spot_img
spot_img

ಸಂತೋಷ ವಿಧಿಲಿಖಿತವಲ್ಲ ಅದನ್ನು ನಾವಾಗಿಯೇ ಪಡೆಯಬೇಕು

Must Read

- Advertisement -

ಖುಷಿ ಯಾರಿಗೆ ಬೇಡ ಹೇಳಿ? ಪ್ರತಿ ದಿನ ಪ್ರತಿ ಕ್ಷಣ ನಾವೆಲ್ಲ ಬೆನ್ನು ಹತ್ತಿರುವುದು ಖುಷಿಯ ಹಿಂದೆ. ಅಂದ ಹಾಗೆ ಖುಷಿ ಎಂದರೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ಅದೊಂದು ಕೃತಜ್ಞತೆಯ ಭಾವನಾತ್ಮಕ ಸ್ಥಿತಿ ಎಂದು ತಿಳಿದು ಬರುತ್ತದೆ. ಖುಷಿ ಒಂದೇ ತೆರನಾಗಿ ಇರುವುದಿಲ್ಲ.

ಒಬ್ಬರಿಗೆ ಖುಷಿ ನೀಡಿದ ಸಂಗತಿ ಇನ್ನೊಬ್ಬರಿಗೆ ಬೇಸರ ಹುಟ್ಟಿಸಬಹುದು. ಕೋಪದಿಂದ ಉರಿಯುವ ವ್ಯಕ್ತಿಯನ್ನು ಹೇಗೆ ಗುರುತಿಸಬಹುದೋ ಹಾಗೆಯೇ ಖುಷಿಯಲ್ಲಿರುವ ವ್ಯಕ್ತಿಯನ್ನು ಗುರುತಿಸುವುದೂ ಅತಿ ಸರಳ. ನಾವು ನಿರೀಕ್ಷಿಸಿದ್ದು ನಿರೀಕ್ಷಿಸಿದ ಹಾಗೆಯೇ ನಡೆದರೆ ನಮಗೆಲ್ಲ ಖುಷಿಯೋ ಖುಷಿ. ಕೆಲವೊಮ್ಮೆ ಅನಿರೀಕ್ಷಿತವಾಗಿ ಭೇಟಿ ಕೊಟ್ಟ ಖುಷಿ ನಮ್ಮನ್ನು ಆಕಾಶದಲ್ಲಿ ತೇಲುವ ಹಕ್ಕಿಯನ್ನಾಗಿಸುತ್ತದೆ.

ದೊಡ್ಡ ಕಟ್ಟಡ ಕಟ್ಟಿದರೂ ಚೀಪುಗಲ್ಲು ಬೇಕು ಎಂಬ ಗಾದೆ ಮಾತಿನಂತೆ, ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿರುವ ಬಹುತೇಕ ಜನರಲ್ಲಿ ಗರಿಗೆದರಿ ಮತ್ತೆ ಹಾರುವಂತೆ ಮಾಡುವುದು ಚಿಕ್ಕ ಪುಟ್ಟ ಸಂತಸಗಳೇ ಎನ್ನುವದು ಗಮನಾರ್ಹ.ನಮ್ಮ ಖುಷಿಗಾಗಿ ಇತರರನ್ನು ‘ಅವಲಂಬಿಸದೇ ಇರುವುದು ಮನುಷ್ಯನ ಸುಖದ ಲಕ್ಷಣ.’ ಎಂದಿದ್ದಾರೆ ಕವಿ ರವೀಂದ್ರರು.ಇದನ್ನೇ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಹೇಳಬೇಕೆಂದರೆ,’ಸಂತುಷ್ಟನಾಗಲು ಹೊರಗಣ ಸಹಾಯವನ್ನು ಅಪೇಕ್ಷಿಸಬೇಡ. ಇತರರು ಕೊಡುವ ಶಾಂತಿಗಾಗಿ ಕಾಯಬೇಡ.’ ಸಿರಿವಂತಿಕೆಯ ಸುಪ್ಪತ್ತಿಗೆಯಲ್ಲಿ ಮೆರೆಯುವ ಜನರು ಖುಷಿಯ ಅಭಾವದಿಂದ ಬಳಲುತ್ತಿರುವುದನ್ನು ಕಾಣುತ್ತೇವೆ.

- Advertisement -

ಹಾಗೆಯೇ ಸಣ್ಣ ಗುಡಿಸಲಿನಲ್ಲಿರುವ ಹರಕು ಮೈ ಅಂಗಿಯ, ಹಸಿದ ಹೊಟ್ಟೆಗಳು ಖುಷಿಯಲ್ಲಿ ಜಿಂಕೆಯಂತೆ ಜಿಗಿಯುವುದನ್ನು ಕಾಣುತ್ತೇವೆ. ಇದರರ್ಥ ಖುಷಿಗೆ ಸಿರಿವಂತಿಕೆ ಬೇಕೇ ಬೇಕೆಂದಿಲ್ಲ. ‘ಒಂದು ವೇಳೆ ಮನುಷ್ಯ ಶುದ್ಧ ಮನದಿಂದ ಹೇಳುತ್ತಿದ್ದರೆ ಅಥವಾ ಕೆಲಸ ಮಾಡುತ್ತಿದ್ದರೆ ಆನಂದವು ಅವನ ಹಿಂದೆ ನೆರಳಿನ ಹಾಗೆ ಇರುತ್ತದೆ. ಅದು ಅವನಿಂದ ಎಂದೂ ದೂರಾಗುವುದಿಲ್ಲ’ ಎಂದಿದ್ದಾನೆ ಬುದ್ಧ.

ಮಾನವ ಜೀವನದ ಪರಮೋಚ್ಛ ಗುರಿಯೇ ಆನಂದ ಹೊಂದುವುದು. ಹಾಗಂತ ಮತ್ತೊಬ್ಬರನ್ನು  ಬೆನ್ನ ಹಿಂದೆ ಹೀಯಾಳಿಸುವುದು. ಪರರು ಸೋಲಿನ ಬಾವಿಯಲ್ಲಿ ಬಿದ್ದಾಗ ಮೇಲೆ ನಿಂತು  ಚಪ್ಪಾಳೆ ತಟ್ಟಿ ನಗುವುದು ತರವಲ್ಲ. ಇತರರಿಗಾಗಿ ಮಾಡುವ ಕೆಲಸಗಳು ಯಾವಾಗಲೂ ಲಾಭಾಂಶ ನೀಡುತ್ತವೆ. ಮತ್ತೊಬ್ಬರ ದಾರಿಗೆ ಬೆಳಕು ನೀಡಲು ಬ್ಯಾಟರಿ ಹಾಕಿದಾಗ ನಮ್ಮ ದಾರಿಯೂ ಸಹ ಬೆಳಕಾಗುತ್ತದೆ. ಬಹಳಷ್ಟು ಬಾರಿ ಖುಷಿಯನ್ನು ವಿಲಾಸಿ ಜೀವನಕ್ಕೆ ಸಮೀಕರಿಸುತ್ತೇವೆ.

ಆದರೆ ವಿಲಾಸತನದಲ್ಲಿ ನಿಜವಾದ ಖುಷಿ ಅಡಗಿಲ್ಲ ಎನ್ನುವುದು ಅನೇಕ ಜನರ ಜೀವನದಿಂದ ಸಾಬೀತಾಗಿದೆ. ಆರ್ಥಿಕ ಯಶಸ್ಸು ಎಂಬುದು ನಮ್ಮ ಚೆಕ್ ಪುಸ್ತಕವನ್ನು ಸಮತೋಲನದಲ್ಲಿಡುವುದಿಲ್ಲ.

- Advertisement -

ಕೆಲ ಜನರು ಕೆಲ ಚಟಗಳಲ್ಲಿ ಖುಷಿ ಕಾಣುವುದನ್ನು ಚಟವಾಗಿಸಿಕೊಂಡಿದ್ದಾರೆ. ಇದು ನಿಜಕ್ಕೂ ಆರೋಗ್ಯಕ್ಕೆ ಅಪಾಯಕಾರಿ ಅಷ್ಟೇ ಅಲ್ಲ ಕೆಲವೊಮ್ಮೆ ಮಾರಣಾಂತಿಕ ಸಹ.. ಕೊಳ್ಳುಬಾಕ ಸಂಸ್ಕøತಿಯಲ್ಲಿ ಬಿದ್ದು ಮನೆಯನ್ನು ವಸ್ತು ವಸ್ತ್ರ ಒಡವೆಗಳಿಂದ ತುಂಬಿಸುವುದರಲ್ಲಿ ಹಲವು ಜನ ಆನಂದ ಹೊಂದಲು ಯತ್ನಿಸುತ್ತಾರೆ. ಖುಷಿ ಪಡಲು ತುಂಬಾ ದಾರಿಗಳಿವೆ. ಅದರಲ್ಲಿ ನೀವು ಆರಿಸಿಕೊಂಡ ಮಾರ್ಗ ಸರಿಯಾಗಿದೆಯಾ? ಎಂದು ಪರೀಕ್ಷಿಸಿಕೊಳ್ಳಿ. ಏಕೆಂದರೆ ನಿಮ್ಮ ನಂತರ ಕೂಡ ಅದೇ ಹಾದಿಯಲ್ಲಿ ಹೆಜ್ಜೆ ಹಾಕುವವರು ಎಷ್ಟೋ ಜನ ಇರುತ್ತಾರೆ. ನೀವು ತೋರಿದ ದಾರಿ ಸರಿಯಾಗಿದ್ದರೆ ಸಮಾಜ ಸಮತೋಲಿತವಾಗಿರುತ್ತದೆ ಇಲ್ಲದಿದ್ದರೆ ಸಮಸ್ಯೆ ತಪ್ಪದು.

ಹುಸಿ ಖುಷಿಯ ದಾರಿ ತೋರಿದ ಕಡೆ ಹೋಗುವುದು ಬೇಡ.ನಿಜ ಖುಷಿಯ ದಾರಿಯಲ್ಲಿ ಚಲಿಸಿ ನಮ್ಮ ಹಿಂದೆ ದಾರಿ ಬಡೋಣ. ಇದನ್ನೇ ಮಹಾತ್ಮಾ ಗಾಂಧೀಜಿ ‘.ಒಂದು ಕ್ಷಣವೂ ಕೆಲಸವಿಲ್ಲದಂತೆ ಇರುವುದೆಂದರೆ ದೇವರಿಗೆ ಮೋಸ ಮಾಡಿದಂತೆ ಕೆಲಸ ಮಾಡುವುದೇ ನನಗೆ ಮಹದಾನಂದ.’ ಎಂದಿದ್ದಾರೆ. ಒಳ್ಳೆಯ ಕೆಲಸವನ್ನು ಕೊಂಚ ಕೊಂಚವಾಗಿ ಮಾಡಿದಾಗ ಅದೊಂದು ಮಹಾನ್ ಕೆಲಸವಾಗಿ ದೊಡ್ಡ ಸಂಭ್ರಮದ ಖುಷಿಯನ್ನು ಉಡುಗೊರೆಯಾಗಿ ನೀಡುತ್ತದೆ.

ಉತ್ತಮ ಕಾರ್ಯ ಮಾಡದಿರುವಾಗ ಸಂತಸದ ಒರತೆ ಇಂಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೆಲಸದ ಹೊಳಪನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಿ. ಒಂದೊಳ್ಳೆ ಪುಸ್ತಕದ ಓದು, ಜನರೊಂದಿಗೆ ಬೆರೆತುಕೊಳ್ಳುವಿಕೆ, ಜೊತೆಗೆ ಸಂಗೀತ ಕ್ರೀಡೆಗಳಲ್ಲಿ ಆಸಕ್ತಿ ಬಯಲಲ್ಲಿ ಆಡುವ ಮಕ್ಕಳ ನಗುವಿಗೆ ಕಾರಣರಾಗಿ. ಕಷ್ಟದಲ್ಲಿರುವ ವಿಕಲಚೇತನರಿಗೆ ನಿಮ್ಮ ಹಸ್ತ ಚಾಚಿ ನೋಡಿ. ಗುಡ್ಡ ಬೆಟ್ಟಗಳಲ್ಲಿ ಓಡಾಡಿ ಪ್ರಕೃತಿ ಮಾತೆಯ ಮಡಿಲಲ್ಲಿ ಮಲಗಿ. ಮನೆಯಂಗಳದಲ್ಲಿ ಪುಟ್ಟ ಹೂದೋಟ ನಿರ್ಮಿಸಿ.ನೂರಾರು ಚಿಂತೆ ಹೊದ್ದು ದಣಿದ ಮನಕೆ ಇವೆಲ್ಲ ಖುಷಿಯ ಕಣಗಳಲ್ಲದೇ ಮತ್ತೇನು? ಸಂತೋಷ ಒಂದು ಕುದುರೆಯಲ್ಲ ಅದು ನೇರವಾದ ದಾರಿಯಲ್ಲಿ ಚಲಿಸುವುದಿಲ್ಲ. ಸಂತೋಷ ಪಡುವುದನ್ನು ನನ್ನ ಹಣೆಬರಹದಲ್ಲಿ ಬರೆದಿಲ್ಲ. ಎಂದು ಹಲಬುವವರು  ಕಡಿಮೆ ಏನಿಲ್ಲ. ನೆನಪಿರಲಿ, ಸಂತೋಷ ಮತ್ತು ದುಃಖಗಳು ವಿಧಿಲಿಖಿತಗಳಲ್ಲ ಅವು ನಾವಾಗಿಯೇ ಪಡೆದುಕೊಂಡವು.

ಖುಷಿ ಎನ್ನುವುದು ಯಾವುದೇ ಬಾಹ್ಯ ಪ್ರಾಪಂಚಿಕ ಲೋಭಗಳಲ್ಲಿ ದೊರೆಯುವುದಿಲ್ಲ. ಅದೊಂದು ಮನಸ್ಥಿತಿ. ಇಲ್ಲದ ಖುಷಿಯನ್ನು ಇಲ್ಲದ ಕಡೆ ಹುಡುಕುವುದನ್ನು ನಿಲ್ಲಿಸೋಣ. ಮುದ್ದು ಮಗುವಿನಂತೆ ಮುಗ್ಧ ನಗು ಹೊತ್ತು ಸಾಗಿದರೆ ಎಲ್ಲೆಲ್ಲೂ ಖುಷಿಯೇ ಖುಷಿ. ಎಂಬುದನ್ನು  ಪ್ರಯೋಗಿಸಿ ನೋಡೋಣ  ಖುಷಿಯಿಂದ ರೆಕ್ಕೆ ಬಿಚ್ಚಿ ಹಾರಾಡೋಣ.


ಜಯಶ್ರೀ.ಜೆ. ಅಬ್ಬಿಗೇರಿ
ಬೆಳಗಾವಿ
9449234142

- Advertisement -
- Advertisement -

Latest News

ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಸಿಂದಗಿ: ಪಟ್ಟಣದ ವೈಷ್ಣವಿ ಹೋಟೆಲಿನಲ್ಲಿ ಸಿದ್ದು ಗೌಡ ಪಾಟೀಲ್ ಇವರ ಪರಿವಾರ ವತಿಯಿಂದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳಿಗೆ  ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ...
- Advertisement -

More Articles Like This

- Advertisement -
close
error: Content is protected !!
Join WhatsApp Group