಳತಿ ನಿಲ್ಲಲಿ ಎಂಬ ಸದಾಶಯ. “ಅವಳು ಕೈ ಹಿಡಿದು ನಡೆಸಲಿ” ಎಂಬ ಒಲವಿನ ಭಾವ. . . “ಬಾರೆ ಗೆಳತಿ ಕೈಹಿಡಿದು ನಡೆಸು ನನ್ನನು ಅನಂತಕೆ, ಹೃದಯ ಕಟ್ಟೆಯೊಡೆದು, ಭಾವ ಪದಗಳ ಮಿಲನಕೆ” ಗೆಳತಿ ಕಾವ್ಯಕನ್ನಿಕೆಯಾಗಿ, ಕಾವ್ಯಕ್ಕೆ ಪ್ರೇರಣೆಯಾಗಿ, ಪ್ರಕೃತಿಯಾಗಿ, ಹಸಿರಾಗಿ, ಉಸಿರಾಗಿ ಕುಣಿದು, ಕುಪ್ಪಳಿಸಿ. . . ನೂರುಗಾವುದ ದೂರ ಸಾಗಬೇಕಿದೆ ಎಂಬ ಹಂಬಲ “ಕೈಹಿಡಿದು” ಕವನ, ಸ್ಫೂರ್ತಿಯಾಗಿ ನಿಂತ ಪ್ರೀತಿಯು ಮುಕ್ತಿಮಾರ್ಗದ ಕೀರ್ತಿಯಾಗಿದೆ. ಅವಳ ಸ್ನೇಹ, ಬಾಳ ‘ಬುತ್ತಿ’ಯಾಗಿದೆ. ಹುಟ್ಟಿದ ಮನುಷ್ಯನಿಗೆ ಸಾವು ನಿಶ್ಚಿತ ಅದು “ನೋವು ನಲಿವಿನ ಬುತ್ತಿ, ಅಲ್ಲಿ ಸ್ನೇಹ ಬಿತ್ತಿ, ಪ್ರೇಮ ಬೆಳಗೆ
ಮೋಡ ಮಳೆಯ ಬಿತ್ತಿ, ಕಷ್ಟ ನಷ್ಟ ಬಂದಾಗ ಬಸವ ಕಾಯುವ ನೆತ್ತಿ. .” ಎಂಬ ಭರವಸೆ ಹೊಂದಿದ್ದಾನೆ. ಕವನದ ಪ್ರಾಸಪದಗಳು ಭಾವಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ.
ಬಾಳಗೆಳತಿ, ಪ್ರೇಮ ಕರುಣೆಯಾಗಿ, ಜೀವ ವೀಣೆಯಾಗಿ, ನವ್ಯಕಾವ್ಯಕ್ಕೆ ಸ್ಫೂರ್ತಿಯಾಗಿದ್ದಾಳೆ, ಬಾಳಿನ ಜೀವವಾಗಿದ್ದಾಳೆ. ಜೀವವು ಕವಿತೆಯಲ್ಲಿ ಕಾವ್ಯದ ಬಂದ ಒಂದಕ್ಕಿಂತ ಒಂದು ಚೆಂದ. ಸ್ಥಾಯಿಭಾವದ ಗಾಂಭೀರ್ಯದೊಂದಿಗೆ ಸಂಚಾರಿಭಾವ ಸಂಚಲನ ಮೂಡಿಸುತ್ತವೆ. ಅನುಭವಗಳ ಗಟ್ಟಿತನ ಕಾವ್ಯಭಾಷೆಯನ್ನು, ಭಾಷೆಯ ಬಂಧವನ್ನು ಗಟ್ಟಿಗೊಳಿಸಿವೆ.
ಅವರ ಕಾವ್ಯಶಿಲ್ಪ ಅತ್ಯಂತ ಭಿನ್ನವಾಗಿದೆ. ಪ್ರೀತಿ ಸ್ನೇಹಗಳ ಹುಚ್ಚು ಹಿಡಿಸಿಕೊಂಡ ಕವಿ, ಅದನ್ನೇ ಬದುಕಿನ ಮೂಲದ್ರವ್ಯವಾಗಿಸಿಕೊಂಡವರು. ಅದಕ್ಕಾಗಿ ಅಮಿತ
ಯಾತನೆಯನ್ನು ಅನುಭವಿಸಿದ, ಪಟ್ಟ ಪಾಡೆಲ್ಲವ ಹುಟ್ಟುಹಾಡಾಗಿಸಿ, ನಿರಂತರವಾಗಿ ಕಾವ್ಯಕೃಷಿಗೈದ ಸಾಧಕ. ಕವನಗಳು ವಿಶಿಷ್ಟ ಸಂವೇದನೆಯಿಂದ ವಿಶಿಷ್ಟವಾದ ರುಚಿಯನ್ನು ನೀಡುತ್ತದೆ. ಕಾವ್ಯದ ಕಲ್ಪನೆಯಲ್ಲಿ ಡಾ.ಶಶಿಕಾಂತ ಪಟ್ಟಣವರ ಅನುಭವದ ಸಾಚಾತನ ಎದ್ದು ಕಾಣುತ್ತದೆ. ಕವಿತೆಯ ಪದಗಳು ಮರೆಯಲಾರದಷ್ಟು ಸಹೃದಯರ ಮನಸ್ಸನ್ನು ಸೂರೆಗೊಳ್ಳುತ್ತವೆ.
ಕಾವ್ಯಾಭಿವ್ಯಕ್ತಿ ಕವಿಯಾದವನಿಗೆ ಒಂದು ಸಹಜವೂ, ಸ್ವತಂತ್ರ್ಯವೂ ಮತ್ತು ಅನಿವಾರ್ಯವಾದ ಒಂದು ಕ್ರಿಯೆ. ಅವನ ಮನೋವ್ಯಾಪಾರದಲ್ಲಿ ಭಾವಶಿಲ್ಪವು, ಕಾವ್ಯಶಿಲ್ಪವಾಗಿ
ತನ್ಮತೆಯನ್ನು ಕಾಣುತ್ತದೆ. ತನ್ನೊಳಗೆ ಮಿಡಿಯುವ ಭಾವವನ್ನು ಬಚ್ಚಿಡಲಾರದ ಆತನ ಹೃದಯದಲ್ಲಿ ಉಂಟಾಗುವ ತಳಮಳ ತಲ್ಲಣಗಳ ಅಭಿವ್ಯಕ್ತಿ ಕವನ ‘ಬೀಜ’. ಸ್ನೇಹ ಪ್ರೀತಿಗಳು ಇಂದೆ ಬಿತ್ತಿದ ಬೀಜ “ಮುಂಜಾನೆ ಮೊಳೆತೆಯೊಡೆದು, ಮಧ್ಯಾಹ್ನ ಟಿಸಿಲೊಡೆದು ಸಂಜೆ ಮರದಲಿ ಭಾವ ಪಕ್ಷಿ ಗೂಡು ಕಟ್ಟಿದವು. .ಬೀಜ ನೋಡು ನೋಡುತ್ತಿದ್ದಂತೆ ಮರವಾಯಿತು. . .” ಎನ್ನುವಲ್ಲಿ ಭಾವ ಸಾಕ್ಷಾತ್ಕಾರಗೊಂಡು ನೆಲೆಯೂರಿದೆ. ಈ ಮರದ ಭಾವ ಮಿಲನದ ನಂಟು “ಎಲ್ಲೋ ಇದ್ದೆವು ನಾನು ನೀನು ದೈವ ಕಟ್ಟಿದ ಗಂಟು. . .” ಎಂಬಲ್ಲಿ ಭರವಸೆಯ ಬದುಕಿನ ನಂಟಿನ ಗಂಟಿಗೆ ಸ್ನೇಹ ಪ್ರೀತಿಗಳ ವ್ಯಾಖ್ಯಾನ ನೀಡುತ್ತಾನೆ. ಕವಿಯ ಭಾವುಕತೆಗೆ “ಅವಳು ಭಾವದ ಬೀಜ, ಕವನವು ಕಾವ್ಯದ ಕಣಜ, ಬದುಕಲಿ ರಾಜಮಾರ್ಗದ ಸವಾರಿ”ಯಾಗಿಸಿಕೊಂಡಿದ್ದಾರೆ. ಕವಿ ಗಿಬ್ರಾನ್ ಹೇಳುತ್ತಾನೆ. ಪ್ರತಿ ಗಂಡಸು ಇಬ್ಬರು ಹೆಂಗಸರನ್ನು ಪ್ರೀತಿಸುತ್ತಾನೆ. ಒಬ್ಬಾಕೆ ಆತನ ಕಲ್ಪನೆಯ ಸೃಷ್ಟಿ, ಮತ್ತೊಬ್ಬಾಕೆ, ಇನ್ನೂ ಜನುಮ ಪಡೆಯದವಳು” ಎಂಬ ಮಾತಿಗೆ ಸಾಕ್ಷಿಯಾದದ್ದು. “ಮೌನ ಹಿತವಲ್ಲ ಗೆಳತಿ” ಸುಂದರ ಸಂಭೋಧನಾತ್ಮಕ ಸಂಭಾಷಣಾ ಶೈಲಿ. ಕುಣಿಯುವ ಭಾವಗಳು, ಕಾಡುವ ನೆನಪುಗಳು, ಒಲವಿಗೆ ಜೋಗುಳ ಹಾಡುವ ನಿನ್ನ ಮೌನ ಸಹಿಸಲು ಅಸಾಧ್ಯ. . “ನನ್ನ ಒಪ್ಪಿಕೋ ಅಪ್ಪಿಕೋ. . ಭಾವಭ್ರೂಣಗಳು ಚಿಗುರೊಡೆಯಬೇಕಿದೆ. . ಬೇಡ ಮೌನ” ಎನ್ನುವಲ್ಲಿ ಕವಿತೆಯ ಮಧುರತೆಯಿಂದ ಕೂಡಿದೆ. ಕವಿತೆ ಕಾಲದಂತೆ ಅನಂತವಾದದ್ದು. ಕಾಲದ ಜೊತೆ ಜೊತೆಗೆ ಬರುವ ಜೀವನಾನುಭವಗಳನ್ನು ಕಾಳಾಗಿ ನಿಲ್ಲಿಸುವ, ಬಾಳಿನ ಸ್ವರೂಪವನ್ನು ಅರ್ಥೈಸುತ್ತದೆ. ಬೆಲೆಕಟ್ಟಲಾಗದ ಕಾವ್ಯಕ್ಕೆ ಬೆಲೆ ಕಟ್ಟುವ ಕಾರ್ಯ ನಡೆದಾಗ, ಅಕ್ಷರಗಳ ಆಡಂಭರವಾದಾಗ, ಸ್ನೇಹ ಪ್ರೀತಿಗಳ ಅಮಲಿನಲ್ಲಿ ಕನಸುಗಳು ದಿನವೂ ಹುಟ್ಟಿ ಹುಟ್ಟಿ ಸಾಯುತ್ತವೆ, ಮುಗ್ಧ ಮನಸ್ಸಿಗೆ ಬರೆಕೊಟ್ಟಂತೆ ಎಂಬ ಭಾವಗಳು “ಬಿಕರಿಯಾದವು ಭಾವಗಳು” ಕವಿತೆಯಲ್ಲಿ ಕಂಡುಬರುತ್ತವೆ.
“ಸ್ನೇಹ ಪ್ರೀತಿ ಹೆಸರಿನಲಿ, ಹರಾಜಾದವು, ಕವನಗಳು” ಕವಿಗೆ ಅನಿಸಿದ್ದು ಉಂಟು. ಭಾವಗಳು ಅರ್ಥವಾಗದೆ ಬಿಕರಿಯಾದಾಗ ಆತ್ಮಪ್ರಜ್ಞೆಯುಳ್ಳ ಕವಿಹೃದಯ ಒಪ್ಪಿಕೊಳ್ಳಲಾಗದ ಹಠ, ‘ನಾನು ಮಾರಲಿಲ್ಲ’ ಕವನ “ಆದರೆ ಅವಳು ಕೊಂಡುಕೊಂಡಳು. .” ಹೃದಯಭಾಷೆ ಅರಿಯಲಾಗದೆ ಮಾರಿಕೊಂಡಳು” ಎಂಬ ಒಲುಮೆಯ ಅಂತರಂಗದ ವೇದನೆಯ ಧ್ವನಿ ಕೇಳಿಬರುತ್ತದೆ. ಆತ್ಮೀಯ ಸಹೃದಯರಿಗೆ ಅವರ ಕವಿತೆಯ ಒಳದನಿಗಳು, ಪಿಸುದನಿಗಳು, ವ್ಯಂಗ್ಯ ಪರಿಹಾಸಗಳು, ವೇದನೆ ಸಂವೇದನೆಗಳು ಹಿನ್ನೆಲೆ ಸಂಗೀತದಂತೆ ಸದಾ ಕೇಳಿಬರುತ್ತವೆ. ವಸಂತದ ಸೀಮಂತ, ಭೂಸಿರಿಯ ಚೆಲುವಿಕೆಯ ರೂಪತಾಳಿದ ಪುಷ್ಪ “ಗುಲ್ಮೊಹರ್” ಕವನ. ಅದು ಭಾವಗಳ ಮಿಲನ, ಪದ ಅಕ್ಷರಗಳ ಗಾನದಂತೆ ಕೈಮಾಡಿ ಕರೆಯಲು ನಗೆ, ನಲುಮೆ, ಸಂತಸ. ಪ್ರಕೃತಿಯೊಂದಿಗೆ ಸ್ನೇಹ, ಪ್ರೇಮಗಳ ಆಧ್ಯಾತ್ಮಿಕತೆ ಕವನದ ವೈಶಿಷ್ಟ್ಯ ವಾಗಿದೆ. ‘ಬೇಲಿ ಮೇಲಿನ ಹೂವು ಬಹುಸುಂದರ ಕವನ, ಹೆಸರಿಲ್ಲದ ಹೂಗಳು ಮೌನದಲ್ಲಿ ಸಂತಸ ಕೊಡುವ ಮುಗ್ಧ ಮೊಗ್ಗೆಗಳು ಹಾದಿ ಹೋಗುವವರಿಗೆ ಸ್ವಾಗತ ಬೀಳ್ಕೊಡುಗೆ ಕೊಡುವ ಬಣ್ಣ ಬಣ್ಣದ ಸುಂದರ ಹೂಗಳು. ಹೆಣ್ಣಿನ ಮುಡಿಗೇರದ, ದೇವನ ಅಡಿಗೆರಗದ, ಗುಡಿ, ಚರ್ಚ್, ಮಸೀದಿಗಳಿಗೆ ಸಲ್ಲದ ಆದರೂ ಮಸಣದ ಅನಾಥ ಶವಗಳಿಗೆ ಶೃಂಗಾರವಾಗುವ ಈ ಹೂಗಳು ಅತ್ಯಂತ ಸುಂದರ ಹೂಗಳು ಎಂಬುದು ಕವಿಯ ಚೆಲುವಿಕೆಯನ್ನು ಕಂಡದ್ದು ಅನನ್ಯವಾಗಿದೆ. ವೈಚಾರಿಕತೆ ಎನ್ನುವುದು ಕಲೆಗಾರನೊಬ್ಬನ ಅನುಭವ ಪಾತಳಿಯ ಮೂಲಸೆಲೆಯಲ್ಲಿ ಅಡಗಿಕೊಂಡಿರುತ್ತದೆ. ಆ ಮೂಲಸೆಲೆಯಿಂದ ಪಕ್ವಗೊಂಡು ಕಾವ್ಯ ಹುಟ್ಟುತ್ತದೆ. ಆಗ ಕಾವ್ಯ ಅನುಭವ ಮತ್ತು ವಿಚಾರಗಳ ಸಂಗಮವಾಗುತ್ತದೆ.ಇಂತಹ ಕಾವ್ಯ ವೈಚಾರಿಕವಾಗಿ ಅದು ವ್ಯಕ್ತಿ, ಕುಟುಂಬ ಸಮಾಜದ ಮೇಲೆ, ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರುತ್ತದೆ. ವಿಚಾರವೆಂದರೆ ಬರೀ ಬೆಳಕಲ್ಲ; ಅದು ಜೀವನದ ದಾರಿದೀಪದ ಪ್ರಜ್ಞೆ.
ಡಾ. ಶಶಿಕಾಂತ ಪಟ್ಟಣವರು ಬಸವ ಚಿಂತನೆಗೆ ವೈಚಾರಿಕತೆಗೆ ತಮ್ಮ ಜೀವನವನ್ನೇ ತೆತ್ತವರು. ಈ ವೈಚಾರಿಕತೆ ಮಾನವನಿಂದ ಮಹಾಮಾನವತೆ ಕಡೆಗೆ ಕೊಂಡೊಯ್ಯುತ್ತದೆ. ಕವಿ ತಮ್ಮ ಬದುಕಿನ ಹೆಜ್ಜೆಗಳನ್ನು ತಮ್ಮ ಅಸ್ತಿತ್ವದ ಗುರುತುಗಳಾಗಿಸಿದ್ದಾರೆ. ಸಮಷ್ಠಿ ಪ್ರಜ್ಞೆಯು ಬಸವ ಧರ್ಮದ ಜೀವಾಳ, ಅದನ್ನು ಕವಿ ಎತ್ತಿಹಿಡಿಯುತ್ತಾರೆ. ಬುದ್ಧ, ಬಸವ,
ಅಲ್ಲಮ, ಅಂಬೇಡ್ಕರರನ್ನು ತನ್ನೊಳಗೆ ಗರ್ಭೀಕರಿಸಿಕೊಂಡ ಕವಿ “ಬಸವ ಬೆಳಗಿನ ದಿವ್ಯಚೇತನ ರೂಪುಗೊಳ್ಳಲಿ ಭಾರತ. “ಜಗದ ಅಂಗಳ ಶರಣ ಮಂಗಳಗೀತೆ ಆಗಲಿ ಎಂಬ ಹಂಬಲ”. “ವಿಶ್ವಮತ ಮನುಜಪಥ ಶರಣ ತತ್ವ ಬೆಳಗಲಿ, ಬುದ್ಧ ಹಚ್ಚಿದ ಕ್ರಾಂತಿ ಕಿಡಿಗೆ ದಿಟ್ಟ ಬಸವ ಜ್ವಾಲೆಯಾಗಲಿ”. “ಬಸವನಿಲ್ಲದ ಬಾಳು ನಮಗೆ ಉಸುರಿಸಲು ಕಷ್ಟ” ಎನ್ನುವ ಆತ್ಯಂತಿಕ ನಿಲುವಿಗೆ ಬರುತ್ತಾರೆ. ಭಾರತ, ಬಸವ ಭಾರತವಾಗಬೇಕೆಂಬ ಸದಾಶಯ. ಅನುಭಾವಿಕ ಪ್ರಜ್ಞೆ ಆಳಗೊಳ್ಳುತ್ತ, ಘಾಡವಾಗುತ್ತ ಹೋದಂತೆ, ಅನುಭಾವದ ಚಿಂತನೆಗಳಲ್ಲಿ ಅನುಭವದ ಸ್ತರಗಳನ್ನು ಗುರುತಿಸಬಹುದಾಗಿದೆ. ಅಣ್ಣನ ತೀವ್ರ ಸಂವೇದನೆಗಳ, ವಚನಗಳ ಗಾಢ ಪರಿಣಾಮ ಸ್ಪಷ್ಟವಾಗಿ ಗುರುತಿಸಬಹುದು. ಕವಿಯ ಹೃದಯವನ್ನು ಕವಿತೆಯ ಹೃದಯವನ್ನು ವಿಶಿಷ್ಟವಾಗಿ ಪರಿಚಯಿಸುವ ಕವನ. “ಬಸವಭಾರತ” ಬಸವ ಸಿದ್ಧಾಂತಗಳೆಲ್ಲ ಮರೆತು ಗಾಳಿಗೆ ತೂರಿದ್ದೇವೆ. ಮತ್ತೇ ಶಿವಾಲಯ ದೇವಾಲಯ ಆದಿಯೋಗಿ, ಕಲ್ಲುಶಿವನಿಗೆ ಅಭಿಷೇಕ ಕಾಯಿ ಕರ್ಪೂರವಾಗಿಸಿ ಮತ್ತೇ ತಿರುಚಿದ್ದೇವೆ. “ಬಸವನ ಅರಿಯದವನ ಕಂಡು, ಮಮ್ಮಲ ಮರುಗಿದ ನೋಡಾ. . ಬಸವ ಪ್ರಿಯ ಶಶಿಕಾಂತ
“ಶರಣತತ್ವ ಸಮಾಧಿಯಾಗಿದೆ. ಸ್ಥಾವರವಾಗಿ, ಲಾಂಛನವಾಗಿ, ಜಾತ್ರೆಯಾಗಿ, ಉದ್ಯಮವಾಗಿ, ಬಸವಧರ್ಮ ವಿಜೃಂಭಿಸುತ್ತಿದೆ” ಎಂಬ ನೋವು ಹತಾಶೆಗಳ, ತಲ್ಲಣಗಳ ಧ್ವನಿಯೊಂದು ಕೇಳಿ ಬರುತ್ತದೆ. “ಬಸವ ಬೇಡವೆಂದ” ಕವನದಲ್ಲಿ ಬಸವ ಶಕ್ತಿಯು, ಬಸವ ಯುಕ್ತಿಯು ಬಸವ ಬಟ್ಟೆಯ ಸ್ಪಂದನ”ವಾಗಲಿ ಎಂಬ ಅಭೀಷ್ಟೆ ಕವಿಯದ್ದು. ಇಲ್ಲವಾದಲ್ಲಿ ನಮ್ಮನ್ನು ಆಳುತ್ತಿರುವ ಮೂಢನಂಬಿಕೆಗಳು ಭಯೋತ್ಪಾದಕರಾಗಿ ನಮ್ಮನ್ನು ಸುಲಿಗೆ ಮಾಡುತ್ತವೆ. ನಮ್ಮ ಬದುಕು ಅಂಧ ಶೃದ್ಧೆಗಳ ಗೂಡಾಗಿದೆ. ಟಿ.ವಿ. ಮಾಧ್ಯಮಗಳ ಅಬ್ಬರದ ಪ್ರಚಾರದಲಿ “ಕುಣಿವ ಕಾಂಚಾಣದ ಕೇಸರಿ ಹಸಿರು ಶಾಲುಗಳು ಯೋಗ ಕರ್ಣ ಮುಹೂರ್ತದಲ್ಲಿ, ಮಡಿ ಮೈಲಿಗೆ ಸೂತಕದಲ್ಲಿ ಬಲಿಯಾಗುತಿವೆ. ಬುದ್ಧ ಬಸವರು ಹುಟ್ಟಿದ ಬೆಳಗಿನ ಬೆಳಕಿನಲಿ” ಎಂಬ ವಿಶಾದವೂ ಕಾಣುತ್ತದೆ.
‘ನಾನಾಗುವೆ ಶಬರಿ’ ಸ್ತ್ರೀ ಪರ ಕಾಳಜಿ, ಚಿಂತನೆ, ಉಳ್ಳಂತಹ ಕವನ. ಶಬರಿ, ಅಹಲ್ಯೆ, ಸೀತೆ, ಮಂಡೋದರಿಯರ ಪ್ರತಿಮೆಗಳ ಮೂಲಕ ಶತಮಾನದ ಶೋಷಣೆಗಳ ಮುಖಗಳನ್ನು ದರ್ಶಿಸುತ್ತಾರೆ. ಹೆಣ್ಣಿನ ಬಗೆಗಿನ ಅನುಕಂಪ, ಉದಾತ್ತೀಕರಣ “ಬೇಡ ನಿನಗಿನ್ನು ವನವಾಸ ಉಪವಾಸ, ನಾನೇ ಕಾಡಿಗೆ ಹೋಗುತ್ತೇನೆ ಸಖಿ” ಎನ್ನುವ ಮಾತು ನೋವನುಂಡ ಹೆಣ್ಣಿಗೆ ಕೈಜೋಡಿಸುವ ಸಂದರ್ಭ. ಜೊತೆಯಾಗಿಸುವ ಸಮಾನತೆಯ ರೀತಿ, ಸ್ಪಂದನೆ ಅತ್ಯಂತ ಸ್ತುತ್ಯಾರ್ಹವಾದದ್ದು. ಶೂನ್ಯವನ್ನು ಶಬ್ಧಗಳಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಸಾಹಿತ್ಯ ಮತ್ತು ಸಮಾಜಪ್ರಜ್ಞೆ ಒಳಗೊಳ್ಳದ ಕಾವ್ಯ ಶ್ರೇಷ್ಟವೆನಿಸಲಾರದು ಎಂಬ ಮಾತಿಗೆ ಸಾಕ್ಷಿಯಾದದ್ದು “ಮಾಧ್ಯಮ ಹೆತ್ತ ಭೂತಗಳು”, ವಾಸ್ತವಿಕ ಬದುಕಿನ ಚಿತ್ರಣ: ಟಿ.ಆರ್.ಪಿ. ಗಾಗಿ ಮಾಡಿಕೊಂಡ ಟಿ.ವಿ. ನಿರೂಪಕರು, ಮಾಧ್ಯಮಗಳ ಆರ್ಭಟ, ಹಬ್ಬದೂಟ, ಬೆಲೆಏರಿಕೆ, ಹಣದುಬ್ಬರ, ಖಾದಿಗಳ ಹಿಂದೆ
ಸುತ್ತುವ, ಕೊಳ್ಳೆ ಹೊಡೆವ ನಾಯಕರು “ಹೆತ್ತ ಭೂತಗಳ ಜೊತೆಗೆ ಬದುಕುತ್ತಿದ್ದೇವೆ ಸತ್ತವರ ಹಾಗೆ” ಎನ್ನುವಲ್ಲಿ ಮಾಧ್ಯಮ ವರ್ಗದವರ ಬದುಕಿನ ಬವಣೆಯನ್ನು ಬಿತ್ತರಿಸುವಲ್ಲಿ, “ಜೋಗತಿಯ ಕುಣಿತವಾಗಿವೆ ಮಾಧ್ಯಮಗಳು” ಎಂಬ ವಿಡಂಬನೆ ಮಾರ್ಮಿಕವಾಗಿದೆ. ಹದಗೆಟ್ಟ ಸಾಮಾಜಿಕ ಬದುಕಿನ ವಸ್ತುಚಿತ್ರಣ ‘ಹಗರಣ’ಗಳ ಬೀಡಿನಲ್ಲಿ ನಾವಿಂದು ವಾಸಿಸುವ ಅನಿವಾರ್ಯತೆ. “ಸಾಯುತ್ತಿದೆ ಮಧ್ಯಮವರ್ಗ ಚಿಂತೆಯಿಲ್ಲ ಸಿರಿವಂತರಿಗೆ. . . ನಿಂತಿಲ್ಲ ನಿಲ್ಲುವುದಿಲ್ಲ ಹಗರಣಗಳು” ವ್ಯವಸ್ಥೆಯ ಆಳದಿಂದ ಹೊರಡುವ ಆರ್ತದನಿ ಅವರನ್ನು ಸಮಾಜಕ್ಕೆ ಮುಖಾಮುಖಿಯಾಗಿಸುತ್ತದೆ. “ಬೇಡ ನಮಗೆ ಚುನಾವಣೆ ಬೇಕು ಕ್ರಾಂತಿ ಪರಿವರ್ತನೆ, ಕೋಟಿ ಕೋಟಿ ಲೂಟಿ ಮಾಡಿ ಮತ್ತೆ ನಿಲ್ಲುವ ನಾಯಕ, ಇವರನೊದ್ದು ಪಾಠ ಕಲಿಸಲಿ ಜನತೆ ರೈತ ಕಾರ್ಮಿಕ” “ಝೇಂಡಾ ಬೇರೆ ಅಜಂಡಾ ಒಂದೇ” ಕವನ ಪಕ್ಷ ರಾಜಕಾರಣಿಗಳು ಐದು ವರ್ಷಕ್ಕೆ ಮತವ ಹಾಕಿಸಿಕೊಂಡು ಜಾರಿಕೊಳ್ಳುವೆವು ನಿದ್ರೆಗೆ. . ಎನ್ನುವ ವಿಡಂಬನೆ ಕಠೋರ, ನಿರ್ದಾಕ್ಷಿಣ್ಯ ನಿಲುವಿನಿಂದ ಕೂಡಿದೆ. ‘ನಲುಗುತಿದೆ ವಿಶ್ವ’ ಕವನ ಹಾಳಾದ ಪರಿಸರಕ್ಕೆ ನಮ್ಮ ಸ್ವಾರ್ಥ
ಲಾಲಸೆಗಳ ಕಾರಣ ಎಂಬುದನ್ನು ಸ್ಪಷ್ಟಪಡಿಸುತ್ತದೆ. ನಿತ್ಯ ನುಡಿಯುತ್ತಿದೆ ಮರಣ ಮೃದಂಗ ‘ಶೋಕಗೀತೆ ರಾಗ ನಿಲ್ಲಲಿ ಮತ್ತೇ ಸಂತಸ ಮೊಳಗಲಿ. ಬೇಡ ಕದನ, ಯುದ್ಧ, ನಮ್ಮ
ಭೂಮಿ ಉಳಿಯಲಿ ಹಸಿರು ಬನದಿ ಹಕ್ಕಿ ಹಾಡಲಿ, ಮಧುರ ರಾಗ ಹೊಮ್ಮಲಿ’ ಎಂಬ ಆಶಯದ ನುಡಿಗಳು ವ್ಯಕ್ತವಾಗಿವೆ. ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿದ ಕವಿ, ಕವನಗಳುದ್ದಕ್ಕೂ ಬಳಸಿರುವ ನುಡಿಗಳು ಖಚಿತವಾಗಿ ಹರಿತವಾಗಿ ಅಷ್ಟೇ ಸಾವಧಾನವಾಗಿ ತಣ್ಣನೆಯ ಮನಸ್ಸಿಂದ ಅಭಿವ್ಯಕ್ತಗೊಂಡಿವೆ. ಕಾವ್ಯಶೈಲಿಯಲ್ಲಿ ಒಂದು ಸಂಯಮವಿದೆ. ಭಾವನೆಯ ಉತ್ಕಟತೆ – ಶಿಲ್ಪಕಲೆಗಳ ತೀವ್ರತೆಯ ಮಧ್ಯದಲ್ಲೂ ಬುದ್ಧಿಯ ಕಾರ್ಯ ತೀವ್ರವಾಗುವದನ್ನು ಕಾಣುತ್ತೇವೆ. ಎಲ್ಲಿಯೂ ಕಾವ್ಯಾಂಶ
ಕಳೆದು ಹೋಗುವುದಿಲ್ಲ. ಪ್ರಜ್ಞಾಪೂರ್ವಕವಾದ ವ್ಯಾಪಕವಾದ ವಿಶ್ಲೇ಼ಣೆಯನ್ನು ನೀಡಿವೆ. ದೇಶ-ಭಾಷೆಗಳ ಬದುಕಿನ ವ್ಯಂಗ್ಯವನ್ನು ಚಿತ್ರಿಸುತ್ತವೆ. “ಅವ್ವನಿಗೆ ೮೦” ಕವನ ಅವ್ವಳ ೮೦ ರ ಹುಟ್ಟುಹಬ್ಬದ ಸಂಭ್ರಮದಲ್ಲಿ “ಎಂಟು ದಶಕದ, ಎಂಟು ಶತಕದ ನೆರಳಾಗಿ” ಮೂಡಿಬಂದಿದ್ದು
“ಮನುಜ ಪಥಕೆ ದಾರಿಯಾದವಳು,
ಶರಣ ಜಂಗಮ ಚೇತನವಾಗಿ,
ಹಸಿದೊಡಲ ಮರೆತು ಉಣಿಸಿದಾಕೆ,
ಪ್ರೀತಿಯನ್ನು ಹಂಚಿದಾಕೆ.
ಅವಳಿಗೆ ಈಗ ೮೦
ನಿನಗಾಗಲಿ ನೂರುವರುಷ
ಎಂಬ ಹೆತ್ತಕುಡಿಗಳ ಶುಭಹಾರೈಕೆಯ ಕವನವಿದು. ತಾಯಿಗೆ ಸಲ್ಲಿಸಿದ ವಾತ್ಸಲ್ಯ ಪ್ರೇಮದ ಕವನ ಕಾಣಿಕೆ. ಜಾನಪದ ಸೊಗಡಿನ ಬೇಂದ್ರೆ ವಿರಚಿತ “ಇನ್ನು ಯಾಕ
ಬರಲಿಲ್ಲವ್ವ ಹುಬ್ಬಳ್ಳಿಯಾವ. .”ಕವನದ ದಾಟಿ ಶೈಲಿಯಲ್ಲೇ ಮೂಡಿಬಂದದ್ದು. . . “ಇನ್ನು ಯಾಕ ಮಲಗಿಲ್ಲವ್ವ, ಧಾರವಾಡ ಊರಾಕಿ. . .” ಮೊಬೈಲ ವ್ಯಾಮೋಹದ ಹಿನ್ನೆಲೆಯಲ್ಲಿ ಮೂಡಿಬಂದ ಕಲ್ಪನೆಯ ಸಂದರ್ಭವನ್ನು ಕವಿ ರಂಜನೀಯವಾಗಿಸಿ ಹಾಸ್ಯತರAಗಗಳನ್ನು ಬಡಿದೆಬ್ಬಿಸುತ್ತದೆ. ಕವನದ ಸುಂದರ ಕಟ್ಟುವಿಕೆಯು ಉತ್ತಮ ಭಾವಗೀತೆಯಾಗಿ ಮೂಡಿಬಂದದ್ದು “ಮುಳುಗುವನು” ಕವನ “ಮುಳುಗುವನು ಕವಿ ಮುಳುಗುವನು ಚಂದ್ರನ ಬರುವಿಗೆ ತೆರೆ ಎಳೆಯುವನು”.
ಕಾವ್ಯ ಅತ್ಯಂತ ಸುಮಧುರ ಭಾವಗಳ ಸಂಗಮ. ‘ಕವಿಶೈಲ’ ಕವಿಗೆ ಕಂಡಿದ್ದು ‘ಕುವೆಂಪು’ರವರ ಪ್ರೇಮಕಾಶ್ಮೀರವಾಗಿ, ಶ್ರೀಶೈಲದ ಕದಳಿಯಲ್ಲಿ ಕಾಣದ ಮಲ್ಲಿಕಾರ್ಜುನ, ಕವಿಶೈಲದಲ್ಲಿ ಕಂಡದ್ದು ಕವಿಗೆ ರಸ ಋಷಿ ಕುವೆಂಪುವಾಗಿ. “ಹೋಗಿ ಅಡ್ಡ ಬಿದ್ದು ಹಣೆಹಚ್ಚಿ ಬಂದೆ” ಎನ್ನುವಲ್ಲಿ ದೈವಲೀಲೆಯೋ ಕಾವ್ಯಲೀಲೆಯೋ, ರಸಋಷಿಗೆ. . “ಇದೋ ನಿನಗೆ ಶರಣು” ಎಂಬ ಭಾವ ಕುವೆಂಪು ಕವಿಗೆ ಆದರ್ಶ. “ಕನ್ನಡಕ್ಕೊಬ್ಬ ಕುವೆಂಪು. . . ನಿಮ್ಮಿಂದ ಕನ್ನಡದ ಕಂಪು” “ನಿಮ್ಮಂತೆ ಕವಿಯಾಗುವ ಬಯಕೆ, ಕವಿ ಕುವೆಂಪು ನಡೆದ ವಿಶ್ವಪಥಕೆ ಮನುಜಮತಕೆ ಸಾಗಿ ನಡೆವ ಆಸೆ ಒಡಮೂಡಿದೆ. ಸಾಹಿತ್ಯ ಮತ್ತು ಸಮಾಜ ಪ್ರಜ್ಞೆಗೆ ಒಳಗೊಳ್ಳದ ಕಾವ್ಯ ಶ್ರೇಷ್ಟವೆನಿಸಲಾರದು. ಪ್ರಜ್ಞಾವಂತ ಮನಸ್ಸು ಸೂಕ್ಷö್ಮ ಸಂವೇದನೆಗೆ ಒಳಗಾಗಿ, ಕಾಡುವ ಪ್ರಶ್ನೆಗಳಿಗೆ, ಹುಟ್ಟುವ ಪ್ರಶ್ನೆಗಳಿಗೆ ಆತ್ಮಪ್ರಜ್ಞೆಯ ಮನಸ್ಸು ಸಾಕ್ಷೀಭೂತವಾಗಿ ಪ್ರತಿಕ್ರಿಯಿಸುವ, ಕವಿಯ ಆಲೋಚನ ಕ್ರಮದಲ್ಲೇ ಗಟ್ಟಿತನವಿದೆ. ಅವರ ಸಾಮಾಜಿಕ ಸಂವೇದನೆಯ ಕವನಗಳು ಕೇವಲ ಕಳಕಳಿಯಾಗದೆ, ಒಟ್ಟಾರೆ ಸಮುದಾಯಕ್ಕೆ ತಮ್ಮನ್ನೇ ತಾವು ಅರ್ಪಿಸಿಕೊಂಡ ಅರ್ಪಣಾ ಮನೋಭಾವ ಎದ್ದುಕಾಣುತ್ತದೆ. ಆದರ್ಶ ಸಿದ್ಧಾಂತಗಳು, ಜೀವನದ ಮೌಲ್ಯಗಳು, ಹುಸಿಗೊಂಡಾಗ, ಗಾಳಿಗೆ ತೂರಿಹೋದಾಗ, ಮಾನವ ಕೇಂದ್ರಿತವಾಗಿ, ಕಾಳಜಿ ಕೇಂದ್ರಿತವಾಗಿ, ಜೀವನದ ದ್ವಂದ್ವಗಳನ್ನು ಅವರ ಕವನಗಳು ಬಿತ್ತರಿಸುತ್ತವೆ.
ಈ ನಿಟ್ಟಿನಲ್ಲಿ ಅವರ “ಬೇಲಿ ಮೇಲಿನ ಹೂವು” ಸಂಕಲನ ಅನುಭವದ ತುಡಿತ, ಸೂಕ್ಷ್ಮತೆಯೊಂದಿಗೆ ವೈವಿಧ್ಯಪೂರ್ಣವಾದ ಸಾಹಿತ್ಯದ ಕೊಡುಗೆಯಾಗಿದೆ. ಸಾಹಿತ್ಯ ಪ್ರಪಂಚದಲ್ಲಿ ಸುದ್ದಿಯಾಗುವ, ಸಪ್ಪಳ ಮಾಡುವ ಯಾವುದೇ ಗುಂಪು, ಪಂಥ ಬದ್ಧತೆಗಳ ಚೌಕಟ್ಟಿಗೆ ಸಿಲುಕದೆ, ತನ್ನತನವನ್ನು ಅಭಿವ್ಯಕ್ತಿಸುವಲ್ಲಿ ಸಾಹಿತ್ಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಹೀಗಾಗಿ ಅವರ ಕವನಗಳು ಕೇವಲ ಅವರ ಆತ್ಮಚರಿತ್ರೆಯ ಅಂಶಗಳಂತೆ ಸಹೃದಯರೊಡನೆ ಮಾತಿಗಿಳಿಯುತ್ತವೆ. ತಮ್ಮದೆ ನೇರ ನುಡಿ. ಧ್ವನಿಪೂರ್ಣವಾದ ಕವನಗಳು ವೈಶಿಷ್ಟ್ಯ ಪೂರ್ಣ ವಾಗಿವೆ. ಹೀಗಾಗಿ ಡಾ.ಶಶಿಕಾಂತ ಪಟ್ಟಣವರು ಆಧುನಿಕ
ಕನ್ನಡ ಕಾವ್ಯ ಕ್ಷೇತ್ರದಲ್ಲಿ ಮಹತ್ವದ ಕವಿಯಾಗಿ ಗುರುತಿಸಿಕೊಳ್ಳುತ್ತಾರೆ.
–ಡಾ. ವೀಣಾ ಹೂಗಾರ,
ಮುಖ್ಯಸ್ಥರು, ಕನ್ನಡ ವಿಭಾಗ,
ಕೆ.ಎಲ್.ಇ. ಸಂಸ್ಥೆಯ,
ಶ್ರೀ ಮೃತ್ಯುಂಜಯ ಕಲಾ ಹಾಗೂ
ವಾಣಿಜ್ಯ ಮಹಾವಿದ್ಯಾಲಯ,
ಧಾರವಾಡ-೫೮೦೦೦೮