ಹುನಗುಂದ: ಹೇಳಿ ಕೇಳಿ ಹುನಗುಂದ ತಾಲ್ಲೂಕು ಬಯಲ ನಾಡು. ಮತ್ತೆ ಬರದ ನಾಡೆಂಬ ಹಣೆಪಟ್ಟಿ ಬೇರೆ. ಸದ್ಯ ಇಳಕಲ್ ತಾಲೂಕಿಗೆ ಸೇರಿದ ಗುಡೂರ, ದಮ್ಮೂರಗಳ ಗುಡ್ಡಗಳ ಇರುವ ದಟ್ಟ ಕಾಡು. ಮತ್ತೆ ಹುನಗುಂದ ತಾಲೂಕಿನ ಅಮೀನಗಡ ಕಮತಗಿ ಭಾಗದಲ್ಲಿ ಇರುವ ಕಾಡಿನಲ್ಲಿ ಸಾವಿರಾರು ಸಂಖ್ಯೆಯ ನವಿಲುಗಳು ವಾಸವಾಗಿವೆ. ಅಲ್ಲದೇ ಎರಡೂ ತಾಲೂಕುಗಳ ಚಿಕನಾಳ, ಸಿದ್ದನಕೊಳ್ಳ, ರಾಮಥಾಳ, ಗುಡ್ಡ ಪ್ರದೇಶ, ಅಮರಾವತಿ, ಚಿತ್ತರಗಿ, ಕೂಡಲಸಂಗಮ ಹೊಳೆ ಸಾಲಿನ ಹಳ್ಳ ಕೊಳ್ಳಗಳ ತಪ್ಪಲಲ್ಲಿ ಅಧಿಕ ಪ್ರಮಾಣದಲ್ಲಿ ನವಿಲುಗಳು ಹಿಂಡು ಹಿಂಡಾಗಿ ಓಡಾಡುತ್ತವೆ.
ತಾಲೂಕಿನ ಅಮೀನಗಡ ಮತ್ತು ಕಮತಗಿ ಭಾಗದಲ್ಲಿ ಹಾಯ್ದು ಹೋದ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿಯಲ್ಲಿ ಆಗಾಗ ದಾಟಲು ಹೋಗಿ ಅನೇಕ ಸಂದರ್ಭಗಳಲ್ಲಿ ವಾಹನಗಳ ಬಾಯಿಗೆ ಸಿಕ್ಕು ಜೀವ ಕಳೆದುಕೊಂಡ ಉದಾಹರಣೆಗಳೂ ಇವೆ.
ದೈನಂದಿನ ಓಡಾಟ ಮತ್ತು ಆಹಾರ ಹುಡುಕಾಟದ ಸಂದರ್ಭದಲ್ಲಿ ರೈತರ ತೋಟ ಮತ್ತು ಹೊಲಗಳಲ್ಲಿ ಕಂಡಾಗ ಬಿತ್ತಿದ ಬೀಜ ಆಯ್ದು ತಿನ್ನುತ್ತವೆ, ಹಿಂಡು ಹಿಂಡಾಗಿ ಬಂದು ಬೆಳೆದ ಪೈರು ನಾಶಪಡಿಸುತ್ತವೆ ಎಂದು ರೈತರು ಪಟಾಕಿ ಹೊಡೆಯುವ ಮತ್ತು ಬೇಲಿಗಳಿಗೆ ವಿದ್ಯುತ್ ಸಂಪರ್ಕ ಕೊಟ್ಟು ಇವುಗಳ ಹಾವಳಿ ತಪ್ಪಿಸಲು ಮಾಡಿದ ಅಚಾತುರ್ಯ ಫಲವಾಗಿ ಸಾಕಷ್ಟು ನವಿಲುಗಳು ಸಾಯುತ್ತಿವೆ. ರೈತರಿಗೆ ತೊಂದರೆಯಾಗದಂತೆ ನಲಿವುಗಳನ್ನು ಸಂರಕ್ಷಣೆ ಮಾಡಬೇಕು.
ನಮ್ಮ ಅರಣ್ಯ ಇಲಾಖೆ ಮತ್ತು ಪರಿಸರ ಕಾಳಜಿಯ ಮನಸ್ಸುಗಳು ಈ ಚೆಂದದ ನವಿಲು ಕುಟುಂಬವನ್ನು ಮೊದಲು ಸಮೀಕ್ಷೆ ಮಾಡಿಸುವಲ್ಲಿ ಮುಂದಾಗಬೇಕು. ಅತ್ತಿಂದಿತ್ತ ರಸ್ತೆ ದಾಟಿ ಜೀವ ಕಳೆದುಕೊಳ್ಳುವುದು ಮತ್ತು ರೈತರ ಕೈಕೊಳ್ಳುವ ತಡೆ ಕ್ರಮಗಳು ಕುರಿತಾದ ಜಾಗೃತಿ ಮೂಡಿಸಬೇಕು. ರಾಷ್ಟ್ರಪಕ್ಷಿಯೆಂದು ಹೆಸರಿಸಲ್ಪಟ್ಟ ಈ ನಮ್ಮ ನವಿಲು ಉಳಿಯಬೇಕು. ನಮ್ಮ ಬಯಲ ನಾಡಿನಲ್ಲಿ ಚೆಂದದ ನವಿಲುಗಳ ನರ್ತನ ಕಣ್ಮನ ಸೆಳೆಯಬೇಕು.
(ಈ ಲೇಖನಕ್ಕೆ ಚಿತ್ರಗಳನ್ನು ಅಂತರ್ಜಾಲದಿಂದ ಪಡೆಯಲಾಗಿದೆ)
ಎಸ್ಕೆ ಕೊನೆಸಾಗರ ಹುನಗುಂದ