ಸತ್ಯ ಸೆರೆಯಾಗಿದೆ
ಸತ್ಯ ಸೆರೆಯಾಗಿದೆ ಇಂದು ನರಳುತಿದೆ ನೊಂದು
ಸುಳೆಂಬ ಮುಳ್ಳು ಕಂಟಿಯಾ ಬೇಲಿಯೊಳು
ಸತ್ಯ ನಲುಗುತಿದೆ ಬೆಂದು ಹೆದರೆನೆನುತಲೇ
ಮೋಸದ ಸರಳುಗಳ ಬಲೆಯ ಬಿಲದೊಳು //
ನೋಟಿನಾ ಕಂತೆ ಕಂತೆಯೊಳು
ಅಧಿಕಾರ ಅಂತಸ್ತಿನ ಸುಳಿಯೊಳಗೆ
ಅಳಲಾರದೆ ನಗಲಾರದೆ ಮುಖ ತೋರಲಾಗದೆ
ಹೆಡೆಮುರಿ ಕಟ್ಟಿಸಿಕೊಂಡು ರಟ್ಟೆ ಮುರಿಸಿಕೊಂಡು
ಸೆರೆಯಾಗಿದೆ ಸತ್ಯ ಸೆರೆಯಾಗಿದೆ ಮಿಸುಕಾಡದೆ //
ಅಬ್ಬರದ ಮಾತಿನೊಳು ಬೊಬ್ಬಿಡುವ ಸುಳ್ಳಿನೊಳು
ವ್ಯಾಪಾರದ ರಂಪ ರಟ್ಟು ರಾಡಿಯೊಳು
ಅಸತ್ಯದ ಗೊಬ್ಬರ ತುಂಬಿದ ಆಡಿಯೊಳು
ಚಿಗುರಲಾರದೆ ಮೊಳೆಯಲಾರದೆ
ಮಣ್ಣು ಗೊಬ್ಬರ ಮೀಟಿ ಏಳುವ ಪ್ರಯತ್ನದಲ್ಲಿ
ಸತ್ಯ ಸೆರೆಯಾಗಿದೆ ಸತ್ಯ ಸೆರೆಯಾಗಿದೆ
ಅಲುಗಾಡದೆ ಮಿಡುಕಾಡದೇ//
ಮೋಸ ವಂಚನೆಯ ಸಂಚಲಿ
ಭ್ರಷ್ಟಾಚಾರದ ಭೂತ ಪ್ರೇತಗಳ ಕುಣಿತದಲಿ
ಲಂಚಕೋರ ಲಪಂಗರ ಕಿಸೆ ನಿಶೆಯೊಳಗೆ
ಅತ್ಯಾಚಾರದ ಕಾಲ್ತುಳಿತದ ನೋವಿನಾ
ಹೆಜ್ಜೆ ಗೆಜ್ಜೆ ಸಪ್ಪಳದ ಮಂಪರಿನಲ್ಲಿ
ಸತ್ಯ ಸೆರೆಯಾಗಿದೆ ಹೆಣ್ಣಿನ ಎದೆಯೊಳಗೆ//
ಗೆಲುವಿನ ನಾಗಾಲೋಟ ಅಟ್ಟಹಾಸ
ಅಧಿಕಾರ ಅಂತಸ್ತು ಸಿರಿವಂತಿಕೆಯ ಭ್ರಮೆ
ಸೊಕ್ಕು ಮದ ದಿಮಾಕಿನ ಅಮಲೊಳಗೆ
ಅಹವಾಲುಗಳ ಉರಿ ಸವಾಲುಗಳ ಜ್ವಾಲೆ
ಬದುಕು ಬಂಡಿಯ ಕೀಲಿಲ್ಲದ ಗಾಲಿಯ ಅಡಿಯೊಳು
ಪುಡಿಯಾಗದೆ ಹುಡಿಗೆ ಕಣ್ಮುಚ್ಚುತ
ಬೆಳಕಾಗದ ದಿನಗಳ ಹಿಂಸೆಯಲಿ
ಸತ್ಯವೆಂಬ ಕಳಸ ಮಿಂಚಲಾರದೆ
ಸೆರೆಯಾಗಿದೆ ಸತ್ಯ ಸುಳ್ಳಿನಾ ಕತ್ತಲೆಯೊಳು//
ಡಾ ಅನ್ನಪೂರ್ಣ ಹಿರೇಮಠ