ಹೌದು, ಗೆಳೆತನವೆಂದರೆ ನಿತ್ಯ ಸಂಭ್ರಮ. ಭರವಸೆಯ ಸ್ನೇಹಿತರು ಬದುಕಿಗೆ ಬೇಕು. ಒಬ್ಬರ ಮೇಲೊಬ್ಬರು ನಂಬಿಕೆ, ವಿಶ್ವಾಸ, ಪ್ರೀತಿ, ಕರುಣೆ ಇವೆಲ್ಲವುಗಳನ್ನು ಒಪ್ಪಿಕೊಂಡು ಮತ್ತು ತಬ್ಬಿಕೊಂಡು, ತುಂಬಿಕೊಂಡು ಎಲ್ಲಿಯೂ ಬಿಟ್ಟು ಕೊಡದೆ ಎಂತದ್ದೇ ಸಂದರ್ಭದಲ್ಲಿ ಆಗಲಿ ಹೆಗಲ ಮೇಲೆ ಕೈ ಇರಿಸಿ ನಾನಿದ್ದೀನಿ ಚಿಂತೆ ಯಾಕೆ ನಿನಗೆ ಎನ್ನುವ ಭರವಸೆಯ ಮಾತುಗಳೇ ಸಾಕು ನಮ್ಮನ್ನು ಮುನ್ನಡೆಸಲು.
ಸ್ನೇಹವೆಂದರೆ ಯಾವುದನ್ನು ನಿರೀಕ್ಷೆ ಇಡದೆ ಆತ್ಮರತಿ ಹಮ್ಮು ಬಿಮ್ಮುಗಳನ್ನು ತೊರೆದು ಮೊಗದಲ್ಲೊಂದು ಸಣ್ಣ ನಗೆ ಹೆಜ್ಜೆ ಇರಿಸುವುದು ಸ್ನೇಹ. ಒಮ್ಮೆ ಸ್ನೇಹ ಮಾಡಿದ್ರೆ ಅವರ ಎಲ್ಲಾ ಒಳ್ಳೆಯ ಮತ್ತು ಕೆಟ್ಟ ಸಂಧರ್ಭದಲ್ಲಿಯೂ ಅವರನ್ನು ತೊರೆಯದೆ, ಸ್ನೇಹಕ್ಕೆ ತೆರೆ ಎಳೆಯದೆ ನಿಲ್ಲಿಸದ ತೇರಿನಂತೆ, ಆಗಾಗ ನಡೆವ ಪರಿಷೆಯಂತೆ ನಿತ್ಯವೂ ಸಂಭ್ರಮಿಸಬೇಕು. ನಿತ್ಯವೂ ಮಾತನಾಡಲು ಸಮಯವಿರದೆ ಹೋಗಿರಬಹುದು. ನಿತ್ಯ ಭೇಟಿ ಮಾಡಿ ಮುಖ ನೋಡದಿರಬಹುದು, ಆದರೆ ತಟ್ಟನೆ ನೆನಪಾಗುವ ಸ್ನೇಹವನ್ನು ನೆನೆದು ಹೇಗಿದ್ದೀಯಾ ಇವತ್ತು ನೆನಪಾದೆ ಎಂದು ಹೇಳುವ ಮಾತುಗಳಲ್ಲಿ ನಿತ್ಯವೂ ಆ ಸ್ನೇಹ ನೆನಪಿನಲ್ಲಿ ಇರುತ್ತದೆ ಆದರೆ ಕೆಲಸದೊತ್ತಡಗಳ ನಡುವೆ ನಿತ್ಯವೂ ಜೊತೆ ಇದ್ದ ಆ ಸ್ನೇಹಿತರು ದೂರವಾದಾಗ ಅವರು ನಮ್ಮೊಟ್ಟಿಗೆ ನಿತ್ಯವೂ ಇರದೆ ಹೋದರು ನಮ್ಮೊಳಗೆ ನಿತ್ಯ ಕಾಡುವ ಸ್ನೇಹಿತರಾಗಿರಬೇಕು ಅದು ನಿಜವಾದ ಸ್ನೇಹ.
ಸ್ನೇಹ ಎಂದೊಡನೆ ತಟ್ಟನೆ ನೆನಪಾಗುವುದು ಕೃಷ್ಣ ಮತ್ತು ಸುಧಾಮರು. ಕೃಷ್ಣನಿಗೆ ಅಂತಸ್ತು, ನಾಮಾಂಕಿತ, ಕೈಗೊಬ್ಬ ಕಾಲಿಗೊಬ್ಬ ಆಳುಗಳಿದ್ದರು. ಸುಧಾಮನು ಇದೆಲ್ಲವನ್ನು ಹೊರತುಪಡಿಸಿದವನು. “ಕೃಷ್ಣನಿಗೆ ಅಂತಸ್ತು ಇತ್ತು ಆದರೆ ಹಮ್ಮು ಬಿಮ್ಮುಗಳಿರಲಿಲ್ಲ, ನಾನೇ ಎನ್ನುವುದು ಅವರ ಮಧ್ಯೆ ಸುಳಿಯಲಿಲ್ಲ, ಸುಧಾಮನಿಗೆ ಏನೂ ಇರಲಿಲ್ಲ ಆದರೆ ಕೃಷ್ಣನ ಸ್ನೇಹವನ್ನು ಕಳೆದುಕೊಳ್ಳುವ ಕೆಲಸ ಎಂದಿಗೂ ಮಾಡಲಿಲ್ಲ.” ಇಂತಹ ಕೃಷ್ಣ ಸುಧಾಮ ನಂತಹ ಸ್ನೇಹಗಳು ನಮ್ಮಲ್ಲಿವೆ. ಭರವಸೆಯ ಸ್ನೇಹಿತರು ನನಗೂ ಇದ್ದಾರೆ. ನಮಗೆ ಎಷ್ಟು ಜನರು ಸ್ನೇಹಿತರು ಎಂಬುದು ಮುಖ್ಯವಲ್ಲ, ಕಡಿಮೆ ಸಂಖ್ಯೆಯ ಸ್ನೇಹಿತರಿದ್ದರು ಅವರು ಬೆಲೆಕಟ್ಟಲಾಗದ ಸ್ನೇಹಿತರಾಗಿರಬೇಕು. ನಾನು ಕಂಡಂತೆ ಏನನ್ನಾದರೂ ನಿರೀಕ್ಷಿಸುವವರು ತುಂಬಾ, ಆದರೆ ಏನನ್ನೂ ನಿರೀಕ್ಷಿಸದ ಸ್ನೇಹಿತರು ನನ್ನ ಜೊತೆಗಿದ್ದಾರೆ. ನನಗೂ ಸ್ನೇಹಿತರು ಲೆಕ್ಕಕ್ಕೆ ಇರದಷ್ಟು ಜನರು ಇದ್ದಾರೆ ಎಂದು ಹೇಳಿಕೊಳ್ಳಲು ನಾನು ಅಂತವರ ಸ್ನೇಹ ಎಂದಿಗೂ ಮಾಡಲಿಲ್ಲ,ಆಯ್ಕೆಯ ಹಾಗೂ ಕಡಿಮೆ ಸಂಖ್ಯೆಯ ಸ್ನೇಹಿತರು ಅದು ನನ್ನ ಸ್ನೇಹ ಬೇಕು ಎಂದು ಬಯಸುವ ಸ್ನೇಹಿತರು ಅವರಾಗಿದ್ದಾರೆ ಅಂತಹ ಸ್ನೇಹವನ್ನು ಬಿಟ್ಟುಕೊಡದೆ ನಡೆವ ಭಾಷ್ಯವನ್ನು ನಾನು ಎಂದೋ ಹೊಂದಿದ್ದೇನೆ.
ನಾನು ಗೆದ್ದದ್ದನ್ನು ಸಂಭ್ರಮಿಸುವ ಸ್ನೇಹಿತರನ್ನು ಸಂಪಾದಿಸಿದ್ದೇನೆ, ನಾನು ನೋವು ಪಟ್ಟರೆ ಜೊತೆ ನಿಲ್ಲುವ ಸ್ನೇಹಿತರನ್ನು ಹೊಂದಿದ್ದೇನೆ. ನಾನು ಅತಿಯಾದ ಕೋಪ ಮತ್ತು ಗಟ್ಟಿಯಾಗಿ ಮಾತನಾಡಿದ್ದನ್ನು ಸಹಿಸಿಕೊಂಡ ಸ್ನೇಹಿತರು ನನ್ನೊಂದಿಗಿದ್ದಾರೆ. ನೀನು ಆಗಾಗ ಕೋಪ ಮಾಡಿಕೊಂಡರೆ ಚೆಂದ, ನೀನು ಆಗಾಗ ಮಾತು ಬಿಟ್ಟರೆ ನಾವು ಕೇಳುವುದಿಲ್ಲ ನಿನ್ನನ್ನು ಮಾತನಾಡಿಸಿಯೇ ತೀರುತ್ತೇವೆ ಎಂಬ ಸ್ನೇಹಿತರೂ ಇದ್ದಾರೆ ಬದುಕಿಗಿನ್ನೇನು ಬೇಕು. ಇವರೆಲ್ಲರಷ್ಟು ಪ್ರೀತಿ ತೋರುವ ನನ್ನ ನಿತ್ಯ ಸಂಗಾತಿ ಸ್ನೇಹಿತನೆಂದರೆ ಪುಸ್ತಕ ಅದಂತೂ ಬಿಟ್ಟೂ ಬಿಡದೆ ನನ್ನನ್ನು ಅದರ ನಶೆಯ ನಿಶೆಯೊಳಗೆ ಕರೆದೊಯುತ್ತಲೇ ಇರುತ್ತದೆ.
ನನ್ನ ಪರಮ ಸ್ನೇಹಿತ ಪುಸ್ತಕ. ಮಡಿವಂತಿಕೆಯ ಭಾಷೆಯನ್ನು, ನನ್ನನ್ನೂ ಶುದ್ದೀಕರಿಸುವ ಕಾರ್ಯವನ್ನು ಮಾಡುತ್ತಲೇ ಇರುತ್ತದೆ. ಇಂತಹ ಪುಸ್ತಕ ಸ್ನೇಹಿತನೊಂದಿಗೆ ನಮ್ಮ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಬಹುತೇಕ ಸ್ನೇಹಿತರಲ್ಲಿ ಕೆಲವು ಆತ್ಮೀಯ ಸ್ನೇಹಿತರು ನೀನು ಬರೆಯುತ್ತಲೇ ಇರು ನಿನ್ನ ಬರಹ ನಮ್ಮ ಪಾಲಿಗೆ ಮತ್ತೇರಿಸುವ ಸುರಪಾನಗಳು ಎಂದು ಹೇಳುವ ಸ್ನೇಹಿತೆಯರು ಇದ್ದಾರೆ. ವಟ ವಟ ಎಂದು ಅತಿ ಹೆಚ್ಚಾಗಿ ಮಾತನಾಡುತ್ತೇನೆ ಏನೋ ಎಂದು ಸುಮ್ಮನಿದ್ದರೆ ಹೇಯ್, ನೀನು ಸುಮ್ಮನಿದ್ದರೆ ಏನೋ ಕಳೆದುಕೊಂಡಂತೆ ಎನಿಸುತ್ತದೆ ನೀನು ಎಲ್ಲರೊಟ್ಟಿಗೆ ಮಾತನಾಡುವುದಿಲ್ಲ ಅದು ನಮಗೂ ಗೊತ್ತು ಆದರೆ ನಮ್ಮೊಟ್ಟಿಗೆ ಮಾತನಾಡದೆ ಸುಮ್ಮನಿದ್ದರೆ ಜಗಳ ಕಾಯುತ್ತೇವೆ ಎಂದ ಪರಮ ಪಾವನ ಸ್ನೇಹಿತರೂ ಇದ್ದಾರೆ. ನನ್ನ ಮಾತಿಗೆ ವರ್ಷಧಾರೆಯಂತೆ ಮುಗುಳು ನಗುವ ಸ್ನೇಹಿತರು ಆಗಾಗ ಬೇಕೆಂತಲೇ ನನ್ನನ್ನು ಮಾತಿಗೆ ಎಳೆಯುತ್ತಾರೆ. ನಾನು ಸುಮ್ಮನೆ ಕವಿ, ಕಾವ್ಯ ಪದ ಕಟ್ಟುವ ಕವಯಿತ್ರಿಯಂತೂ ಅಲ್ಲ, ಆದರೆ ನಿಮ್ಮಗಳ ಸ್ನೇಹ ಮತ್ತು ಪ್ರೀತಿಗೆ ಋಣಿ. ನಿನ್ನ ಸ್ನೇಹ ಚಿರಕಾಲ ಹೀಗೆ ಇರಲಿ. ನಿನ್ನ ಸ್ನೇಹಕ್ಕೆ ನಾವು ಋಣಿ ಎಂದು ಹೇಳಿದ ಮಡಿವಂತಿಕೆಯ ಮನಸ್ಸುಳ್ಳ ಸ್ನೇಹಿತೆಯರು ಇದ್ದಾರೆ ಅವರಿಗೆ ಒಳಿತಾಗಲಿ.
ಬಹುತೇಕ ಸ್ನೇಹಿತರೊಂದಿಗೆ ನನ್ನ ಮಾತುಗಳು ಕಡಿಮೆ ಇನ್ನೂ ಭೇಟಿಯಂತೂ ತೀರಾ ಕಡಿಮೆ ಆದರೆ ನಿಮ್ಮ ಸ್ನೇಹ ಮಾತ್ರ ಹತ್ತಿರದ ಬಾಂಧವ್ಯ ಬೆಸೆದಿದೆ. ನೀನು ಮಾತನಾಡಿದ, ಜೊತೆಗಿದ್ದ,ಬೆನ್ನು ಬಿದ್ದು ಈ ಪುಸ್ತಕ ಓದು ಚೆನ್ನಾಗಿದೆ ಎಂದು ಓದಿಸುತ್ತಿದ್ದ, ಪದಗಳನ್ನು ತಿದ್ದಿ ತೀಡುತ್ತಿದ್ದ ಚೆಂದದ ಗೆಳತಿ ನೀನೆಂದು ನನ್ನ ಹಾಡಿ ಹೊಗಳಿದ ಗೆಳತಿಯರಿಗೂ ನಾನು ಋಣಿ. ಹೌದು!ಊಟ, ಆಟ, ತಿರುಗಾಟ, ಮಾತು, ಹರಟೆ, ತಿಕ್ಕಲು ತಿಕ್ಕಲು ಮಾತುಗಳು, ಜಗಳ, ಹುಸಿಮುನಿಸು ಎಲ್ಲದರ ಜೊತೆಗೆ ಓದುವುದರ ಕಡೆಗೂ ಗಮನಕೊಡುವ ಮತ್ತು ಸಮಯ ಮೀಸಲಿಟ್ಟು ನಾವು ಅಂದುಕೊಂಡಿದ್ದನ್ನು ಕೊಂಚಮಟ್ಟಿಗೆ ಮಾಡಲು ಏಣಿ ಹಾಕಿದ ಸ್ನೇಹಿತೆಯರು ನನ್ನೊಂದಿಗೆ ಇದ್ದಾರೆ.
ಎಷ್ಟೋ ಬಾರಿ ನನಗೆ ಟಿಫಿನ್ ಬೇಡ, ಊಟ ಬೇಡ ಅಂದಾಗ ನೀನು ಮಾಡದಿದ್ದರೆ ನಮಗೂ ಬೇಡ ಎಂದು ತಟ್ಟೆ ಪಕ್ಕಕ್ಕಿರಿಸಿ ಹೆದರಿಸಿ ಅದು ಬೇಡ ಇದು ಬೇಡ ಅನ್ನಬಾರದು ಸ್ವಲ್ಪ ಆದ್ರೂ ತಿನ್ನಬೇಕು ಎಂದು ತಟ್ಟೆಗೆ ಹಾಕಿ ತಿನ್ನಿಸಿದಂತಹ ತಾಯಿ ಮನಸ್ಸಿನ ಸ್ನೇಹಿತೆಯರು ನನಗಿದ್ದಾರೆ. ನಾನು ಏನನ್ನಾದರೂ ಸಣ್ಣ ಪುಟ್ಟ ಪ್ರಶಸ್ತಿ ಪಡೆದಾಗಲು ಸಂಭ್ರಮಿಸಿ ನಮಗೆ ನೀನು ಸ್ಫೂರ್ತಿಯ ಚಿಲುಮೆ ನಿನ್ನಂತಹ ಸ್ನೇಹಿತೆಯನ್ನು ಪಡೆದ ನಾವೇ ಧನ್ಯರು ಎಂದವರುಂಟು. ಎಲ್ಲಿಂದಲೋ ನನ್ನನ್ನು ಇದ್ದಲ್ಲಿಯೇ ಹರಸಿ ಹಾರೈಸಿದ ಸಂಭ್ರಮ ಅವರುಗಳು. ಅಷ್ಟುಮಾತ್ರವಲ್ಲ ಮುಂದಿನ ಭವಿಷ್ಯದ ದಿನಗಳಲ್ಲಿ ನಾಳೆಯ ಭಾರವಸೆಯನ್ನಿಟ್ಟು ನೋಡೋಣ ಸಾಧ್ಯವಾದರೆ ಭಗವಂತನ ಕೃಪೆಯಿಂದ ನಾವು ಒಂದೇ ಕಡೆ ಕೆಲಸ ಮಾಡುವ ಭಾಗ್ಯ ಸಿಕ್ಕರಂತೂ ನಿತ್ಯ ಸಿಹಿ ಹೂರಣ ಸವಿದಂತೆ ಎಂದು ಹೇಳುವ ಸ್ನೇಹಿತರೂ ಇದ್ದಾರೆ. ಅದೆಷ್ಟರ ಮಟ್ಟಿಗೆ ಇದು ಸಾಧ್ಯವೋ ನನಗೆ ತಿಳಿದಿಲ್ಲ ಆದರೆ ನನ್ನೊಟ್ಟಿಗೆ ಮುಂದಿನ ದಿನಗಳಲ್ಲೂ ಇರುವ ಭರವಸೆಯನ್ನು ಕಲ್ಪನೆಯಲ್ಲಾದರೂ ಹೊತ್ತಿದ್ದಾರಲ್ಲ ಅಂತಹ ಸ್ನೇಹಿತರೂ ನನಗೆ ಇದ್ದಾರೆ ಎಂಬ ಸಣ್ಣ ಖುಷಿಯೊಂದಿಗೆ ಅವರ ಸ್ನೇಹ ಸದಾ ಕಾಲ ಹೀಗೆ ನನ್ನೊಟ್ಟಿಗೆ ಇರಬೇಕೆಂಬ ಸಣ್ಣ ಸ್ವಾರ್ಥ ನನ್ನದು.
ಉಫ್ ಏನೋ ಗೊತ್ತಿಲ್ಲ ಬದುಕಿನಲ್ಲಿ ಸಿಕ್ಕ ಬಹುತೇಕರಲ್ಲಿ ಕೆಲವರು ತುಂಬಾ ಹೃದಯವಂತರು. ಹಾಗೆ ನಾನು ಹೃದಯವಂತರನ್ನೇ ಹೆಚ್ಚಾಗಿ ಸ್ನೇಹಿತರನ್ನಾಗಿ ಹೊಂದಿದ್ದೇನೆ ಎಂಬ ಬೀಗುವಿಕೆಯು ನನಗಿದೆ.! ಅದೇನೇ ಇರಲಿ ಸ್ನೇಹ ಎಂದರೆ ಏನನ್ನೋ ನಿರೀಕ್ಷಿಸಿ ಅಥವಾ ಇನ್ನೇನೋ ಕಾರಣಕ್ಕಾಗಿ ಸ್ನೇಹಿತರನ್ನು ಹೊಂದುವುದಲ್ಲ. ಹಾಗೆ ಹೆಚ್ಚಿನ ಸ್ನೇಹಿತರನ್ನು ಹೊಂದಬೇಕೆಂದೇನಿಲ್ಲ, ಇರುವ ಸ್ನೇಹಿತರನ್ನೇ ನಮ್ಮವರೆನಿಸಿಕೊಳ್ಳುವ ಒಬ್ಬರಾದರೂ ಅದು ನೂರು ಜನರೆಂದು ಭಾವಿಸಬೇಕು. ಸತ್ತಾಗ ನಮ್ಮನ್ನು ಹೊರಲು ನಾಲ್ಕು ಜನರು ಬರುತ್ತಾರೆ ಎಂದರೆ ಬದುಕಿದ್ದಾಗ ನಮ್ಮ ಒಳಿತು ಅಥವಾ ಕೆಡುಕು ಏನೇ ಇರಲಿ ಜೊತೆ ಬರುವ ಇಬ್ಬರಾದರೂ ಸರಿ ಅದು ಒಬ್ಬರಾದರೂ ಸರಿ ಭರವಸೆಯ ಸ್ನೇಹ ಆಗಿರಬೇಕು. ಚಂದದ ಗೆಳೆತನಕ್ಕೊಂದು ದಿನ ಬೇಕೇ!
ಇಲ್ಲ ಇಲ್ಲವೇ ಇಲ್ಲ ಅದು ಸ್ನೇಹವೆಂದರೆ ನಿತ್ಯ ಪರಿಷೆ ಇದ್ದಂತೆ ಆದರೆ ಕೆಲಸದ ಒತ್ತಡಗಳಿಂದ, ದೂರದಲ್ಲಿ ನಿಲ್ಲಿಸಿದ ಸ್ನೇಹಿತರಿಂದ, ನೋವಿನೆಲ್ಲೋ ಇದ್ದಾಗ ಅವರಿಗೆ ನಿತ್ಯವೂ ಸಮಯ ಕೊಡಲು ಆಗದೆ ಇರಬಹುದು ಹಾಗಾಗಿ ಅದಕ್ಕೊಂದು ಅರ್ಥ ತರಲು ಈ ದಿನದ ಮುಖೇನ ಸ್ನೇಹಿತರನ್ನು ಒಮ್ಮೆ ಮತ್ತು ಅವರ ಜೊತೆ ಕಳೆದ ಸಮಯವನ್ನು ಮೇಲುಕು ಹಾಕಲು ಈ ದಿನವೇ ಒಂದು ಚಂದ. ಹಾಗಾಗಿ ಭರವಸೆಯ ಸ್ನೇಹಕ್ಕೊಂದು ನಮನ.
ಡಾ ಮೇಘನ ಜಿ
ಉಪನ್ಯಾಸಕರು