ಸಿಂದಗಿ: ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ ಮಹನೀಯರ ಜಯಂತಿಗಳು ಬಂದರೆ ಅಧಿಕಾರಿಗಳಿಗೆ ರಜೆ ಸಿಕ್ಕಿತು ಎಂದು ಸಂಭ್ರಮಿಸುತ್ತ ಗೈರು ಉಳಿದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕು ಎಂದು ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ ಖಡಕ್ಕಾಗಿ ಸೂಚಿಸಿದರು.
ಪಟ್ಟಣದ ತಹಶೀಲ್ದಾರ ಕಾಯಾಲಯದಲ್ಲಿ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಅಹಿಂಸಾತ್ಮಕ ಹೋರಾಟದ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ಚೇತನ ಮಹಾತ್ಮ ಗಾಂಧಿಯವರ ಪ್ರಭಾವ ಈ ದೇಶಕ್ಕಿಂತಲೂ ವಿದೇಶಗಳಲ್ಲಿ ಪ್ರಚಲಿತವಾಗಿದ್ದರೆ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಗಳ ಮೂಲಕ ದೇಶದಲ್ಲಿ ಜನಸ್ನೇಹಿ ಆಡಳಿತವನ್ನು ನೀಡಿದ ಅಪರೂಪದ ಪ್ರಧಾನಿಯಾಗಿದ್ದರು. ಗಾಂಧೀಜಿ ಸತ್ಯ, ಸಮಾನತೆ, ಅಹಿಂಸೆ, ಶಾಂತಿಯ ಬಹುದೊಡ್ಡ ಪ್ರತಿಪಾದಕರಾಗಿದ್ದಾರೆ. ಇಂದು ವಿಶ್ವದಾದ್ಯಂತ ಮಹಾತ್ಮ ಗಾಂಧಿಯವರ ಜನ್ಮ ದಿನಾಚರಣೆಯನ್ನು ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಚಳವಳಿ ಹಾಗೂ ಹೋರಾಟಗಳನ್ನು ರೂಪಿಸಿ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಚಳುವಳಿಯನ್ನು ಮುನ್ನಡೆಸಿದರು. ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಕೊಡುಗೆ ಅಪಾರವಾಗಿದ್ದರು ಕೂಡಾ ಪಕೀರರಂತೆ ಜೀವನ ನಡೆಸಿದವರು ಪ್ರಸ್ತುತ ದಿನಮಾನಗಳಲ್ಲಿ ಇಂತಹ ಮಹಾತ್ಮರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಅವರ ಹಾದಿಯಲ್ಲಿ ಸಾಗೋಣ ಎಂದರು.
ಈರ್ವರೂ ಮಹನೀಯರ ಪೋಟೋ ಪೂಜೆ ನೆರವೇರಿಸಿದ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಶಿರಸ್ತೆದಾರರಾದ ಸುರೇಶ ಮ್ಯಾಗೇರಿ, ಜಿ.ಎಸ್.ರೋಡಗಿ ಸೇರಿದಂತೆ ಅನೇಕರಿದ್ದರು.