ಮೂಡಲಗಿ – ಕಳೆದ ವರ್ಷ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಗೋಕಾಕ ಅಪರ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು ಕೊಲೆಗಾರರಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಸರ್ಕಾರಿ ಅಭಿಯೋಜಕರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದು ದಿ. ೧೭.೭.೨೦೨೩ ರಲ್ಲಿ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಮಹಿಳೆಯೊಬ್ಬಳು ಪ್ರಿಯಕರನ ಜೊತೆಗೂಡಿ ಸಂಚು ಮಾಡಿ ಗ್ರಾಮದ ಶ್ರೀ ಬನಸಿದ್ದೇಶ್ವರ ದೇವಸ್ಥಾನದಲ್ಲಿ ಕೊಲೆ ಮಾಡಿಸಿದ್ದಳು. ಪ್ರಕರಣದ ವಿಚಾರಣೆ ನಡೆದು ನ್ಯಾಯಮೂರ್ತಿ ತಾರಕೇಶ್ವರ ಪಾಟೀಲ ಅವರು ಇಬ್ಬರೂ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಮೃತನ ಕುಟುಂಬಕ್ಕೆ ರೂ. ೨.೫೦ ಲಕ್ಷ ಪರಿಹಾರ ನೀಡಬೇಕೆಂದು ಆದೇಶ ನೀಡಿದ್ದಾರೆ.
ಪ್ರಕರಣದ ವಿವರ : ಮೂಡಲಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ವಡೇರಹಟ್ಟಿ ಗ್ರಾಮದಲ್ಲಿ ಪ್ರಕರಣದ ೨ ನೇ ಆರೋಪಿ ಸಿದ್ದವ್ವ ಉರ್ಫ್ ಪ್ರಿಯಾಂಕಾ ಜಗಮುತ್ತಿ ಇವಳು ಹೊಸದಾಗಿ ಮದುವೆಯಾಗಿ ತನ್ನ ಪತಿ ಶಂಕರ ಜಗಮುತ್ತಿ ಈತನೊಡನೆ ಗ್ರಾಮದ ಶ್ರೀ ಬನಸಿದ್ದೇಶ್ವರ ದೇವಸ್ಥಾನಕ್ಕೆ ಬಂದ ನೆಪ ಮಾಡಿ ಮೊದಲೇ ಯೋಜಿಸಿದಂತೆ ದೇವಸ್ಥಾನದಲ್ಲಿ ಬಚ್ಚಿಟ್ಟುಕೊಂಡಿದ್ದ ಆಕೆಯ ಪ್ರಿಯಕರ ಒಂದನೇ ಆರೋಪಿ ಶ್ರೀಧರ ತಳವಾರನೊಡನೆ ಸಂಚು ರೂಪಿಸಿ ಅಲ್ಲಿಯೇ ಪತಿಯನ್ನು ಕೊಲೆ ಮಾಡಿಸಿದ್ದಳು.
ಪ್ರಕರಣದ ತನಿಖೆ ನಡೆಸಿದ ಮೂಡಲಗಿ ಸಿಪಿಐ ಶ್ರೀಶೈಲ ಬ್ಯಾಕೋಡ ಅವರು ಸೂಕ್ತ ಸಾಕ್ಷ್ಯಾಧಾರಗಳೊಡನೆ ಚಾರ್ಜ್ ಶೀಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಗೋಕಾಕ ಅಪರ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ಮೃತನ ಕುಟುಂಬಕ್ಕೆ ಪರಿಹಾರವಾಗಿ ರೂ. ೨.೫೦ ಲಕ್ಷ ಕೊಡಬೇಕು ಎಂದು ಆದೇಶ ನೀಡಿದ್ದಾರೆ.
ಅಭಿಯೋಜನೆ ಪರವಾಗಿ ಸರ್ಕಾರಿ ಅಭಿಯೋಜಕ ಸುನಿಲ ಎಂ. ಹಂಜಿ ವಾದ ಮಂಡಿಸಿದ್ದರು.