ಮುನವಳ್ಳಿ: ಪಟ್ಟಣದ ಶ್ರೀ ರೇಣಮ್ಮತಾಯಿ ಯಲಿಗಾರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ದಿನಾಂಕ ೨೫ ರಂದು ಶ್ರೀ ವ್ಹಿ.ಪಿ.ಜೇವೂರ ಪ್ರತಿಷ್ಠಾನದ ವತಿಯಿಂದ ದಿವಂಗತ ಶ್ರೀ ವ್ಹಿ.ಪಿ.ಜೇವೂರ ಗುರುಗಳ ೧೦೧ ನೇ ಜಯಂತಿ ಉತ್ಸವ ಸಂಜೆ ೫ ಗಂಟೆಗೆ ಕರ‍್ಯಕ್ರಮ ಜರಗುವುದು. ಈ ಕರ‍್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ.ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮಿಗಳು ಭಂಡಾರಹಳ್ಳಿ ಮುನವಳ್ಳಿ ಶ್ರೀ ಸೋಮಶೇಖರಮಠ ಹಾಗೂ ಶ್ರೋತ್ರೀಯ ಬ್ರಹ್ಮನಿಷ್ಠ ಸದ್ಗುರು ಶ್ರೀ ಮುಕ್ತಾನಂದ ಮಹಾಸ್ವಾಮಿಗಳು ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ಶಿಂದೋಗಿ-ಮುನವಳ್ಳಿ ವಹಿಸುವರು. ಮುಖ್ಯ ಅತಿಥಿಗಳಾಗಿ ಪರಮಪೂಜ್ಯ ಶರಣೆ ಮುಕ್ತಾತಾಯಿಯವರು ಶ್ರೀ ಶಿವಾನಂದ ಮಠ ಗದಗ ಆಗಮಿಸುವರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಗುರಮ್ಮ ಶ್ರೀಶೈಲ ಗೋಪಶೆಟ್ಟಿ ನಿಕಟಪೂರ್ವ ಅಧ್ಯಕ್ಷರು ಅಕ್ಕನಬಳಗ ಮುನವಳ್ಳಿ ವಹಿಸುವರು.
ಈ ಸಂದರ್ಭದಲ್ಲಿ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ವಿಭೂಷಿತ ಪ್ರೌಢಶಾಲಾ ಶಿಕ್ಷಕ ಸುಧೀರ ವಾಘೇರಿ.ವಿಶ್ರಾಂತ ಗುರುಮಾತೆಯರಾದ ಶ್ರೀಮತಿ ಜಿ.ಎಲ್.ಗುಣಾರಿ.ಪ್ರಗತಿಪರ ರೈತರಾದ ಬಸವರಾಜ ಚಂದರಗಿ. ಅಖಿಲ ಕರ್ನಾಟP ಸಾಂಸ್ಕೃತಿಕ ಸಾಹಿತ್ಯ ಪರಿಷತ್ ಸವದತ್ತಿ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀಮತಿ ಅನುರಾಧ ಬೆಟಗೇರಿ.ಗಡಿನಾಡು ಸಾಧಕಿ ಪ್ರಶಸ್ತಿ ವಿಭೂಷಿತ ಶ್ರೀಮತಿ ಅನ್ನಪೂರ್ಣ ಲಂಬೂನವರ. ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿತ ಮೂರ್ತಿ ಕಲಾವಿದರಾದ ಮಹಾಂತಯ್ಯಾಶಾಸ್ತ್ರೀ ಸಂಬಾಳಮಠ.ಗಡಿನಾಡ ಸಾಧಕ ಪ್ರಶಸ್ತಿ ವಿಭೂಷಿತ ವಿಜಯವಾಣಿ ಪತ್ರಕರ್ತರಾದ ಪ್ರಶಾಂತ ತುಳಜಣ್ಣವರ, ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿಕ ಸಾಮಾಜಿಕ ಕಾರ್ಯಕರ್ತರಾದ ಬಾಳು ಹೊಸಮನಿ, ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿತ ಯೋಗಪಟು ಕಾರ್ತಿಕ ಬೆಲ್ಲದ, ಗಡಿನಾಡು ಸಾಧಕ ಪ್ರಶಸ್ತಿ ವಿಭೂಷಿತ ನೃತ್ಯ ಸಂಯೋಜಕರಾದ ವಿನೋದ ಬೆಳವಲಗಿಡದ ಇವರನ್ನು ಸನ್ಮಾನಿಸಲಾಗುವುದು.
ಪ್ರತಿಭಾ ಪುರಸ್ಕಾರವನ್ನು ಮಾರ್ಚ ೨೦೨೧ ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕುಮಾರಿ ಚೈತ್ರಾ ಬಸನಗೌಡ ಪಾಟೀಲ ಇವಳನ್ನು ಸನ್ಮಾನಿಸಲಾಗುವುದು.
ದಿವಂಗತ ವ್ಹಿ.ಪಿ.ಜೇವೂರರವರ ಜಯಂತಿ ಉತ್ಸವದ ನಿಮಿತ್ತ ಪ್ರೌಢಶಾಲೆ ಮತ್ತು ಕಾಲೇಜ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಜರುಗಿಸಿದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು. ಎಂದು ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶಿಕ್ಷಣ ಪ್ರೇಮಿ ದಿ. ಜೇವೂರ ಗುರುಗಳು
ಶಿಕ್ಷಣ ನಿಂತ ನೀರಲ್ಲ, ಅದು ಹರಿಯುವ ನದಿ ಇದ್ದಂತೆ. ಇಂಥ ನದಿಗೆ ಆಣೆಕಟ್ಟು ಕಟ್ಟಿ ಅದರ ನಾನಾ ವಿಧದ ಪ್ರಯೋಜನ ಪಡೆದವರು ಬಹಳ ಕಡಿಮೆ. ಅದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಇನ್ನೂ ವಿರಳ, ಅಂಥ ಮಹಾನುಭಾವರ ಸ್ಮರಣೆ ಇಂದಿಗೂ ಇರುವುದಾದರೆ ಅದು ಅವರು ನೀಡಿದ ಕೊಡುಗೆಯ ಸ್ಮರಣೆ. ಮುನವಳ್ಳಿ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ವೈಶಿಷ್ಟ್ಯ ಹೊಂದಿದ ಸ್ಥಳವಾಗಿದೆ ಇದೇ ಸ್ಥಳದಲ್ಲಿ ಒಂದು ಕಾಲಕ್ಕೆ ಶಿಕ್ಷಣ ಮರೀಚಿಕೆಯಂತಾಗಿದ್ದು ಆ ಸಂದರ್ಭದಲ್ಲಿ ವ್ಹಿ.ಪಿ. ಜೇವೂರ ಗುರುಗಳ ಆಗಮನದಿಂದ ಈ ಭಾಗದ ಜನರಿಗೆ ಶಿಕ್ಷಣ ಮರೀಚಿಕೆ ಎಂಬುದನ್ನು ದೂರ ಮಾಡುವ ಹಾಗಾಯಿತು. ಇಲ್ಲಿಯ ಜೇವೂರ ಗುರುಗಳು ಮತ್ತು ಸರ್ವಿ ಗುರುಗಳು ಸೇರಿ ನದಿಯ ದಡದಲ್ಲಿ ಮರದ ನೆರಳಲ್ಲಿ ಪ್ರೌಢಶಾಲೆ ಪ್ರಾರಂಭಿಸಿದರು. ಶ್ರೀ ಪಂಚಲಿಂಗೇಶ್ವರ ಜನತಾ ಗುರುಕುಲ ಶಿಕ್ಷಣ ಸಂಸ್ಥೆಯಾಗಿ ಪ್ರಾರಂಭಗೊಂಡು ಕ್ಲಿಷ್ಟ ಸಮಯದಲ್ಲಿ ವಿದ್ಯಾದಾನಕ್ಕೆ ಪ್ರಮುಖ ಪಾತ್ರ ವಹಿಸಿದ್ದು ಚಾರಿತ್ರಿಕ ದಾಖಲೆ. ಈ ಕಾರ್ಯಕ್ಕಾಗಿ ಅವರು ಗ್ರಾಮದಲ್ಲಿ ನಾಟಕ, ವಿವಿಧ ಕಾರ್ಯಗಳ ಮೂಲಕ ದೇಣಿಗೆ ಸಂಗ್ರಹಿಸಿ ಸಂಸ್ಥೆಗೆ ಒಂದು ರೂಪ ನೀಡಿದರು.
ಶಿಕ್ಷಕರ ಮಗನ ಶಿಕ್ಷಣ ಕ್ರಾಂತಿ:
ಜೇವೂರ ಗುರುಗಳು ನಿಜಕ್ಕೂ ಶ್ರೇಷ್ಠದಾರ್ಶನಿಕರು. ೧೯೩೧ ಜನೇವರಿ ೨೫ರಂದು ಪ್ರಭುದೇವ ಹಾಗೂ ರಾಚಮ್ಮ ದಂಪತಿಗಳಿಗೆ ಮಗನಾಗಿ ಜನ್ಮತಳೆದ ಇವರ ಬಾಲ್ಯ ಶಿಕ್ಷಣ ಬೈಲಹೊಂಗಲದಲ್ಲಿ ಪ್ರೌಢಶಿಕ್ಷಣ ಬೆಳಗಾವಿಯಲ್ಲಿ ಪೂರೈಸಿದರು. ಜೇವೂರ ಗುರುಗಳ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಇವರ ಬಹುತೇಕ ಸೇವೆ ಬೈಲವಾಡ ಗ್ರಾಮದಲ್ಲಿ ಆಯಿತು. ಇಲ್ಲಿ ಜೇವೂರ ಗುರುಗಳಿಗೆ ಅವರ ಪಾಠ ಪ್ರವಚನ, ಒಳ್ಳೆಯ ಸಂಸ್ಕಾರಗಳು ಪ್ರಭಾವ ಬೀರಿದ್ದವು.ತಂದೆಯಂತೆ ತಾನೂ ಶಿಕ್ಷಕನಾಗಬೇಕೆಂದು ಬಯಸಿದ್ದರು. ಆದರೆ ಅವರನ್ನು ಉದ್ಯೋಗ ಪುಣೆಯತ್ತ ಆಕರ್ಷಿಸಿತು. ಅಲ್ಲಿ ಸೇನೆಯಲ್ಲಿ ಕೆಲವು ವರ್ಷ ಸೇವೆಗೈದರು. ನಂತರ ಬ್ರಿಟಿಷ್ ಆಡಳಿತದ ಆ ಹುದ್ದೆ ಇವರ ಮನಸ್ಸಿಗೆ ಪ್ರಾಮಾಣಿಕತೆಗೆ ಸರಿ ಬರದಿರುವುದನ್ನು ಅಂದಿನ ಸ್ವಾತಂತ್ರ್ಯ ದಿನಗಳಲ್ಲಿ ಬ್ರಿಟಿಷರು ಭಾರತೀಯರನ್ನು ಕಾಣುವ ರೀತಿಯನ್ನು ಇವರು ಕಂಡಿದ್ದರು. ನಂತರ ಕಂದಾಯ ಇಲಾಖೆಯಲ್ಲಿ ಕೆಲ ಅವಧಿಗೆ ಸೇವೆ ಸಲ್ಲಿಸಿದರು.
ಧಾರವಾಡದಲ್ಲಿ ಕಂದಾಯ ಇಲಾಖೆಯಲ್ಲಿ ಇದ್ದಾಗ ಅಲ್ಲಿ ಮುನವಳ್ಳಿಯ ಜನರು ತಮ್ಮ ಕೆಲಸಕ್ಕೆಂದು ಬರುತ್ತಿದ್ದರು. ಮೂಲತಃ ಮುನವಳ್ಳಿಯವರಾಗಿದ್ದ ಇವರಿಗೆ ಮುನವಳ್ಳಿ ಜನರು ಬಂದಾಗ ಅವರೊಂದಿಗೆ ಬಹಳ ಆತ್ಮೀಯತೆಯಿಂದ ಮಾತನಾಡುವುದು. ಶಿಕ್ಷಣಕ್ಕಾಗಿ ಸವದತ್ತಿ ಧಾರವಾಡ ಬೆಳಗಾವಿಗೆ ಹೋಗುವ ಅನಿವಾರ್ಯತೆಯಿಂದ ಬಹಳಷ್ಟು ಜನ ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಕಂಡರು. ನಂತರ ಇಲ್ಲಿ ಪ್ರೌಢಶಾಲೆ ಇಲ್ಲವೆಂಬುದನ್ನು ಮನಗಂಡರು. ತಮ್ಮ ನೌಕರಿ ತ್ಯಜಿಸಿ ಸಮಾಜದ ಎಲ್ಲ ಜಾಡ್ಯಗಳಿಗೆ ದಿವ್ಯ ಔಷಧ ಶಿಕ್ಷಣವೆಂದು ಬಗೆದು ಮುನವಳ್ಳಿಗೆ ಬಂದರು. ಇಲ್ಲಿ ಸರ್ವಿ ಗುರುಗಳ ಸ್ನೇಹ ಅವರನ್ನು ಈ ಕಾರ್ಯಕ್ಕೆ ಕೈ ಜೋಡಿಸಲು ನೆರವಾಯಿತಷ್ಟೇ ಅಲ್ಲ ಸರ್ವಿ ಗುರುಗಳು ಗಣಿತ ವಿಷಯದಲ್ಲಿ ಬಹಳಷ್ಟು ತಮ್ಮದೇ ಆದ ವೈಶಿಷ್ಟ್ಯತೆಯನ್ನು ಹೊಂದಿದ್ದರು.ಗಣಿತ ಕಬ್ಬಿಣದ ಕಡಲೆಯಲ್ಲ ಅದು ಸರಳ ವಿಷಯ ಎಂಬುದನ್ನು ಮಕ್ಕಳಿಗೆ ಬೋಧಿಸುವ ಮೂಲಕ ಗಣಿತದಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಿ ಬೋಧಿಸುವ ಗುಣವನ್ನು ಅವರು ಹೊಂದಿದ್ದರು.ಹೀಗೆ ಇಬ್ಬರೂ ತಮ್ಮ ತಮ್ಮ ಆಸಕ್ತಿಯ ವಿಷಯಗಳನ್ನು ಆರಿಸಿಕೊಂಡು ಪಾಠಕ್ಕೆ ತೊಡಗಿದರು.
ಧಾರವಾಡ ತಪೋವನದ ಶ್ರೀ ಕುಮಾರ ಸ್ವಾಮಿಗಳ ಅಂತಃಕರಣಕ್ಕೆ ಪಾತ್ರರಾದ ಇವರು ಕನ್ನಡ, ಇಂಗ್ಲೀಷ, ಸಂಸ್ಕೃತ, ಉರ್ದು ಹೀಗೇ ಸಕಲ ಭಾಷಾ ಪ್ರವೀಣರು ಅಷ್ಠೆ ಅಲ್ಲ ಭಾಷೆ, ಸಾಹಿತ್ಯ, ಕಲೆ, ನಾಟಕ ಸಂಗೀತದಲ್ಲಿಯೂ ಪ್ರಬುದ್ದರಾಗಿದ್ದರು. ಸ್ವತಃ ಶಿಕ್ಷಕರಾಗಿ ಸರ್ವಿ ಗುರುಗಳೊಂದಿಗೆ ಕಟ್ಟಿದ ಇವರ ಕನಸಿನ ಜನತಾ ಶಿಕ್ಷಣ ಪ್ರಸಾರಕ ಸಂಸ್ಥೆ ಇಂದು ಮುನವಳ್ಳಿಯಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.
ಅಷ್ಟೇ ಅಲ್ಲ ಬಡಜನರ ಕಲ್ಯಾಣಕ್ಕಾಗಿ ಭಾರತೀಯ ಗ್ರಾಮೀಣ ಶಿಕ್ಷಣ ಪ್ರಸಾರಕ ಸಂಸ್ಥೆ ಹುಟ್ಟು ಹಾಕಿದರು. ಗಂಧರ್ವ ಸಂಗೀತ ಸರೋವರ ಪಾಠಶಾಲೆ, ದಲಿತ ಜಾಗೃತಿ ಸಂಸ್ಕೃತ ಪಾಠಶಾಲೆ ಸ್ಥಾಪಿಸಿದರು. ಮಾವೋ,ಲೆನಿನ್, ಟ್ಯಾಗೋರ ಮತ್ತು ಬಸವಣ್ಣನವರ ವಿಚಾರಧಾರೆ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಇವರು ತಮ್ಮ ಅಂತ್ಯಕಾಲದವರೆಗೂ ಶಿಕ್ಷಣದ ಚಿಂತನೆಗಾಗಿ ಬದುಕನ್ನು ರೂಪಿಸಿದರು. ಬಡಮಕ್ಕಳಿಗೆ ಇಂಗ್ಲೀಷ ಕಲಿಕೆಯಾಗಲಿ ಉನ್ನತ ವ್ಯಾಸಂಗ ಸಿಗಲಿ ಎಂದು ತಮ್ಮ ಮನೆಯಲ್ಲಿಯೇ ಇಂಗ್ಲೀಷ ಭಾಷಾಂತರ ಪಾಠಮಾಲೆ,ಪ್ರಾರಂಭಿಸಿ ಪುಸ್ತಕ ಕೂಡ ಉಚಿತವಾಗಿ ನೀಡಿ ತಾವೇ ಬೋಧಿಸುವ ಮೂಲಕ ಅಂಥ ವಿದ್ಯಾರ್ಥಿಗಳಿಂದೂ ನಾಡಿನೆಲ್ಲಡೆ ಮುನವಳ್ಳಿಯ ಖ್ಯಾತಿ ಬೆಳೆಸಿ ಉನ್ನತ ಹುದ್ದೆಗಳಲ್ಲಿ ಇರುವುದು ಸ್ಮರಣಾರ್ಹ.
ವ್ಹಿಪಿ.ಜೇವೂರ ಸ್ಮಾರಕ ಪ್ರತಿಷ್ಠಾನ ಮುನವಳ್ಳಿ:
ಇಂಥ ಮಹಾನುಭಾವರ ಸ್ಮರಣೆಗೆಂದೆ ಮುನವಳ್ಳಿಯಲ್ಲಿ ದಿವಂಗತ ವ್ಹಿ.ಪಿ.ಜೇವೂರ ಗುರುಗಳ ಸ್ಮಾರಕ ಪ್ರತಿಷ್ಠಾನವನ್ನು ಅವರ ವಿದ್ಯಾರ್ಥಿಗಳು, ಅಭಿಮಾನಿಗಳು, ಹಿತೈಷಿಗಳು ಸೇರಿ ೧೯೯೯ ರಲ್ಲಿ ಸ್ಥಾಪಿಸಿದರು. ಅಷ್ಟೇ ಅಲ್ಲ ಪ್ರತಿವರ್ಷ ಜನವರಿ ೨೫ ರಂದು ಆ ಸ್ಮರಣೆಯ ನೆನಪಿನಲ್ಲಿ ಅಂದು ಕಲಿತ ಹಾಗೂ ಇಂದು ಕಲಿಯುತ್ತಿರುವ ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅವರ ಸಾಧನೆ ಮುನವಳ್ಳಿ ಜನತೆಗೆ ಪರಿಚಯ ಮಾಡಿಸುವ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಯಲ್ಲಿ ಕಲಿತು ಹೆಸರುವಾಸಿಗಳಾದವರ ಸನ್ಮಾನ ನಡೆಸುವ ಮೂಲಕ ಜೇವೂರ ಗುರುಗಳ ಸ್ಮರಣೆ ಮಾಡುತ್ತಿರುವುದು ನಿಜಕ್ಕೂ ಸ್ಮರಣೀಯವಾಗಿದೆ.
ಇಂಥ ಮಹಾನ್‌ಚೇತನರ ಸ್ಮರಣೆ ಶೈಕ್ಷಣಿಕ ರಂಗಕ್ಕೆ ಅವರ ಕೊಡುಗೆಗೆ ಹಿಡಿದ ಕೈಗನ್ನಡಿ. ಇವರ ಬದುಕಿನ ಆದರ್ಶಗಳು, ಜೀವನ ತತ್ವಗಳು ಇಂದಿನ ವಿದ್ಯಾರ್ಥಿಗಳಿಗೆ ಕೂಡ ಮಾರ್ಗದರ್ಶಕವಾಗಲಿ ಎಂದು ಈ ಸಂದರ್ಭದಲ್ಲಿ ಹಾರೈಸಿ ಕಾರ್ಯಕ್ರಮದ ರೂವಾರಿಗಳಾದ ಶಿಷ್ಯ ದಿವಂಗತ ದಿಲೀಪ.ವಾಯ್.ಜಂಬಗಿ ಮತ್ತು ಮಲ್ಲಿಕಾರ್ಜುನ ಗೋಮಾಡಿಯವರು ಹಾಗೂ ಇನ್ನೂ ಹಲವಾರು ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಜೇವೂರ ಗುರುಗಳ ಸ್ಮರಣೋತ್ಸವ ಸಮೀತಿ ಹುಟ್ಟು ಹಾಕುವ ಜೊತೆಗೆ ಪ್ರತಿ ವರ್ಷ ಅದನ್ನು ವಿಭಿನ್ನವಾಗಿ ಆಚರಿಸಿಕೊಂಡು ಬರುತ್ತಿರುವುದು ಇತರರಿಗೂ ಮಾದರಿ.
ಕೌಟುಂಬಿಕ ಬದುಕು:
ಜೇವೂರ ಸರ್ ಸದಾ ಕುಟುಂಬ ವತ್ಸಲರು.ಅವರ ಪತ್ನಿ ಗೌರವ್ವ ಸಾದ್ವಿಶಿರೋಮಣಿ. ಶರಣ ಸಂಪ್ರದಾಯದಲ್ಲಿ ತಮ್ಮ ಬದುಕನ್ನು ಕಂಡವರು. ಪತಿಯ ಸದಾ ಚಟುವಟಿಕೆಗಳಲ್ಲಿ ತಮ್ಮ ಸ್ಪೂರ್ತಿಯನ್ನು ತುಂಬುತ್ತ ಮಕ್ಕಳಿಗೂ ಕೂಡ ಸಂಸ್ಕಾರ ನೀಡುತ್ತ ಬದುಕಿದವರು.ಜೇವೂರ ಗುರುಗಳು ಎಲ್ಲಿಯೇ ಯಾವುದೇ ಶೈಕ್ಷಣಿಕ ವಿಚಾರಧಾರೆಗಳಿಗೆ ತೆರಳಲಿ ಆ ದಿನ ನಸುಕಿನಲ್ಲಿ ಎದ್ದು ಬಿಸಿ ರೊಟ್ಟಿ ಪಲ್ಯವನ್ನು ಮಾಡಿ ಅವರಿಗೆ ಉಣಬಡಿಸಿ ಮನೆಯನ್ನು ಸ್ವಚ್ಛವಾಗಿರಿಸಿ ಅವರನ್ನು ಬೀಳ್ಕೊಡುತ್ತಿದ್ದರಂತೆ, ಮಕ್ಕಳಿಗೂ ಕೂಡ ಅವರ ಸ್ನಾನ ಪೂಜೆ ಇತ್ಯಾದಿಗಳನ್ನು ಮಾಡಿಸಿ ಊಟ ಬಡಿಸಿ ಅವರ ಶಾಲೆಗಳಿಗೆ ತೆರಳಲು ಅನುವು ಮಾಡಿಕೊಡುವ ಮೂಲಕ ಪತಿಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಸ್ಪೂರ್ತಿದಾಕ ಪತ್ನಿಯಾಗಿ ಮಕ್ಕಳಿಗೆ ಉತ್ತಮ ತಾಯಿಯಾಗಿ ಬದುಕಿದರು.ಅವರ ತವರು ಮನೆ. ಸವದತ್ತಿ.ಬಾಳಿಯವರ ಮನೆತನದ ಸುಸಂಸ್ಕೃತ ಹೆಣ್ಣುಮಗಳು ಗೌರವ್ವ ಪತಿಗೆ ತಕ್ಕ ಶರಣಸತಿಯಾಗಿದ್ದರು. ಇವರಿಗೆ ನಾಲ್ವರು ಗಂಡು ಮಕ್ಕಳು.ಹಿರಿಯವರು ಚಂದ್ರಶೇಖರ(ನಿವೃತ್ತ ಉಪನ್ಯಾಸಕರು).ಎರಡನೆಯವನು ಕುಮಾರ ಕೃಷಿಯಲ್ಲಿ ತೊಡಗಿದವರು.ಮಹಾಂತೇಶ ಕೂಡ ಕೃಷಿಯಲ್ಲಿ ತೊಡಗಿದವರು.ಅಣ್ಣಪ್ಪ ಕೊನೆಯವರು ಇವರು ಗೊಬ್ಬರ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರೂ ಕೂಡ ಅನ್ಯೊನ್ಯವಾಗಿದ್ದು.ಜೇವೂರ ಸರ್ ಮೊಮ್ಮಗ ಪ್ರಭು ಚಂದ್ರಶೇಖರ ಜೇವೂರ(ಉಪನ್ಯಾಸಕರ ಮಗ) ಇಥಿಯೋಪಿಯಾದಲ್ಲಿ ಸೇವೆ ಸಲ್ಲಿಸುತ್ತಿದ್ದು ಎಲ್ಲರೂ ಜೇನಿನಗೂಡು ನಾವೆಲ್ಲ ಎಂಬುವಂತೆ ಬದುಕನ್ನು ನಡೆಸುತ್ತಿದ್ದಾರೆ.
ಬಡವರ ಬಂಧು:
ಜೇವೂರ ಗುರುಗಳು ಅನೇಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಮ್ಮ ಸ್ವಂತ ಹಣವನ್ನು ಹೊಂದಿಸಿ.ದಾನಿಗಳನ್ನು ಸಂಪರ್ಕಿಸಿ ಹೆಚ್ಚಿನ ವ್ಯಾಸಂಗಕ್ಕೆ ಅನುವು ಮಾಡಿಕೊಡುತ್ತಿದ್ದರು. ಹಡಪದ ಅಂದಾನಿ ಎಂಬ ಕಲಾವಿದನನ್ನು ಗುರುತಿಸಿ ಗದುಗಿನಲ್ಲಿ ಅವರಿಗೆ ಚಿತ್ರಕಲಾ ಶಿಕ್ಷಣಕ್ಕೆ ಸಹಾಯ ಮಾಡಿದರು. ಅವರೊಬ್ಬ ಉತ್ತಮ ಚಿತ್ರಕಲಾವಿದನಾಗಿ ರೂಪಗೊಂಡರು. ಬೋದ್ಲೇಖಾನ್ ಎಂಬ ಶಿಕ್ಷಕರನ್ನು ಜೆ.ಎಸ್.ಪಿ ಸಂಸ್ಥೆಯಲ್ಲಿ ಚಿತ್ರಕಲಾ ಶಿಕ್ಷಕರನ್ನಾಗಿ ಕರೆತಂದು ನೌಕರಿ ಕೊಡಿಸಿ ಮುನವಳ್ಳಿಯವರಾಗಿ ಇಲ್ಲಿಯೇ ನೆಲೆಸುವಂತೆ ಮಾಡಿದ್ದು ಜೇವೂರ ಗುರುಗಳ ಕರುಣಾಮಯಿ ಎಂಬ ಹೃದಯವಂತಿಕೆಯನ್ನು ರೂಪಿಸುತ್ತದೆ. ಇಂತಹ ಅನೇಕ ಘಟನೆಗಳನ್ನು ಅವರಿಂದ ಉಪಕೃತರಾದವರು ಇಂದಿಗೂ ನೆನೆಯುವರು.
ಒಟ್ಟಿನಲ್ಲಿ ಜೇವೂರ ಗುರುಗಳು ಒಳ್ಳೆಯ ವಿಚಾರವಾದಿಯಾಗಿದ್ದರು. ಎಲ್ಲರಿಗಿಂತ ಭಿನ್ನವಾದಿ ಚಿಂತಕರಾಗಿದ್ದರು.ಅಧ್ಯಾತ್ಮಿಕ ಬದುಕನ್ನು ರೂಢಿಸಿಕೊಂಡು ಸಮಾಜ ಹಿತ ಚಿಂತಕರಾಗಿ ಬದುಕನ್ನು ನಡೆಸಿದರು.ಶೈಕ್ಷಣಿಕ ಕ್ರಾಂತಿಯನ್ನು ಮುನವಳ್ಳಿಯಲ್ಲಿ ಮಾಡಿದ ಅವರ ಬದುಕು ಇತರರಿಗೆ ಮಾದರಿ.
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭