spot_img
spot_img

ಕಾಡಿದ ಗಜಲ್ ಕಥನ

Must Read

    ಗಜಲ್ ಕಾವ್ಯ ಮತ್ತು ಸಂಗೀತದ ಒಂದು ನಿಗೂಢ ಪ್ರಕಾರವಾಗಿದೆ. ಇದು ಏಳನೆಯ ಶತಮಾನದ ಅರೇಬಿಯಾದಲ್ಲಿ ತನ್ನ ಬೇರುಗಳನ್ನು ಕಂಡುಕೊಳ್ಳುತ್ತದೆ. ನಿರರ್ಗಳವಾದ ಪದ್ಯಗಳಲ್ಲಿ ಅರ್ಥಪೂರ್ಣ ಪದಗಳ ಸೂಕ್ಷ್ಮ ಬಳಕೆಯ ಮೂಲಕ ಗಜಲ್ ಗಳು ನಮ್ಮೊಳಗೆ ಆಳವಾದ ಭಾವನೆಯನ್ನು ಪುನರುಜ್ಜೀವನಗೊಳಿಸುತ್ತವೆ. ಗಜಲ್ ಪ್ರಾಸಬದ್ದ ದ್ವಿಪದಿಗಳ ಅನುಕ್ರಮವಾಗಿದೆ. ಇದು ಪಲ್ಲವಿ ಅಥವಾ ಪುನರಾವರ್ತಿತ ಪದ ಗುಚ್ಚವನ್ನು ಹೊಂದಿದೆ. ಅದು ದ್ವಿಪದಿಗಳ ಎರಡನೆಯ ಸಾಲಿನ ಕೊನೆಯಲ್ಲಿ ಬರುತ್ತದೆ.
 ಗಜಲ್ ದ ಇತಿಹಾಸವು  ಅರೇಬಿಯಾದಿಂದ ಪರ್ಷಿಯಾ, ಭಾರತ ಮತ್ತು ಅದರಾಚೆಗೆ ಪ್ರಯಾಣಿಸಿದಾಗ ಸಾಂಸ್ಕೃತಿಕ ವಿನಿಮಯ, ರೂಪಾಂತರ ಮತ್ತು ರೂಪಾಂತರದ ಕಥೆಯಾಗಿದೆ. ಕಾವ್ಯ ಮತ್ತು ಸಂಗೀತದ ಸೌಂದರ್ಯದ ಮೂಲಕ ಮಾನವನ ಭಾವನೆಗಳು ಮತ್ತು ಅನುಭವಗಳ ಸಂಕೀರ್ಣತೆಗಳನ್ನು ಸೆರೆಹಿಡಿಯುವ ಸಾಮರ್ಥ್ಯದಲ್ಲಿ ಇದರ ನಿರಂತರ ಆಕರ್ಷಣೆ ಇರುತ್ತದೆ.
 ಗಜಲ್ ಎಂಬುದು ಅರೇಬಿಕ್ ಸಾಹಿತ್ಯದಲ್ಲಿ ಹುಟ್ಟಿಕೊಂಡ ಕಾವ್ಯದ ಒಂದು ರೂಪವಾಗಿದೆ. ನಂತರ ಪರ್ಷಿಯನ್, ಉರ್ದು ಮತ್ತು ಇತರ ಭಾಷೆಗಳಲ್ಲಿ ಜನಪ್ರಿಯವಾಯಿತು.
 ಮಧ್ಯಕಾಲೀನ ಯುಗದಲ್ಲಿ ಪರ್ಷಿಯನ್ ಸಾಹಿತ್ಯದಲ್ಲಿ ಗಜಲ್ ಅಭಿವೃದ್ಧಿಗೆ ಫಲವತ್ತಾದ ನೆಲವನ್ನು ಕಂಡುಕೊಂಡಿತು. ರೂಮಿ ಹಫೀಜ್ ಮತ್ತು ಸಾದಿಯಂತಹ ಪರ್ಷಿಯನ್ ಕವಿಗಳು ಗಜಲ್ ಅನ್ನು ಸಂಸ್ಕರಿಸಿದ ಮತ್ತು ಅತ್ಯಾಧುನಿಕ ಕಲಾ ಪ್ರಕಾರವಾಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಪ್ರೀತಿಯ ವಿಷಯಗಳನ್ನು ಮಾತ್ರವಲ್ಲದೆ ಗಜಲ್ ನಲ್ಲಿ ಅತೀಂದ್ರಿಯತೆ ಮತ್ತು ಆಧ್ಯಾತ್ಮಿಕತೆಯನ್ನು ಅನ್ವೇಷಿಸಿದರು.
 ಭಾರತೀಯ ಉಪಖಂಡದಲ್ಲಿ ಪರ್ಷಿಯನ್ ಪ್ರಭಾವದ ಆಗಮನದೊಂದಿಗೆ ವಿಶೇಷವಾಗಿ ಮೊಘಲ್ ಯುಗದಲ್ಲಿ ಗಜಲ್ ಅನ್ನು ಈ ಪ್ರದೇಶಕ್ಕೆ ಪರಿಚಯಿಸಲಾಯಿತು. ಇಲ್ಲಿ ಇದು ಸ್ಥಳೀಯ ಕಾವ್ಯ ಮತ್ತು ಸಂಗೀತ ಸಂಪ್ರದಾಯಗಳೊಂದಿಗೆ ಬೆರೆತು ವಿಶಿಷ್ಟವಾದ ದಕ್ಷಿಣ ಏಷ್ಯಾದ ರೂಪವಾಗಿ ವಿಕಸನಗೊಂಡಿತು. ಮಿರ್ ತಾಕಿ ಮಿರ್  ಮತ್ತು ಗಾಲಿಬ್  ಅವರಂತಹ ಕವಿಗಳು 18 ಮತ್ತು 19ನೆಯ  ಶತಮಾನಗಳಲ್ಲಿ ಉರ್ದು ಗಜಲ್ ಗಳಿಗೆ ಸಮಾನಾರ್ಥಕರಾದರು.
 ಕ್ರಮೇಣ ಗಜಲ್ ಸಂಗೀತವನ್ನು ಅಳವಡಿಸಿಕೊಳ್ಳಲು ಕಾವ್ಯ ಮತ್ತು ಸಾಹಿತ್ಯದ ಕ್ಷೇತ್ರಗಳಿಂದ ಪರಿವರ್ತನೆಯಾಯಿತು. ಇದು ಹೊಸ ಮತ್ತು ಅತ್ಯಂತ ವಿಶಿಷ್ಟವಾದ ಸಂಗೀತ ಪ್ರಕಾರವನ್ನು ಹುಟ್ಟು ಹಾಕಿತು. ಗಜಲ್  ಸೂಫಿ ಸಂಗೀತದ ಒಂದು ಭಾಗವೆಂದು ಪರಿಗಣಿಸಲಾಗಿದೆ.
ನನ್ನದೇ ಗಜಲ್ ನನ್ನನ್ನು ಪದೇ ಪದೇ ಕಾಡಿದಾಗ ಅದರ ಬಗೆಯೇ ಏಕೆ ಬರೆಯಬಾರದು ಎಂದು ಅನ್ನಿಸಿದ್ದಂತೂ ನಿಜ. ಆರು ದ್ವಿಪದಿಗಳಲ್ಲಿ ಮೂಡಿ ಬಂದಿರುವ ನನ್ನ ಗಜಲ್ ಗೆ  ಎರಡು ವರ್ಷದ ಹಿಂದೆ ಮೂವರು ವಿಮರ್ಶಕರು ತಮ್ಮ  ನೈಜವಾದ ನುಡಿಗಳಿಂದ ಸ್ಪಂದಿಸಿದಾಗ ಈ ನನ್ನ ಗಜಲ್ ನನ್ನನ್ನು ಇನ್ನಷ್ಟು ಕಾಡಿತು.
 ಮನದಲ್ಲಿ ಅಡಗಿದ ಭಾವನೆಗಳಿಗೆ     ಧ್ವನಿಯಾಗುವವರಾರು  ಸಖಿ                                      ಎಷ್ಟು ಹೇಳಿದರೂ ಕೇಳದ ವಿಚಾರಗಳಿಗೆ ಕಿವಿಯಾಗುವರಾರು ಸಖಿ 
ಎನ್ನುತ್ತಾ  ಶುರುವಾಗುವ ನನ್ನ ಗಜಲ್ ನ ಸಾಲುಗಳು ಯೋಚನೆ ಮಾಡಿ ಬರೆದದ್ದಲ್ಲ. ಬಹಳಷ್ಟು ಹೆಣ್ಣುಮಕ್ಕಳು ದಿನನಿತ್ಯದ ಜೀವನದಲ್ಲಿ ತಮ್ಮ ಭಾವನೆಗಳ ಜೊತೆಗೆ ಗುದ್ದಾಡುವುದರ ಪ್ರತಿರೂಪ ಎಂದು ಹೇಳಬಹುದು. ಅವಳು ತನ್ನ ಸ್ನೇಹಿತೆಯನ್ನು ಕೇಳುವ ಪರಿ ನೋಡಿ. ನನ್ನ ಮನದಲ್ಲಿ ಮೂಡುವ ಪ್ರತಿಮಾತನ್ನು ವ್ಯಕ್ತಪಡಿಸುವುದಾದರೂ ಹೇಗೆ, ಯಾರಾದರೂ ನನ್ನ ಭಾವಕ್ಕೆ ಧ್ವನಿಯಾಗಿ, ಪ್ರತಿಸ್ಪಂದಿಸುತ್ತಾರೆಯೇ. ನನ್ನ  ವಿಚಾರಗಳನ್ನು
ಕೇಳಿಸಿಕೊಳ್ಳಲು  ಯಾರಾದ್ರೂ  ತಯಾರಿದ್ದಾರೆಯೇ ಎನ್ನುವ ಪ್ರಶ್ನೆ ಅವಳನ್ನು ಅನವರತ ಕಾಡುತ್ತದೆ. ಹೇಳುತ್ತೇನೆ  ನನ್ನ  ಮನದ ಅಳಲುಗಳ ಎಂದು ಬೇಡಿಕೊಂಡರೂ ಯಾರೂ ಅವಳ ತುಮುಲಕ್ಕೆ  ಕಿವಿಕೊಡದಾದರು.
 ಮನಸಿನ  ದುಗುಡಗಳಿಗೆ ರೂಪ ಕೊಡದೆ ಹೋದೆ 
 ಮಾಸದ ಗಾಯಗಳಿಗೆ ಮುಲಾಮು ಹಚ್ಚುವರಾರು ಸಖಿ 
ಎರಡನೆಯ ದ್ವಿಪದಿಯಲ್ಲಿ ಮನಸ್ಸಿನಲ್ಲಿ ನಿರಂತರ ನಡೆಯುವ  ದುಗುಡ-ದುಮ್ಮಾನಗಳಿಗೆ ಒಂದು ನಿಶ್ಚಿತ  ರೂಪು ಕೊಡಲು ನನಗಾಗುವುದಿಲ್ಲ. ಅವೆಲ್ಲ ಕಲಸುಮೇಲೋಗರವಾಗಿ  ದಿಕ್ಕು ತಪ್ಪಿಸುತ್ತವೆ. ಎಲ್ಲಿಂದ  ಶುರು ಮಾಡಿ ಹೇಳಲಿ ಎನ್ನುವುದು ಅವಳ
ಕಳವಳ. ನನ್ನ ಮನದಲ್ಲಿ ಆದ ಗಾಯಗಳು ಎಷ್ಟು ಆಳವಾಗಿವೆಯೆಂದರೆ  ಅವು ಎಂದೆಂದೂ ಮಾಯುವುದಿಲ್ಲ ಎನ್ನುವುದು ಅವಳ ಆತಂಕ.ಯಾರು ಅದಕ್ಕೆ ಮುಲಾಮು ಹಚ್ಚಿ ಆರಾಮ ಮಾಡುತ್ತಾರೆ, ಯಾರೂ ಮಾಡುವುದಿಲ್ಲ  ಎನ್ನುವುದು   ಅವಳಿಗೆ ಮನವರಿಕೆ ಆಗಿದೆ. ಅದನ್ನೇ  ಅವಳು ತನ್ನ ಗೆಳತಿಯ
ಮುಂದೆ  ಪ್ರಲಾಪಿಸುತ್ತಾಳೆ.
 ಬಿತ್ತರಗೊಳ್ಳದ ಕಲ್ಪನೆಗಳು ನೂರಾರು ಇವೆ 
 ನನ್ನೀ ತುಮುಲಗಳಿಗೆ ತೇಪೆ ಹಚ್ಚುವರಾರು ಸಖಿ 
ಮೂರನೆಯ ದ್ವಿಪದಿಯಲ್ಲಿ ಒಳಗಣ ಆಳವಾದ ತನ್ನದೇ ಆದ ಕಲ್ಪನಾಲೋಕವನ್ನು ಅವಳಿನ್ನೂ ಯಾರ ಮುಂದೂ ಹೇಳಲೇ ಇಲ್ಲ, ಆ ಅವಕಾಶವೇ ಬಂದಿಲ್ಲ. ಅವಳಲ್ಲಿ ಸತತವಾಗಿ ನಡೆಯುವ ತುಮುಲಗಳಿಗೆ ಒಂದಿಷ್ಟು ತೇಪೆ ಹಚ್ಚಿ ಬಾಚಿ ತಬ್ಬಿಕೊಂಡು ಸಂತೈಸಬೇಕಾಗಿದೆ ಎನ್ನುವುದು ಅವಳ ಮನದ ಆಸೆ. ಎಷ್ಟೊಂದು ಕಲ್ಪನೆಗಳು ಹಾರಾಡುತ್ತಿವೆ ಅವಳಲ್ಲಿ, ಅವಳಿಗೆ  ಅರಿವಿಲ್ಲದ ಹಾಗೆ. ಅವನ್ನೆಲ್ಲ ಬಚ್ಚಿಟ್ಟು  ಕಾಯುತ್ತಿದ್ದಾಳೆ ಅವಳು ಕಲ್ಪನೆಗೆ ರೆಕ್ಕೆ ಕೊಡುವವರನ್ನು, ಬೇಸರದ ಕ್ಷಣಗಳನ್ನು ಹೊನ್ನ ಘಳಿಗೆ ಮಾಡುವ  ದೇವಧೂತನನ್ನು.
 ನಿರ್ಜೀವ ತುಂಬಿದ ಕಾಷ್ಟದಂತೆ ಬಾಡಿ ಹೋಗಿದ್ದೇನೆ 
ಹೃದಯದ ಕಂಪನವ ಹಿಡಿತಕ್ಕೆ ತರುವರಾರು ಸಖಿ 
ನಾಲ್ಕನೆಯ ದ್ವಿಪದಿಯಲ್ಲಿ ಅವಳು ಒಣಗಿದ ಕಟ್ಟಿಗೆಯಂತೆ  ಜೀವವಿಲ್ಲದವಳಾಗಿದ್ದೇನೆ, ಬಾಡಿ ಬಸವಳಿದಿದ್ದೇನೆ. ಅವಳ  ಹೃದಯ ಕಂಪಿಸುವುದನ್ನು ಯಾರಾದರೂ ಹಿಡಿತಕ್ಕೆ ತರುವರೇ ಎಂದು ವಿಹ್ವಲಳಾಗಿ ಕೇಳುತ್ತಾಳೆ. ಏನೂ ಚೇತನವೇ ಉಳಿದಿಲ್ಲ ನನ್ನಲ್ಲಿ ಎನ್ನುವ ನಿರಾಶಾಭಾವ. ಏನೇ ಆದರೂ ಯಾವುದೊಂದೂ ಸರಿಹೋಗುವುದಿಲ್ಲ ಎನ್ನುವ ಕೊನೆಯ ಕ್ಷಣಕ್ಕೆ   ಅವಳು ಬಂದು ನಿಲ್ಲುತ್ತಾಳೆ.
 ಬೆಚ್ಚಿ ಬೀಳುತ್ತಿದ್ದೇನೆ ಅನುದಿನವು ಸೊಗಸಿಲ್ಲದೆ 

ನಶಿಸಿಹೋಗುತ್ತಿರುವ ಬಾಳಿಗೆ ಒರತೆ ತುಂಬುವವರಾರು ಸಖಿ 
ಐದನೆಯ ದ್ವಿಪದಿಯಲ್ಲಿ ಪ್ರತಿಘಳಿಗೆ ತಾನು ತನ್ನಲ್ಲೇ ಹೆದರಿ ಹೆದರಿ ಬೆಚ್ಚಿಬೀಳುತ್ತಿದ್ದೇನೆ. ಅದನ್ನು ಸರಿಪಡಿಸುವವರಾರು ಎಂದು ಒಂದೇ ಸಮನೆ ತನ್ನ ಗೆಳತಿಯನ್ನು ಗೋಗರೆಯುತ್ತಾಳೆ. ನನ್ನ ಬಾಳೇ ನಶಿಸಿಹೋಗುತ್ತಿದೆ, ಅದಕ್ಕೆ ನೀರಿನ ಒರತೆ  ತುಂಬುವವರಾರು, ಯಾರಾದರೂ ಮಾನವೀಯತೆ  ಇರುವವರು ಬಂದು ನನ್ನನ್ನು ಉದ್ಧಾರ ಮಾಡುತ್ತಾರೆಯೇ ಎಂದು ಹಾದಿ ಕಾಯುತ್ತಿದ್ದಾಳೆ.
 ಬೇಡದ ಸುಖವ ಅಪ್ಯಾಯಮಾನವಾಗಿ ಅಪ್ಪಿಕೊಳ್ಳಲೇ 
 ಬೇಡವೆಂದರೂ ಬಾರದ ಊರಿಗೆ ಹೊರಟ ನನ್ನ ನಿಲ್ಲಿಸುವವರಾರು ಸಖಿ 
ಕೊನೆಯ ದ್ವಿಪದಿಯಲ್ಲಿ ಅವಳು ಸಂಪೂರ್ಣವಾಗಿ ಸೋತು ಹೋಗುವುದು ಅವಳಿಗೇ ಅರಿವಾಗುತ್ತಾ ಹೋಗುತ್ತದೆ. ಇದೇ ಸುಖವೆಂದು ತಿಳಿದು ಇಲ್ಲಿಯೇ ಒದ್ದಾಡುತ್ತಾ ಇರಲೇ  ಅಥವಾ ನನ್ನ  ಜೀವವನ್ನು ಕಳೆದುಕೊಳ್ಳಲೇ ಎನ್ನುವ ಆರ್ತನಾದ ಎಂಥವರನ್ನೂ ಅಧೀರರನ್ನಾಗಿ ಮಾಡುತ್ತದೆ. ತನ್ನನ್ನು ಉಳಿಸಿಕೊಳ್ಳಲು ಯಾರಾದ್ರೂ ಬರುತ್ತಾರೆಯೇ ಎನ್ನುವ ಗಾಢಚಿಂತೆ ಅವಳಿಗೆ. ನನ್ನವರು ಎನ್ನುವವರು ಇದ್ದಾರೆಯೇ ಈ ಜಗದಲ್ಲಿ ನೀನಾದರೂ ಹೇಳು ಎನ್ನುವುದು ಅವಳ ಮನ ಮತ್ತೆ  ಮತ್ತೆ ಪ್ರಶ್ನಿಸುತ್ತದೆ.
ಒಟ್ಟಾರೆ ಅವಳು ಕಾಯುತ್ತಿದ್ದಾಳೆ, ಯಾರೋ ಬಂದು  ಅವಳನ್ನು ಒಂದಿಲ್ಲ ಒಂದು ದಿನ ಉದ್ಧಾರ ಮಾಡುತ್ತಾರೆ. ಅವಳನ್ನು ಎತ್ತಿ  ಹಿಡಿಯುತ್ತಾರೆ. ಸಮಾಜದಲ್ಲಿ ಅವಳಿಗೆ ಸಮ್ಮಾನ-ಗೌರವ ದೊರಕಿಸುತ್ತಾರೆ. ಇವಳ ಎಲ್ಲ ಮಾತುಗಳಿಗೆ ಕಿವಿಯಾಗುತ್ತಾರೆ. ಇವಳ  ಭಾವನೆಗಳಿಗೆ ಧ್ವನಿಯಾಗುತ್ತಾರೆ. ಇವಳ ಜೀವನಕ್ಕೆ  ಚೇತನವನ್ನು ತುಂಬುತ್ತಾರೆ. ಇವಳ ಪ್ರತಿಯೊಂದು ಹೆಜ್ಜೆಗೆ ಹೆಜ್ಜೆ ಕೂಡಿಸುತ್ತಾರೆ. ಪ್ರತಿಯೊಂದು ಕ್ಷಣವನ್ನು ಕಲ್ಪನಾತೀತವಾಗಿ
ಹೊರಹೊಮ್ಮಿಸುತ್ತಾರೆ. ಜೀವಕ್ಕೆ ಜೀವಕೊಡುವ ಮಾನವೀಯ ಮೌಲ್ಯಗಳಿರುವ ಭಕ್ತಿರಸಚೇತನಕ್ಕೆ, ಅಗಾಧವಾದ ಹೊಳಹುಳ್ಳ, ಭರವಸೆಯ ಬೆಳಕಿಗಾಗಿ ಅನವರತ ಕಾಯುವ ಉಮೇದಿ ಇಟ್ಟು
ಕೊಂಡಿದ್ದಾಳೆ.
ಇಲ್ಲಿ ಸೂಕ್ಷ್ಮತೆಯಿಂದ ನೋಡಿದರೆ ಎಂಥ ಕಠಿಣ ಪರಿಸ್ಥಿತಿಯಲ್ಲಿಯೂ ಅವಳು ಯಾರಿಗಾಗಿಯೋ ಕಾಯುವ ನಿಟ್ಟಿನಲ್ಲಿದ್ದಾಳೆ. ಯಾರು ನನ್ನ ಉದ್ಧರಿಸುವವರು, ಎತ್ತಿ ನಿಲ್ಲಿಸುವವರು, ಆಗಸದಲ್ಲಿ ಪಕ್ಷಿಯಂತೆ ಸ್ವತಂತ್ರವಾಗಿ ಹಾರಿಬಿಡುವವರು ಎನ್ನುವ ಕ್ಷಣ ಕ್ಷಣದ ಆತುರತೆ ಗಜಲ್ ತುಂಬಾ ಹಾಸು ಹೊಕ್ಕಾಗಿದೆ. ನಿರಾಸೆಯಲ್ಲಿಯೂ ಆಶಾಭಾವನೆ
ಹುಡುಕುವ ಅವಳಿಗೆ ಸಾಯುವ ಮನಸ್ಸಿಲ್ಲ. ನನ್ನ ಉಳಿಸಲು  ಯಾರಾದ್ರೂ ಬರಲಿ ಎನ್ನುವ ಹಂಬಲ.
ನನ್ನ ಗಜಲ್ ಕಥನ ಒಂದಿಷ್ಟು ಹೆಣ್ಣುಮಕ್ಕಳ ಒಳಗಣ ಧ್ವನಿಯಾಗಿದೆ ಎನ್ನುವುದರಲ್ಲಿ  ಎರಡು ಮಾತಿಲ್ಲ.
ಸುಧಾ  ಪಾಟೀಲ್
ಬೆಳಗಾವಿ
- Advertisement -
- Advertisement -

Latest News

ಸುಯೇಜ್ ಕಾಲುವೆ ಕುರಿತ ವಿಷಯ ಮಂಡನೆಯಲ್ಲಿ ತೇಜಸ್ವಿನಿ ದ್ವಿತೀಯ ಸ್ಥಾನ

ಇತ್ತೀಚೆಗೆ ಹರಿಯಾಣಾದಲ್ಲಿ ಸುಯೇಜ ಕಾಲುವೆ ಸಂಪರ್ಕ ಕಲ್ಪಿಸುವ ದೇಶಗಳಲ್ಲಿ ರಸ್ತೆ ಮೂಲಕ ವ್ಯಾಪಾರ ವಹಿವಾಟು ನಡೆಸಿದರೆ ಆಗುವ ಅನುಕೂಲ ಹಾಗೂ ಅನಾನುಕೂಲ ವಿಷಯ ಕುರಿತು ವಿಷಯ...
- Advertisement -

More Articles Like This

- Advertisement -
close
error: Content is protected !!
Join WhatsApp Group