ಬೆಳಗಾವಿ ಜಿಲ್ಲೆಯ ಗೊಡಚಿ ಜಾಗೃತ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ಹೊಂದಿದ ಐತಿಹಾಸಿಕ ಪ್ರಸಿದ್ದ ಗ್ರಾಮ. ಇದು ಜಿಲ್ಲಾ ಕೇಂದ್ರದಿಂದ ೭೮ ಕಿ.ಮೀ. ರಾಮದುರ್ಗ ತಾಲೂಕ ಕೇಂದ್ರದಿಂದ ೧೪ ಕಿ.ಮೀ ಅಂತರದಲ್ಲಿದ್ದು ಸವದತ್ತಿ,ಮುನವಳ್ಳಿ, ಗೋಕಾಕ,ರಾಮದುರ್ಗ ಇತ್ಯಾದಿ ಯಾವುದೇ ಮಾರ್ಗದಿಂದಲೂ ಬರಲು ಸಾಕಷ್ಟು ವಾಹನ ಸೌಕರ್ಯ ಹೊಂದಿದ ಉತ್ತರ ಕರ್ನಾಟಕದ ಪ್ರಸಿದ್ದ ದೇವಾಲಯ ತಾಣ.
ವಿಜಯನಗರ ಶೈಲಿಯ ಈ ದೇವಾಲಯಕ್ಕೆ ಪುಣೆ, ಬೆಂಗಳೂರು, ಬಾಂಬೆ, ಬೀದರ್, ಗುಲಬರ್ಗಾ, ಕೊಲ್ಲಾಪುರಗಳಿಂದ ಪ್ರವಾಸಿಗರು ಬಂದು ದರ್ಶನ ಪಡೆಯುವರು.
ರಾಮದುರ್ಗ ತಾಲೂಕು ಬಹುಕಾಲದಿಂದ ತೊರಗಲ್ಲು ಶಿಂಧೆ ಮಹಾರಾಜರ ಆಳ್ವಿಕೆಯ ತಾಣವಾಗಿ ಗುರುತಿಸಲ್ಪಟ್ಟಿದೆ. ಇನ್ನು ಗೊಡಚಿ ಎಂಬ ಹೆಸರು ಬರಲು ಕಾರಣ ಇಲ್ಲಿ ಕೊಡಚಿ ಕಂಟಿಗಳಿದ್ದವು,ಇದರ ಹಣ್ಣಿನ ರುಚಿ ಒಗರು,ಇಂಥ ಕಂಟಿಗಳು ದಟ್ಟವಾಗಿ ಬೆಳೆದಿದ್ದರಿಂದ ತಲೆಮರೆಸಿಕೊಳ್ಳುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿತ್ತಂತೆ. ಕೊಡಚಿಯೇ ಗೊಡಚಿಯಾಗಿದೆ ಎಂದು ಹೇಳುವರು.
ಹಾಗೆಯೇ ಇಲ್ಲಿ ರಣಭಾಜಿ ಎಂಬ ಸ್ಥಳವುಂಟು ಅಂದರೆ ಇಲ್ಲಿ ೧೨ನೇ ಶತಮಾನದ ಕಲ್ಯಾಣದ ಚಾಲುಕ್ಯರಿಗೂ, ಶಿವಶರಣರಿಗೂ ಘೋರ ಯುದ್ದ ಘಟಿಸಿದ್ದು ನಂತರ ಶಿವಶರಣರು ಇದೇ ಮಾರ್ಗವಾಗಿ ಉಳುವಿ ಕ್ಷೇತ್ರದತ್ತ ಪಯಣ ಬೆಳೆಸಿರುವುದನ್ನು ಇತಿಹಾಸ ದೃಢಪಡಿಸಿದೆ.
ಇಂಥ ಸ್ಥಳದಲ್ಲಿ ವೀರಭದ್ರ ದೇವಾಲಯವು ಪ್ರಸಿದ್ದಿ ಪಡೆದಿದೆ. ದಕ್ಷಬ್ರಹ್ಮನ ಯಜ್ಞ ಕಾಲದಲ್ಲಿ ಪರಶಿವನ ಆಜ್ಞೆಯಂತೆ ಉದಿಸಿದ ವೀರಭದ್ರನು ಸವದತ್ತಿಯ ರೇಣುಕಾದೇವಿಯ ಸಹೋದರ ಸ್ವರೂಪ.ವೀರಭದ್ರ ಎಂಬ ದೈವ ಸ್ವರೂಪದ ಬಗ್ಗೆ ಅನೇಕ ಕಥೆಗಳಿವೆ ದ್ರಾವಿಡ ಪುರುಷ ಎಂತಲೂ,ಶಿವನ ವೀರಸೇನಾನಿ ಎಂದೂ ಕರೆಯುವ ವೀರಭದ್ರ, ರುದ್ರ ಹಾಗೂ ಕಾಳಿಕಾದೇವಿಯ ಪುತ್ರ.ಈತನ ಮಡದಿ ಭದ್ರಕಾಳಿ. ಅಂದಹಾಗೆ ಭಾರತದಾದ್ಯಂತ ವೀರಭದ್ರದೇವರ ದೇವಾಲಯಗಳಿದ್ದು ಅದರಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ದವಾದವುಗಳಲ್ಲಿ ಗೊಡಚಿ ವೀರಭದ್ರ ದೇವಾಲಯ,ಕಾರಟಗಿ ವೀರಭದ್ರ ದೇವಾಲಯ,ತಡಕೋಡ ವೀರಭದ್ರ ದೇವಾಲಯ. ರಾಯಚೋಟಿ ವೀರಭದ್ರ ದೇವಾಲಯ,ಶಿಂಗಟಾಲೂರಿನ ವೀರಭದ್ರ, ಬೆಳಗಾವಿಯ ವೀರಭದ್ರ,ಯಡೂರ ವೀರಭದ್ರ ದೇವಾಲಯಗಳು ಪ್ರಸಿದ್ದಿಹೊಂದಿವೆ.
ಸವದತ್ತಿ ಯಲ್ಲಮ್ಮ ದೇವಿಯ ಸಹೋದರ ಸ್ವರೂಪ ಎಂಬುದಕ್ಕೆ ಕೂಡ ಕಥೆಯೊಂದಿದೆ, ದಕ್ಷಬ್ರಹ್ಮನ ಯಜ್ಞವನ್ನು ತಡೆದ ವೀರಭದ್ರ ರೌದ್ರಾವತಾರದ ಭರದಲ್ಲಿ ಯಜ್ಞಕುಂಡದಲ್ಲಿ ಬೀಳುವ ಸಂದರ್ಭದಲ್ಲಿ ರೇಣುಕಾದೇವಿ ಅವನ ನಡುಪಟ್ಟಿಯನ್ನು ಹಿಡಿದು ಎಳೆದು ರೌದ್ರವತಾರದಲ್ಲಿ ಮೈಮರೆತಿದ್ದವನಿಗೆ ಮುಂದಾಗುವ ಅಪಾಯದಿಂದ ಪಾರುಮಾಡುವ ಮೂಲಕ ಸಹೋದರಿಯ ಸ್ಥಾನ ತುಂಬಿದಳು. ಅದರಂತೆ ಪ್ರತಿವರ್ಷ ವೀರಭದ್ರನು ಯಲ್ಲಮ್ಮನ ಜಾತ್ರೆಯ ಕಾಲಕ್ಕೆ ದೇವಿಗೆ ಸೀರೆ, ಕುಪ್ಪುಸ, ಹಸಿರು ಬಳೆ, ಉಲುಪಿ ಸಾಮಗ್ರಿಗಳನ್ನು ಸಹೋದರತ್ವದ ಕಾಣಿಕೆಯಾಗಿ ಕೊಡುವುದನ್ನು ಮುತ್ತೈದೆಯ ಹುಣ್ಣಿಮೆ ಸಂದರ್ಭದಲ್ಲಿ ಇಂದಿಗೂ ನಡೆದು ಬಂದಿದ್ದು, ಗೊಡಚಿ ಜಾತ್ರೆಯ ಕಾಲಕ್ಕೆ ವೀರಭದ್ರ ದೇವರಿಗೆ ದೋತರ, ಶಲ್ಯ, ನಂದಿಕೋಲು, ಪೂಜಾ ಸಾಮಗ್ರಿ ಮೊದಲಾದವುಗಳನ್ನು ಸಹೋದರಿಯ ಕಾಣಿಕೆಯಾಗಿ ಕಳಿಸಿಕೊಡುವ ಸಂಪ್ರದಾಯ ಇಂದಿಗೂ ಇದೆ. ಈ ಕುರಿತು ಪುರಾಣಗಳಲ್ಲಿ ಕಥೆಗಳಿವೆ. ಶ್ರೀ ರೇಣುಕಾದೇವಿ ಚಲನಚಿತ್ರದಲ್ಲೂ ಕೂಡ ಈ ಕುರಿತ ಘಟನೆಯನ್ನು ಚಿತ್ರಿಸಲಾಗಿದೆ.
ಒಟ್ಟಿನಲ್ಲಿ ಇತಿಹಾಸ ಪ್ರಸಿದ್ದವಾದ ಈ ದೇವಾಲಯ ಉತ್ತರ ಕರ್ನಾಟಕದಲ್ಲಿ ಪ್ರಸಿದ್ದಿ ಹೊಂದಿದ್ದು ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸತಿ ಸೌಕರ್ಯವುಂಟು ಹಾಗೂ ಅನ್ನದಾಸೋಹ ವ್ಯವಸ್ಥೆ ಇದ್ದು ದೇವಾಲಯವು ವಿಶಾಲ ಪ್ರಾಂಗಣ ಹೊಂದಿದ್ದು ವೀರಭದ್ರ, ಮುದಿವೀರಭದ್ರ, ಭದ್ರಕಾಳಿ ದೇವಾಲಯಗಳನ್ನು ಹೊಂದಿದ್ದು ದೇವಾಲಯ ಎದುರಿಗೆ ದೀಪಮಾಲಿಕಾ ಕಂಭವಿದೆ.ಗರ್ಭಗುಡಿಯಲ್ಲಿರುವ ವೀರಭದ್ರ ವಿಗ್ರಹವು ಚತುರ್ಭುಜವನ್ನು ಹೊಂದಿದ್ದು ಬಲ ಮುಂಗೈಯಲ್ಲಿ ಖಡ್ಗ,ಎಡ ಮುಂಗೈಯಲ್ಲಿ ವೃತ್ತಾಕಾರದ ಗುರಾಣಿ, ಬಲ ಹಿಂಗೈಯಲ್ಲಿ ತ್ರಿಶೂಲ,.ಎಡ ಹಿಂಗೈಯಲ್ಲಿ ನಾಗರ ಹಡೆ ಹಿಡಿದು ಹಸ್ತನಾಗರ ರೂಪದ ಮೂರ್ತಿಯು ಸುಮಾರು ನಾಲ್ಕು ಅಡಿ ಎತ್ತರದ ರುಂಡಮಾಲಧಾರಿಯಾಗಿದೆ.
ಈ ದೇವಾಲಯದ ಪೂರ್ವಕ್ಕೆ ದಿಗಂಬರೇಶ್ವರ ಮುನಿಯ ಗದ್ದುಗೆ ಇದೆ. ದಕ್ಷಿಣಕ್ಕೆ ವಿಭೂತಿಮಠ ಎಂಬ ಗವಿಯೂ ಇದ್ದು,ಈಶಾನ್ಯ ದಿಕ್ಕಿಗೆ ಹನ್ನೆರಡನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರಿಗೂ ಮತ್ತು ಶಿವಶರಣರಿಗೂ ನಡೆದ ಯುದ್ದದ ಸ್ಥಳ “ರಣಬಾಜಿ”ಇದೆ.
ಅಂದರೆ ಕಲ್ಯಾಣ ಕ್ರಾಂತಿಯ ನಂತರ ಚನ್ನಬಸವಣ್ಣನ ನೇತೃತ್ವದಲ್ಲಿ ಮಡಿವಾಳ ಮಾಚಿದೇವ ಸಕಲೇಶ ಮಾದರಸ.ಅಕ್ಕ ನಾಗಮ್ಮ. ಕನ್ನದಿ ಬೊಮ್ಮಯ್ಯ ಮೊದಲಾದ ಶರಣರು ಗೊಡಚಿ ಕ್ಷೇತ್ರಕ್ಕೆ ಬಂದು ತಂಗಿದ್ದು ಬಿಜ್ಜಳನ ಸೈನ್ಯವು ಈ ಸ್ಥಳಕ್ಕೆ ಬಂದಾಗ ಘೋರ ಯುದ್ದ ಘಟಿಸಿತು. ಆ ಸ್ಥಳ ರಣಭಾಜಿ. ಈ ಮೂರು ದಿಕ್ಕುಗಳಲ್ಲಿಯೂ ಮೂರು ಕೂಗು ಬಸವಣ್ಣನ ಮಾಲಗಂಭಗಳಿವೆ.
ಈ ದೇವಾಲಯದ ವಾಸ್ತುಶಿಲ್ಪವು ಗರ್ಭಗೃಹ.ಸುಖನಾಸಿ,ಆಧುನಿಕ ವಿನ್ಯಾಸದ ನವರಂಗ,ದ್ರಾವಿಡ ಶೈಲಿಯ ಗರ್ಭಗೃಹ ಹೊಂದಿದ್ದು ೩೩ ಹಳ್ಳಿಗಳ ಒಡೆಯರೆನಿಸಿದ್ದ ಸಿಂಧೆ ಮಹಾರಾಜರ ಅಧೀನಕ್ಕೆ ಗೊಡಚಿಯು ಇರುವುದು.
ಪ್ರತಿ ವರ್ಷ ಹೊಸ್ತಿಲ ಹುಣ್ಣಿಮೆಯಂದು ಇಲ್ಲಿ ರಥೋತ್ಸವ ಜರುಗುತ್ತದೆ.ಈ ರಥೋತ್ಸವದ ಸಂದರ್ಭದಲ್ಲಿ ಇಲ್ಲಿ ಬಳವಲ ಹಣ್ಣುಗಳ ಮಾರುಕಟ್ಟೆ ಹಾಗೂ ನಾಟಕ ಥಿಯೇಟರುಗಳ ಸುಗ್ಗಿ ಹೇಳತೀರದ್ದು,ಐದು ದಿನಗಳ ಕಾಲ ಇಲ್ಲಿ ಸೇರುವ ಜನಸಂದಣಿ ಅಪಾರ, ರಥೋತ್ಸವದಂದು ನಾಡಿನ ಎಲ್ಲ ಮೂಲೆ ಮೂಲೆಗಳಿಂದ ರಸ್ತೆಸಾರಿಗೆ ಸಂಪರ್ಕ ವ್ಯವಸ್ಥೆ ಜಾತ್ರಯಂದು ದಟ್ಟಣೆಯಿಂದ ಕೂಡಿದ್ದು ಚಕ್ಕಡಿ,ಇತರೆ ವಾಹನಗಳಲ್ಲಿ ಆಗಮಿಸುವ ಭಕ್ತರ ಸಂಖ್ಯೆಯೂ ಅಪಾರ,ಗೊಡಚಿ ಜಾತ್ರೆಯ ಸವಿಯನ್ನು ಸವಿಯ ಬರುವವರ ಸಂಖ್ಯೆಗೆ ಮಿತಿಯಿಲ್ಲ,ಉತ್ತರ ಕರ್ನಾಟಕದ ಯಲ್ಲಮ್ಮಾ ದೇವಿ ಕ್ಷೇತ್ರ, ಬದಾಮಿ ಬನಶಂಕರಿ ಕ್ಷೇತ್ರ ಹೊರತು ಪಡಿಸಿದರೆ ಗೊಡಚಿ ಕ್ಷೇತ್ರವೇ ಹೆಚ್ಚು ಜನಸಂದಣಿ ಹೊಂದುವ ಜಾತ್ರಾ ಸ್ಥಳ.
ಯಾವುದೇ ಮಾರ್ಗದ ಮೂಲಕ ಗೊಡಚಿ ಕ್ಷೇತ್ರಕ್ಕೆ ಬರಲು ಬಸ್ ಸೌಕರ್ಯವುಂಟು ಹಾಗೂ ದಿನನಿತ್ಯವೂ ದೇವಾಲಯದ ಟ್ರಸ್ಟ ಮೂಲಕ ಅನ್ನದಾಸೋಹ ವ್ಯವಸ್ಥೆ ಇದ್ದು ತಂಗಲು ಕೂಡ ವಸತಿಗೃಹಗಳ ಅನುಕೂಲತೆ ಹೊಂದಿರುವ ಉತ್ತರ ಕರ್ನಾಟಕದ ಪ್ರಸಿದ್ದ ಪುಣ್ಯಕ್ಷೇತ್ರ ಗೊಡಚಿ.ಇಲ್ಲಿ ದೇವರಿಗೆ ನಿತ್ಯವೂ ಅಭಿಷೇಕ ಪೂಜೆ ಸಲ್ಲುವ ಜೊತೆಗೆ ಈ ಕ್ಷೇತ್ರದಲ್ಲಿ ಗುಗ್ಗಳೋತ್ಸವ,ವಿವಾಹ ಕಾರ್ಯಗಳು,ಜವುಳ ಕಾರ್ಯಗಳು ಜರುಗಲ್ಪಡುತ್ತವೆ,ಅದರಲ್ಲೂ ಪುರವಂತರು ಶಸ್ತ್ರ ಹಾಕಿಸಿಕೊಳ್ಳುವ,ಅವರ ಹೇಳುವ ವೀರಾವೇಷದ ಒಡಬುಗಳು ಜಾನಪದ ಸಾಹಿತ್ಯದ ಸಾಮಗ್ರಿಗಳಾಗಿವೆ. ವೀರಭದ್ರದೇವರ ಕುರಿತ ಒಡಬಿಗೆ ಒಂದು ಉದಾಹರಣೆ;
ಅಹಾ ವೀರಾ; ಆಹ ಹಾ ರುದ್ರ ; ನಮ್ಮ ಶ್ರೀ ವೀರಭದ್ರದೇವರು ಹೇಗರ‍್ದರೆಂದರೆ : ಅಯ್ಯಾ ಪ್ರಳಯದುರಿ ಮೂರ್ತಿಗೊಂಡಂತೆ : ಕಿಡಿಯನುಗುಳುವ ಕಣ್ಣು
ಲಲಾಟದಲ್ಲಿ ಪುಂಡ್ರ; ಕೈಯಲ್ಲಿ ಮಸೆದೆಲಗು
ರಣಚೂರಿ ಕಠಾರಿ; ವೀರಬಾಣ ಹೊಗೆಬಾಡಾ; ವಜ್ರಬಾಣ ರತ್ನಗತ್ತಿ;ಉರುಲಿನ ಹಗ್ಗ; ಇಂತೀ ಆಯುಧ ಸನ್ನದ್ದನಾಗಿ; ಹೋ ಎಂದು ಕೂಗಿ ಆರ್ಭಟಿಸಿ; ದಕ್ಷನ ಯಜ್ಞಭೂಮಿಯನ್ನು ಹೊಕ್ಕು; ; ಅಲ್ಲಿ ಕೂಡಿದ ಕೋಟಿಗಟ್ಟಲೆ ದೇವತೆಗಳನ್ನು ಕಂಡು; ಕಮ್ಮನೇ ಕೆಮ್ಮಲು;ಕೆಂಡದುಂಡಿಗಳು ಉರಿದೆದ್ದವಯ್ಯ;
ಎಂಬ ಈ ವಡಬು ದಕ್ಷನ ಯಜ್ಞವನ್ನು ವೀರಭದ್ರ ನಾಶಪಡಿಸುವ ಕಥೆಯನ್ನು ಒಳಗೊಂಡಿದ್ದು ಇಂಥ ಅನೇಕ ಒಡಬುಗಳನ್ನು ಪುರವಂತರು ಗುಗ್ಗಳ ಸಂದರ್ಭ ಹಾಗೂ ಜಾತ್ರೆಯ ಸಂದರ್ಭದಲ್ಲಿ ಹೇಳುವುದನ್ನು ಕಂಡರೆ ಮೈರೋಮಾಂಚನಗೊಳ್ಳುವುದು, ಇಂಥ ಜಾಗೃತ ವೀರಭದ್ರ ದೇವಾಲಯ ಹೊಂದಿದ ಗೊಡಚಿ ಈ ಪವಿತ್ರ ತಾಣಕ್ಕೆ ಭೇಟಿ ನೀಡಿ ಪುನೀತರಾಗಿ.
ವೈ.ಬಿ.ಕಡಕೋಳ