ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡಿನ ಪುಷ್ಪಗಿರಿ ಮಠದ ಸಭಾಭವನದಲ್ಲಿ ದಿನಾಂಕ 3 ಸೆಪ್ಟಂಬರ್ 2023ರಂದು ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ಧ್ಯೇಯೋದ್ದೇಶಗಳ ತಿದ್ದುಪಡಿಗೆ ಕರ್ನಾಟಕ ಸರ್ಕಾರದ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು ತಿದ್ದುಪಡಿಯು ಕಾನೂನು ಬದ್ದವಾಗಿದೆ ಎಂದು ಕೂಲಂಕುಶವಾಗಿ ಪರಿಶೀಲಿಸಿ ಒಪ್ಪಿಗೆಯನ್ನು ನೀಡಿರುತ್ತಾರೆ, ಇದು ಕನ್ನಡ ಸಾಹಿತ್ಯ ಪರಿಷತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ನೆರವಾಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿಸುವ ನಿಟ್ಟಿನಲ್ಲಿ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಪಟ್ಟಂತೆ ಪ್ರಸ್ತುತ ಜಾರಿಯಲ್ಲಿರುವ, ಪರಿಷತ್ತಿನ ನಿಬಂಧನೆಗಳಲ್ಲಿ ಕೆಲವು ನಿಯಮಗಳಿಗೆ ತಿದ್ದುಪಡಿ ತರುವ ಅವಶ್ಯಕತೆ ಇರುವ ಬಗ್ಗೆ ದಿನಾಂಕ 22-06-2023 ರಂದು ತುಮಕೂರಿನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ಪರಿಣಿತ ಹಾಗೂ ಅನುಭವಿ ಸದಸ್ಯರನ್ನೊಳಗೊಂಡ ತಿದ್ದುಪಡಿ ಸಮಿತಿ ರಚಿಸಿ, ಮುಂದಿನ ಕ್ರಮಕೈಗೊಳ್ಳಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಕೈಗೊಳ್ಳಲಾಗಿತ್ತು. ಜೊತೆಗೆ ಈ ಬಗ್ಗೆ ಸಹಕಾರ ಸಂಘಗಳ ಉಪನಿಬಂಧಕರಿಗೂ ಸಹ ದಿನಾಂಕ 20-04-2023ರಂದು ಪತ್ರ ಬರೆದು ತಿಳಿಸಲಾಗಿತ್ತು ಎಂದು ಡಾ.ಮಹೇಶ ಜೋಶಿ ವಿವರಿಸಿದ್ದಾರೆ.
ನ್ಯಾಯಮೂರ್ತಿ ಅರಳಿ ನಾಗರಾಜ ಅವರ ಅಧ್ಯಕ್ಷತೆಯಲ್ಲಿ ನಿಬಂಧನೆ ತಿದ್ದುಪಡಿ ಸಲಹಾ ಸಮಿತಿಯನ್ನು ರಚಿಸಿಲಾಗಿತ್ತು. ಈ ಸಮಿತಿಯ ಸದಸ್ಯರಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ನಿವೃತ್ತರಾದ ಶಿವಲಿಂಗೇಗೌಡ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾಗಿ ನಿವೃತ್ತರಾದ ಅಶ್ವತ್ಥಯ್ಯ, ಹಿರಿಯ ವಕೀಲರು ಹಾಗೂ ಲೇಖಕರಾದ ಶ್ರೀಮತಿ ಪ್ರಭಾಮೂರ್ತಿ, ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಚ್.ಎಲ್. ಮಲ್ಲೇಶಗೌಡ, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ, ಕೇಂದ್ರ ಪರಿಷತ್ತಿನ ಪರಿಶಿಷ್ಟ ಜಾತಿ ಪ್ರತಿನಿಧಿಯಾದ ಎಲ್. ಕೃಷ್ಣಮೂರ್ತಿ ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿಯಾದ ಸುನಿಲ್ ಹೆಳವರ ಇವರು ಕಾರ್ಯನಿರ್ವಹಿಸಿರುತ್ತಾರೆ.
ಈ ಸಲಹಾ ಸಮಿತಿಯಲ್ಲಿ ಕಾನೂನು ತಜ್ಞರು, ನುರಿತ ಅನುಭವಿಗಳು, ಸಹಕಾರ ಇಲಾಖೆಯ ಪರಿಣಿತರು, ತಜ್ಞರು ಸೇರಿ, ಯಾವುದೇ ಲೋಪ-ದೋಷಗಳು ಇರದಹಾಗೆ ಹಾಗೂ ಕಾನೂನಾತ್ಮಕವಾಗಿ ಎಡರು ತೊಡರುಗಳು ಉಂಟಾಗದಹಾಗೆ ಈ ತಿದ್ದುಪಡಿಗಳನ್ನು ಸಿದ್ಧಪಡಿಸಿಕೊಟ್ಟಿರುತ್ತಾರೆ ಎಂದು ಜೋಶಿ ತಿಳಿಸಿದ್ದಾರೆ
ಪರಿಷತ್ತಿನ ನಿಬಂಧನೆ ಸಂಖ್ಯೆ 4, 5,6, 7,9,10,17,18,20,22,24.27, 32 ಮತ್ತು 33ಗಳನ್ನು ತಿದ್ದುಪಡಿ ಮಾಡಲಾಗಿದ್ದು. ಈ ಮೂಲಕ ಪರಿಷತ್ತು ಸಮಕಾಲೀನ ವಿದ್ಯಮಮಾನಗಳಿಗೆ ಸ್ಪಂದಿಸುವುದು ಸಾಧ್ಯವಾಗಲಿದೆ. ವಿದೇಶಗಳಲ್ಲಿರುವ ಕನ್ನಡ ಸಂಘಗಳ ಚಟುವಟಿಕೆಗಳನ್ನು ತನ್ನ ಕ್ರಿಯಾಶೀಲವ್ಯಾಪ್ತಿಗೆ ತರುವ ಉದ್ದೇಶದಿಂದ ಅವುಗಳನ್ನು ‘ಅಂಗಸಂಸ್ಥೆ’ ಗಳನ್ನಾಗಿ ಮಾಡಿ ಕೊಳ್ಳಲು ತಿದ್ದುಪಡಿಯು ಅನುವು ಮಾಡಿ ಕೊಡಲಿದೆ ಕನ್ನಡ ಸಾಹಿತ್ಯ ಪರಿಷತ್ತಿನ ವಿದೇಶಿ ಘಟಕಗಳನ್ನು ಸ್ಥಾಪಿಸುವದಕ್ಕಿಂತ ಇದು ಪರಿಣಾಮಕಾರಿಯಾಗಿದ್ದು ಈ ಸಂಘ ಸಂಸ್ಥೆಗಳು ವಿದೇಶಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದು ಪರಿಷತ್ತಿನ ಚಟುವಟಿಕೆಗಳನ್ನು ಸುಗಮವಾಗಿ ನಡೆಸಲು ಇದು ನೆರವು ನೀಡಲಿದೆ. ವಿಶ್ವಾದ್ಯಂತ ಕನ್ನಡ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪರಿಷತ್ತಿಗೆ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಈ ತಿದ್ದುಪಡಿಯನ್ನು ಮಾಡಲಾಗಿದೆ. ಉಳಿದ ತಿದ್ದುಪಡಿಗಳಲ್ಲಿ ಕೂಡ ಕೆಲವು ವಿದೇಶಿ ಘಟಕಗಳ ಕಾರ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ಎಂದು ಅವರು ವಿವರಿಸಿದ್ದಾರೆ.
ಈಗಾಗಲೇ ಮೆಲ್ಬೋರ್ನ ಕನ್ನಡ ಸಂಘ ಅಂಗ ಸಂಸ್ಥೆಯಾಗಿ ನೊಂದಾಯಿತವಾಗಿದ್ದು ವಿಶ್ವಾದ್ಯಂತ ಅನೇಕ ಕನ್ನಡ ಸಂಘಗಳು ಈ ನೊಂದಾವಣಿಗೆ ಮುಂದೆ ಬಂದಿವೆ ಎಂದು ಅವರು ವಿವರಗಳನ್ನು ನೀಡಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಪಟ್ಟ 33ವಿಧಿಯ ತಿದ್ದುಪಡಿಯು ಸಮ್ಮೇಳನ ಜರುಗಲಿರುವ ಜಿಲ್ಲೆಯ ಚುನಾಯಿತ ಅಧ್ಯಕ್ಷರ ಸ್ಥಾನ ಯಾವುದೇ ಕಾರಣದಿಂದ ತೆರವಾಗಿದ್ದಲ್ಲಿ ಅಥವಾ ಜಿಲ್ಲಾಧ್ಯಕ್ಷರು ಆರೋಗ್ಯದ ಸಮಸ್ಯೆಯೂ ಸೇರಿದಂತೆ ಯಾವುದೇ ಕಾರಣದಿಂದ ಸಕ್ರಿಯವಾಗಿ ಪಾಲ್ಗೊಳ್ಳಲು ಸಮರ್ಥರಲ್ಲದ ಪಕ್ಷದಲ್ಲಿ ಕೇಂದ್ರ ಪರಿಷತ್ತಿನ ಅಧ್ಯಕ್ಷರು ಸಮಿತಿಯನ್ನು ರಚಿಸಿ ಕ್ರಿಯಾಶೀಲರಾಗಲು ಅವಕಾಶ ನೀಡಲಿದೆ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಬದ್ದತೆಗೆ ನಿದರ್ಶನವಾಗಿದ್ದು ಎಂತಹ ಸಂದರ್ಭದಲ್ಲಿಯೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆಯಲು ನೆರವು ನೀಡುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ವಿವರಗಳನ್ನು ನೀಡಿದ್ದಾರೆ.
ಬಹಳ ಮುಖ್ಯವಾಗಿ ಚುನಾಯಿತ ಜಿಲ್ಲಾಧ್ಯಕ್ಷರು, ಗಡಿನಾಡು ಘಟಕದ ಅಧ್ಯಕ್ಷರು ಅಧಿಕಾರವಧಿಯಲ್ಲಿ ನಿಧನ ಹೊಂದಿದ ಸಂದರ್ಭದಲ್ಲಿ ಆ ಘಟಕದ ಕಾರ್ಯಚಟುವಟಿಕೆಗಳು ಕುಂಠಿತಗೊಳ್ಳದಂತೆ ಕೇಂದ್ರ ಪರಿಷತ್ತಿನ ಅಧ್ಯಕ್ಷರು ನಿರ್ಣಯ ಕೈಗೊಳ್ಳುವುದು ಈ ಹಿಂದಿನಿಂದಲೂ ಇದೆ. ಉದಾಹರಣೆಗೆ ಕೇರಳ ಗಡಿನಾಡು ಘಟಕದ ಹಾಲಿ ಅಧ್ಯಕ್ಷರಾದ ಸುಬ್ರಹ್ಮಣ್ಯ ವಿ. ಭಟ್ ಅವರು ಇತ್ತೀಚಿಗೆ ನಿಧನರಾದರು.
ಹಾಗಾಗಿ ಕೇರಳ ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಚಟುವಟಿಕೆಗಳ ನಿರ್ವಹಣೆಗಾಗಿ ಕೇಂದ್ರ ಪರಿಷತ್ತು ಸಮಿತಿಯೊಂದನ್ನು ರಚನೆ ಮಾಡಿ ಆಡಳಿತ ನಿರ್ವಹಣೆಯನ್ನು ಮಾಡುವುದು. ಅಂತೆಯೇ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದು, ಎದ್ದು ಓಡಾಡುವ ಸ್ಥಿತಿಯಲ್ಲಿ ಇರುವುದಿಲ್ಲ.
ಅವರು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಅಲ್ಲಿನ ಕಾರ್ಯಚಟುವಟಿಕೆಗಳು ಸ್ತಬ್ಧವಾಗಬಾರದು ಎನ್ನುವ ಉದ್ದೇಶದಿಂದ ಹಾಗೂ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಚರಿಸಲು ಸ್ಥಳ ನಿಗದಿಯಾಗಿರುವುದರಿಂದ ಸಮ್ಮೇಳನ ಸಂಘಟನೆಗೆ ಅನಿವಾರ್ಯತೆ ಇರುವ ಕಾರಣ, ಇವೆಲ್ಲವುಗಳನ್ನು ನಿರ್ವಹಿಸಲು ಅನುಕೂಲವಾಗುವಂತೆ ಮಂಡ್ಯ ಜಿಲ್ಲಾಧ್ಯಕ್ಷರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರು ರಚಿಸಿ ಕಾರ್ಯಪ್ರವೃತ್ತರಾಗಬೇಕಿದೆ. ಈ ಹಿನ್ನೆಲೆಯಲ್ಲಿ ನಿಬಂಧನೆಗಳಿಗೆ ತಿದ್ದುಪಡಿಯ ಮೂಲಕ ಸ್ಪಷ್ಟಪಡಿಸಲಾಗಿದೆ ಜೋಶಿಯವರು ತಿಳಿಸಿದ್ದಾರೆ.
ನಿಬಂಧನೆ 32ರ ತಿದ್ದುಪಡಿಯಲ್ಲಿ ಆಯಾ ಘಟಕದ ಅಧ್ಯಕ್ಷರು ತಮ್ಮ ಘಟಕದ ಕಾರ್ಯಕಾರಿ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರುಗಳ ಪಟ್ಟಿಯನ್ನು ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅನುಮೋದನೆಗೆ ಸಲ್ಲಿಸಲು ವಿಫಲರಾದ ಪಕ್ಷದಲ್ಲಿ ಕೇಂದ್ರ ಪರಿಷತ್ತಿನ ಅಧ್ಯಕ್ಷರೇ ಸ್ವಯಂ ನಿರ್ಣಯ ತೆಗೆದು ಕೊಂಡು ನಾಮ ನಿರ್ದೇಶನ ಮಾಡಲು ಅಧಿಕಾರ ನೀಡುತ್ತದೆ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತವನ್ನು ಪರಿಣಾಮಕಾರಿಯಾಗಿ ಮಾಡಲು ಅವಕಾಶ ನೀಡುತ್ತದೆ. ಇಂತಹ ಪ್ರಸಂಗಗಳು ಹಿಂದೆಯೂ ಜರುಗಿದೆ. ಇತ್ತೀಚಿನ ಉದಾಹರಣೆ ಎಂದರೆ ಬೆಂಗಳೂರು ನಗರ ಘಟಕದ ಅಧ್ಯಕ್ಷರು ತಮ್ಮ ವ್ಯಾಪ್ತಿಯ 28 ವಿಧಾನ ಸಭಾ ಕ್ಷೇತ್ರಗಳಲ್ಲಿ 11 ಕ್ಷೇತ್ರಗಳಿಗೆ ಎರಡು ವರ್ಷ ಕಳೆಯುತ್ತಾ ಬಂದರೂ ಅಧ್ಯಕ್ಷರುಗಳನ್ನು ನೇಮಿಸಿರುವುದಿಲ್ಲ ಇದು ಬೇರುಮಟ್ಟದ ಆಡಳಿತ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಇಂತಹ ಪ್ರಸಂಗಗಳನ್ನು ಗಮನದಲ್ಲಿರಿಸಿ ಎಲ್ಲಾ ಹಂತಗಳಲ್ಲಿಯೂ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಯಂತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಲು ಈ ತಿದ್ದುಪಡಿಯನ್ನು ತರಲಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಯನುಸಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಗಡಿನಾಡು ಘಟಕಗಳ ಅಧ್ಯಕ್ಷರುಗಳು ಚುನಾವಣೆ ಮೂಲಕ ಆಯ್ಕೆಯಾಗುತ್ತಾರೆ. ತಾಲ್ಲೂಕು ಘಟಕಗಳಿಗೆ ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಿಕೊಳ್ಳಲು ಆಯಾ ಜಿಲ್ಲಾ ಘಟಕದ ಅಧ್ಯಕ್ಷರು, ನಿಯಮಾನುಸಾರ ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅನುಮೋದನೆ ಪಡೆದುಕೊಳ್ಳಬೇಕಿದೆ.
ಹೊಸದಾಗಿ ನಾಮನಿರ್ದೇಶನ ಮಾಡಿಕೊಳ್ಳಲು ಹಾಗೂ ಬದಲಾವಣೆ ಮಾಡಿಕೊಳ್ಳಬೇಕಾದರೆ ಇದೇ ನಿಯಮ ಅನ್ವಯವಾಗುತ್ತದೆ. ಆದರೆ ಕೆಲವು ಘಟಕಗಳ ಜಿಲ್ಲಾಧ್ಯಕ್ಷರು ಈ ನಿಯಮವನ್ನು ಅನುಸರಿಸದೇ ಗೊಂದಲಗಳನ್ನುಂಟು ಮಾಡುತ್ತಿದ್ದಾರೆ. ಉದಾಹರಣೆಗೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಅಧ್ಯಕ್ಷರನ್ನು ಯಾವ ಸೂಚನೆಯನ್ನು ನೀಡದೇ, ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅನುಮೋದನೆಯನ್ನು ಪಡೆಯದೇ ಬದಲಾವಣೆ ಮಾಡಿರುತ್ತಾರೆ.
ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿ, ಕೇಂದ್ರ ಪರಿಷತ್ತಿನ ಅಧ್ಯಕ್ಷರ ಅನುಮೋದನೆ ಪಡೆಯದೇ ನಿಯಮಬಾಹಿರವಾಗಿ ತಾಲ್ಲೂಕು ಅಧ್ಯಕ್ಷರ ಬದಲಾವಣೆ ಮಾಡಿರುವುದನ್ನು ಮಾನ್ಯ ನ್ಯಾಯಾಲಯವು WP No. 103131/2023 ದಾವೆಯಲ್ಲಿ ತಡೆಯಾಜ್ಞೆ ನೀಡಿದೆ. ಇದಲ್ಲದೇ, ಕೆಲವು ಜಿಲ್ಲಾ ಘಟಕಗಳು ಇದುವರೆಗೂ ತನ್ನ ಕಾರ್ಯಕಾರಿ ಸಮಿತಿಯನ್ನು ಪೂರ್ಣವಾಗಿ ರಚನೆ ಮಾಡಿಕೊಂಡಿರುವುದಿಲ್ಲ. ಕೆಲವು ತಾಲ್ಲೂಕು ಅಧ್ಯಕ್ಷರನ್ನು ನಾಮನಿರ್ದೇಶನ ಮಾಡಿಕೊಳ್ಳದೇ ಇರುವುದರಿಂದಾಗಿ ಆ ತಾಲ್ಲೂಕು ಘಟಕಗಳಲ್ಲಿ ಪರಿಷತ್ತಿನ ಯಾವುದೇ ಕಾರ್ಯಚಟುವಟಿಕೆಗಳು ನಡೆದಿರುವುದಿಲ್ಲ. ಉದಾಹರಣೆಗೆ ಬೆಂಗಳೂರು ನಗರ ಜಿಲ್ಲಾ ಘಟಕದಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರ ಕ.ಸಾ.ಪ. ಘಟಕಗಳಿದ್ದು, ಇದುವರೆಗೆ ಕೇವಲ 11 ಘಟಕಗಳಿಗೆ ಮಾತ್ರ ಅಧ್ಯಕ್ಷರನ್ನು ನೇಮಿಸಿದ್ದು, ಉಳಿದ 17 ಕ್ಷೇತ್ರಗಳಲ್ಲಿ ತಾಲ್ಲೂಕು ಅಧ್ಯಕ್ಷರುಗಳು ನೇಮಕವಾಗದೇ ಪರಿಷತ್ತಿನ ಕಾರ್ಯಚಟುವಟಿಕೆಗಳು ನಿಷ್ಕ್ರಿಯಯವಾಗಿವೆ. ಅಂತಹ ಘಟಕಗಳ ಗೌರವಾನ್ವಿತ ಪರಿಷತ್ತಿನ ಸದಸ್ಯರುಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಕೇಂದ್ರ ಪರಿಷತ್ತಿಗೆ ಮನವಿ ಸಲ್ಲಿಸಿ, ಕೇಂದ್ರ ಪರಿಷತ್ತೇ ನೇತೃತ್ವ ವಹಿಸಿ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ನಡೆಸಿಕೊಡಬೇಕು ಎಂದು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ನಿರ್ಧಾರಕೈಗೊಂಡು, ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿತಾಸಕ್ತಿ ಮೇರೆಗೆ ಹಾಗೂ ಕ್ರಿಯಾಶೀಲ ಕಾರ್ಯಚಟುವಟಿಕೆಗಳನ್ನು ನಡೆಸುವ ಸದುದ್ದೇಶದಿಂದ ಕೇಂದ್ರ ಪರಿಷತ್ತಿನ ಅಧ್ಯಕ್ಷರೇ ಸ್ವಯಂ ನಿರ್ಣಯ ಕೈಗೊಂಡು, ಅಂತಹ ಘಟಕದ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಮೂಲಕ ಕಾರ್ಯಕಾರಿ ಸಮಿತಿಯನ್ನು ಪೂರ್ಣಗೊಳಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಿಬಂಧನೆಗಳಲ್ಲಿ ತಿದ್ದುಪಡಿಯನ್ನು ತರಲಾಗಿದೆ.
ಕನ್ನಡ-ಕನ್ನಡಿಗ-ಕರ್ನಾಟಕದ ಏಳ್ಗೆಯ ಕುರಿತು ಕಟಿಬದ್ದವಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಲ್ಲಿ ಕೂಡ ನಂಬಿಕೆಯನ್ನಿಟ್ಟಿದೆ. ಈ ಎಲ್ಲಾ ತಿದ್ದುಪಡಿಗಳು ಪಾರದರ್ಶಕತೆ ಮತ್ತು ವಿಕೇಂದ್ರೀಕರಣದ ಸೂತ್ರಕ್ಕೆ ಅನುಗುಣವಾಗಿಯೇ ನಡೆದಿದ್ದು ಈ ಮೂಲಕ ಕನ್ನಡ ಸಾಹಿತ್ಯ ಪರಿಷತ್ತು ಜನ ಸಾಮಾನ್ಯರ ಪರಿಷತ್ತಾಗುವ ಉದ್ದೇಶದೆಡೆಗೆ ಧೃಡವಾಗಿ ಸಾಗಲು ನೆರವು ನೀಡುತ್ತದೆ ಎಂದು ನಾಡೋಜ ಡಾ.ಮಹೇಶ ಜೋಶಿಯವರು ತಿಳಿಸಿದ್ದಾರೆ.
ಶ್ರೀನಾಥ್ ಜೆ.
ಮಾಧ್ಯಮ ಸಲಹೆಗಾರರು
ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು.