ಅಯ್ಯೋ! ಇದೇನು ಮಾಡಿದೆ ನಾನು. ಇದನ್ನು ಮಾಡದೇ ಹೋಗಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲಿರುವ ಬದಲು ಬೇರೆಲ್ಲೋ ಇದ್ದಿದ್ದರೆ ಬಹಳ ಚೆನ್ನಾಗಿರುತ್ತಿದ್ದೆ. ಹೀಗೆ ಮಾಡುವ ಬದಲು ಹಾಗೆ ಮಾಡಿದ್ದರೆ ಒಳ್ಳೆಯದಿತ್ತು. ಇದು ಬಹಳ ಕಠಿಣ ನನ್ನಿಂದ ಮಾಡಲು ಸಾಧ್ಯವಿಲ್ಲ. ಇಂಥ ಗೊಂದಲಯುಕ್ತ ಅಸಂಬದ್ಧ ಹೇಳಿಕೆಗಳನ್ನು ಹೇಳುತ್ತ ಬದುಕುವುದನ್ನು ರೂಢಿಸಿಕೊಂಡರೆ ಏನನ್ನೂ ಸಾಧಿಸಲಾಗುವುದಿಲ್ಲ.
‘ಹೋಗುವ ದಾರಿ ತಲುಪುವ ಗುರಿ ನಿರ್ದಿಷ್ಟವಾಗಿದ್ದರೆ ಮಾತ್ರ ಸುಸಂಬದ್ಧ ಮತ್ತು ಸಾರ್ಥಕ ಜೀವನ ಪಡೆಯಲು ಸಾಧ್ಯ.’ ಅಂತ ಗೊತ್ತು. ಆದರೂ ‘ರೆ… ಪ್ರಪಂಚ’ ದಲ್ಲಿ ನಕಾರಾತ್ಮಕ ಆಲೋಚನೆಗಳಲ್ಲಿ ನೇತು ಹಾಕಿಕೊಳ್ಳುವುದರಲ್ಲೇ ಕಾಲ ಕಳೆಯುತ್ತೇವೆ. ಇವೆಲ್ಲ ಅಸಂಬದ್ಧ, ಅವಾಸ್ತವ, ಅಸ್ವಾಭಾವಿಕ, ಆಗದ್ದು ಎಂದು ಗೊತ್ತಿದ್ದೂ ಅದರಲ್ಲೇ ಮುಳುಗಿರುತ್ತೇವೆ. ಇಂಥ ಅನಿಸಿಕೆಗಳಿಗೆ ಈಗಿಲ್ಲದ ಜಾಗಗಳಿಗೆ ಈಗಿಲ್ಲದ ಸನ್ನಿವೇಶಗಳಿಗೆ ಜಾರಿ ಹೋಗುತ್ತೇವೆ. ಕೈಯಲ್ಲಿರುವ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತೇವೆ.
ಇವತ್ತು ರವಿವಾರ ಆಗಿದ್ದಿದ್ದರೆ ಗೆಳೆಯರೊಂದಿಗೆ ಸಿನಿಮಾಕ್ಕೆ ಹೋಗಬಹುದಿತ್ತು. ಶನಿವಾರ ಆಗಿದ್ದರೆ ಅರ್ಧ ದಿನ ರಜೆ ಇರುತ್ತಿತ್ತು. ಹೊರಗೆ ಊಟ ಮಾಡಿ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಹೀಗೆ ಏನೇನೋ ಅಂದುಕೊಳ್ಳುವುದಕ್ಕೆ ಮಿತಿಯೇ ಇಲ್ಲದಂತೆ ತಲೆ ಓಡಿಸುತ್ತೇವೆ. ಅವೆಲ್ಲವೂ ಆಗಲಾರದವುಗಳೆಂದು ಸತ್ಯಕ್ಕೆ ದೂರವಾದವುಗಳೆಂದು ಗೊತ್ತಿದ್ದೂ ಅದರಲ್ಲಿ ಕಾಲ ಕಳೆಯಲು ಏನೋ ಒಂಥರ ಮಜ ಅನಿಸುತ್ತದೆ. ಬಿಡಬೇಕೆಂದರೂ ಅನಗತ್ಯ ಯೋಚನೆಗಳ ಈ ಹುಚ್ಚು ಬಿಡುವುದಿಲ್ಲ. ಇದರಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ ಇಲಿ ಬಜಿಗಾಗಿ ಬಲೆಯಲ್ಲಿ ಸಿಕ್ಕಂತೆ ಸುಳ್ಳಿನ ಕನಸಿನ ಲೋಕಕ್ಕೆ ಜಾರಿ ಕ್ಷಣಿಕ ಸುಖಕ್ಕೆ ಹಾತೊರೆಯುತ್ತೇವೆ ಹಾನಿ ಅನುಭವಿಸುತ್ತೇವೆ.
ಊಹಾಲೋಕ ಭ್ರಮಾಲೋಕದಲ್ಲಿ ಸುತ್ತುತ್ತ ಪ್ರಸ್ತುತ ಲೋಕವನ್ನೇ ಮರೆಯುವುದು ನಿಜಕ್ಕೂ ಅಪಾಯಕಾರಿ. ‘ಈ ಹೊತ್ತು, ಇಲ್ಲಿ ನಾವು ಈಗ ಏನಾಗಿದ್ದೇವೆಯೋ ಅದೊಂದೇ ಸತ್ಯ. ಉಳಿದೆಲ್ಲ ಕಲ್ಪನೆಗಳು ಮಿಥ್ಯ.’ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದರೆ ಪ್ರಸ್ತುತ ಗಳಿಗೆಯನ್ನು ಕಳೆದುಕೊಂಡಂತೆ ಸರಿ. ಪ್ರಸ್ತುತ ವಾಸ್ತವ ಲೋಕದಿಂದ ದೂರವಾದರೆ ಮಾಡಲೇಬೇಕಾದ ಕೆಲಸಗಳಿಂದ ದೂರವಾಗುತ್ತೇವೆ. ಅಷ್ಟೇ ಅಲ್ಲ ಮಾಡುವ ಕೆಲಸಗಳಲ್ಲೂ ಆಸಕ್ತಿ ಕಳೆದುಕೊಳ್ಳುತ್ತೇವೆ. ಏಕಾಗ್ರತೆಯೂ ಹಾಳಾಗುತ್ತದೆ. ಹಾಗಿದ್ದರೆ ‘ರೆ… ಪ್ರಪಂಚದಿಂದ’ ಹೊರ ಬರುವುದು ಹೇಗೆ? ಅನಗತ್ಯ ಆಲೊಚನೆಗಳನ್ನು ತೊಡೆದು ಹಾಕುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ ಬನ್ನಿ.
ಆಲೋಚನೆಗಳು
ನಮಗೆಲ್ಲ ಗೊತ್ತಿರುವಂತೆ ಮಾನವನ ಮನಸ್ಸು ಆಲೋಚನೆಗಳ ಕಾರ್ಖಾನೆಯಂತೆ ಕಾರ್ಯ ನಿರ್ವಹಿಸುವುದು. ಒಂದು ಆಲೋಚನೆಯ ನಂತರ ಮತ್ತೊಂದನ್ನು ಮಂಥನ ಮಾಡುತ್ತಲೇ ಇರುತ್ತದೆ. ಹಾಗಂತ ಅದು ಉತ್ಪಾದಿಸುವ ಎಲ್ಲ ಆಲೋಚನೆಗಳು ಉತ್ತಮವಾಗಿರುತ್ತವೆ ಒಳ್ಳೆಯದನ್ನೇ ಮಾಡುತ್ತವೆ ಅಂತಿಲ್ಲ.
ಕೆಲವು ನಕಾರಾತ್ಮಕವಾಗಿರುತ್ತವೆ. ಕೆಟ್ಟ ಭಾವನೆಗಳನ್ನು ಉಂಟು ಮಾಡುತ್ತವೆ. ಒಂದು ಅಂದಾಜಿನ ಪ್ರಕಾರ ದಿನಕ್ಕೆ ಸುಮಾರು 50,000 ರಿಂದ 60,000 ಆಲೋಚನೆಗಳು ಉತ್ಪತ್ತಿಯಾಗುತ್ತವೆ. ಆಲೋಚನೆಗಳ ಬಲದಿಂದ ಏಳುತ್ತೇವೆ ಇಲ್ಲವೇ ತಳ್ಳಲ್ಪಡುತ್ತೇವೆ. ಎಂದು ಭಾವಿಸುತ್ತೇವೆ. ಇದು ಅಂತರ್ಗತವಾಗಿ ಶಕ್ತಿಹೀನ ಸ್ಥಿತಿ. ಮನಸ್ಸಿನಿಂದ ಆಲೋಚನೆಗಳ ನಿರಂತರ ಬಾಂಬ್ ಸ್ಪೋಟಕ್ಕೆ ನಮ್ಮ ಅಸ್ತಿತ್ವವು ಜೈಲಿನಲ್ಲಿ ಬಂಧಿಸಲ್ಪಟ್ಟ ಖೈದಿಯಂತೆ ಭಾಸವಾಗುತ್ತದೆ. ನಮ್ಮ ‘ಮನಸ್ಸಿನಲ್ಲಿ ಬರುವ ಆಲೋಚನೆಗಳನ್ನು ಆಯ್ಕೆ ಮಾಡಲು ಸಾಧ್ಯವಾಗದಿರಬಹುದು. ಆದರೆ ಅವುಗಳಿಂದ ಪ್ರಭಾವಿತರಾಗದಿರಲು ಸಾಧ್ಯವಿದೆ.’ ಬೇಡವಾದ ಆಲೋಚನೆಗಳಿಂದ ಹೇಗೆ ಮುಕ್ತರಾಗುವುದು ಎನ್ನುವದಕ್ಕೆ ಇಲ್ಲಿವೆ ಕೆಲವು ಸಲಹೆಗಳು.
ಅನುಮತಿಸಿ
‘ನೀವು ಬೆಳಿಗ್ಗೆ ಎದ್ದಾಗ ಬದುಕುವುದು ಎಂದರೆ- ಉಸಿರಾಡುವುದು, ಆಲೋಚಿಸುವುದು, ಸಂತೋಷಪಡುವುದು, ಪ್ರೀತಿಸುವುದು – ಎಂಥ ಅಮೂಲ್ಯ ಅನುಭವವೆಂಬುದನ್ನು ಅನುಭವಿಸಿ.’ ಎನ್ನುತ್ತಾನೆ ಮಾರ್ಕಸ್ ಅರೆಲಿಯಸ್ ನಕಾರಾತ್ಮಕ ಆಲೋಚನೆಗಳು ಉಂಟಾದಾಗ ಅದು ನಮ್ಮ ದೇಹದಲ್ಲಿ ಕೆಟ್ಟ ಭಾವನೆಯನ್ನು ಉಂಟುಮಾಡುತ್ತದೆ. ಮತ್ತು ತಕ್ಷಣದ ಪ್ರತಿಕ್ರಿಯೆಯು ಆಲೋಚನೆಯನ್ನು ದೂರ ತಳ್ಳುವುದು.
ಆದರೆ ಸತ್ಯದಲ್ಲಿ ನೀವು ವಿರೋಧಿಸಲು ಅಥವಾ ದೂರ ತಳ್ಳಲು ಪ್ರಯತ್ನಿಸುವ ಆಲೋಚನೆಗೆ ನೀವು ಸಂಕೋಲೆಯಾಗುತ್ತೀರಿ. ಅಷ್ಟೇ ಅಲ್ಲ ನೀವು ದೂರ ತಳ್ಳಲು ಯತ್ನಿಸಿದಷ್ಟು ಹೆಚ್ಚು ಅದು ನಿಮ್ಮನ್ನು ಕಾಡುತ್ತದೆ. ಸ್ವಾರಸ್ಯಕರ ಸಂಗತಿಯೆಂದರೆ, ವಿರೋಧಿಸುವ ಬದಲು ಅನುಮತಿಸಿದರೆ ಪ್ರಯತ್ನವಿಲ್ಲದೇ ಹಾದು ಹೋಗುತ್ತದೆ. ಮತ್ತು ಅದು ನಿಮ್ಮ ಅಸ್ತಿತ್ವದ ಶಕ್ತಿಯಾಗಿ ಪರಿವರ್ತಿಸುತ್ತದೆ.ಅನಗತ್ಯ ಆಲೋಚನೆಗೆ ಗಮನ ಕೊಡದೇ ಹಾದು ಹೋಗುವ ಮೋಡದಂತೆ ನೋಡಿ. ಆಗ ಅದು ತೇಲುತ್ತದೆ.
ಜಾಗೃತರಾಗಿರಿ’ಯಾವ ವ್ಯಕ್ತಿಯೂ ಹೊರಗಿನಿಂದ ನಾಶವಾಗುವುದಿಲ್ಲ. ಅಂತಿಮ ವಿನಾಶ ಒಳಗಿನಿಂದಲೇ ಉಂಟಾಗುತ್ತದೆ.’ ಅಮೆಲಿಯಾ ಬಾರ್ರ್ ಎಂಥ ಮಾರ್ಮಿಕವಾದ ನುಡಿ ನುಡಿದಿದ್ದಾನಲ್ಲವೇ? ಬೇಡವಾದ ಆಲೋಚನೆಗಳಿಂದ ಶಾಶ್ವತವಾಗಿ ತೊಡೆದು ಹಾಕಲು ಪ್ರಬಲ ಮಾರ್ಗವೆಂದರೆ ಪ್ರಜ್ಞೆಯ ಬೆಳಕು ಅದರ ಮೇಲೆ ಬೆಳಗಲು ಮತ್ತು ಅದರ ಶಕ್ತಿಯನ್ನು ಪರಿವರ್ತಿಸಲು ಅವಕಾಶ ನೀಡುವುದು. ಆಲೋಚನೆಯನ್ನು ನಿರ್ಣಯಿಸಬೇಡಿ. ವಿಶ್ಲೇಷಿಸಲು ಪ್ರಯತ್ನಿಸಬೇಡಿ ಅದರಲ್ಲೇ ಕಳೆದುಹೋಗಬೇಡಿ. ಆದರೆ ಅದರ ಬಗ್ಗೆ ಜಾಗೃತರಾಗಿರಿ.
ಜಾಗೃತರಾಗಿದ್ದಾಗ ನಿಮ್ಮ ಗಮನವನ್ನು ಎಳೆಯಲು ಸಾಧ್ಯವಿಲ್ಲ. ಪ್ರಜ್ಞೆಯ ಬುದ್ಧಿಯು ನಕಾರಾತ್ಮಕ ಚಿಂತನೆಯನ್ನು ಕರಗಿಸುತ್ತದೆ.
ಗಮನ ಕೊಡದಿರಿ
ಆಲೋಚನೆಗಳಿಗೆ ಗಮನ ಕೊಡದಿದ್ದರೆ ನಿಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳಲು ಅವುಗಳಿಗೆ ಯಾವುದೇ ಮಾರ್ಗವಿಲ್ಲ. ಅನಗತ್ಯ ಆಲೋಚನೆಗಳಿಗೆ ಹೆದರಬೇಡಿ. ನಂಬಿಕೆ ಮತ್ತು ಗಮನವನ್ನು ನೀಡದ ಹೊರತು ಅವು ನಿರುಪದ್ರವಗಳು ಎಂಬುದನ್ನು ನೆನಪಿನಲ್ಲಿಡಿ. ಅವಶ್ಯಕ ಕೆಲಸಗಳಿಗೆ ಆದ್ಯತೆ ನೀಡದೇ ನಕಾರಾತ್ಮಕ ಚಿಂತನೆ ಮತ್ತು ಕಲ್ಪನಾ ಲೋಕದಲ್ಲಿ ವಿಹರಿಸುವುದನ್ನು ಬಿಡುವುದು ನಾವಂದುಕೊಂಡಷ್ಟು ಸುಲಭದ ಕೆಲಸವಲ್ಲ ಆದರೂ ಅಸಾಧ್ಯವೇನಲ್ಲ. ಅನಗತ್ಯ ವಿಷಯಗಳಿಗೆ ಕೊಡಬಾರದಷ್ಟು ಆದ್ಯತೆ ನೀಡಿದರೆ ಆಗಬಾರದ್ದು ಆಗುತ್ತದೆ. ವಿನಾಕಾರಣ ಸಣ್ಣಪುಟ್ಟದ್ದಕ್ಕೆ ತಲೆ ಕೆಡಿಸಿಕೊಳ್ಳುವುದು ನಮ್ಮ ಆಲೋಚನೆಗಳ ಅರ್ಧ ಭಾಗದಷ್ಟು ಕಾರ್ಯಗತಕ್ಕೆ ಬಾರದಿರುವಂತೆ ಮಾಡುತ್ತದೆ.
ಗುರಿಯಿಲ್ಲದ ಜೀವನ
‘ಮನುಷ್ಯ ದಿನವೆಲ್ಲ ಏನು ಮಾಡುತ್ತಾನೋ ಅದೇ ಆಗುತ್ತಾನೆ.’ ಕಲ್ಪನಾ ವಿಲಾಸದಿಂದ ಮರಳಿ ಬಂದು ಸದ್ಯದ ಸಮಸ್ಯೆಗಳನ್ನು ಪರಿಹರಿಸಲು ಗಮನ ಹರಿಸಬೇಕು. ಮಾಡಲೇಬೇಕಾದ ಕೆಲಸಗಳತ್ತ ಚಿತ್ತ ಹರಿಸಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ತುಂಬಲಾರದಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಗುರಿ ಇರುವ ಬದುಕಿಗೂ ಗುರಿಯಿರದ ಬದುಕಿಗೂ ಬಹಳಷ್ಟು ವ್ಯತ್ಯಾಸವಿದೆ. ಗುರಿಯಿರುವ ಬದುಕು ಕನ್ನಡಿಯಂತೆ ಕಠಿಣವಾಗಿರುತ್ತದೆ. ಕಠಿಣವೆನಿಸಿದರೂ ಒಂದು ಹರಳು ತಾಗಿದರೂ ಸಾಕು ಕನ್ನಡಿ ಹಾಳಾಗುತ್ತದೆ. ಅಂತೆಯೇ ಗುರಿ ತಪ್ಪಿ ಬದುಕು ಹಾಳಾಗುತ್ತದೆ. ಗುರಿಯಲ್ಲಿ ಗಟ್ಟಿಯಾಗಿ ನೆಲೆಯೂರಿದಾಗ ಉತ್ಸಾಹ ಹೆಚ್ಚುತ್ತದೆ. ಅವಾಸ್ತವ ಸಂಗತಿಗಳಲ್ಲಿ ಸಮಯ ವ್ಯರ್ಥ ಮಾಡಲು ಮನಸ್ಸಾಗುವುದಿಲ್ಲ. ದಿನಾಲೂ ಏನಾದರೂ ವಿಶೇಷ ಮಾಡಬೇಕೆಂಬ ಉತ್ಕಟೆಚ್ಛೆ ಕಾಡುತ್ತಿರುತ್ತದೆ. ಗುರಿ ತಲುಪುವುದು ಎಂದರೆ ನೀರು ಗಾಳಿ ಬೆಳಕಿನಷ್ಟು ಆತ್ಯಾವಶ್ಯಕ.
ಕೊನೆ ಹನಿ
ಅಸ್ತವ್ಯಸ್ತ ಜೀವನ ಪದ್ಧತಿ ಅತ್ಯಂತ ದೋಷಪೂರಿತವಾಗಿ ಕಾಣುತ್ತದೆ. ಸೃಜನಶೀಲತೆಯನ್ನು ಸೀಮಿತವಾಗಿ ಇಟ್ಟುಕೊಳ್ಳದೇ ಅದರ ಬಾಹುಗಳನ್ನು ವಿಸ್ತಾರವಾಗಿ ಚಾಚುವುದು ಅನಿವಾರ್ಯ. ಕಲ್ಪನಾ ಲೋಕದ ಸುಖ ದುಃಖಗಳು ವಾಸ್ತವ ಲೋಕಕ್ಕಿಂತ ಹೆಚ್ಚು ಮನೋಹಾರಿ ಎಂದೆನಿಸುವವು. ಕಲ್ಪನಾಲೋಕದಲ್ಲಿ ಕಾಲ ಕಳೆಯುವವರನ್ನು ವಿವೇಕ ಶೂನ್ಯ ಹರಟೆ ಎಂದು ನಗಾಡುವುದು ಉಚಿತವೆಂದುಕೊಳ್ಳುವರು. ನಿಮ್ಮ ‘ರೆ.. ಪ್ರಪಂಚದ’ ಹಗಲುಗನಸುಗಳ ಅನಗತ್ಯ ಆಲೋಚನೆಗಳ ಪಟ್ಟಿಯನ್ನು ಒಂದು ದಿನಚರಿಯಲ್ಲಿ ಬರೆದಿಡಿ. ‘ನೀವೆಲ್ಲಿ ಎಡವುತ್ತೀರೋ ಅಲ್ಲೇ ನಿಮ್ಮ ನಿಧಿ ಅಡಗಿರುವುದು’ ಎಂದಿದ್ದಾನೆ ಜೊಸೆಫ್ ಕ್ಯಾಂಪ್‍ಬೆಲ್.ಅನಗತ್ಯ ಆಲೋಚನೆಗಳು ತೊಂದರೆಗಳನ್ನು ತೊಡೆದು ಹಾಕುವುದಿಲ್ಲ ಬದಲಿಗೆ ಮನಸ್ಸಿನ ನೆಮ್ಮದಿಯನ್ನು ಕಿತ್ತುಕೊಳ್ಳುತ್ತದೆ.
ಬದಲಾವಣೆ ಅನಿವಾರ್ಯ ಅನ್ನುವಷ್ಟು ದೊಡ್ಡ ಪೆಟ್ಟು ಬಿದ್ದಾಗ ಮಾತ್ರ ಮನುಷ್ಯ ಬದಲಾಗುತ್ತಾನೆ. ಆಲೋಚನೆಗಳಿಗೆ ಗಮನ ನೀಡದಿರುವುದು ಅನಿವಾರ್ಯ. ಅನಿವಾರ್ಯತೆ ಅಸಮತೋಲನವನ್ನು ತಂದೊಡ್ಡುತ್ತದೆ. ಆ ಅನಿವಾರ್ಯತೆಯಿಂದಲೇ ಬದುಕಿನ ಹೊಸ ಅಧ್ಯಾಯ ಆರಂಭವಾಗುತ್ತದೆ. ಉತ್ತಮವಾದುದನ್ನು ನಿರೀಕ್ಷಿಸಿ ಪ್ರಯತ್ನಿಸಿದರೆ ಅನಗತ್ಯವಾದುದು ತಾನೇ ದೂರ ಸರಿದು ಚೆಂದದ ಜೀವನಕ್ಕೆ ದಾರಿ ಮಾಡಿಕೊಡುತ್ತದೆ.
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142