spot_img
spot_img

ಕೃತಿ ಪರಿಚಯ: ಗೊರೂರು ಅನಂತರಾಜು ಅವರ ನಾಟಕ ವಿಮಶೆ೯ಗಳ ‘ ರಂಗಸಿರಿ – ಕಥಾ ಐಸಿರಿ ‘ ಕೃತಿ

Must Read

- Advertisement -

ಗೊರೂರು ಅನಂತರಾಜು ಅವರ ನಾಟಕ ವಿಮಶೆ೯ಗಳ ‘ ರಂಗಸಿರಿ – ಕಥಾ ಐಸಿರಿ ‘ ಕೃತಿ 

ನಾಟಕವ ಮಾಡುವರು

ನೋಡಲಿಕೆ ಜನರಿರಲು

- Advertisement -

ತೋಟದಲಿ ಹೂಗಳದು ಅರಳುವದುವೆ

ನೋಟವದು ತೋರುತಲಿ ಹೋಗುವರು ನೋಡಲಿಕೆ

ಸಾಟಿಯಿರೆ ಅಭಿನಯಕೆ ಲಕ್ಷ್ಮಿದೇವಿ…….

- Advertisement -

ನಾಟಕ ಕುರಿತಾಗಿ ಮುಕ್ತಕ ಬರೆದಿರುವ ನಾನು ಹೆಚ್. ಎಸ್. ಪ್ರತಿಮಾ ಹಾಸನ್. ದಿನನಿತ್ಯದ ಜಂಜಾಟದ ಬದುಕಿನಲ್ಲಿ ನಾಟಕ ಒಂದು ಮನಸ್ಸಿಗೆ ಆನಂದ ನೀಡುವ ಪ್ರಕಾರ. ಇಂತಹ ನಾಟಕಗಳನ್ನು ಮಾಡಿ ಯಶಸ್ವಿಗೊಳಿಸಿದ ಪಾತ್ರವನ್ನು ವಹಿಸುವವರು ಅಭಿನಯಿಸಿದ ನಟರು ನಾಟಕಕಾರರು, ನಾಟಕವನ್ನು ನಿದೇ೯ಶಿಸಿದವರು ಇಂತಹ ಒಂದು ವಿಮಶಾ೯ ಬರಹಗಳ ಸಂಗ್ರಹವೇ ರಂಗಸಿರಿ ಕಥಾ ಐಸಿರಿ ಪುಸ್ತಕ. ದಿನನಿತ್ಯ ಎಂದಿನಂತೆ ಕೆಲಸಗಳು, ಮನೆ, ಮಕ್ಕಳು ಹೀಗೆ ಕಾಲ ಕಳೆಯುತ್ತಿರುವಾಗ ಪುಸ್ತಕ ಓದುವ, ಬರೆಯುವ, ಪುಸ್ತಕ ಪರಿಚಯ ಬರೆಯುವುದು ಒಂದು ಹವ್ಯಾಸ. ಆಗ ಸಿಕ್ಕ ಪುಸ್ತಕ ಗೊರೂರು ಅನಂತರಾಜುರವರ ‘ರಂಗಸಿರಿ ಕಥಾ ಐಸಿರಿ’. 

ಆಗಾಗ ಸಮಯದ ಬಿಡುವಿನಲ್ಲಿ ಓದುವುದು, ಮುಖ್ಯ ಅಂಶ ಬರೆದುಕೊಳ್ಳುವುದು. ಪುಸ್ತಕ ಪರಿಚಯ ಮಾಡುವುದು ಒಂದು ಹವ್ಯಾಸವಾಗಿ ರಂಗಸಿರಿ ಕಥಾ ಐಸಿರಿ ಪುಸ್ತಕ ಓದಿದೆ. ಕೊಟ್ರೇಶ್ ಎಸ್ ಉಪ್ಪಾರ‍್ ರವರ ಮುನ್ನುಡಿಯೊಂದಿಗೆ ಪ್ರಾರಂಭವಾಗಿ ಬಹಳಷ್ಟು ಅನುಭವವನ್ನು ಅವರ ಸ್ನೇಹ ಸಂಬಂಧದಲ್ಲಿ ಅವರ ಸ್ವಭಾವ ತಿಳಿಸಿ ಗೊರೂರು ಅನಂತರಾಜು ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ ಪಲ್ಲವಿಸಿದೆ. ಸುಂದರ ಸಮಾಜದ ಕನಸುಗಾರರಾದ ಇವರ ಲೇಖನಿ ಸಾಹಿತ್ಯಾತ್ಮಕವಾಗಿ ಅದನ್ನು ಲಿಖಿತವಾಗಿ ರಿಂಗಣಿಸಿದೆ. ಇವರ ರಂಗಸಿರಿ ಕಥಾ ಐಸಿರಿ ಕೃತಿ ರಂಗ ಪ್ರಯೋಗಗಳ ವಿಮರ್ಶೆಗಳ ಸಂಕಲನವಾಗಿದೆ. ಲೇಖಕರು ಹಾಸನದಲ್ಲಿ ನೋಡಿದ ನಾಟಕಗಳ ವಿಮರ್ಶೆ ಇದಾಗಿದೆ. ಪ್ರಸಿದ್ಧ ಕತೆಗಾರರ, ಕಾದಂಬರಿಕಾರರ ಕಥೆ ಕಾದಂಬರಿಗಳು ರಂಗ ರೂಪಾಂತರಗೊಃಡು ಸೃಜನಶೀಲ ನಿರ್ದೇಶಕರ ಮೂಲಕ ರಂಗದ ಮೇಲೆ ಯಶಸ್ವಿ ಪ್ರಯೋಗಗೊಂಡಿರುವ ನಾಟಕ ವಿಮರ್ಶೆಯಾಗಿರುವುದು ವಿಶೇಷವಾಗಿದೆ ಎಂಬುದಾಗಿ ಕೃತಿಯ ಸ್ಥೂಲ ಪರಿಚಯ ಮಾಡಿದ್ದಾರೆ. ಆನಂತರದಲ್ಲಿ ಕವಿ, ಕಲಾವಿದ ಗೊರೂರು ಅನಂತರಾಜುರವರ ಬಗ್ಗೆ ಎ.ಸಿರಾಜು ರಂಗಭೂಮಿ ನಟ ನಿದೇ೯ಶಕರು ಇವರು ಗೊರೂರು ಅನಂತರಾಜುರವರ ಸೇವೆಯ ಮತ್ತು ಅವರ ಸಾಧನೆಯ ಬಗ್ಗೆ ಅವರ ರಂಗಭೂಮಿಯ ಆಸಕ್ತಿಯ ಬಗ್ಗೆ ಸುಲಲಿತವಾಗಿ ಪರಿಚಯವನ್ನು ಮಾಡಿದ್ದಾರೆ. ಆನಂತರದಲ್ಲಿ ತಮ್ಮದೇ ಆದಂತಹ ನುಡಿಗಳಲ್ಲಿ ಗೊರೂರು ಅನಂತರಾಜುರವರು ರಂಗಭೂಮಿಯ ಹಲವು ವಿಷಯವನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ. ೩೬ ನಾಟಕಗಳ ವಿಚಾರಗಳನ್ನು ಒಳಗೊಂಡಿರುವ ಈ ಪುಸ್ತಕ ಒಂದೊಂದು ರೀತಿಯಲ್ಲಿ ತನದೇ ಆದಂತಹ ವಿಚಾರ ವಿಮರ್ಶೆಗಳನ್ನು ಒಳಗೊಂಡಿದೆ. ಪ್ರಸಿದ್ಧರಾದಂತಹ ಡಾ. ಕೆ.ಪಿ.ಪೂಣ೯ಚಂದ್ರ ತೇಜಸ್ವಿ ಕಥೆ ಆಧಾರಿತ ನಾಲ್ಕು ನಾಟಕಗಳ ವಿಮಶೆ೯ಯಲ್ಲಿ ಕರ್ವಾಲೊ ಕಥೆಯನ್ನು  ರಂಗ ರೂಪಾಂತರಿ ನಿದೇ೯ಶನ ಸಣ್ಣೇಗೌಡರು ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಒಬ್ಬ ವಿಶಿಷ್ಟ ಬರಹಗಾರರು. ಗಂಭೀರ ವಸ್ತುವನ್ನು ಅವರು ರೋಚಕವಾಗಿ ಬರೆಯಬಲ್ಲರು. ರೋಚಕ ಸಂಗತಿಗಳಿಗೆ ಗಾಂಭೀರ್ಯದ ಶಿಸ್ತನ್ನೂ ನೀಡಬಲ್ಲರು. ಹಾಸ್ಯ ಪ್ರಜ್ಞೆಯಂತೂ ಬರವಣಿಗೆಯ ನೇಯ್ಗೆಯಲ್ಲಿಯೇ ಹಾಸುಹೊಕ್ಕಾಗಿರುತ್ತದೆ. ಜೀವ ವಿಕಾಸದ ಅವಸ್ಥಾಂತರಗಳನ್ನು ಶೋಧಿಸುತ್ತ ವಿವಿಧ ಸಂಕುಲಗಳ ವಿನಾಶ ಮತ್ತು ಅವುಗಳನ್ನು ಹಿಡಿಯಲೆತ್ನಿಸುವ ಮನುಷ್ಯನ ವಿಫಲತೆಯನ್ನು ಹೇಳುವ ಕಾದಂಬರಿ ಕರ್ವಾಲೋ ವಿಶ್ಲೇಷಣೆ ಚಿಂತನಾಶೀಲವಾಗಿದೆ. ಅಣ್ಣನ ನೆನಪು ಇವರ ನಿದೇ೯ಶನದಲ್ಲಿ ಮುಂದುವರೆದಿದೆ. ತಂದೆ ಕುವೆಂಪು ನೆನಪಿನಲ್ಲಿ ತೇಜಸ್ವಿ ತುಂಟಾಟಗಳು ನಾಟಕದಲ್ಲಿ ಅನಾವರಣಗೊಂಡಿವೆ. ನಾಟಕಕ್ಕೆ ಹೆಚ್ಚಾಗಿ ಹಾಸ್ಯ ಪ್ರಸಂಗಗಳನ್ನೆ ಆರಿಸಿಕೊಳ್ಳಲಾಗಿದೆ. ಕನ್ನಡ ಕಥಾ ಸಾಹಿತ್ಯ ಕಂಡ ಅಪರೂಪದ ಪಾತ್ರಗಳು ಕಿರಗೂರಿನ ಗಯ್ಯಾಳಿಗಳು ಇದನ್ನೂ ಕೂಡ ಕೆ.ಸಣ್ಣೇಗೌಡರು ರಂಗ ರೂಪಾಂತರಿಸಿ ಹಾಸನದ ಅನಿಕೇತನ ತಂಡ ಯಶಸ್ವಿಯಾಗಿ ಪ್ರದರ್ಶಿಸಿದೆ. ಕೃಷ್ಣೆಗೌಡನ ಆನೆ ಇದರ ನಿದೇ೯ಶನ ನಾಗೇಶ್ ರವರು ಮಾಡಿದ್ದಾರೆ. ಇದು ನೀಳ್ಗತೆ. ಇಲ್ಲೂ ಇವರು ಅಚ್ಚುಕಟ್ಟಾಗಿ ಚಿಕ್ಕದಾದರೂ ಚೊಕ್ಕವಾಗಿ ‍ಅಥ೯ವಾಗುವಂತೆ ಜನರಿಗೆ ಮನಮುಟ್ಟುವಂತೆ ತಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಮೂಕಜ್ಜಿ ಕನಸು ನಾಟಕವಾಗಿಸಿ ರಂಗಕಮಿ೯  ಸಣ್ಣೇಗೌಡರು ರಂಗಭೂಮಿಯಲ್ಲಿ ತೋರ‍್ಪಡಿಸಿ ಪ್ರೇಕ್ಷಕನ ಮನ ಗೆದ್ದಿದೆ. ಕಾರಂತರ ಕಾದಂಬರಿ ಮಾನವನ ನಾಗರಿಕತೆ ಬೆಳೆದು ಬಂದ ದಾರಿಯತ್ತ ದೃಷ್ಟಿ ಹಾಯಿಸಿದೆ. ಜನರ ನಂಬಿಕೆ ನಡವಳಿಕೆಯನ್ನು ಕುರಿತು ವಿಮರ್ಶಿಸುವ ಓದುಗನನ್ನು ಅಂತರ‍್ಮುಖಿಯಾಗಿ ಚಿಂತಿಸುವಂತೆ ಮಾಡುವ ಚಿರಂತನ ಕೃತಿ. ಇಲ್ಲಿ ಅಜ್ಜಿ ಮೊಮ್ಮಗ ಇಬ್ಬರೂ ಸೇರಿ ಸೃಷ್ಟಿ ಸಮಸ್ಯೆಯನ್ನು ಮಥಿಸಲು ಯತ್ನಿಸುತ್ತಾರೆ. ಪಿ.ಲಂಕೇಶ್ ಅವರ ಕಥೆ ಆಧಾರಿತ ನಿವೃತ್ತರು ಡಾ. ಚಂದ್ರಶೇಖರ ‍ಪಾಟೀಲ್ ಅವರ ಕೊಡೆಗಳು ಕಥೆಗಳು ರಂಗಭೂಮಿಯಲ್ಲಿ ಪ್ರೇಕ್ಷಕರಿಗೆ ಪರಿಸರ ದೃಶ್ಯಕ್ಕೆ ಸಹಜವಾಗಿ ಸಾಹಿತ್ಯ ಭವನದ ಹೊರಾಂಗಣದ ಪ್ರೇಕ್ಷಕರು ಕೂರುವ ಹಾಸುಗಲ್ಲು ಮರಗಿಡಗಳ ಪರಿಸರ ಬಳಸಿಕೊಂಡು ನಾಟಕ ಪ್ರದಶಿ೯ಸಿದ್ದು ಮೆಚ್ಚುಗೆ ಅಂಶವಾಗಿದೆ. ರಾಜಶೇಖರ ಮಠಪತಿ ಅವರ ಗಾಂಧಿಯ ಅಂತಿಮ ದಿನಗಳು ಇದು ಸಹ ಹಾಸನಾಂಬ ಕಲಾಕ್ಷೇತ್ರದಲ್ಲಿ ಹಾಸನ ಜಿಲ್ಲಾ ಸಾಂಸ್ಕೃತಿಕ ವೇದಿಕೆಯಿಂದ ಪ್ರದಶ೯ನಕ್ಕೆ ವ್ಯವಸ್ಥೆ ಮಾಡಿ ಪ್ರಸ್ತುತ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮರೆಯಲಾಗದಂತಹ ಗಾಂಧಿ ವಿಚಾರಗಳ ತತ್ವಗಳ ಚಿಂತನೆಗಳನ್ನು ಜನರಿಗೆ ತಲುಪಿಸುವಂತಹ ವಿಚಾರ ಅದ್ದೂರಿ ಪ್ರದಶ೯ನವನ್ನು ಕಂಡಿದೆ. ಚಂದ್ರಕಾಂತ ಕುಸುನೂರು ಅವರ ದಿಂಡಿ ನಾಟಕ ನಿದೇ೯ಶನ ಮಾಡಿದವರು ಮಂಜುನಾಥ ಬೆಳಕೆರೆ. ಇವರು ಮೈಸೂರು ರಂಗಾಯಣದ ವತಿಯಿಂದ ಹಾಸನದ ಕಲಾಕ್ಷೇತ್ರದಲ್ಲಿ ಮೂರು ನಾಟಕಗಳನ್ನು ಪ್ರದಶಿ೯ಸಿದ್ದು ಈ ನಾಟಕ ಚಂದ್ರಕಾಂತ ಕುಸುನೂರು ಕನ್ನಡದ ಅಸಂಗತ ನಾಟಕಗಳಲ್ಲಿ ಪ್ರಮುಖ ಹೆಸರನ್ನು ಪಡೆದಿದೆ. ಕೆಲವೊಮ್ಮೆನಾವು ನೋಡುತ್ತಿದ್ದ ಹಾಗೆ ನಾಟಕಗಳನ್ನು ನಾವು ಓದುತ್ತಿದ್ದರೆ ಸಾಕು ನೋಡುತ್ತಿದ್ದೇವೇನೋ ಎಂಬ ರೀತಿಯಲ್ಲಿ ಬರವಣಿಗೆ ರೂಪದಲ್ಲಿ ತರುವುದು ಬಹಳ ಕಷ್ಟ. ಅಂತಹ ಕಷ್ಟದ ಸಂಗತಿಯನ್ನು ಬರಹದ ರೂಪದಲ್ಲಿ ವಿವಿಧ ರೀತಿಯ ವಿಷಯಗಳನ್ನು ತಿಳಿಸುವುದರ ಮುಖಾಂತರ ಜನರ ಮನಮುಟ್ಟುವಂತಹ ರೀತಿಯಲ್ಲಿ ಬರಹದ ರೂಪದಲ್ಲಿ ನೀಡಿದ್ದಾರೆ.

ಒಳ್ಳೆಯ ಅರ್ಥಪೂರ್ಣ ನಾಟಕ ಪ್ರೇಕ್ಷಕರಿಗೆ ಮನಮುಟ್ಟುವಂತಹ ದೃಶ್ಯಗಳನ್ನ ಒಳಗೊಂಡಂತಹ ನಾಟಕವೆಂದರೆ ನನ್ನೊಳು ನೀ ನಿನ್ನೊಳು ನಾ ಇದರ ನಿರ್ದೇಶನ ಬಿ.ವಿ.ರಾಜಾರಾಂ ಆವರದು. ಇದು ಅದ್ಭುತ ಯಶಸ್ಸನ್ನು ಕಂಡಿರುವುದನ್ನು ತಿಳಿಸಿದ್ದಾರೆ. ೩೦ಕ್ಕೂ ಹೆಚ್ಚು ನಾಟಕಗಳನ್ನು ನಿದೇ೯ಶಿಸಿರುವ ಬಿ.ವಿ.ರಾಜಾರಾಮ್ ಅವರು ತಮ್ಮದೇ ಆದಂತಹ ವಿಶಿಷ್ಟ ವಿಭಿನ್ನ ಕಲೆಯನ್ನು ತಮ್ಮ ನಾಟಕದ ಮುಖಾಂತರ ತೋರ‍್ಪಡಿಸಿದ್ದಾರೆ. ವಿವೇಕ ಶ್ಯಾನುಭೋಗ್ ಅವರ ಕಥೆಯಾಧಾರಿತ ಕಂತು ನಾಟಕದ ನಿದೇ೯ಶನ ಚನ್ನಕೇಶವ ಅವರದು. ಕರಾವಳಿ ಪ್ರದೇಶದ ಮಾವಿನೂರಿನಲ್ಲಿ ಸಂಭವಿಸುವ ಸೂರ್ಯಗ್ರಹಣ ಮತ್ತು ಅಲ್ಲಿ ಅಣೆಕಟ್ಟೆ ಕಟ್ಟಲಾಗುತ್ತದೆ ಎಂಬ ಸುದ್ದಿ ಜನರ ಬದುಕಿನಲ್ಲಾಗುವ ವಿಚಿತ್ರ ಏರಿಳಿತಗಳೇ ನಾಟಕದ ಕೇಂದ್ರ ಬಿಂದು. ಶರದ ಉಪಾಧ್ಯೆ (ಮರಾಠಿ) ರಾಶಿ ಚಕ್ರ ಹೆಚ್ಚಿನ ಆಂಗಿಕ ಅಭಿನಯವೇನೂ ಇಲ್ಲದ ಆದರೆ ಎರಡೂವರೆ ತಾಸು ೧೨ ರಾಶಿಗಳ ಕುರಿತು ರಂಜನೀಯವಾಗಿ ಪ್ರಸ್ತುತಪಡಿಸುವ ಏಕವ್ಯಕ್ತಿ ರಂಗಪ್ರಯೋಗ. ಮುಂಬಯಿಯ ಸಚಿನ್ ಮೋಟೆ ರಚಿಸಿದ ಒಂದು ಆಟ ಭಟ್ಟರದು ನಾಟಕವನ್ನು ಅನುವಾದಿಸಿ ನಿರ್ದೇಶಿಸಿ ನಟಿಸಿರುವ ಸರ ದೇಶಪಾಂಡೆಯವರು ಸಹಜ ಘಟನಾವಳಿಯಲ್ಲಿ ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸುತ್ತಾರೆ. ಕನ್ನಡ ರಂಗಭೂಮಿಯಲ್ಲಿ ಹುಬ್ಬಳ್ಳಿ ಗುರು ಸಂಸ್ಥೆಯ ಯಶವಂತ ಸರ ದೇಶಪಾಂಡೆಯವರು ವಿಶಿಷ್ಟ ಪ್ರತಿಭೆಯ ಕಲಾವಿದರು. ಬೇಂದ್ರೆಯವರ ಎಲ್ಲ ನಾಟಕಗಳನ್ನು ರಂಗದ ಮೇಲೆ ತಂದ ಇವರ ಆಲ್ ದಿ ಬೆಸ್ಟ್ ನಾಟಕ ಮತ್ತು ರಾಶಿಚಕ್ರ ಏಕವ್ಯಕ್ತಿ ರಂಗ ಪ್ರಯೋಗದಿಂದ ಜನಪ್ರಿಯವಾಗಿದೆ.  ಅಗ್ರಹಾರ ಕೃಷ್ಣಮೂರ್ತಿ ಅವರ ದಾರಶುಕೊ ಇದನ್ನ ರಂಗ ರೂಪಾಂತರದಲ್ಲಿ ರಾಜಪ್ಪ ದಳವಾಯಿರವರು ಮಾಡಿದ್ದು ನಿದೇ೯ಶನವನ್ನು ಜಯಶಂಕರ ಬೆಳಗುಂಬರವರು ಮಾಡಿದ್ದಾರೆ. ಹಾಸನದ ಕಲಾಸಿರಿ ಕಲಾವಿದರು ಹಾಸನಾಂಬ ಕಲಾಕ್ಷೇತ್ರದಲ್ಲಿ ಪ್ರದಶಿ೯ಸಿದನ್ನು ವಿಮಶೆ೯  ಮಾಡಿದ್ದಾರೆ. ನಾಟಕ ಷಹಜಾಹನ್ ಕಾಲದ್ದಾದರೂ ಸಮಕಾಲೀನ ರಾಜಕೀಯಕ್ಕೆ ಹತ್ತಿರವಾಗಿದೆ. ಪುಸ್ತಕ ಪರಿಚಯ ಹೇಳುತ್ತಾ ನಾಟಕದ ಅಂತರಾಳಕ್ಕೆ ಇಳಿಯುತ್ತ ಹೋದರೆ ಹೇಳಲು ಪದಗಳೆ ಸಾಲದು. ಒಬ್ಬ ಬರಹಗಾರನಾಗಿ  ಅಂತರಾಳದ ನಾಟಕಗಾರರಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಸಾಮಾಜಿಕವಾಗಿ ಎಲ್ಲಾ ಅಂಶಗಳನ್ನು ಹಿಡಿದಿಡುವ ಕಲೆ ಎಲ್ಲರಿಗೂ ಬಾರದು. ಅಂತಹ ಕಲೆಯನ್ನು ಒಳಗೊಂಡಂತಹ ಈ ರಂಗಸಿರಿ ಕಥಾ ಐಸಿರಿಯಲ್ಲಿ ಬಹಳಷ್ಟು ವಿಶೇಷ ವಿಶಿಷ್ಟ ವಿಭಿನ್ನ ವಿಚಾರಗಳನ್ನ ಕಾಣಬಹುದಾಗಿದೆ. ನಂತರ ಮೂಲ: ಅಗಾಥ ಮೇರಿ ಕ್ಲಾರಿಸ್ ಕ್ರಿಸ್ಟಿ – ದಿ ಮೌಸ್ ಟ್ರಾಪ್. ಕನ್ನಡಕ್ಕೆ ನಮ್ಮ ನಿಮ್ಮೊಳಗೊಬ್ಬ, ರಾಜೇಂದ್ರ ಕಾರಂತ. ನಾಟಕ ನಿದೇ೯ಶನ ಜೈ ಶಂಕರ್ ಬೆಳಗುಂಬ. ನಾಟಕದಲ್ಲಿ ಕೊಲೆಯ ರಹಸ್ಯ ಭೇದಿಸುತ ವೇಗಗತಿಯಲ್ಲಿ ಸಾಗಬೇಕಾದ ನಾಟಕ ನಿಧಾನಗತಿಯಲ್ಲಿ ಸಾಗಿ ಗಾಢ ಪರಿಣಾಮ ಬೀರುವಲ್ಲಿ ವಿಫಲವಾಗುತ್ತದೆ. ಸಾಣೇನಹಳ್ಳಿ, ಶ್ರೀ ಪಾಂಡಿತಾರಾಧ್ಯ ಶಿವಚಾಯ೯ ಮಹಾಸ್ವಾಮಿಗಳವರ ಯುಗಾಚಾರ‍್ಯ. ನಿರ್ದೇಶನ ಮಾರಪ್ಪ ಬಿ. ಆರ್. ಬೆಜ್ಜಿಹಳ್ಳಿರವರದು. ಜ್ಞಾನ ದೀಮಂತಿಕೆಯ ಉತ್ತುಂಗಕ್ಕೇರಿದ ವಿವೇಕಾನಂದರು ತಮ್ಮ ಸಾಧನೆಯ ಹಾದಿಯಲ್ಲಿ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ಅಪವಾದ ನಿಂದೆಗಳು ಅಪಾರ. ಬಾಲಕ ನರೇಂದ್ರನಾಥರಿಂದ ಹಿಡಿದು ವಿಶ್ವ ವಿಜೇತ ವಿವೇಕಾನಂದರವರೆಗಿನ ಘಟನೆಯನ್ನು ನಾಟಕವಾಗಿ ಯಶಸ್ವಿಯಾಗಿಸಿದ್ದಾರೆ. ಗಾಯಕ ಶಂಕರೇಗೌಡರ ಹಿನ್ನೆಲೆ ಗಾಯನ ನಾಟಕದ ಯಶಸ್ವಿನಲ್ಲಿ ಪಾಲು ಪಡೆಯುತ್ತದೆ. ದು.ಸರಸ್ವತಿ ಅವರು ಅನುವಾದಿಸಿದ ಬದುಕು ಬಯಲು ಇದು ರೇವತಿ ತಮಿಳು ಆತ್ಮಕಥೆ. ನಿದೇ೯ಶನ ಎಂ.ಗಣೇಶ್. ಯಶವಂತ್ ಮನೋಹರ್ ರಮಾಯಿ ಕನ್ನಡಕ್ಕೆ ಡಾ.ಹಚ್.ಟಿ.ಪೋತೆ, ನಿರ್ದೇಶನ ಮಹದೇವ  ಹಡಪದ. ನಾಟಕದಲ್ಲಿ ರಮಾಬಾಯಿ ಪಾತ್ರ ಬಹಳ ಮನ ಸೆಳೆಯುವಂತದ್ದು. ಒಬ್ಬ ಯಶಸ್ವಿ ಪುರುಷನ ಸಾಧನೆ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ನಾಣ್ನುಡಿಗೆ ಅನುಗುಣವಾಗಿ ಸಂಸಾರವು ತನ್ನ ಕ್ಷೇತ್ರ, ಅಧ್ಯಯನ ಪತಿಯ ಕ್ಷೇತ್ರವೆಂದು ಭಾವಿಸಿ ಬಾಬಾ ಸಾಹೇಬರ ಹೋರಾಟದ ಬದುಕಿಗೆ ಸಾಥ್ ನೀಡಿದ ಮಹಾಮಾತೆ ರಮಾಬಾಯಿ ಅವರ ಜೀವನ ಗಾಥೆಯೇ ನಾಟಕದ ರೂಪಾಂತರ. ವಿಮಶೆ೯  ವಿಚಾರಗಳನ್ನ ತಿಳಿಸುತ್ತಾ ಹೋದರೆ ಪುಟ ಸಾಲದಂತೆ ಹಾಗೆಯೇ ಒಂದೊಂದು ನಾಟಕದ ನಿದೇ೯ಶನಕಾರರು ತಮ್ಮದೇ ಆದಂತಹ ರೀತಿ ನೀತಿಗಳಲ್ಲಿ ಚಿತ್ರಿಸಿರುವ ನಾಟಕದ ಚಿತ್ರವನ್ನು ನೋಡಿದಂತೆ ಓದಲು ಅದ್ಭುತವಾಗಿದೆ .ಡಾ.ಚಂದ್ರಶೇಖರ್ ಕಂಬಾರರ ಶಿವರಾತ್ರಿ ನಿದೇ೯ಶನ ಚಿದಂಬರರಾವ್ ಜಂಬೆರವರದು. ಶಿವರಾತ್ರಿ ಒಂದು ರಾತ್ರಿಯಲ್ಲಿ ನಡೆವ ನಾಟಕ. ಈವರೆಗೆ ಬಂದಿರುವ ಕಲ್ಯಾಣದ ನಾಟಕಗಳಿಗಿಂತ ಭಿನ್ನವಾಗಿದೆ. ಹೀಗೆ ಒಂದೊಂದು ನಾಟಕವು ಒಂದೊಂದು ರೀತಿಯಲ್ಲಿ ವಿಭಿನ್ನ ಪಾತ್ರಗಳನ್ನ ಒಳಗೊಂಡಂತೆ ಪ್ರೇಕ್ಷಕನ ಮನ ಸೆಳೆಯುವಂತಿದೆ. ಅಂತೆಯೇ ಬಸವಣ್ಣನವರ ವಚನಗಳನ್ನಾಧರಿಸಿದ ಕೂಡಲ ಸಂಗಮ. ಈ ನಾಟಕ ನಿದೇ೯ಶನವನ್ನು ಎಂ.ಎಂ.ಸುಗುಣ ರವರು ಮಾಡಿದ್ದಾರೆ. ಇದು ದೃಶ್ಯ ರೂಪಕ. ವಿಭಿನ್ನವಾದಂತಹ ವಸ್ತುನಿಷ್ಠ ವಿಷಯಗಳನ್ನು ಒಳಗೊಂಡಂತಹ ರೂಪಕ. ವಿಚಾರ ತಿಳಿದಿದ್ದರೂ ಸಹ ಪಾತ್ರಧಾರಿಗಳ ನೃತ್ಯ ನಾಟಕ ಪ್ರೇಕ್ಷಕರಿಗೆ ಮನ ಸೆಳೆಯುತ್ತದೆ. ನಂಜುಂಡ ಮೈಮ್ ಅವರ ವಿಕೇಂದ್ರಿಕರಣ ಇದು ಯುಗಾದಿ ಹಬ್ಬದಂದು ಹೊಸ ಲಿಮ್ಕಾ ದಾಖಲೆ ಮಾಡುವ ಪ್ರಯತ್ನ ಚನ್ನರಾಯಪಟ್ಟಣದ ನಿರಂತರ ಕಲಾವಿದರಿಂದ ನಡೆದಿದ್ದು. ಎನ್.ಎಸ್.ರಾವ್ ಅವರ ವಿಷಜ್ವಾಲೆ, ನಿದೇ೯ಶನ ಎಚ್. ರಾಮಣ್ಣ. ಹಾಸನದ ಶ್ರೀ ರಮ್ಯ ಕಲಾ ರಂಗದ ಮಹಿಳಾ ತಂಡದವರು ನಗರದ ಹಳೆ ಬಸ್  ನಿಲ್ದಾಣ ರಸ್ತೆ ಗಣಪತಿ ಪೆಂಡಲಿನಲ್ಲಿ ಪ್ರದಶಿ೯ಸಿದ್ದು.

ನಾಟಕಗಳ ಸಾರಗಳನ್ನ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ಹೀಗೆ ಸತತವಾಗಿ ಸಾಗುತ್ತಾ ಹೋಗುತ್ತದೆ. ಅದರಲ್ಲೂ ನನ್ನ ಮನಸನ್ನು ಸೆಳೆದಂತಹ ನಿದೇ೯ಶನವೆಂದರೆ ತೋರಣಗಲ್ ರಾಜರಾವ್ ಅವರ ಸುಭದ್ರ ಕಲ್ಯಾಣ. ನಿದೇ೯ಶನ ಗುಂಡುರಾಜ್ ಅವರದು. ಚಂದ್ರ ಮಂಡಲ ನಾಟಕದ ರಚನೆ ನಿದೇ೯ಶನ  ಪ್ರಸಾದ್ ರಕ್ಷಿದಿ ಅವರದು. ಸಕಲೇಶಪುರ ತಾಲೂಕಿನ ಬೆಳ್ಳೇಕೆರೆ ಜೈ ಕನಾ೯ಟಕ ಸಂಘ ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ನಾಟಕೋತ್ಸವ ನಡೆಸಿ ಹಳ್ಳಿಗಾಡಿನಲ್ಲಿ ರಂಗಮಂದಿರ ನಿರ‍್ಮಿಸಿಕೊಂಡು ಯಶಸ್ವನ್ನು ಕಂಡಿದೆ. ವಿಶ್ವ ರಂಗಭೂಮಿ ದಿನ ರಂಗ ಪರಂಪರೆ ಎಂಬುದು ದೃಶ್ಯ ಕಾವ್ಯವಾಗಿ ಸಾಹಿತ್ಯದ ಒಂದು ಮುಖ್ಯ ಪ್ರಕಾರ ನಾಟಕವಾಗಿದೆ.

ವಿಶ್ವ ರಂಗಭೂಮಿ ದಿನ ರಂಗ ಪರಂಪರೆ ಲೇಖನದೊಂದಿಗೆ ಪುಸ್ತಕದ ಪರಿಚಯ ಮುಗಿಯುತ್ತದೆ. ಪುಸ್ತಕದಲ್ಲಿ ಒಂದಲ್ಲ ಒಂದು ರೀತಿಯ ವಿಭಿನ್ನ ವಿಶಿಷ್ಟವಾದ ನಿದೇ೯ಶಕರ ನಟರ ಕಾರ‍್ಯ ತಂತ್ರ ತಿಳಿಯಬಹುದಾಗಿದೆ. ಇನ್ನೂ ಹಲವು ಮಾಹಿತಿ ಸಂಗ್ರಹ ಬೇಕಿದೆ . ಓದುಗರಿಗೆ ಅಥ೯ವಾಗುವಂತಹ ಆ ನಾಟಕದ ವಿವರಣೆಗಳು ಯಾರ ಪಾತ್ರದಲ್ಲಿ ಅದು ವಿಜೃಂಭಣೆಗೊಂಡಿದೆ ಎಂಬುದನ್ನು ತಿಳಿಸಿರುವುದು ಸಹಜ ಸೌಂದರ‍್ಯವನ್ನು ಮೂಡಿಸುತ್ತದೆ. ಗೊರೂರು ಅನಂತರಾಜುರವರ ಶ್ರಮಕ್ಕೆ ಪ್ರತಿಫಲ ಎಂಬಂತೆ ಬಹಳಷ್ಟು ಸುಂದರವಾದ ದೃಶ್ಯಗಳು ಕಣ್ಣ ಮುಂದೆ ಹಾದುಹೋದಂತೆ ಭಾಸವಾಗಿ ಓದುಗರ ಮನಸ್ಸಿಗೆ ನಾಟಕದ ವಿಶಿಷ್ಟತೆಯನ್ನು ನಾಟಿಸುತ್ತದೆ. ನಾಟಕಕಾರರಿಗೆ ನಾಟಕ ನಿದೇ೯ಶಕರಿಗೆ ಸಾಂಸ್ಕೃತಿಕ ಕಾರ‍್ಯಕ್ರಮ ಮಾಡುವ ಪ್ರತಿಯೊಬ್ಬರಿಗೂ ಕೃತಿ ಪ್ರೋತ್ಸಾಹದಾಯಕವಾಗಿದೆ.


ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್

ಶಿಕ್ಷಕಿ. ಹಾಸನ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group