spot_img
spot_img

ಕೃತಿ ಪರಿಚಯ- “ಸ್ವರ ಚಂದಿರ ಕಾವ್ಯ ಹಂದರ ಕವನ ಸಂಕಲನ”

Must Read

- Advertisement -

“ಸ್ವರ ಚಂದಿರ ಕಾವ್ಯ ಹಂದರ ಕವನ ಸಂಕಲನ”

ಕವಯತ್ರಿ ಗುರುಮಾತೆ ಬಸಮ್ಮ ಏಗನಗೌಡ್ರ ಅವರ ಎರಡನೆಯ ಕವನ ಸಂಕಲನ “ಸ್ವರ ಚಂದಿರ ಕಾವ್ಯ ಹಂದರ” ಇತ್ತೀಚೆಗೆ ಮುದ್ರಣಗೊಂಡು ಗುರುಮಾತೆಯ ಸಹೋದರ ಸನ್ಮಿತ್ರ ಏಗನಗೌಡರ ಗುರುಗಳು ನನ್ನ ಕೈಗೆ ಆ ಕೃತಿಯನ್ನು ನೀಡಿದರು. ಬೆಂಗಳೂರಿನ ಹೆಚ್.ಎಸ್.ಆರ್.ಎ.ಪ್ರಕಾಶನದವರು ಹೊರತಂದ ಈ ಕೃತಿ ಸುಂದರ ಮುಖಪುಟವನ್ನು ಹೊಂದಿದ್ದು ಒಟ್ಟು ೪೦ ಮಕ್ಕಳ ಕವನಗಳನ್ನು ಒಳಗೊಂಡಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗುರುಮಾತೆ ಈ ಕವನಗಳಿಗೆ ಮುನ್ನುಡಿ ಬರೆದು ಕೊಡುವಂತೆ ಕೇಳಿದಾಗ ಸಂತಸದಿಂದ ಒಪ್ಪಿಕೊಂಡು ನನ್ನ ಇಲಾಖೆಯ ಕೆಲಸದ ನಡುವೆ ಆಗಾಗ ಕವನಗಳನ್ನು ಓದುತ್ತ ಮುನ್ನುಡಿ ಬರೆದು ಕಳಿಸಿದ್ದೆ. ಇಷ್ಟು ಬೇಗ ಕೃತಿ ಹೊರಬರಬಹುದು ಅನಿಸಿರಲಿಲ್ಲ. ಒಂದು ಒಳ್ಳೆಯ ಕೃತಿಗೆ ಮುನ್ನುಡಿ ಬರೆದ ಹೆಮ್ಮೆ ನನ್ನದೆಂದು ಈ ಕೃತಿ ಮುಖಪುಟ ವಿನ್ಯಾಸದಿಂದ ಹಿಡಿದು ಕೊನೆಯ ರಕ್ಷಾಪುಟದವರೆಗಿನ ಮುದ್ರಣವನ್ನು ಗಮನಿಸಿದಾಗ ಅನಿಸಿತು.

೧೦೦ ರೂಪಾಯಿ ಮುಖಬೆಲೆ ಹೊಂದಿದ ಈ ಕವನ ಸಂಕಲನ ಮಕ್ಕಳಿಗಾಗಿಯೇ ಬರೆದ ಮಕ್ಕಳು ಹಾಡಲು ಅನುಕೂಲವಾಗುವಂತಹ ಸರಳ ಸುಂದರ ಶಬ್ದಗಳನ್ನು ಒಳಗೊಂಡಿದೆ.

- Advertisement -

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹಿರೇಉಳ್ಳಿಗೇರಿಯ ಬಡತನದಲ್ಲಿ ಅರಳಿದ ಪ್ರತಿಮೆ ಬಸಮ್ಮ ಏಗನಗೌಡರ ತಂದೆ- ರಾಮಕೃಷ್ಣಗೌಡ ಏಗನಗೌಡ್ರ. ತಾಯಿ- ಲಲಿತಾ ದಂಪತಿಗಳ ಮೂವರು ಮಕ್ಕಳಲ್ಲಿ ಹಿರಿಯ ಮಗಳು, ಇವರು ಪ್ರೌಢಶಾಲಾ ಹಂತದಲ್ಲಿ ಓದುತ್ತಿದ್ದ ಸಂದರ್ಭವದು ನೋಟ್ ಪುಸ್ತಕದಲ್ಲಿ ಕವನಗಳನ್ನು ಬರೆದಿಡುತ್ತಿದ್ದರು.

ರಾಣೆಬೆನ್ನೂರಿನ ದಿ. ಶ್ರೀಮತಿ ಗಿರಿಜಾದೇವಿ ದುರ್ಗದಮಠ ಗುರುಮಾತೆ ಅವುಗಳನ್ನು ನೋಡಿ ಓದಿಸಿ ಮತ್ತು ಅವುಗಳನ್ನು ಇವರ ಬಾಯಿಂದ ಹಾಡಿಸುವ ಮೂಲಕ ಇನ್ನಷ್ಟು ಬರೆಯುವಂತೆ ಪ್ರೋತ್ಸಾಹ ನೀಡುತ್ತಿದ್ದರು. ಈಗ ಅವರಿಲ್ಲ ಆದರೆ ಆ ನೆನಪು ಇವರ ಸಾಹಿತ್ಯಕ್ಕೆ ಪ್ರೇರಣೆ ಎಂದು ನೆನೆಯುವರು.

- Advertisement -

ಇವರ ಸಾಹಿತ್ಯ ಗರಡಿಯಲ್ಲಿ ಕಾವ್ಯ, ಚುಟುಕು ಲೇಖನ ಬರೆಯುವ ಹವ್ಯಾಸ ಬೆಳವಣಿಗೆಯಾಯಿತು.ಸದ್ಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ತಮ್ಮ ಕವನಗಳನ್ನು ಮಕ್ಕಳಿಗೆ ಹೇಳಿಸುತ್ತ ಪಠ್ಯಕ್ಕೆ ಪೂರಕವಾದ ಕವನಗಳನ್ನು ಬರೆಯುವ ಮೂಲಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿರುವವರು.

ಈಗಾಗಲೇ ಒಂದು ಕವನ ಸಂಕಲನ ಪ್ರಕಟಿಸಿರುವ ಇವರ ಎರಡನೆಯ ಕವನ ಸಂಕಲನ “ಸ್ವರ ಚಂದಿರ” ಕಾವ್ಯ ಹಂದರ ಇಲ್ಲಿ ಒಟ್ಟು ೪೦ ಕವನಗಳು ಎಡೆ ಪಡೆದಿವೆ.ಮೊದಲ ಕವನವೇ ನಮ್ಮತನದ ಪರಿಸರವನ್ನು ಸಾರುವ ನಮ್ಮ ಭಾರತದ ಒಂದನೆಯ ಚರಣವನ್ನು ಗಮನಿಸಿದಾಗ….

ಭಾರತ ಮಾತೆಗೆ
ಹಾರವ ಹಾಕುತ
ಸಾರುವ ದೇಶದ ಮಹಿಮೆಯನು
ದಾರದಿ ಪೋಣಿಪ
ಸೌರಭ ಸೂಸುವ
ಹೇರಳ ಮಹಿಮರ ಕಥೆಗಳನು

ಎನ್ನುತ್ತ ಎಷ್ಟೇ ನಗರ ವಾತಾವರಣ ಬೆಳೆದರೂ ಕೂಡ ನಮ್ಮ ರೈತಾಪಿಗಳು ತಮ್ಮ ಇರುವ ಜಮೀನಿನಲ್ಲಿ ಉತ್ತುವ ಬಿತ್ತುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡು ಬದುಕುತ್ತಿರುವರು. ಎಂಬುದನ್ನು ಉಲ್ಲೇಖಿಸಿರುವರು.ಇವರ ಬರವಣಿಗೆ ಹಸನಾಗಿ ,ಹದ ತುಂಬಿದ ತುಸು ಮಾಗಿದ ಸರಳ ಸುಂದರ ಶೈಲಿಯಾಗಿದೆ. ಜೊತೆಗೆ ಇದನ್ನು ಇವರು ಶರಶಟ್ಪದಿಯಲ್ಲಿ ಬರೆದಿದ್ದು ಕೂಡ ವಿಶೇಷ.

ಇವರ ಎರಡನೆಯ ಕವನ ಗುರು ತಲ ಷಟ್ಪದಿಯಲ್ಲಿ ರಚಿತವಾಗಿದೆ. ಇಲ್ಲಿ ಮಕ್ಕಳಿಗೆ ಶಿಕ್ಷಕ ಗುರುವಾಗುವ ರೀತಿ ಆಪ್ಯಾಯಮಾನವಾಗಿದೆ. ನಿಜಕ್ಕೂ ಇಲ್ಲಿನ ಪ್ರತಿಯೊಂದು ಚರಣಗಳು ಶಿಕ್ಷಕರಾದವರು ಮಕ್ಕಳಿಗೆ ಯಾವ ರೀತಿಯಲ್ಲಿ ಕಲಿಸಬೇಕು ಎಂಬುದರ ನೈತಿಕ ನೆಲೆಗಟ್ಟಿನ ಸಾಲುಗಳಿವೆ. ಅದರಲ್ಲಿ ಒಂದು ಚರಣವನ್ನು ಗಮನಿಸಬಹುದು.

ಸಣ್ಣ ಮಗುವ
ಬೆನ್ನು ತಟ್ಟಿ
ಸನ್ನೆ ಮಾಡಿ ತಿಳುಹಿದ
ಸೊನ್ನೆ ಜೊತೆಗೆ
ಚೆನ್ನ ಭಾಷೆ
ಕನ್ನಡವನು ಕಲಿಸಿದ

  • ನಿಸರ್ಗದಲಿ ಪ್ರೇಮ.
  • ಸಾಧಕತ್ರಯರು (ಬುದ್ಧ, ಬಸವ, ಬಾಬಾಸಾಹೇಬರ ಕುರಿತು ಕವನ
  • ಭಾರತಾಂಬೆ ನುಡಿ.
  • ನಗುವ ಬೆಳಕು (ತಲಷಟ್ಪದಿಯಲ್ಲಿ).
  • ಪ್ರಕೃತಿ ಕವನಗಳನ್ನು ಗಮನಿಸಿದಾಗ ನಿಸರ್ಗ ಪ್ರೇಮ ಮತ್ತು ಪ್ರಕೃತಿ ಕವನಗಳಲ್ಲಿನ ಇವರ ಪರಿಸರ ಪ್ರೇಮ ಅಗಾಧವಾದುದು ಇವರು ಗ್ರಾಮೀಣ ಪರಿಸರದಲ್ಲಿ ಬೆಳೆದು ಬಂದವರಾದ ಕಾರಣ ಅಲ್ಲಿನ ಪ್ರಕೃತಿ ರಮ್ಯತೆ ಇವರನ್ನು ಸೆಳೆದಿರುವುದನ್ನು ಈ ಕವನಗಳಲ್ಲಿ ಕಾಣಬಹುದು.

ಮರಗಳೊಂದಿಗೆ
ಬೆರೆತ ಹಕ್ಕಿಗೆ
ಧರೆಯೆ ಸಗ್ಗವದೆನಿಸಿಹೆ
ಝರಿಯ ತೆರದಲಿ
ಹರಿದು ದಾಹವ
ಮರೆಸಿ ಕಾಯುವೆ ಜಲಧಿಯೆ//೨ (ಪ್ರಕೃತಿ)

ಎನ್ನುತ್ತ ಸಾಗುವ ಈ ಕವಿತೆ ಕಂದಮ್ಮಗಳ ಬೆರಗಿನ ಲೋಕಕ್ಕೆ ಕರೆದೊಯ್ಯುತ್ತದೆ. ಅದೇ ರೀತಿ ಬುದ್ಧ ಬಸವ ಬಾಬಾಸಾಹೇಬರ ಕುರಿತು ಸಾಧಕ ತ್ರಯರು ಕವನ ಈ ಮೂವರು ಮಹನೀಯರ ವ್ಯಕ್ತಿತ್ವದ ವೈಚಾರಿಕ ಸಿದ್ದಾಂತಗಳ ಮೌಲ್ಯಗಳನ್ನು ಬಿಂಬಿಸಿದೆ. ಭಾರತಾಂಬೆ ನುಡಿಯು ದೇಶ ಪ್ರೇಮದ ಗರಿಮೆಯನ್ನು ಸಾರಿದರೆ ತಲ ಷಟ್ಪದಿಯಲ್ಲಿ ರಚಿತ ಕವನ ನಗುವ ಬೆಳಕು ಚಂದಿರನ ವರ್ಣನೆ ಮಗುವು ಚಂದಿರನ ಕಂಡಾಗ ಪಡುವ ಆನಂದವನ್ನು ಹೊಂದಿದೆ. ಅವರ ಬಹುತೇಕ ಕವಿತೆಗಳು ಮಕ್ಕಳಿಗೆ ಸಂದೇಶ ಸಾರಲು ಹೊರಟಿವೆ. ಆ ಸಂದೇಶಗಳೆಲ್ಲ ಆದರ್ಶ ಶಿಕ್ಷಕಿಯೊಬ್ಬರು ಮಮತೆಯ ಒಡಲಿಂದ ಕಟ್ಟಿದ ಪದಮಾಲೆಯಂತಿವೆ.

  • ಕಾಡು.
  • ಮಣ್ಣಮಗ (ಜಲ ಷಟ್ಪದಿಯಲ್ಲಿ ರಚಿತವಾಗಿದೆ)
  • ಭುವನ ಸುಂದರಿ೧೧.”ಸಂವಿಧಾನ ಶಿಲ್ಪಿ”
  • ಚಿಗುರು (ಯುಗಾದಿಯ ಶುಭಾಶಯಗಳೊಂದಿಗೆ).
  • ಬಾ ಬಾರೆ ಗೆಳತಿ.
  • ಪ್ರೇರಣಾ ಘಟಕ.
  • ಕೇಳು ಮಗು ಈ ಕವನಗಳಲ್ಲಿ ಕಾಡಿನ ಸೌಂದರ್ಯ. ಸಂವಿಧಾನ ಶಿಲ್ಪಿಯಲ್ಲಿ ಅಂಬೇಡ್ಕರ ವ್ಯಕ್ತಿತ್ವ.ಪ್ರೇರಣಾ ಘಟಕವು ಶಾಲಾ ಮಕ್ಕಳ ಚಟುವಟಿಕೆಗಳಿಗೆ ನೀಡುವ ನಕ್ಷತ್ರಗಳ ಪ್ರಶಂಸೆಯ ಸುರಿಮಳೆಯ ಕುರಿತು ಇಲಾಖೆ ತಂದ ಯೋಜನೆಯ ಫಲಶ್ರುತಿಯ ಮಹತ್ವವನ್ನು ತಿಳಿಸುತ್ತದೆ. ಗ್ರಾಮ್ಯ ಭಾಷೆಯ ಸೊಗಡಿನೊಂದಿದೆ ಗೆಳತಿಯರು ಆಟವಾಡುವ ಸಂಗತಿಯನ್ನು ಒಳಗೊಂಡ ಕವನ ಬಾ ಬಾರೆ ಗೆಳತಿ. ಕೇಳು ಮಗು ಕವನವು ಮಗುವಿಗೆ ನೈತಿಕ ವಿಚಾರಗಳನ್ನು ಬಿಂಬಿಸುತ್ತ ಬದುಕಿನ ಗುರಿಯನ್ನು ಕಂಡು ಕೊಳ್ಳುವುದಾಗಿದೆ. ಮಣ್ಣ ಮಗ ಕವನದ ಸಾಲುಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ರೈತನ ಬದುಕನ್ನು ಬಿಂಬಿಸುವ ಈ ಕವಿತೆಯಲ್ಲಿ ಅವನ ದುಡಿಮೆಯ ಗಟ್ಟಿತನವನ್ನು ಈ ಕೆಳಗಿನಂತೆ ಬಿಂಬಿಸಿರುವರು.ಜೊತೆಗೆ ರೈತ ಆತ್ಮಹತ್ಯೆಯ ಕಾರಣವ ತಿಳಿಸುವ ಮೂಲಕ ರೈತ ಕಾಳಜಿ ಈ ಕವನದಲ್ಲಿ ಅಡಕವಾಗಿದೆ.

ನೀರಿಗಾಗಿಯೆ
ದಾರಿ ಕಾಣದೆ
ಭಾರಿ ಮನವಿಯ ಮಾಡುತ
ಹಾರಿ ಹೋಯಿತು
ಜಾರಿ ಪ್ರಾಣವು
ಮಾರಿ ಸಾಲದ ಶೂಲಕೆ//೨

ಎನ್ನುವ ಸಾಲುಗಳಲ್ಲಿ ರೈತ ಆತ್ಮಹತ್ಯೆಯನ್ನು ತಿಳಿಸುವ ಮೂಲಕ ಮುಂದಿನ ಸಾಲುಗಳಲ್ಲಿ ರೈತನ ಗಟ್ಟಿತನವನ್ನು ಇವರು ಹಿಡಿದಿಟ್ಟಿರುವರು. ರೈತನ ಬದುಕು ಎಷ್ಟು ಕಷ್ಟಮಯ.ಆದರೂ ಅವನು ಭೂಮಿತಾಯಿಯ ಮಗ ಎಂಬುದನ್ನು ಪ್ರತಿ ಸಾಲುಗಳಲ್ಲಿ ಬಿಂಬಿಸಿರುವರು. ಯುಗಾದಿಯ ಕುರಿತು ಚಿಗುರು ಎಂಬ ಕವನವು ಪ್ರಕೃತಿಯ ಚಲುವನ್ನು ವರ್ಣಿಸಿರುವರು.

  • ಸ್ವಾತಂತ್ರ‍್ಯ ನೇತಾರರು.
  • ಗುರು ನಮನ
  • ಬಾಲಬಣ (ಭೋಗ ಷಟ್ಪದಿ)
  • ಕಲಿಕೆಯ ರಹದಾರಿ
  • ನಮ್ಮ ಕನ್ನಡ ನಾಡು
  • ದೀಪ ಬೆಳಗಿ
  • ಬೆಕ್ಕಿನ ಮರಿ
  • ಶಾಲಾ ಬಿಸಿಯೂಟ
  • ಪಾವನ ಬದುಕು (ಶರ ಷಟ್ಪದಿಯಲ್ಲಿ)
  • ಗಂಧದ ನಾಡು (ತಲ ಷಟ್ಪದಿಯಲ್ಲಿ)
  • ಸ್ವರ ಚಂದಿರ
  • ಜ್ವಾಲಾಮುಖಿ
  • ಅಭಿನಂದನೆ

ಈ ಎಲ್ಲ ಕವನಗಳನ್ನು ಗಮನಿಸಿದಾಗ ಗುರು ನಮನ. ಕಲಿಕೆಯ ದಾರಿ, ನಮ್ಮ ಕನ್ನಡ ನಾಡು, ದೀಪ ಬೆಳಗಿ ಬೆಕ್ಕಿನ ಮರಿ, ಬಿಸಿಯೂಟ ಇವುಗಳು ನಮ್ಮ ಶಾಲಾ ವಾತಾವರಣಕ್ಕೆ ಪೂರಕವಾದವುಗಳು. ಮಕ್ಕಳ ಕಲಿಕೆಗೆ ಗುರುವಿನ ಮಾರ್ಗದರ್ಶನ ಅಗತ್ಯತೆ ಮಕ್ಕಳ ಪುಟ್ಟ ಆಟ. ಕಲಿಕೆಯ ರಹದಾರಿಯನ್ನು ಗುರುಮಾತೆ ತುಂಬ ವೈಶಿಷ್ಟö್ಯಪೂರ್ಣವಾಗಿ ಪದಗಳಲ್ಲಿ ಹಿಡಿದಿಟ್ಟಿರುವರು. ಇನ್ನು ಸ್ವಾತಂತ್ರö್ಯ ನೇತಾರರು ಕವಿತೆಯ ಬಗ್ಗೆ ಎರಡು ಮಾತು ಹೇಳಲೇ ಬೇಕು.

ಫಾಸಿ ಶಿಕ್ಷೆಯ ಪಡೆದ ಧನ್ಯರು
ದಾಸರಾಗದೆ ವೀರತನದಲಿ
ಮೀಸೆ ಹೊತ್ತಿಹ ನಮ್ಮ ಕಲಿಗಳು ಬೆಳಕು ನಮಗೆಲ್ಲಾ//
ಆಸೆಯೆಲ್ಲವ ತೊರೆದ ಶೂರರು
ಕಾಸು ಕೇಳದೆ ದುಡಿದ ಮಾನ್ಯರು
ವಾಸವಾಗಿಹ ನೆಲದ ಮಣ್ಣಿನ ಕುರುಹು ಜಗಕೆಲ್ಲಾ//೧

ಈ ಮೊದಲ ಚರಣದಲ್ಲಿಯೇ ಸ್ವಾತಂತ್ರ್ಯ ನೇತಾರರು ಯಾರು ಎಂಬುದನ್ನು ತುಂಬ ಸರಳ ಮತ್ತು ಅವರ ವ್ಯಕ್ತಿತ್ವ ಎಂತಹದು ಎಂಬುದನ್ನು ಬಿಂಬಿಸಿರುವರು. ಇಡೀ ಕವಿತೆಯ ಶೈಲಿಯೇ ಅವರ ವ್ಯಕ್ತಿತ್ವವವನ್ನು ಬಿಂಬಿಸುತ್ತ ಸಾಗಿದೆ.‌ ಒಂದು ಘಟ್ಟಿ ಧ್ವನಿ ಈ ಕವನದಲ್ಲಿ ಅಡಗಿದೆ.

  • “ಪಾಪು ಕವಿಗಳ ಬಾಪು”. ಪಾಟೀಲ ಪುಟ್ಟಪ್ಪನವರ ಕುರಿತ ಕವನವಾದರೆ ಹಬ್ಬಗಳ ಸಡಗರದ
  • ಶ್ರಾವಣ ಮಾಸ. ಶರ ಷ್ಟಪದಿಯಲ್ಲಿ ರಚಿತ
  • ಮಕ್ಕಳ ವಿದ್ಯ ಭಕ್ತಿ ಕುಸುಮದ
  • ವಿನಾಯಕ. ಮಕ್ಕಳ ಕಲಿಕಗೆ ಒತ್ತಕ್ಷರಗಳ ಮಹತ್ವ ಸಾರಯವ
  • ಒತ್ತಕ್ಷರ ಗೀತೆ ಶಿಕ್ಷಣದ ಮಯತ್ವ ಸಾರುವ
  • ಶಿಕ್ಷಣ ದೀಕ್ಷೆ
  • ದಲಿತ ಕವಿ ಎಂದೇ ಖ್ಯಾತಿ ಹೊಂದಿದ ಸಹೃದಯ ಕವಿ ಕುರಿತ
  • ಡಾ.ಸಿದ್ದಲಿಂಗಯ್ಯ ನುಡಿನಮನ. ಮಳೆ ಯಾರಿಗೆ ತಾನೇ ಇಷ್ಟವಿಲ್ಲ. ಅದರಲ್ಲೂ ಸೋನೆ ಮಳೆಯ ಸೊಗನ್ನು ತಮ್ಮ ಸುಂದರ ಸಾಲುಗಳಲ್ಲಿ
  • ಸುಂದರ ಸೋನೆ ಮಳೆ. ಎಂಬ ಕವಿತೆಯಲ್ಲಿ ಗುರುಮಾತೆ ಹಿಡಿದಿಟ್ಟಿದ್ದಾರೆ. ಭೂಮಿಗೆ ಬೆಳಕು ನೀಡುವ ಜೊತೆಗೆ ಜಗಕ್ಕೆಲ್ಲ ಬೆಳಕಾದ
  • ಸೂರ್ಯದೇವ. ನಮ್ಮ ಬದುಕು ನಿತ್ಯವೂ ಶಾಂತಿ ಸಹನೆ ನೆಮ್ಮದಿಯಿಂದ ಕೂಡಿದ್ದರೆ ಅದು ಶಿಕ್ಷಕ ವೃತ್ತಿಗೆ ಕಳಶಪ್ರಾಯ.ಅದರಲ್ಲೂ ಕರುಣೆಗೆ ಮಹತ್ವವಿದೆ ಎಂಬುದನ್ನು ವರುಣ ದೇವ ಭೂಮಿಗೆ ತನ್ನ ಕರುಣೆಯ ಮೂಲಕ ಮಳೆ ಸುರಿಸುವನು ಎನ್ನುವ ಭಾವ ಹೊಂದಿದ
  • ತುಸು ಕರುಣೆ
  • ಗಿಡದ ಮಿಡಿತ

ಗಿಡವ ನೆಟ್ಟು ನೀರು ಗೊಬ್ಬರ
ಬಿಡದೆ ಹಾಕುತ ಬೆಳೆಸಿರಿ
ಹಡೆದ ತಾಯಿಯ ತೆರದಿ ಕಾಯುವ
ಮಿಡಿತವಿರುವುದು ಕಾಣಿರಿ//೧

ಎನ್ನುವ ಈ ಕವನ ಮಗುವನ್ನು ತಾಯಿ ಬೆಳೆಸುವ ಪರಿಯನ್ನು ನೆನಪಿಸಿ ತಾಯ ಹೃದಯ ಮಮತೆಯ ರೀತಿಯಲಿ ಗಿಡವನ್ನು ನೆಟ್ಟು ಪೋಷಿಸಿ ಎಂಬ ಸಂದೇಶ ನೀಡುತ್ತದೆ.

ಹಾಡು ಹಕ್ಕಿಯ ಬಾಳಿಗಾಸರೆ
ಗೂಡ ಮರಿಗದು ರಕ್ಷೆಯು
ಮೋಡ ತಡೆಯುತ ಮಳೆಯ ಸುರಿಸಲು
ನಾಡು ಪಡೆವುದು ಬಿಕ್ಷೆಯು

ಎನ್ನುವ ಕೊನೆಯ ಸಾಲುಗಳು ಕೂಡ ಹೃದಯಂಗಮವಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ಗುರುಮಾತೆಯ ಮೊದಲ ಕವನ ಸಂಕಲನಕ್ಕಿಂತ ಭಿನ್ನವಾದ ಧ್ವನಿಯನ್ನು ಈ ಕವನಗಳು ಒಳಗೊಂಡಿರುವುದನ್ನು ಗಮನಿಸಿದೆ. ದಿನ ದಿನಕ್ಕೆ ಬರವಣಿಗೆಯ ಪಕ್ವತೆ ಕವನಗಳಲ್ಲಿ ಕಂಡು ಬರುತ್ತದೆ. ಜೊತೆಗೆ ಪ್ರಕೃತಿ ಪ್ರೇಮ.ಮಾನವೀಯ ಮೌಲ್ಯಗಳು. ದೇಶ ಪ್ರೇಮದ ಸುತ್ತ ಕವನಗಳು ಮೂಡಿ ಬಂದಿರುವುದು ಇವರೊಬ್ಬ ಶಿಕ್ಷಕಿಯಾಗಿರುವುದು ಕಾರಣ ಮಕ್ಕಳಲ್ಲಿ ಮೌಲ್ಯವನ್ನು ತುಂಬುವ ಶಿಕ್ಷಕರ ಬದುಕು ಮತ್ತೇನನ್ನು ಬಯಸಲು ಸಾಧ್ಯ.? ಹಾಗೆಯೇ ಇಲ್ಲಿನ ಕವಿತೆಗಳು ಮೂಡಿ ಬಂದಿವೆ ಎಂದರೆ ಅತಿಶಯೋಕ್ತಿಯಲ್ಲ. ಜೊತೆಗೆ ಷಟ್ಪದಿಯಲ್ಲಿಯೂ ಕೂಡ ಕವನ ರಚಿಸುವ ಮೂಲಕ ವ್ಯಾಕರಣಾಂಶಕ್ಕೂ ಒತ್ತು ನೀಡಿದ್ದಾರೆ. ಇದು ಕೂಡ ಮಹತ್ವದ ಸಂಗತಿ. ನಾವು ವ್ಯಾಕರಣಾಂಶಗಳನ್ನು ಕೂಡ ನಮ್ಮ ಕವನದ ಸಾಲುಗಳಲ್ಲಿ ಬಳಸಿದ್ದಾದರೆ ಮಕ್ಕಳಿಗೆ ವ್ಯಾಕರಣಾಂಶದ ಪರಿಕಲ್ಪನೆ ನೀಡಲು ಸಾಧ್ಯ ಎಂಬುದನ್ನು ತಮ್ಮ ಕವನಗಳಲ್ಲಿ ನಿರೂಪಿಸಿರುವುದು ಹೆಮ್ಮೆಯ ಸಂಗತಿ.

೨೦೦೫ ರ ಮೇ ೨ನೇ ತಾರೀಕಿನ ಶುಭ ದಿನದಂದು ಸಹಶಿಕ್ಷಕಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ನಾದಿಗಟ್ಟಿ, ತಾ/ಶಿರಹಟ್ಟಿ, ಜಿ/ಗದಗ ಇಲ್ಲಿ ಸೇವೆ ಆರಂಭಿಸಿದ ಗುರುಮಾತೆ.

ಆ ಊರಿಗೆ ಬಸ್ ಸೌಲಭ್ಯವಿಲ್ಲದ ಕಾರಣ ಅದೇ ಗ್ರಾಮದ ಅವಿಭಕ್ತ ಕುಟುಂಬದ ಮನೆಯೊಂದರ ಒಂದು ಕೋಣೆಯಲ್ಲಿ ೧೦ ವರ್ಷಗಳವರೆಗೆ ವಾಸವಿದ್ದು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ದಿನದ ೨೪ ಗಂಟೆ ಶ್ರಮವಹಿಸಿದ ಇವರು ಮಕ್ಕಳಿಗೆ ಹಾಡು ನೃತ್ಯ ನಾಟಕಗಳನ್ನು ಕಲಿಸಿ ಊರಿನ ಮೆಚ್ಚಿನ ಗುರುಮಾತೆಯಾಗಿ ಮಕ್ಕಳ ಮನಸ್ಸಲ್ಲಿ ನೆಚ್ಚಿನ ಶಿಕ್ಷಕಿಯಾಗಿ ಬೇರೂರಿ.

ತಮ್ಮ ಊರ ಕಡೆಗೆ ವರ್ಗಾವಣೆ ಬಯಸಿ ಚವಢಾಳ ಶಾಲೆಗೆ ವರ್ಗಾವಣೆಗೊಂಡಾಗ ಇಡೀ ಊರಿಗೆ ಊರೇ ಇವರ ವರ್ಗವನ್ನು ಬೇಡ ಎಂದು ಗೋಗರೆದಿತ್ತು. ಮಕ್ಕಳಿಗೆ ಊರಿನ ಹಿರಿಯರಿಗೆ ತಮ್ಮ ಪರಿಸ್ಥಿತಿ ವಿವರಿಸಿ ಅಲ್ಲಿಂದ ಬೀಳ್ಕೊಂಡು ಬಂದು ಸದ್ಯ ಸವಣೂರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಚವಢಾಳ ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಇವರ “ಮುದ್ದುಗಿಣಿ ಹಾಡಿಕುಣಿ” ಎಂಬ ಮೊದಲ ಮಕ್ಕಳ ಕವನಸಂಕಲನ ೨೦೨೦ ರಲ್ಲಿ ಬಿಡುಗಡೆಗೊಂಡಿದೆ.

ಅದರಲ್ಲಿನ ಕವಿತೆಗಳೂ ಕೂಡ ಮಕ್ಕಳ ಮನಸ್ಸಿಗೆ ಮುಟ್ಟುವಂತಿದ್ದು ಅದಕ್ಕಿಂತ ಪಕ್ವತೆ ಪಡೆದ ಕವನಗಳು ಈ ಕವನ ಸಂಕಲನದಲ್ಲಿ ಮೂಡಿ ಬಂದಿವೆ.‌ಒಟ್ಟಾರೆ ಗುರುಮಾತೆ ಮುಂಬರುವ ದಿನಗಳಲ್ಲಿ ತಮ್ಮ ಕಾವ್ಯಶಕ್ತಿಯ ಮೂಲಕ ನಾಡಿನ ಭರವಸೆಯ ಕವಯತ್ರಿಗಳೊಬ್ಬರಾಗಲಿ ಅಂದು ಆಶಿಸುವೆನು.‌‌ ಇಂತಹ ಕವನ ಸಂಕಲನಗಳನ್ನು ಕೊಂಡು ಓದುವ ಮೂಲಕ ಕವಯತ್ರಿಯನ್ನು ಪ್ರೋತ್ಸಾಹಿಸಿದರೆ ಅವರಲ್ಲಿನ ಸಾಹಿತ್ಯ ಮತ್ತಷ್ಟು ಕೃತಿಗಳಲ್ಲಿ ಹೊರಬರಲು ಪ್ರೇರಕ.


ವೈ.ಬಿ.ಕಡಕೋಳ
ಬಿ.ಐ.ಇ.ಆರ್.ಟಿ
ಕ್ಷೇತ್ರ ಸಂಪನ್ಮೂಲ ಕೇಂದ್ರ.ಸವದತ್ತಿ
ಜಿಲ್ಲೆಃ ಬೆಳಗಾವಿ

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group