ಮೂಡಲಗಿ – ಬೆಳಗಾವಿ ಜಿಲ್ಲೆಯ ನಯಾಗರ ಫಾಲ್ಸ್ ಎಂದು ಕರೆಯಲ್ಪಡುವ ಗೋಕಾಕ ಫಾಲ್ಸ್ ಸುತ್ತಲ ಪ್ರದೇಶ ಕೊಳಚೆ ಪ್ರದೇಶದಂತೆ ಮಾರ್ಪಾಡಾಗಿದ್ದು ಇಲ್ಲಿಗೆ ಭೇಟಿ ಕೊಟ್ಟಿರುವ ಮಹಾಂತೇಶ ಕರ್ಜಗಿಮಠ ಎನ್ನುವವರು ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ತಮ್ಮ ವಿಷಾದ ಹೊರ ಹಾಕಿದ್ದಾರೆ.
ಸುಂದರ ಪ್ರದೇಶವಾಗಿ ಮಿಂಚಬೇಕಾಗಿದ್ದ ಗೋಕಾಕ ಜಲಪಾತದ ಪ್ರದೇಶ ಪ್ಲಾಸ್ಟಿಕ್ ಬಾಟಲಿ, ಐಸ್ ಕ್ರೀಮ್ ಕಡ್ಡಿಗಳು, ಕಾಗದ ಮುಂತಾದ ಕಸದಿಂದ ತುಂಬಿ ಗಬ್ಬುನಾರುತ್ತಿದ್ದು ಗೋಕಾಕ ತಾಲೂಕಾಡಳಿತದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಗೋಕಾಕದ ಅತ್ಯಂತ ಆಕರ್ಷಕ ಪ್ರವಾಸಿ ತಾಣವಾಗಿರುವ ಈ ಜಲಪಾತದ ಸುತ್ತ ನಿಂತ ನೀರಿನಲ್ಲಿ ಕೊಳಚೆ ತುಂಬಿಕೊಂಡು ಗಬ್ಬು ನಾರುತ್ತಿದೆ. ಇದನ್ನೇ ಆ ಪ್ರವಾಸಿಗರು ವಿಡಿಯೋ ಮಾಡಿದ್ದು ಇದೇನು ಪ್ರೇಕ್ಷಣೀಯ ಸ್ಥಳವೋ ಅಲ್ಲವೋ ಎಂಬ ಸಂದೇಹ ಬರುತ್ತಿದೆ ಎನ್ನುತ್ತಾರೆ.
ನಾವು ಸ್ವಚ್ಛ ಭಾರತ ಅಭಿಯಾನ ಮಾಡುತ್ತೇವೆ. ನಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ನಮ್ಮ ಪ್ರವಾಸಿ ತಾಣಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮ ಕರ್ತವ್ಯ. ಇಲ್ಲಿಗೆ ವಿದೇಶಿಯರೂ ಭೇಟಿ ಕೊಡುತ್ತಾರೆ ಇದನ್ನೆಲ್ಲ ನೋಡಿದಾಗ ಅವರು ನಮ್ಮ ಊರಿನ ಬಗ್ಗೆ ಏನು ಅಂದುಕೊಳ್ಳಬಹುದು. ಅದಕ್ಕಾಗಿ ಇವತ್ತಿನಿಂದ ನಾವೆಲ್ಲ ಪ್ರತಿಜ್ಞೆ ಮಾಡೋಣ ನಮ್ಮ ಮನೆಯ ಜೊತೆಗೆ ನಮ್ಮ ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಡುವ ಪ್ರತಿಜ್ಞೆ ಮಾಡೋಣ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಇದನ್ನು ಸ್ವಚ್ಛಗೊಳಿಸಬೇಕು ಎಂದು ಕರಜಗಿಮಠ ಅವರು ಆಗ್ರಹಿಸಿದ್ದಾರೆ.
ಈಗ ಬೇಸಗೆ ನದಿಯಲ್ಲಿ ನೀರು ಕಡಿಮೆ ಇರುವುದರಿಂದ ಗೋಕಾಕ ಜಲಪಾತದ ಸುತ್ತಮುತ್ತಲೂ ಸ್ವಚ್ಛ ಮಾಡಲು ಅನುಕೂಲಕರ ವಾತಾವರಣ ಇರುತ್ತದೆ. ಸದ್ಯದಲ್ಲಿಯೇ ಮಳೆಗಾಲ ಆರಂಭಗೊಂಡು ಜಲಪಾತದ ಸೌಂದರ್ಯ ಮರುಕಳಿಸಿ ಪ್ರವಾಸಿಗರನ್ನು ಆಕರ್ಷಿಸುವಷ್ಟರಲ್ಲಿ ಈ ಪರಿಸರ ಸ್ವಚ್ಛವಾಗಬೇಕೆನ್ನುವುದು ಸರ್ವರ ಆಶಯವಾಗಿದೆ. ತಾಲೂಕಾಡಳಿತ ಇದಕ್ಕೆ ಯಾವ ರೀತಿ ಸ್ಪಂದಿಸುತ್ತದೆಯೋ ನೋಡಬೇಕು.
ವರದಿ : ಉಮೇಶ ಬೆಳಕೂಡ, ಮೂಡಲಗಿ