ಹಾಸನ – ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ಜಿಲ್ಲಾ ಘಟಕ ಹಾಸನ ವತಿಯಿಂದ ಸಂಸ್ಕಾರ ಭಾರತಿ ಕರ್ನಾಟಕ, ಹಾಸನ ಜಿಲ್ಲಾ ಘಟಕ, ಶ್ರೀ ಸೀತಾ ರಾಮಾಂಜನೇಯ ಸೇವಾ ಸಮಿತಿ, ಕನ್ನಡ ಸಂಸ್ಕೃತಿ ಇಲಾಖೆ, ಹಾಸನ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು, ಹಾಸನ ನಗರ ಗೃಹ ನಿರ್ಮಾಣ ಸಹಕಾರಿ ಸಂಘ ಇವರ ಸಹಯೋಗದಲ್ಲಿ ಹಾಸನದ ಶ್ರೀ ಸೀತಾರಾಮಾಂಜನೇಯ ದೇವಾಲಯ ಸಪ್ತಪದಿ ಸೌದಾಮಿನಿ ಸಭಾಂಗಣ ಗಮಕ ರತ್ನಾಕರ ಎಂ.ಎ. ಜಯರಾಮನ್ ಮಹಾ ವೇದಿಕೆಯಲ್ಲಿ
ಹಮ್ಮಿಕೊಂಡಿರುವ ಐದು ದಿನಗಳ ಗಮಕ ಹಬ್ಬ ಕವಿ ನಮನ ಕಾರ್ಯಕ್ರಮವನ್ನು ಸಂಸ್ಕಾರ ಭಾರತೀಯ ಕರ್ನಾಟಕ ದಕ್ಷಿಣ ಪ್ರಾಂತದ ಸಂಘಟನಾ ಕಾರ್ಯದರ್ಶಿ ರಾಮಚಂದ್ರರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗಮಕ ಕಲೆ ಪ್ರಾಚೀನ ಕಲೆ. ಪ್ರತಿಯೊಬ್ಬ ವ್ಯಕ್ತಿ ಕಲಾವಿದನೇ. ಗಮಕ ಕೂಡ ಪ್ರಾಚೀನತೆಯಿಂದ ಪ್ರಾಚೀನ ಸಾಹಿತ್ಯವನ್ನು ಜನರಿಗೆ ತಲುಪಿಸುತ್ತಾ ಬಂದಿದೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಹಾಸನ ಜಿಲ್ಲಾ ಘಟಕವು ಗಮಕ ಪ್ರಚಾರದಲ್ಲಿ ರಾಜ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವುದು ಬಹಳ ಸಂತೋಷದ ವಿಚಾರ ಎಂದರು.
ಹಾಸನ ಆಕಾಶವಾಣಿ ಕೇಂದ್ರ ಸಹಾಯಕ ನಿರ್ದೇಶಕರು ಬಿ.ವಿ.ಶ್ರೀಧರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕರ್ನಾಟಕ ಕಲಾಶ್ರಿ ಗಣೇಶ ಉಡುಪ, ಅಧ್ಯಕ್ಷರು, ಕರ್ನಾಟಕ ಗಮಕ ಕಲಾ ಪರಿಷತ್ತು, ಹಾಸನ ಜಿಲ್ಲಾ ಘಟಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಭರತನಾಟ್ಯ ವಿದುಷಿ ಭಾನು ಚಿದಾನಂದ್ ಅವರ ನಿರ್ದೇಶನದಲ್ಲಿ ಅವರ ಶಿಷ್ಯೆ ಕುಮಾರಿ ದೇಸಿಹ ಕನಸು ಮತ್ತು ತಂಡದವರಿಂದ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ಹಾಗೂ ಗಮಕ ವಿದುಷಿ ನವರತ್ನ ಎಸ್ ವಟಿ ಅವರ ನಿರ್ದೇಶನದಲ್ಲಿ ಗಮಕ ವಿದುಷಿ ರುಕ್ಮಿಣಿ ನಾಗೇಂದ್ರ ಅವರ ಪರಿಕಲ್ಪನೆಯಲ್ಲಿ ಬೇಲೂರಿನ ಸೌಮ್ಯಶ್ರೀ ಗಮಕ ಕಲಾ ಶಾಲೆಯ ವಿದ್ಯಾರ್ಥಿನಿಯರಿಂದ ಕವಿ ಮೈ ಶೇ ಅನಂತ ಪದ್ಮನಾಭ ವಿರಚಿತ ಅಂಗುಲೀಯಕ ಪ್ರದಾನ ಎಂಬ ರಾಮಾಯಣದ ಸುಂದರ ಕಾಂಡದ ದೃಶ್ಯ ರೂಪಕ ಸುಂದರವಾಗಿ ಮೂಡಿಬಂತು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಮಕಿ ಶ್ರೀಮತಿ ರುಕ್ಮಿಣಿ ನಾಗೇಂದ್ರ ಅವರಿಗೆ ಗಮಕ ಕಲಾಶ್ರೀ ಬಿರುದು ಪ್ರದಾನ ಮಾಡಲಾಯಿತು. ಪರಿಷತ್ತಿನ ಕಾರ್ಯದರ್ಶಿ ಜಿ ಎನ್ ಅನಸೂಯ ವಾರ್ಷಿಕ ವರದಿ ಓದಿದರು. ಕಲಾವತಿ ಪರಮೇಶ ಪ್ರಾರ್ಥಿಸಿದರು. ಜಿ.ಎಸ್. ಆಶಾ ನಿರೂಪಿಸಿದರು. ಸುವರ್ಣ ರಮೇಶ ಸ್ವಾಗತಿಸಿದರು. ಉಮಾ ನಾಗರಾಜ್ ವಂದಿಸಿದರು.