ಡಾ. ಹಂಪನಹಳ್ಳಿ ತಿಮ್ಮೇಗೌಡರು ಡಾ. ಗೊರೂರರ ಸಾಹಿತ್ಯ ಮರು ಓದು ಪುಸ್ತಕ ನನಗೆ ಕೊಟ್ಟು ಬಹಳ ದಿನಗಳೇ ಆಗಿವೆ. ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನ. (ತಾ.4-7-1904) ಅವರ ನೆನಪಿನಲ್ಲಿ ಪುಸ್ತಕ ತೆಗೆದು ಮರು ಓದಿದೆ. ಕೃತಿಯಲ್ಲಿ 43 ಲೇಖನಗಳಿವೆ. ಇದು ಹಾಸನದ ಸರ್ಕಾರಿ ಕಲಾ ಕಾಲೇಜು ಈ ಹಿಂದೆ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ಮರು ಓದು ಎಂಬ ವಿಷಯದ ಬಗ್ಗೆ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಿ ಸಂಗ್ರಹಿಸಿದ ಲೇಖನಗಳ ಹೊತ್ತಗೆ ಇದು. ಸಂಪಾದಕರು ತಮ್ಮ ಅಂತರಾಳ ನುಡಿಯಲ್ಲಿ ಗೊರೂರು ಎಂಬುದೇ ಒಂದು ಸಾಂಸ್ಕೃತಿಕ ನೆಲೆಗಟ್ಟಿನ ಕೇಂದ್ರ. ಇದು ಮಲೆನಾಡಿನ ಸೆರಗಿನಂಚಿನಲ್ಲಿದ್ದು, ಪಕ್ಕೆಲುಬಾಗಿ ಹೇಮಾವತಿ ನದಿ ಬೆನ್ನೆಲುಬಾಗಿ ಹೇಮಾವತಿ ಅಣೆಕಟ್ಟೆ ಅಂಚಿನಲ್ಲಿ ಯೋಗನರಸಿಂಹಸ್ವಾಮಿ ದೇವಾಲಯ ಹೀಗೆ ತನ್ನ ಅಂತಃಸತ್ವವನು ಹೊಂದಿದ್ದ ಆಧ್ಯಾತ್ಮಿಕ ಕೇಂದ್ರದಲ್ಲಿ ಜನಿಸಿದವರು ರಾಮಸ್ವಾಮಿ ಅಯ್ಯಂಗಾರ್ ಅವರು…
ಈ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಯು.ಜಿ.ಸಿ.ಅನುದಾನದಿಂದ ಆಯೋಜಿಸಿದ್ದಲ್ಲ. ಕಾಲೇಜಿನ ಸಂಪನ್ಮೂಲದಿಂದ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ಕಾಲೇಜಿನ ಪ್ರಾಂಶುಪಾಲರು ಡಾ. ಡಿ.ಜಿ.ಕೃಷ್ಣೇಗೌಡರ ಸಹಕಾರ ಸಲಹೆಯಿಂದ ಇದು ನೆರವೇರಿದೆ.
ಕೃತಿಯ ಮೊದಲ ಲೇಖನವೇ ಗೊರೂರು ಜಾನಪದ ಸಾಧನೆ. ಲೇಖಕರು ಡಾ. ಸಿ.ಜಿ. ವೆಂಕಟಯ್ಯ. ಇವರು ಡಾ. ಗೊರೂರರ ಸಾಹಿತ್ಯ ವಿಷಯದಲ್ಲಿ ಪಿಹೆಚ್‍ಡಿ ಮಾಡಿದವರು. ಗೊರೂರರ ಜಾನಪದ ಸಾಧನೆ ಮತ್ತು ಸಿದ್ಧಿ ಇವರ ಪಿಹೆಚ್‍ಡಿ ಪ್ರಬಂಧದ ಕೃತಿ (2002) ಇದು 480 ಪುಟದ ವಿಸ್ತಾರ ಹೊಂದಿದೆ. ಇವರು ಪಿಹೆಚ್‍ಡಿ ಪ್ರಬಂಧ ಬರೆಯುವ ಮುನ್ನ ಕ್ಷೇತ್ರಕಾರ್ಯಕ್ಕೆ ಗೊರೂರಿಗೆ ಬಂದು ಹತ್ತು ದಿನ ತಂಗಿದ್ದರು. ಆ ಹೊತ್ತಿಗೆ ನನ್ನ ಗೊರೂರು ಹೇಮಾವತಿ ದರ್ಶನ (1992) ಪುಸ್ತಕ ಪ್ರಕಟವಾಗಿತ್ತು. ಒಂದು ಪ್ರತಿ ಅವರಿಗೆ ಕೊಟ್ಟು ಅವರ ಜೊತೆಗೆ ಅವರ ಸಂಶೋಧನೆಗೆ ಸಹಕರಿಸಲು ಊರಲ್ಲಿ ಸುತ್ತಾಡಿದ್ದೆ. ಇವರ ಪಿಹೆಚ್‍ಡಿ ಕೃತಿಯ ಮುನ್ನುಡಿಯಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ. ಹಿ.ಶಿ.ರಾಮಚಂದ್ರಗೌಡರು ಗೊರೂರರ ಜನಪದೀಯ ಮನೋಧರ್ಮ ಅವರ ಬರಹದ ಮೂಲದ ದ್ರವ್ಯ. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಅವರು ಭಾರತೀಯರನ್ನು ಪುನರ್ ಸಂಘಟಿಸಲು ಜನಪದವನ್ನು ಬಳಸಿಕೊಂಡರು. ಆ ಮೂಲಕ ಕನ್ನಡ ಜಾನಪದ ಗೊರೂರರ ಬರವಣಿಗೆಯ ಮೂಲಕ ಪುನರಭಿನಯಗೊಂಡಿತು. ಅವರ ಸಾಹಿತ್ಯಕ ಸಾಧನೆಯ ಬಹುಪಾಲು ಅವರ ಜಾನಪದ ಪುನರ್ ಸೃಷ್ಟಿಯ ಸಾಧನೆ ಎಂದೇ ಹೇಳಬೇಕು.
ಗೊರೂರರ ಸಾಹಿತ್ಯದಲ್ಲಿ ಜಾನಪದ ಡಾ.ಹಂಪನಹಳ್ಳಿ ತಿಮ್ಮೇಗೌಡರ ಲೇಖನ. ಡಾ. ಗೊರೂರು ಕರ್ನಾಟಕದ ಒಂದು ವಿಶಿಷ್ಟ ಸಾಂಸ್ಕೃತಿಕ ವ್ಯಕ್ತಿ. ಅವರಲ್ಲಿ ಶಿಷ್ಟ ಸಾಹಿತ್ಯದ ನೆಲೆಗಟ್ಟು, ಸ್ವಾತಂತ್ರ್ಯ ಹೋರಾಟದ ನೆಲೆಗಟ್ಟು, ಗ್ರಾಮೀಣ ಬದುಕಿನ ನೆಲೆಗಟ್ಟು ವಿಶಿಷ್ಟ ಅದ್ವೈತದ ಬೆನ್ನೆಲುಬು ಮತ್ತು ಭಾರತವನ್ನು ಅಖಂಡವಾಗಿ ನೋಡಬೇಕೆಂಬ ವಿಶಿಷ್ಟತೆಯನ್ನು ಹುಡುಕಿ ಹೊರಟವರು. ಅವರ ಸಾಹಿತ್ಯ ಬರಹ ಜಾನಪದ ವಿಮರ್ಶೆ ಇವುಗಳನ್ನು ನೋಡಿದಾಗ ಅಲ್ಲಿ ಒಬ್ಬ ಗಾಂಧಿ ಅವತರಿಸುತ್ತಾನೆ ಮತ್ತು ಒಂದು ಮುಕ್ತ ಭಾರತ ಕಣ್ಣೆದುರಿಗೆ ಬರುತ್ತದೆ. ಒಬ್ಬ ಹಳ್ಳಿಯ ರೈತನನ್ನು ಮತ್ತೊಬ್ಬ ಅಸಾಧಾರಣ ವ್ಯಕ್ತಿಗೆ ಸರಿದೂಗಿಸುವುದು ಇವೆಲ್ಲವನ್ನು ನೋಡಿದಾಗ ಭಾರತವೇ ಒಂದು ಜನಪದ ಎಂದು ಭಾವಿಸಿರುವುದು ಕಂಡುಬರುತ್ತದೆ..
ಡಾ. ಎಂ.ಶಂಕರ ಅವರ ಗೊರೂರರ ಗಾಂಧಿವಾದ ಮತ್ತು ಸ್ವರಾಜ್ಯ ಪರಿಕಲ್ಪನೆ ಲೇಖನ. ಗಾಂಧಿವಾದ ಎನ್ನುವುದು ಒಂದು ಬೌದ್ಧಿಕ ಚಿಂತನ ಕ್ರಮವಲ್ಲ. ಅದೊಂದು ಜೀವನ ಕ್ರಮ. ಜೀವನ ವಿಧಾನ. ಅದು ಗಾಂಧೀಜಿ ಸ್ವತ: ಬದುಕು ತೋರಿದ ಜೀವನ ಮಾರ್ಗ. ಗಾಂಧೀಜಿ ತಮ್ಮ ಆತ್ಮಕತೆಗೆ ಕೊಟ್ಟ ಮತ್ತೊಂದು ಹೆಸರು ನನ್ನ ಸತ್ಯ ಪ್ರಯೋಗದ ಕತೆ, ತಮ್ಮ ಖಾಸಗಿ ಮತ್ತು ಸಾರ್ವಜನಿಕ ಜೀವನವನ್ನು ಅವರು ಪ್ರಯೋಗಕ್ಕೆ ಒಡ್ಡಿಕೊಂಡಿರುವುದನ್ನು ಅದು ಸೂಚಿಸುತ್ತದೆ. ಇದೇ ಗಾಂಧಿವಾದಕ್ಕೆ ಅಪಾರವಾದ ಶಕ್ತಿಯನ್ನು ತುಂಬಿರುವುದು. ತಾನು ಬದುಕದೆ ಬೇರೆಯವರಿಗೆ ಭೋಧಿಸುವ ಯಾರ ಯಾವ ಮಾತಿಗೂ ವಾದಕ್ಕೂ ಬೆಲೆ ಇರುವುದಿಲ್ಲ. ಗಾಂಧಿವಾದಿ ಎಂದ ಕೂಡಲೇ ನಮ್ಮ ಮನಸ್ಸಿನ ಕಣ್ಣಿನ ಮುಂದೆ ಬರುವುದು ಖಾದಿ ತೊಟ್ಟ ಮನುಷ್ಯ. ಗಾಂಧಿವಾದದ ಒಂದು ಅಂಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಕುರುಹು ಅದು. ಇಂದಿನ ರಾಜಕಾರಣದಲ್ಲಿ ಖಾದಿ ಅಪಮೌಲ್ಯಗೊಂಡಿದ್ದರೆ ಅದಕ್ಕೆ ಗಾಂಧಿ ಅಥವಾ ಗಾಂಧಿವಾದ ಕಾರಣವಲ್ಲ..
ಕೆ.ಜಿ.ಕವಿತ ಅವರು, ‘ನಮ್ಮ ಊರಿನ ರಸಿಕರು’ ಗದ್ಯ ಕೃತಿಯ ಶೀರ್ಷಿಕೆಯೇ ಗೊರೂರು ಎಂಬ ಹಳ್ಳಿಯ ಗುಣಲಕ್ಷಣಗಳನ್ನು ಸ್ಪಷ್ಟಪಡಿಸುತ್ತದೆ. ಆ ಹಳ್ಳಿಯ ಮಣ್ಣಿನ ಗುಣ, ನಿತ್ಯ ನೂತನೆಯಾದ ಹೇಮಾವತಿ ನದಿ, ಹತ್ತು ಊರಿನ ಹಳ್ಳಿಯ ಸಮಸ್ತರ ಜೀವನೋತ್ಸಾಹ, ಹಬ್ಬ ಮದುವೆ ಹರಿಕಥೆ ನಾಟಕ ಯಕ್ಷಗಾನಗಳ ನೆಪದಿಂದ ಒಂದುಗೂಡುತ್ತಿದ್ದ ಹಿರಿಯ ಕಿರಿಯ ಜೀವಗಳು ಗಂಡು ಹೆಣ್ಣುಗಳ ವ್ಯತ್ಯಾಸವಿಲ್ಲದೆ ನಡೆಯುತ್ತಿದ್ದ ಉರೊಟ್ಟಿನ ಕೆಲಸಗಳು, ಕೆಲಸ ಮಾಡುವಾಗ ನಡೆಯುತ್ತಿದ್ದ ಮಾತುಕತೆಗಳು ಹಾಡುಗಳು ಇವೆಲ್ಲವು ಆರೋಗ್ಯಪೂರ್ಣ ನಗೆಚೇಷ್ಟೆಗಳು ಸಮೃದ್ಧವಾಗಿರುತ್ತಿದ್ದವು..ಪ್ರಾಸವಿಲ್ಲದೆ ನಾಣಿ ಮಾತನಾಡುತ್ತಿರಲಿಲ್ಲ. ಪಟಪಟನೆ ಸಾಸಿವೆ ಸಿಡಿದಂತೆ ಯಾವಾಗಲೂ ಒಂದೇ ಸಮನಾಗಿ ಪ್ರಾಸ ಪದ ಹೇಳುತ್ತಾ ಎಲ್ಲರನ್ನೂ ನಗಿಸುತ್ತಿದ್ದನು. ಊರಿನ ಹುಡುಗನ ಮುಂಜಿಯ ಪ್ರಸ್ತಾಪ ಬಂದಾಗ..
ಅವನ್ಗೆ ಯಾಕೆ ಮುಂಜಿ
ಕುಡಿಯೋಕೆ ಇಲ್ಲ ಗಂಜಿ
ನೂಲಿ ಹತ್ತಿ ಹಿಂಜಿ
ಸಿಕ್ಕುತ್ತೆ ಹೊಟ್ಟೆಗೆ ಗಂಜಿ..
ಮಂಡ್ಯದ ಸುಂದರಿ ಡಿ. ಮೇಡಂ ಗೊರೂರರ ಪ್ರಬಂಧ ಸಾಹಿತ್ಯದಲ್ಲಿ ಹಾಸ್ಯ ಹುಡುಕಿದ್ದು ಹೀಗೆ. ಅಲ್ಲಿ ನೆರೆದಿದ್ದ ಬ್ರಾಹ್ಮಣರು ಪಪ್ಪಾಯಿಯನ್ನು ತಿಂದು ಕೈ ತೊಳೆಯಲು ಮಲಗಿದ ಸ್ಥಳದಲ್ಲಿದ್ದ ನೀರಿನ ತಂಬಿಗೆಯನ್ನು ಒಬ್ಬೊಬ್ಬರಾದ ನಂತರ ಒಬ್ಬರು ನೀರಿಲ್ಲದಿದ್ದರೂ ಹೊರಗೆ ಕೊಂಡೊಯ್ದು ಕೈ ತೊಳೆವ ಶಾಸ್ತ್ರ ಮಾಡಿ ಕೈಯನ್ನು ಕಂಬಕ್ಕೆ ಒರೆಸಿ ಚೌಕಕ್ಕೆ ಒರೆಸಿ ಒಳಕ್ಕೆ ಬಂದು ಚೊಂಬನ್ನು ಮೊದಲಿದ್ದ ಸ್ಥಳದಲ್ಲಿಯೇ ಶಬ್ಧವಾಗುವಂತೆ ಇಟ್ಟು ಮಲಗುವರು. ಆದರೆ ನಾಣಿ ಬರಿಗೈಲಿ ಹೋಗಿ ಬಂದರೆ ಕೇಶವಚಾರ್ರು ‘ಏನಯ್ಯ ಎಂಜಲು ಕೈ ತೊಳೆಯದೇ ಬಂದೆಯಲ್ಲ ಚೊಂಬನ್ನು ಯಾಕೆ ಹೊರಕ್ಕೆ ತೆಗೆದುಕೊಂಡು ಹೋಗಲಿಲ್ಲ.. ಎಂದರೆ ನಾಣಿಯು ‘ಸ್ವಾಮಿ ನನ್ನ ಜೇಬಿನಲ್ಲಿ ಒಂದು ಮೂರುಕಾಸಿನ ಬಿಲ್ಲೆ ಇತ್ತು. ನಾನು ಅದನ್ನೇ ಸದ್ದು ಮಾಡಿದೆ. ನೀವು ತೆಗೆದುಕೊಂಡು ಹೋಗುತ್ತಿದ್ದ ಚೊಂಬೂ ತಾಮ್ರದ್ದೆ ಎಂದರೆ ಕೇಶವಚಾರ್ರು ‘ತಲೆಹರಟೆ ನೀನೂ ಚೊಂಬನ್ನು ಹೊರಕ್ಕೆ ತೆಗೆದುಕೊಂಡು ಹೋಗಬಹುದಾಗಿತ್ತು. ಆಚಾರ ಕೆಟ್ಟರೂ ಆಕಾರ ಕೆಡಬಾರದಯ್ಯ.. ಎಂದರು.
ಜಿ.ಎನ್.ಮೋಹನ್ ಅವರು ಅಮೇರಿಕಾದಲ್ಲಿ ಗೊರೂರು ಕೃತಿಯಿಂದ ಆಯ್ದ ನಗೆಯ ಪ್ರಸಂಗ. ಹೇಮಾವತಿ ನದಿಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದ್ದ ಗೊರೂರರಿಗೆ ನ್ಯೂಯಾರ್ಕ್‍ನ ಹಡ್ಸನ್ ನದಿಯನ್ನು ಹತ್ತಿರದಿಂದ ಆನಂದಿಸುವ ಬಯಕೆ ಆಗುತ್ತದೆ. 30ನೇ ಮಹಡಿಯಿಂದ ಹಡ್ಸನ್ ನದಿ ಬೆಳ್ಳಿ ತಗಡಿನಂತೆ ಪ್ರಖರವಾಗಿ ಕಾಣುತ್ತಿತ್ತು. ನದಿ ತೀರಕ್ಕೆ ಹೋಗಿ ನೀರಿನಲ್ಲಿ ಇಳಿದು ಕೈಕಾಲುಗಳನ್ನು ತೊಳೆದುಕೊಳ್ಳುವ ಬಯಕೆಯಾಗಿ ಮನೆಯಿಂದ ಹೊರಟು ಲಿಫ್ಟ್ ಬಳಸುತ್ತಾರೆ. ವಿದ್ಯುತ್ ಅಂಕಿ ಸಂಖ್ಯೆಗಳ ಬಗ್ಗೆ ತಿಳಿಯದೆ ನೆಲಮಾಳಿಗೆಯ ಗುಂಡಿಯನ್ನು ಒತ್ತಿ ಕಾರುಗಳ ನಿಲ್ದಾಣದಲ್ಲಿ ಇಳಿಯುತ್ತಾರೆ. ಅದು ಉಪಯೋಗಿಸದೆ ಇರುವ ನೂರಾರು ಕಾರುಗಳು ಜಂಕ್ ಕಾರ್ ಪಾರ್ಕ್ ಆಗಿತ್ತು. ಹೊರ ಬರುವ ದಾರಿ ಕಾಣದೆ ತಬಿಬ್ಬಾದ ಸಂದರ್ಭದಲ್ಲಿ ಅಲ್ಲಿಗೆ ಕಾರು ನಿಲ್ಲಿಸಲು ಬಂದ ಮಹಿಳೆ ಇವರನ್ನು ಕಂಡು ‘ಹೈ ಯಾರು ಈ ರಾಬಿನ್ ಸನ್ ಕ್ರೂಸೋ.? ಎಂದು ಪ್ರಶ್ನಿಸುತ್ತಾಳೆ. ಆರೂವರೆ ಅಡಿ ಎತ್ತರದ ಕಾವಿ ಬಣ್ಣದ ಜುಬ್ಬ, ಮೇಲೆ ನೀಲಿ ಪ್ಲಾನೆಲ್ ಬನಿಯನ್, ದಟ್ಟಿ, ತಲೆಗೆ ಒಂದು ಕೇಸರಿ ಬಣ್ಣದ ಲಪ್ಪಟೆ, ಕಾಲಿಗೆ ಎಕ್ಕಡ ಧರಿಸಿದ್ದ ವಿಚಿತ್ರ ವೇಷದ ಗೊರೂರರನ್ನು ಕಂಡು ಅವಳು ತಬ್ಬಿಬ್ಬಾಗಿದ್ದಾಳೆ. ಮೊದಲೇ ಗಾಬರಿಯಲ್ಲಿದ್ದ ಲೇಖಕರು ‘ನಾನು ರಾಬಿನ್ ಕ್ರೋಸೋಗಿಂತ ಹೆಚ್ಚು ಅದೃಷ್ಟಶಾಲಿ. ಕ್ರೋಸೋ ಸಂಧಿಸಿದ್ದುದು ಬರಿಯ ಫ್ರೈಡೇಯನ್ನು. ನಾನು ಸೊಗಸಾದ ಅಮೆರಿಕನ್ ಸುಂದರಿಯನ್ನು ಸಂಧಿಸಿದೆ. ನನ್ನ ಕಷ್ಟ ಕ್ರೋಸೋವಿನ ಕಷ್ಟಗಳಿಗಿಂತ ಕಡಿಮೆಯಾದುದಲ್ಲ. ಲಿಫ್ಟ್ ವಿಷಯದಲ್ಲಿನ ಅವರ ಅಜ್ಞಾನದಿಂದ ಅವಳಿಗೆ ಆಶ್ಚರ್ಯವೂ ವಿನೋದವೂ ಉಂಟಾಗಿ ‘ನೀವು ಇಷ್ಟು ದಡ್ಡರಾಗಿ ಇಂಗ್ಲೀಷ್‍ನ್ನು ಇಷ್ಟು ಚೆನ್ನಾಗಿ ಮಾತನಾಡುತ್ತಿದ್ದಿರಲ್ಲಾ..! ಎಂದಳಂತೆ ಆಶ್ಚರ್ಯದಿಂದ.
ಈಗ ವ್ಯಾಟ್ಸಪ್ ಯುಗ. ಒಂದೇ ನಿಮಿಷದಲ್ಲಿ ಅಮೇರಿಕಾದಲ್ಲಿರುವ ಮಿತ್ರರಿಗೂ ಮೆಸೇಜ್ ಕಳಿಸಬಹುದು. ಆದರೆ ಗೊರೂರರ ಕಾಲದಲ್ಲಿ ಕಾರ್ಡ್‍೯ನಲ್ಲಿ ಹೆಚ್ಚಿನ ವಿಷಯವಿದ್ದರೆ ಇನ್‍ಲ್ಯಾಂಡ್ ಲೆಟರ್‍ನಲ್ಲಿ ಪತ್ರ ವ್ಯವಹಾರ ಮಾಡಬೇಕಿತ್ತು. ದೂರವಾಣಿ ಬಡವರಿಗೆ ಗಗನ ಕುಸುಮವಾಗಿತ್ತು. ಇಂತಹ ದಿನಗಳಲ್ಲಿ ಗೊರೂರರು ಮಾಸ್ತಿಯವರಿಗೆ ತಮ್ಮ ಹಳ್ಳಿಯ ಚಿತ್ರಗಳು ಪುಸ್ತಕಕ್ಕೆ ಮುನ್ನುಡಿ ಬಯಸಿ ಪೀಡಿಸಿದ ಪತ್ರಗಳನ್ನು ಬಯಲು ಮಾಡಿದ್ದಾರೆ ಶಂಕರಪ್ಪ ಬಾರಿಕೇರ. ತಾ. 6-1-1931 ರಂದು ಗೊರೂರರು ಕೆಂಗೇರಿಯಿಂದ ಮಾಸ್ತಿಯವರಿಗೆ ಬರೆದ ಪತ್ರ. ನಾನು ತಮ್ಮಲ್ಲಿ ಪ್ರತ್ಯಕ್ಷವಾಗಿ ಹೇಳಿದಂತೆ ಅದನ್ನು ಅಚ್ಚು ಹಾಕಿಸಬೇಕೆಂಬ ಲವಲವಿಕೆ ನನಗೂ ನನ್ನ ಸ್ನೇಹಿತರಿಗೂ ಬಹಳವಾಗಿದೆ. ನಾನು ಮೊದಲ ದಿವಸ ಆಫೀಸಿನಲ್ಲಿ ತಮಗೆ ಕೊಟ್ಟ ಆ ಪುಸ್ತಕದಲ್ಲಿ ಇರುವ ಚಿತ್ರಗಳಲ್ಲಿ ಒಂದೆರಡನ್ನು ಬಿಟ್ಟು ಬಿಡುತ್ತೇನೆ. ಮಾರನೆಯ ದಿವದ ತಾವಿಲ್ಲದಿದ್ದಾಗ ತಮ್ಮ ಮನೆಯಲ್ಲಿ ಕೊಟ್ಟಿರುವ ನಾಲ್ಕು ಚಿತ್ರಗಳ ಪೈಕಿ ಹಳ್ಳಿ ಹಾವಾಟ ಎಂಬುದನ್ನು ನಮ್ಮ ಭಾವನವರ ಒಂದು ಪ್ರಸಂಗ ಎಂಬುವುದನ್ನು ಬಿಟ್ಟುಬಿಡುತ್ತೇನೆ ಅಥವಾ ತಮ್ಮ ಅಪ್ಪಣೆಯಂತೆ ಮತ್ತಾವುದನ್ನಾದರೂ ಬಿಡುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಅವುಗಳಲ್ಲಿರುವ ಎಲ್ಲಾ ವ್ಯಕ್ತಿಗಳೂ ಊಹೆಯ ರಾಜ್ಯದವರು ಮಾತ್ರ… ಶೋಕದಲ್ಲೂ ನಗೆಯ ಉಕ್ಕಿಸುವ ಪ್ರಸಂಗ ಕುಮಾರ ಆರ್. ಹುಡುಕಿದ್ದಾರೆ.
ಒಬ್ಬ ಮುದುಕಿ ಸತ್ತಿರುತ್ತಾಳೆ. ಆಕೆಯ ವಯಸ್ಸು 97. ಆದರೆ 11ನೇ ವರ್ಷಕ್ಕೆ ವಿಧವೆಯಾದಳಂತೆ. ಆಕೆ 86 ವರ್ಷಗಳು ಏಕಾಂಗಿ ಜೀವನ ಕಳೆದಿದ್ದಾಳೆ. ಎಲ್ಲರೂ ಚಿತೆ ಮಾಡುವ ಚಿಂತೆಯಲ್ಲಿ ಇರುವಾಗ ಅಪ್ಪಣ್ಣೈಯಂಗಾರಿ ಸ್ವಲ್ಪ ಯೋಚಿಸಿ ಚಿತೆಯ ಉದ್ದ ಸಾಕೆ ಎಂದನಂತೆ. ತಕ್ಷಣ ಶೀನಪ್ಪ ‘ಅದರ ಮೇಲೆ ಮಲಗಿಕೊಂಡು ನೋಡು.. ಎನ್ನುತ್ತಾನೆ. ಅವಾಗ ಅಲ್ಲಿದ್ದ ಜನರು ‘ಛೇ, ಛೇ, ಹಾಗೆಲ್ಲ ಹೇಳಬೇಡ.. ಎನ್ನಲು ಶೀನಪ್ಪ ‘ಏನು ಮಹಾ ನಾನು ಏನು ಸಾಯಿ ಎಂದೆನೇ.? ಒಂದು ಪಕ್ಷ ಸತ್ತರೆ ತಾನೇ ಯಾವ ರಾಜ್ಯ ಆಳೋದು ಮುಳುಗಿಹೋಯ್ತು…
ಅ.ನ.ಕೃ ಒಂದೆಡೆ ಹಾಸ್ಯವಿಲ್ಲದ ಬಾಳು ದೇವರಿಲ್ಲದ ದೇಗುಲದಂತೆ. ದೀಪ್ತಿಯಿಲ್ಲದೆ ದೀವಿಗೆಯಂತೆ. ಕಪ್ಪು ಮೋಡ ತುಂಬಿದ ಜೀವನಾಕಾಶದಲ್ಲಿ ಹಾಸ್ಯವು ಬೆಳ್ಳಿಯ ಬೆಳಕು ಎಂದಿದ್ದಾರೆ.
ಪ್ರಸಾದಮೂರ್ತಿ ಜಿ. ಅವರು ಅಮೆರಿಕಾದಲ್ಲಿದ್ದರೂ ಕನ್ನಡದವರು ಗಾದೆಯ ಮಾತು ಬಿಡಲಿಲ್ಲ ಎಂದು ಕೆಲ ಗಾದೆಗಳನ್ನು ಉಲ್ಲೇಖಿಸಿದ್ದಾರೆ.
ಅಮೆರಿಕಕ್ಕೆ ಬಂದು ಅನ್ನಕ್ಕೆ ಅತ್ತರಂತೆ.!
ಧರ್ಮಕ್ಕೆ ಅನ್ ಎಂಪ್ಲಾಯ್‍ಮೆಂಟ್ ಚೆಕ್ಕೊಟ್ರೆ
ತೊಂಬತ್ತು ಡಾಲರು ಕಮ್ಮಿ ಅಂತ ಗೊಣಗಿದನಂತೆ.!
ಸ್ಕಾಚ್ ಕುಡಿಯುವವನಿಗೆ ಸಂಧ್ಯಾವಂದನೆ ಬೇರೆ
ನೀರಿದೆಯೆ ಅಂದ್ರೆ ಬೀರಿದೆ ಅಂದ ಹಾಗೆ !
ಅಂದ್ಹಾಗೆ ಗೊರೂರಿನಲ್ಲಿ ಭಾನುವಾರ 7-7-2024ರಂದು ಗೆಳೆಯ ಡಿ.ಸುಂದರೇಶ್ ಉಡುವೇರೆ ಇವರು ಗೊರೂರರ ಜನ್ಮೋತ್ಸವ ನೆನಪಿನಲ್ಲಿ ಅದ್ಧೂರಿ ಸಾಹಿತ್ಯ ಕಾರ್ಯಕ್ರಮ ಏರ್ಪಡಿಸಿ ಗೊರೂರರ ಸಾಹಿತ್ಯ ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಿದ್ದಾರೆ. ವಿಶೇಷವಾಗಿ ಕೆನಡಾದಲ್ಲಿ ನೆಲೆಸಿರುವ ಡಾ. ಗೊರೂರರ ಮಗಳು ವಸಂತಮೂರ್ತಿ ಮೇಡಂ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ನಾವು ಹೊರಟ್ಟಿದ್ದೇವೆ. ನೀವು ಬನ್ನಿ. ಸಾಹಿತ್ಯಾಸಕ್ತರಿಗೆ ಸುಸ್ವಾಗತ.
ಗೊರೂರು ಅನಂತರಾಜು, ಹಾಸನ.
ಮೊ: 9449462879
ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, 3ನೇ ಕ್ರಾಸ್, ಹಾಸನ.