spot_img
spot_img

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

Must Read

- Advertisement -

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ. ಒಂದು ಶ್ರೇಷ್ಠ ಇನ್ನೊಂದು ಕನಿಷ್ಠವೂ ಇಲ್ಲ. ಪ್ರತಿಯೊಂದು ಮನೆಯಲ್ಲೂ ಗಂಡ ಹೆಂಡಿರ ಜಗಳ ಇದ್ದೇ ಇರುತ್ತದೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎನ್ನುವ ಮಾತು ಮೊದಲು ಕೇಳಿದಾಗಲೆಲ್ಲ ಮನಸ್ಸಿಗೇನೊ ಮುದ ನೀಡುತ್ತಿತ್ತು.

ಆದರೀಗ ಹಾಗಿಲ್ಲ. ಅವಿನಾಭಾವ ಸಂಬಂಧದ ಈ ಪವಿತ್ರ ಬಂಧನದಲ್ಲಿ ಈಗೀಗ ತುಂಬಾ ಬಿರುಕುಗಳು ಬಿದ್ದು ಕ್ಷುಲ್ಲಕ ಕಾರಣಗಳಿಗೆ ಅಂದರೆ ಅತೀ ಸಣ್ಣ ವಿಷಯಗಳೇ ದೊಡ್ಡದಾಗಿ ಪ್ರತಿದಿನ ಮನೆಯಲ್ಲಿ ರಾಮಾಯಣ ಮಹಾಭಾರತ ನಡೆದು ಮನೆ ಕುರುಕ್ಷೇತ್ರದ ರಣರಂಗವಾಗುತ್ತಿದೆ. ಕೆಲವೊಮ್ಮೆ ಇದು ವಿಚ್ಛೇದನದಂಥ ವಿನಾಶಕಾರಿ ಹಂತಕ್ಕೂ ತಲುಪುತ್ತಿವೆ.

ಪ್ರೀತಿ ಇದ್ದಲ್ಲಿ ಜಗಳ ಇರುತ್ತೆ ಅಂತ ಹೇಳುತ್ತಾರೆ. ಜಗಳವಾಡದ ಗಂಡ ಹೆಂಡತಿಯರು ಸಿಗುವುದೂ ದುರ್ಲಭ. ಗಂಡ ಹೆಂಡತಿಯರ ನಡುವೆ ಪರಸ್ಪರ ನಿರೀಕ್ಷೆಗಳು ತುಂಬಾ ಇರುತ್ತವೆ. ಈ ನಿರೀಕ್ಷೆಗಳೇ ಬಹಳಷ್ಟು ಸಾರಿ ಜಗಳಕ್ಕೆ ಕಾರಣವಾಗುತ್ತವೆ. ನಿರೀಕ್ಷೆಗಳು ನಿಜರೂಪಕ್ಕೆ ಬರದಿದ್ದಾಗ  ಆರೋಪದ ರೂಪವನ್ನು ಪಡೆದುಕೊಳ್ಳುತ್ತವೆ.

- Advertisement -

ಪತ್ನಿಯ ಆರೋಪಗಳು:

  • ಸಣ್ಣ ಪುಟ್ಟ ಕೆಲಸಗಳಿಗೂ ಹೆಂಡತಿಯೇ ಬೇಕು ಆದರೆ ಹೆಂಡತಿಯ ಬುದ್ಧಿ ಮೊಣಕಾಲ ಕೆಳಗೆ ಎಂದು ಸದಾ ಬೈಯ್ಯುವದು. ಮತ್ತು ಪರರ ಹೆಂಡತಿಯೊಂದಿಗೆ ಹೋಲಿಸಿ ತನ್ನನ್ನು ತೆಗಳುವದು. ಅವರನ್ನು ಹೊಗಳುವದು.
  • ಹೆಂಡತಿಯ ಮಾತಿಗೆ ಬೆಲೆ ಕೊಡದೇ ತಾನೇ ಮನೆಯ ಬಿಗ್ ಬಾಸ್ ಎಂದು ನಟಿಸುತ್ತ ಮನೆಯ ಯಾವ ಕೆಲಸದಲ್ಲಿಯೂ ಸಹಾಯ ಮಾಡದೇ ಇರುವದು.
  • ಆಫೀಸಿನ ಕೆಲಸವನ್ನು ಮನೆಗೆ ತರುವದು. ಮನೆಗೆ ತಂದ ಆಫೀಸಿನ ಫೈಲ್‍ಗಳನ್ನು ಎಲ್ಲೋ ಇಟ್ಟು ಹೆಂಡತಿಗೆ ಶಿಸ್ತಿಲ್ಲ ಅಂತ ಬೈಯ್ಯುವದು.
  • ಬರ್ತ್ ಡೇ ವೆಡ್ಡಿಂಗ್ ಎನಿವರ್ಸರಿಯಂಥ ವಿಶೇಷ ದಿನಗಳನ್ನು ಮರೆಯುವದು ಮತ್ತು ಅಂದು ಆಫೀಸಿನಿಂದ ಮನೆಗೆ ತಡವಾಗಿ ಬರುವದು.
  • ಹೆಂಡತಿಯನ್ನು ತವರುಮನೆಗೆ ಕಳುಹಿಸಲು ನಿರಾಕರಿಸುವದು. ಹೆಂಡತಿ ಮನೆಯವರ ಬಗ್ಗೆ ಹಗುರವಾಗಿ ಮಾತನಾಡುವದು ಮತ್ತು ವಿನಾಕಾರಣ  ಹೀಯಾಳಿಸುವದು.
  • ಮಕ್ಕಳ ಅಭ್ಯಾಸದ ಕುರಿತು ಕಾಳಜಿ ವಹಿಸದೇ ಇರುವದು. ಹೋಂವರ್ಕ್ ಗಳಲ್ಲಿ ಸಹಾಯ ಮಾಡದಿರುವದು. ಬರೀ ಟಿವಿ ನ್ಯೂಸ್ ಕ್ರಿಕೆಟ್‍ಗಳಲ್ಲಿ ಮುಳುಗಿರುವದು.
  • ಅಡುಗೆಗೆ ಹೆಸರಿಡುವದು. ಚೆನ್ನಾಗಿದ್ದಾಗಲೂ ಹೊಗಳಲು ಮೀನ ಮೇಷ ಎಣಿಸುವದು. ಸ್ವಲ್ಪ ರುಚಿ ಹಾಳಾಗಿದ್ದರೂ ರಂಪ ಮಾಡುವದು.
  • ಎಲ್ಲೆಂದರಲ್ಲಿ ಬಟ್ಟೆ ವಸ್ತ್ರಗಳನ್ನು ಒಗೆದಾಡಿ ಮನೆಯನ್ನು ಕಸದ ಬುಟ್ಟಿ ಮಾಡಿ ಸ್ವಚ್ಛ ಮಾಡಲು ಕೈ ಜೋಡಿಸದಿರುವದು.
  • ತಾನು ಮನೆಯಲ್ಲಿರುವಾಗ ಹೆಂಡತಿ ಹೊರಗೆ ಹೋಗೋ ಹಾಗಿಲ್ಲ. ಅವನ ಅಗತ್ಯತೆಗಳನ್ನು ಪೂರೈಸುತ್ತ ಮನೆಯಲ್ಲಿಯೇ ಇರಬೇಕು.

ಪತಿಯ ಆರೋಪಗಳು:

  • ಸಮಯ ಪ್ರಜ್ಞೆಯೇ ಇಲ್ಲ. ನಾನು ಡ್ಯೂಟಿಗೆ ಹೋಗೋ ವೇಳೆಯಲ್ಲಿ ಇವಳಿಗೆ ನನ್ನ ಅಟೆಂಡ್ ಮಾಡೋಕಾಗಲ್ಲ.
  • ಯಾವಾಗಲೂ ಏನಾದರೂ ತಾ ತಾ ಎನ್ನುವ ಕಿರಿ ಕಿರಿ. ಆಸೆಗೆ ಮಿತಿಯೇ ಇಲ್ಲ. ಎಲ್ಲವೂ ಬೇಕು ಬೇಕು. ಇವಳ ಬೇಕಿಗೆ ಬ್ರೇಕಿಲ್ಲ.
  • ಮನೆಲಿದ್ದು ಮೂರು ಹೊತ್ತು ಟಿವಿ ಸಿರೀಯಲ್‍ನಲ್ಲಿ ಮುಳುಗಿರೋದು ಬಿಟ್ಟರೆ ಏನೂ ಗೊತ್ತಿಲ್ಲ.
  • ತನ್ನ ತವರು ಮನೆಯವರ ಬಗ್ಗೆ ಇರೋವಷ್ಟು  ಪ್ರೀತಿ ಕಾಳಜಿ  ನಮ್ಮ ಮನೆಯವರ ಬಗೆಗಿಲ್ಲ.
  • ಲೇಡೀಸ್ ಕ್ಲಬ್ ಮಹಿಳಾ ಮಂಡಳಿಗಳು ಅಂತ ಹೊರಗಡೆ ಇದ್ದು ಮಕ್ಕಳನ್ನು ಮತ್ತು ಮನೆ ಮಂದಿಯನ್ನು ಕಡೆಗಣಿಸುವದು.
  • ತವರು ಮನೆ ಕಡೆ ಕಾರ್ಯಕ್ರಮವಿದ್ದರೆ ಮುಂಚಿತವಾಗಿ  ಹೋಗುವದು. ತಮ್ಮ ಮನೆ ಕಾರ್ಯಕ್ರಮಗಳಿಗೆ ನಿರ್ಲಕ್ಷ್ಯ ಉದಾಸೀನತೆ ತೋರುವದು.
  • ಮಕ್ಕಳನ್ನು ಆಡೋಕೆ ಬಿಡದೇ ಅವರನ್ನು ಬರೀ ಪುಸ್ತಕದ ಹುಳು ಮಾಡುತ್ತಿದ್ದಾಳೆ.
  • ಮನೆ ನೀಟಾಗಿ ಇಡೋಕೆ ಬರಲ್ಲ. ಸಾಮಾನುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಬೇಕಾದ ಸಾಮಾನು            ಬೇಕಾದಾಗ ಎಷ್ಟು ಹುಡುಕಿದರೂ ಸಿಗೋದಿಲ್ಲ.

ಪರಿಹಾರೋಪಾಯಗಳು :

  • ಆರೋಪ ಪ್ರತ್ಯಾರೋಪಗಳಲ್ಲಿ ಕಾಲ ಕಳೆಯದೇ ಒಬ್ಬರನ್ನೊಬ್ಬರು ಪ್ರೀತಿಯಿಂದ ಗೌರವಿಸುವದು.
  • ಮನೆಯ ಕೆಲಸಗಳಲ್ಲಿ ಸಹಾಯ ಸಹಕಾರ ತೋರುವದು. ಈ ಕೆಲಸ ನೀನೇ ಮಾಡುವದು ಎಂದು ಗೆರೆ ಕೊರೆಯದೇ ಇರುವದು.
  • ಹಬ್ಬ ಹರಿದಿನಗಳಲ್ಲಿ ಆಫೀಸಿಗೆ ರಜೆ ಹಾಕಿ ಮನೆ ಮಂದಿಯ ಜೊತೆಗೆ ಸಂಭ್ರಮಿಸುವದು.
  • ಹೆಂಡತಿಯ ಮಾತುಗಳನ್ನು ಪರಿಶಿಲಿಸಿ ವರ್ತನೆಯಲ್ಲಿ ಅಳವಡಿಸಿಕೊಳ್ಳುವದು.
  • ಗಂಡನ ಕೆಲಸದೊತ್ತಡವನ್ನು ಅರ್ಥೈಸಿಕೊಂಡು ಸಕಾಲಕ್ಕೆ ಪ್ರೀತಿಯ ಕಾಳಜಿ ವಹಿಸುವದು.
  • ಹೆಂಡತಿ ತಾನು ಹೇಳಿದಂತೆ ಕೇಳಬೇಕು. ಮನೆಯ ಎಲ್ಲ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳುವದನ್ನು ನಿಲ್ಲಿಸಬೇಕು. ತನ್ನದೇ ಸರಿ ಎನ್ನುವ ಧೋರಣೆಗೆ ಇಬ್ಬರೂ ಇತಿಶ್ರೀ ಹಾಡಬೇಕು.
  • ಗಂಡನಿಗೆ ಹೆಂಡತಿಯ ಮನೆಯವರ ಬಗ್ಗೆ ಹೆಂಡತಿಯ ಮನೆಯವರ ಬಗ್ಗೆ ಗೌರವಾದರಗಳು ಹರಿದು ಬರಬೇಕು.
  • ಮಕ್ಕಳ ಎದುರಲ್ಲಿ ತಮ್ಮ ಭಿನ್ನಾಭಿಪ್ರಾಯಗಳನ್ನು ಬಿಚ್ಚಿಟ್ಟು ಜಗಳಾಡದಿರುವದು. ಮಲಗುವ ಕೋಣೆಯಲ್ಲಿ ಪಿಸುಮಾತಿನ ಪ್ರೀತಿಯಲ್ಲಿ ಬಗೆಹರಿಸಿಕೊಳ್ಳುವದು.
  • ಸಾಲ ಮಾಡಿಯಾದ್ರೂ ತುಪ್ಪ ತಿನ್ನು ಎನ್ನುವ ಮಾತಿಗೆ ಬೆನ್ನು ಹತ್ತದೇ ಹಾಸಿಗೆ ಇದ್ದಷ್ಟು ಕಾಲು ಚಾಚುವದಕ್ಕೆ ಆದ್ಯತೆ ನೀಡುವದು.
  • ಹೊಂದಿಕೆ ಮಾಡಿಕೊಳ್ಳಲು ಅಹಂ ಅಡ್ಡಿಯಾಗದಿರಲಿ. ಪರಸ್ಪರ ಪ್ರೀತಿಗೆ ವೈಯುಕ್ತಿಕ ಅನಿಸಿಕೆಗಳಿಗೆ ಇಬ್ಬರ ಹೃದಯಲ್ಲಿ ಜಾಗವಿರಲಿ.
  • ನಮ್ಮ ಸಂಸಾರ ಆನಂದ ಸಾಗರ. ಕೂಡಿ ಬಾಳೋಣ ಎಂದೆಂದೂ ಸೇರಿ ದುಡಿಯೋಣ ಎಂಬ ಗೀತೆಗಳು  ಮನೆ ಮಂದಿಯ ಹೃದಯದಲ್ಲಿ ಮನೆ ಮಾಡುವಂತೆ ಮಾಡಲು ಗಂಡ ಹೆಂಡತಿ ಇಬ್ಬರೂ ಸಮ ಸಮವಾಗಿ ಪ್ರಯತ್ನಿಸಿ ಗಂಡ ಹೆಂಡತಿ ಒಬ್ಬರನ್ನೊಬ್ಬರು ಆರೋಪಿಸಿ ದ್ವೇಷಿಸಿ ಗೆಲ್ಲುವದಕ್ಕಿಂತ ಸೋತು ಗೆಲ್ಲುವದರಲ್ಲಿ ಖುಷಿಯಿದೆ ಎನ್ನುವದನ್ನು ಪಾಲಿಸಿ.ಸಂಸಾರದ ಸರಿಗಮದಲ್ಲಿ ಅಪಸ್ವರ ಮೂಡದಂತೆ ಮಾಡಲು ಪ್ರೀತಿಯಿಂದ ನಿಮ್ಮ ಸಂಗಾತಿಯ ಹೃದಯದ ಗೀತೆ ಆಲಿಸಿ. ಸಂಸಾರ ಸಾಗರದಲ್ಲಿ ಜೊತೆ ಜೊತೆಯಾಗಿ ಕೈ ಹಿಡಿದು ಈಜಿ ಜಯಗಳಿಸಿ.

ಜಯಶ್ರೀ.ಜೆ. ಅಬ್ಬಿಗೇರಿ ( ಬೆಳಗಾವಿ)

- Advertisement -
- Advertisement -

Latest News

ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಸನ್ಮಾನ

ಸಿಂದಗಿ: ಪಟ್ಟಣದ ವೈಷ್ಣವಿ ಹೋಟೆಲಿನಲ್ಲಿ ಸಿದ್ದು ಗೌಡ ಪಾಟೀಲ್ ಇವರ ಪರಿವಾರ ವತಿಯಿಂದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳಿಗೆ  ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ...
- Advertisement -

More Articles Like This

- Advertisement -
close
error: Content is protected !!
Join WhatsApp Group