spot_img
spot_img

ಹಲ್ಲಿ ಹಬ್ಬ

Must Read

- Advertisement -

ಇದೇನು, ಹಲ್ಲಿಗೂ ಹಬ್ಬ ಮಾಡ್ತಾರಾ ಅಂತ ಯೋಚನೆ ಮಾಡ್ತಾ ಇದ್ದೀರಾ ?

ಸ್ವಲ್ಪ ವಿಚಿತ್ರ ಅಂತ ಅನಿಸಬಹುದು ಅಲ್ವಾ ?
ಹಾಗಾದರೆ ಬನ್ನಿ ನೋಡೋಣ ಏನಿದು ಅಂತ…..

ಹಿನ್ನೆಲೆ ::
ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ ಇದು ಜೈನಮಂದಿರವಾಗಿದ್ದಿರಬಹುದೆಂದು ಊಹಿಸಲಾಗಿದೆ. ಮೊದಲಿಗೆ ಹುಂಚದವರ, ಅನಂತರ ಭೈರರಸರ, ಅನಂತರ ಐಗೂರು ನಾಯಕರ ಆಳ್ವಿಕೆಗೆ ಇದು ಒಳಪಟ್ಟಿತು. ನದೀದಂಡೆಯಲ್ಲಿರುವ ದೊಡ್ಡ ಕಲ್ಲುಬಂಡೆಯೊಂದರ ಮೇಲಿರುವ ಸಂಸ್ಕೃತ ಶಾಸನವೊಂದು ಅದನ್ನು ಶ್ರೀಮಧ್ವಾಚಾರ್ಯರು ಒಂದು ಕೈಯಲ್ಲಿ ಎತ್ತಿ ಅಲ್ಲಿ ತಂದಿಟ್ಟುದಾಗಿ ತಿಳಿಸುತ್ತದೆ

- Advertisement -

ಸ್ಥಳೀಯ ಪುರಾಣಗಳ ಪ್ರಕಾರ ಸ್ಕಂದ ಪುರಾಣದ ಘಟನೆಯೊಂದನ್ನು ಕಳಸದ ಹುಟ್ಟಿಗೆ ಆಧಾರವಾಗಿ ನೀಡಲಾಗುತ್ತದೆ. ಅದರಂತೆ, ಶಿವ ಮತ್ತು ಪಾರ್ವತಿಯರ ಕಲ್ಯಾಣ ಸಮಯದಲ್ಲಿ ದೇವಾಧಿ ದೇವತೆಗಳು ಅದಕ್ಕೆ ಸಾಕ್ಷಿಯಾಗಲು ಹಿಮಾಲಯದಲ್ಲಿ ಸೇರುತ್ತಾರೆ. ಅದರಿಂದಾಗಿ ಭೂಮಿಯ ಸಮತೋಲನವು ತಪ್ಪಲು, ಆ ಭಾರವನ್ನು ಸರಿದೂಗಿಸಲು ಋಷಿವರೇಣ್ಯರಾದ ಅಗಸ್ತ್ಯರನ್ನು ಕೇಳಿಕೊಳ್ಳಲಾಗುತ್ತದೆ. ಆದರೆ ಅವರೂ ಕಲ್ಯಾಣಕ್ಕೆ ಸಾಕ್ಷಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಪರಶಿವನು ಅಗಸ್ತ್ಯರಿಗೆ ದಿವ್ಯದೃಷ್ಟಿ ನೀಡಿ ಅವರನ್ನು ದಕ್ಷಿಣಕ್ಕೆ ಕಳಿಸುತ್ತಾನೆ. ಆಗ ಅಗಸ್ತ್ಯರು ಬಂದು ನೆಲೆ ನಿಂತ ಕ್ಷೇತ್ರವು ಕಳಸ ಎಂದು ನಂಬಲಾಗುತ್ತದೆ. ಜೊತೆಗೆ ಕಾಶಿ(ವಾರಣಾಸಿ)ಗಿಂತ ಹೆಚ್ಚಿನ ಪುಣ್ಯವನ್ನು ಕಳಸವನ್ನು ದರ್ಶಿಸಿದಾಗ ಸಿಗುತ್ತದೆ ಎಂಬ ನಂಬಿಕೆಯೂ ಇದೆ.

ಶಿವ ಪಾರ್ವತಿಯರ ಕಲ್ಯಾಣವನ್ನು ಪ್ರತೀ ವರ್ಷವೂ ಗಿರಿಜಾ ಕಲ್ಯಾಣವೆಂದು ಕಳಸದಲ್ಲಿ ಆಚರಿಸಲಾಗುತ್ತದೆ. ಕಾರ್ತಿಕ ಶುದ್ಧ ಏಕಾದಶಿಯಂದು ಅಹೋರಾತ್ರಿ ಈ ಮಹೋತ್ಸವವನ್ನು ವೈಭವಯುತವಾಗಿ ಆಚರಿಸಲಾಗುತ್ತದೆ. ಇನ್ನೊಂದು ಕತೆಯ ಪ್ರಕಾರ ಮಹರ್ಷಿ ವಸಿಷ್ಠರ ಆಶ್ರಮವು ಕಳಸದ ಸಮೀಪದಲ್ಲಿ ಇದ್ದಿತೆಂದು ಹೇಳಲಾಗುತ್ತದೆ.

ಹಲ್ಲಿ ಹಬ್ಬ 

- Advertisement -

ದಕ್ಷಿಣ ಕಾಶಿ ಹಾಗೂ ಅಗಸ್ತ್ಯ ಕ್ಷೇತ್ರ ಎಂದೇ ಹೆಸರಾದ ಚಿಕ್ಕಮಗಳೂರು ಜಿಲ್ಲೆಯ ಕಳಸ ಕ್ಷೇತ್ರದಲ್ಲಿ ಶ್ರೀ ಕಳಸೇಶ್ವರ ಸ್ವಾಮಿಗೆ ವಿಶೇಷವಾಗಿ ಆಚರಣೆ ಮಾಡುವ ಹಬ್ಬವೇ ಹಲ್ಲಿ ಹಬ್ಬ.

ಪುರಾಣಗಳ ಪ್ರಕಾರ ಕಳಸದ ಕ್ಷೇತ್ರ ದೇವರಾದ ಶ್ರೀಕಳಸೇಶ್ವರ ಸ್ವಾಮಿಯ ಮೇಲೆ ಹಲ್ಲಿ ಬಿದ್ದ ನಿಮಿತ್ತ ಆಚರಿಸುವ ಈ ಹಬ್ಬವನ್ನು ಸುಗ್ಗಿ ಕುಣಿತ ಎಂದೂ ಸಹ ಕರೆಯಲಾಗುತ್ತದೆ. ನಮ್ಮ ಮೇಲೆ ಹಲ್ಲಿ ಬಿದ್ದಾಗ ನಾವು ಹೇಗೆ ಸ್ನಾನ ಮಾಡಿ ಶುದ್ಧೀಕರಣ ಮಾಡಿಕೊಳ್ಳುವೆವೋ, ಹಾಗೆಯೇ ಶ್ರೀ ಕಳಸೇಶ್ವರ ಸ್ವಾಮಿಯನ್ನೂ ಶುದ್ಧೀಕರಣ ಮಾಡುವ ಕಾರ್ಯದಲ್ಲಿ ಕಳಸ ಹಾಗೂ ಅಲ್ಲಿಯ ಸುತ್ತಮುತ್ತಲಿನ 6 ಕೂಡಿಗೆಯವರು ಇದರಲ್ಲಿ ಪಾಲ್ಗೊಳ್ಳುವರು. ದೇವಸ್ಥಾನದ ಬಿಟ್ಟಿಯವರು ಜಾತ್ರೆ ರಥ ತಯಾರಿ, ವಠಾರ ಶುದ್ಧಿ ಸೇರಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳ ತಯಾರಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ಉಪ್ಪಿನ ಸಂಭಾವನೆ ಪಡೆದು ಸಲ್ಲಿಸುವುದು ಇದರ ವಿಶೇಷ. ಇದೇ ಕಾರಣಕ್ಕೆ ಇವರನ್ನು ಬಿಟ್ಟಿಯವರು ಎಂದೇ ಕರೆಯಲಾಗುತ್ತದೆ.

ಎಲ್ಲ ವಿಶೇಷ ಕಾರ್ಯಕ್ರಮಗಳಿಗೂ ಭಕ್ತಿಯಿಂದ ಹೊರೆ ಕಾಣಿಕೆ ಸಲ್ಲಿಸಲಾಗುತ್ತದೆ. ಚೈತ್ರ ಶುದ್ಧ ಅಷ್ಟಮಿಯಿಂದ ಹುಣ್ಣಿಮೆವರೆಗೆ ನಡೆಯುವ ಹಲ್ಲಿ ಹಬ್ಬದಲ್ಲಿ ಜೀವನ ಕೂಡಿಗೆ, ದಾನ ಕೂಡಿಗೆ ಹಾಗೂ ಮುಂಡಾನೆ ಕೂಡಿಗೆಯ ನೂರಾರು ಜನರು ಸಂಭ್ರಮದಿಂದ ಪಾಲ್ಗೊಳ್ಳುವರು.

ಅಷ್ಟಮಿಯಂದು ಶ್ರೀಕಳಸೇಶ್ವರಸ್ವಾಮಿ ದೇವಾಲಯದಿಂದ ಮೂರು ಕೂಡಿಗೆಗಳ ಯಜಮಾನ, ಬುದ್ಧಿವಂತರು ಡೋಲು, ಜಾಗಟೆ ಹಿಡಿದು ಭಸ್ಮ, ಜೇಡಿಮಣ್ಣು ಬಳಿದುಕೊಂಡು ಊರಿನ ಪ್ರಮುಖರು, ತಂತ್ರಿಗಳ ಮನೆಗಳಲ್ಲಿ ನೃತ್ಯ ಪ್ರದರ್ಶಿಸುವರು. ಸುಗ್ಗಿ ಕುಣಿತದ ತಿರುಗಾಟದಿಂದ ಭತ್ತ, ಅಕ್ಕಿ, ದವಸಧಾನ್ಯ, ತರಕಾರಿಗಳನ್ನು ಸಂಗ್ರಹಿಸಲಾಗುತ್ತದೆ.

ಹುಣ್ಣಿಮೆ ಹಿಂದಿನ ದಿನ ಹೆಂಡ ತಯಾರಿಸಲು ದೇವಸ್ಥಾನದಿಂದಲೇ ಅಕ್ಕಿಯನ್ನು ಪಡಿಯಾಗಿ ಪಡೆಯಲಾಗುತ್ತದೆ. ಹುಣ್ಣಿಮೆಯಿಂದ ಮತ್ತೆ ಮೂರು ಕೂಡಿಗೆಗಳ ನೂರಾರು ಗಿರಿಜನ ದೇವಸ್ಥಾನಕ್ಕೆ ಬಂದು ಸೋಗೆ ಕುದುರೆ ಮಾಡಿ ದೇವರ ಎದುರಿನಲ್ಲೇ ಸಾಂಕೇತಿಕ ಬಲಿ ನೀಡುತ್ತಾರೆ. ಹುಣ್ಣಿಮೆ ರಾತ್ರಿಪೂರ್ತಿ ಈ ಸಂಪ್ರದಾಯ ನಡೆಯುತ್ತದೆ.

ಕಳಸೇಶ್ವರಸ್ವಾಮಿಗೆ ರುದ್ರತೀರ್ಥದಲ್ಲಿ ಅಭ್ಯಂಜನ ಸ್ನಾನ, ರಾಮದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಕೂಡಿಗೆಯವರು ಅಂಬಾತೀರ್ಥದಲ್ಲಿ ಸ್ನಾನ ಮಾಡಿ ಹಲ್ಲಿಹಬ್ಬವನ್ನು ಮುಕ್ತಾಯಗೊಳಿಸುತ್ತಾರೆ. ಕಳಸದ ಗಿರಿಜನರಲ್ಲಿ ಮಾತ್ರ ಕಾಣುವ ಈ ಸಂಪ್ರದಾಯ ಭಕ್ತಿ, ಶ್ರದ್ಧೆ ಹಾಗೂ ಮಲೆನಾಡ ಸಂಸ್ಕೃತಿಯ ಪ್ರತೀಕದಂತೆ ಕಂಡುಬರುತ್ತದೆ.

(ಮಾಹಿತಿ : ಶ್ರೀಮತಿ ರೇವತಿ ಮೇಡಂ. ಹಾಗೂ ಸ್ಥಳೀಯರು. ಕಳಸ)

ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group