spot_img
spot_img

ಸ್ವಾವಲಂಬನೆಯ ಬದುಕಿಗೆ ಇಲ್ಲಿದೆ ಹೆದ್ದಾರಿ

Must Read

- Advertisement -

ನನ್ನದೆನ್ನುವ ಬದುಕನು ನಾನೇ ಕಟ್ಟಿಕೊಳ್ಳಬೇಕು. ಹೆತ್ತವರ ಬಾಳಿಗೆ ಊರಗೋಲಾಗಬೇಕು. ಜೊತೆ ಹುಟ್ಟಿದವರ ಸಂಕಷ್ಟಗಳಿಗೆ ಹೆಗಲಾಬೇಕು. ಎಲ್ಲ ಕೊರತೆಗಳನ್ನು ನೀಗಿಸಿ ಸ್ವಾವಲಂಬಿಯಾಗಿ ನಾಲ್ಕು ಜನರ ಮುಂದೆ ತಲೆಯೆತ್ತಿ ಸ್ವಾಭಿಮಾನದಿಂದ ಬಾಳಬೇಕು. ಎಂಬ ಯೋಚನೆ ನಮ್ಮಲ್ಲಿ ಅನೇಕ ಯುವಕ/ಯುವತಿಯರಿಗೆ ಸದಾ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಪರಾವಲಂಬಿಯಾಗಿ ಬದುಕುವ ಮನಸ್ಸಿಗೆ ತಾಳಲಾರದ ನೋವು.

ನಾನೇ ದುಡಿಯುವ, ಸ್ವಾವಲಂಬಿ ಜೀವನದ ಕನಸು ನನಸಾಗುತ್ತಿಲ್ಲ ಎಂದು ಸಂಕಟ ಪಡುತ್ತಾರೆ. ಆದರೆ ಧೈರ್ಯದ ಪ್ರಯತ್ನಕ್ಕೆ ಮುಂದಾಗುವುದಿಲ್ಲ. ಕೆಲವೊಮ್ಮೆ ಪ್ರಯತ್ನಕ್ಕೆ ಕೈ ಹಾಕಿದರೂ ಪ್ರಥಮ ಪ್ರಯತ್ನದಲ್ಲಿ ಮುಗ್ಗರಿಸಿ ಬಿದ್ದು ಮತ್ತೆ ಏಳುವ ಸಾಹಸ ಮಾಡುವುದೇ ಇಲ್ಲ. ತನ್ನ ಸಾಮಥ್ರ್ಯದ ಮೇಲೆ ತನಗೇ ಅನುಮಾನ.

ಉದ್ಯೋಗಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ದಕ್ಷತೆಯ ಕುರಿತು ಅಪನಂಬಿಕೆ. ಸೋಲು ವೈಯಕ್ತಿಕವಾಗಿ ಹಣಿದು ಬಿಡುವುದು. ಹಾಗೇ ಹಣಿಯುತ್ತದೆ ಅಂತ ಗೆಲುವಿನ ಬಳಿ ಹೋಗದಿರಲು ಆಗುತ್ತದೆಯೇ? ನಿಜ ಹೇಳಬೇಕೆಂದರೆ ನಮ್ಮ ಕಾಲ ಮೇಲೆ ನಾವು ನಿಂತುಕೊಳ್ಳುವುದರಲ್ಲಿನ ಖುಷಿ ಇನ್ನಾವುದರಲ್ಲೂ ಇಲ್ಲ. ಹಾಗಾದರೆ ಬದುಕಿನ ಸ್ವಾವಲಂಬನೆ ಮತ್ತು ಅದರಲ್ಲಿನ ಖುಷಿ ಅನುಬವಿಸಲು ಏನು ಮಾಡಬೇಕು ಎನ್ನುವುದನು ತಿಳಿಯೋಣ ಬನ್ನಿ.

- Advertisement -

ಅಭದ್ರತಾ ಭಾವದ ಹಿಡಿಕೆ

ಇತರರಿಗೆ ಹೋಲಿಸಿದರೆ ನಾನು ಅತಿಯಾಗಿ ಪರಾವಲಂಬಿಯಾಗಿದ್ದೇನೆ. ನನಗೇನು ಬೇಕೋ ಅದನ್ನು ಕೊಳ್ಳಲೂ ಆಗುತ್ತಿಲ್ಲ. ಪ್ರತಿಯೊಂದಕ್ಕೂ ಮತ್ತೊಬ್ಬರ ಮುಂದೆ ಕೈ ಚಾಚಬೇಕು. ಎಂಬ ನೋವು ಆರಂಭವಾಯಿತೆಂದರೆ ಮಾನಸಿಕ ರೋಗಿಯಾಗಿ ಬಳಲುವುದೊಂದೇ ಬಾಕಿ ಉಳಿಯುತ್ತದೆ.ನಿಮ್ಮನ್ನು ನೀವು ಮತ್ತೊಬ್ಬರೊಂದಿಗೆ ಹೋಲಿಸಿಕೊಂಡು ನಿಮ್ಮ ಸಾಮರ್ಥ್ಯದ ಬಗ್ಗೆ ಗಮನ ಹರಿಸದೇ ಇದ್ದರೆ ನಿಮ್ಮಲ್ಲಿರುವ ಉತ್ತಮ ಗುಣಮಟ್ಟದ ಪ್ರತಿಭೆ ಸಾಮರ್ಥ್ಯ ಕೊಳೆತು ಹೋಗುತ್ತದೆ.

ಅಭದ್ರತಾ ಭಾವ ಬೆನ್ನು ಹತ್ತುತ್ತದೆ. ಇತರರೊಂದಿಗೆ ಬೆರೆತು ಬಾಳುವ ಶಕ್ತಿಯೂ ಕುಂದುತ್ತದೆ. ’ನಿನ್ನ ಭವಿಷ್ಯ ಏನಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಆದರೆ ನನಗೆ ಒಂದು ವಿಷಯ ಮಾತ್ರ ತಿಳಿದಿದೆ. ಅದೆಂದರೆ ಬೇರೆಯವರ ಸೇವೆ ಮಾಡುವುದನ್ನು ಅರಸಿ ಹೇಗೆ ಸೇವೆ ಮಾಡುವುದೆಂದು ಅರಿತವರು ಮಾತ್ರ ಸಂತೊಷದಿಂದ ಇರುವರು ಎಂಬ ಸತ್ಯ.’ ಎಂದಿದ್ದಾನೆ ಫ್ರೆಂಚ್ ವೈದ್ಯ ಅಲ್ಬರ್ಟ್ ಶ್ವೆಟ್‍ಜರ್.

ಸುಪ್ತವಾಗಿ ಹುದುಗಿರುವ ಪ್ರತಿಭೆಯನ್ನು ಹೊರಗೆಳೆದು ಸೇವೆ ಮಾಡುವ ಪ್ರಯತ್ನ ಮಾಡದೇ ಹೋದರೆ ನಿಮಗೆ ನಿರುದ್ಯೋಗ ಕಟ್ಟಿಟ್ಟ ಬುತ್ತಿ. ಅಂತಹ ಸ್ಥಿತಿಯನ್ನು ತಂದುಕೊಳ್ಳಬೇಡಿ. ಹೋದಲೆಲ್ಲ ಅಭದ್ರತಾ ಭಾವದ ಹಿಡಿಕೆ ಹಿಡಿದು ನಡೆಯಬೇಡಿ.

- Advertisement -

ಛಲ ಬಿಡ ಬೇಡಿ

ಮೇಲಿಂದ ಮೇಲೆ ಬಂದು ಹಾಯುವ ಸೋಲುಗಳನ್ನು ಅಷ್ಟು ಸುಲಭಕ್ಕೆ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ನಾನು ನಿಷ್ಪ್ರಯೋಜಕ ನನ್ನಿಂದೇನೂ ಆಗುವುದಿಲ್ಲ. ಎಂಬ ಮಾನಸಿಕ ಸಮಸ್ಯೆಯಿಂದ ಹೊರಬರಬೇಕು. ನಿಮ್ಮಲ್ಲಿರುವ ಸಕಾರಾತ್ಮಕ ಛಲವನ್ನು ಉಪಯೋಗಿಸಿಕೊಳ್ಳಬೇಕು. ನಿಜಕ್ಕೂ ಈ ಛಲಕ್ಕಾಗಿ ಆಕಾಶದ ಅಂಚಿಗೆ ಹೋಗಬೇಕಾಗಿಲ್ಲ.

ಪ್ರಪಂಚದಲ್ಲಿ ಎಷ್ಟೇ ಪರಾಕ್ರಮ ಮೆರೆದ ಅಜೇಯ ವೀರನಿದ್ದರೂ ಆತನಿಗೂ ಸೋಲುಗಳು ಕಾಡದೇ ಬಿಟ್ಟಿರುವುದಿಲ್ಲ. ಅರ್ಧ ಜಗತ್ತನ್ನು ಗೆದ್ದ ಅಲೆಗ್ಝಾಂಡರ್‍ನನ್ನೂ ವೈಫಲ್ಯಗಳು ಹಿಂಡಿ ಹಿಪ್ಪೆ ಮಾಡಿದ್ದವು. ಆದರೆ ಛಲ ಬಿಡದ ತ್ರಿವಿಕ್ರಮನಂತೆ ಸಾಮ್ರಾಜ್ಯ ವಿಸ್ತಾರದ ಕನಸು ನನಸಾಗಿಸಿದ. ಅತ್ತಿತ್ತ ಸುಳಿಯುವ ಗಾಳಿಯು ಪಟವನ್ನು ಮೇಲಕ್ಕೆ ಹಾರಿಸುತ್ತದೆ.

ಬಾಲಂಗೊಚಿಯು ಪಟವನ್ನು ಅತ್ತಿತ್ತ ಹೊಯ್ದಾಡದಂತೆ ಸಮತೋಲನ ತಪ್ಪಿ ನೆಲಕ್ಕೆ ಬೀಳದಂತೆ ಕಾಪಾಡುತ್ತದೆ. ಅಂತೆಯೇ ಛಲವು ನಮ್ಮ ಎದೆಗೆ ಶಕ್ತಿಯನ್ನು ತುಂಬುತ್ತದೆ. ನಮಗೆ ನಾವೇ ಸಹಾಯ ಮಾಡಿಕೊಳ್ಳುವ ದೊಡ್ಡ ವಿಧಾನವೇ ಛಲ. ‘ಪಾದಗಳಿರದ ಒಬ್ಬ ವ್ಯಕ್ತಿಯನ್ನು ನೋಡುವ ತನಕ ನನ್ನ ಬಳಿ ಚಪ್ಪಲಿಗಳಿಲ್ಲ ಎಂದು ಅತ್ತೆ.’ ಎಂಬುದು ಪರ್ಷಿಯನ್ ಗಾದೆ ಮಾತು.

ಕಾಲಿಲ್ಲದ ವ್ಯಕ್ತಿಯೇ ಅತ್ಯದ್ಭುತವನ್ನು ಸಾಧಿಸುತ್ತಿರುವಾಗ ನಾನು ತ್ವರಿತವಾಗಿ ಸ್ವಯಂ ಶಿಸ್ತು ಬದ್ಧತೆಯಿಂದ ಮತ್ತೆ ಮತ್ತೆ ಛಲದಿಂದ ಪ್ರಯತ್ನಿಸುವುದು ಅತ್ಯಗತ್ಯ ಎಂಬದು ಸುಲಭವಾಗಿ ಸ್ವಾವಲಂಬನೆಯ ಬದುಕಿಗೆ ದಾರಿಗಳನ್ನು ಹುಡುಕಿ ಕೊಡುತ್ತದೆ.

ಹೋಲಿಕೆಯ ಕುಣಿಕೆ

ಸ್ವಾವಲಂಬನೆಯ ಪಥ ನಮ್ಮದಾಗಿಸಿಕೊಳ್ಳಲು ಹೋಲಿಕೆಯ ಕುಣಿಕೆಯನು ದೂರವಿಡಬೇಕು.ನನ್ನ ಜೊತೆ ಕಲಿತವರು ಆಗ ಅತಿ ಕಡಿಮೆ ಅಂಕ ತೆಗೆದವರು, ಏನೆಂದರೆ ಏನೂ ಜ್ಞಾನ ಇಲ್ಲದವರು ಇಂದು ಎಷ್ಟೆಲ್ಲ ಗಳಿಸುತ್ತಿದ್ದಾರೆ. ನಾನು ಮಾತ್ರ ಆರಕ್ಕೇರದೇ ಮೂರಕ್ಕಿಳಿಯದೇ ನಿಂತ ನೀರಾಗುತ್ತಿದ್ದೇನೆ ಎಂದು ಕರುಬಬಾರದು.

ಏಕೆಂದರೆ ಉಳಿದ ಸಮಯದಲ್ಲಿ ಅವರು ಅವಕಾಶಗಳನ್ನು ತಮ್ಮ ಸಾಮರ್ಥ್ಯಕ್ಕೆ ಮೀರಿ ಬಳಸಿಕೊಂಡಿದ್ದಾರೆ. ಪರಿಶ್ರಮ ವಹಿಸಿದ್ದಾರೆ ಎಂಬುದರ ಬಗ್ಗೆ ನಮ್ಮ ಗಮನ ಹರಿಯುವುದೇ ಇಲ್ಲ ಆರ್ಥಿಕ ಸ್ಥಿತಿ ಒಂದು ಮಿತಿಗಿಂತ ಕಡಿಮೆಯಾದಾಗ ನೋವು ಸಹಜವಾಗಿಯೇ ಆಗುತ್ತದೆ. ಹಾಗಂತ ಹೋಲಿಕೆಯ ಕುಲುಮೆಯಲ್ಲಿ ಬೇಯುತ್ತ, ಬೇಸರದ ಹೊರತು ಬದುಕಿನಲ್ಲಿ ಏನಿಲ್ಲವೆಂದು ನೊಂದುಕೊಳ್ಳಬಾರದು.

ಬೇಸರ ಕಾಡಿದಾಗ ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು. ಆಗ ಮನಸ್ಸು ಹಗುರವಾಗುತ್ತದೆ. ಸ್ವಾವಲಂಬಿತನದ ಕೊರತೆ ನೀಗಿಸಲು ಇತರರ ಆರ್ಥಿಕ ಯಶಸ್ಸಿನಿಂದ ವ್ಯಾಕುಲಗೊಳ್ಳಬೇಡಿ. ’ನೀನು ನೀನಾಗಿಯೇ ಇರು, ಅದೇ ವಾಸ್ತವ. ರಾತ್ರಿ ನಂತರ ಹಗಲು ಹೇಗೆ ಬರುತ್ತದೋ, ಅಷ್ಟೇ ಸಹಜವಾದ ಅಂಶ ಇದು. ಹಾಗಿರುವಾಗ ನೀನು ಯಾರ ಬಗ್ಗೆನೂ ತಪ್ಪು ಮಾಡಲಾರೆ. ಎಂದಿದ್ದಾನೆ ಷೇಕ್ಸಪಿಯರ್. ಹೋಲಿಕೆಯ ಕುಣಿಕೆಯಿಂದ ಪಾರಾಗಲು ಯತ್ನಿಸಿದಷ್ಟೂ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಆದ್ದರಿಂದ ಸ್ವ-ಸಾಮಥ್ರ್ಯ ಹಿಗ್ಗಿಸಿಕೊಳ್ಳಬೇಕು. ತನ್ಮೂಲಕ ಸ್ವಾವಲಂಬಿತನದ ಹಿರಿಮೆ ಸಾಧಿಸಲು ನಮಗೆ ನಾವೇ ಮೊದಲನೇ ಹಾಗೂ ಅಂತಿಮ ಸಲಹೆಗಾರರಾಗಿ ಕಾರ್ಯ ನಿರ್ವಹಿಸಬೇಕು.

ಉಳಿಕೆ ಇಲ್ಲದ ಗಳಿಕೆ

ನೀವು ನಿಮ್ಮ ಮನಸ್ಸಿನಿಂದ ಆಳಲಾಗುತ್ತಿದ್ದರೆ ನೀವು ಒಬ್ಬ ಗುಲಾಮ. ಮನಸ್ಸನ್ನು ನೀವು ಆಳುತ್ತಿದ್ದರೆ ನೀವೇ ರಾಜ.ಹೀಗಾಗಿ ಮನಸ್ಸನ್ನು ಸ್ವ ನಿಯಂತ್ರಣದಲ್ಲಿಟುಕೊಳ್ಳಲು ಪ್ರಯತ್ನಿಸಬೇಕು. ಸ್ವಾವಲಂಬಿ ಬದುಕಿಗೆ ಗಳಿಕೆ ಮುಖ್ಯ. ಉಳಿಕೆ ಇಲ್ಲದ ಗಳಿಕೆ ಎಷ್ಟಿದ್ದರೂ ವ್ಯರ್ಥ. ಮಿತವ್ಯಯ ಮಾಡದವನು ನರಳಬೇಕಾಗುತ್ತದೆ ಎನ್ನುತ್ತಾನೆ ಕಾರ್ಲೈಲ್. ಗಳಿಕೆಯೇ ಕಮ್ಮಿ ಅದರಲ್ಲಿ ಉಳಿಕೆ ಎಲ್ಲಿಯದು? ಎಂದು ಯೋಚಿಸದೇ ಸಂಪೂರ್ಣವಾಗಿ ನಮ್ಮ ಕಾಲ ಮೇಲೆ ನಾವು ನಿಲ್ಲುವವರೆಗೂ ಗಳಸಿದ ಕೆಲ ಪ್ರಮಾಣದ ಹಣವನ್ನು ನಿಮ್ಮ ಮೇಲೆ ನೀವು ಹೂಡಿಕೆ ಮಾಡಿಕೊಳ್ಳುವುದು ಲಾಭಕರ. ಉನ್ನತ ಮಟ್ಟದ ಉದ್ಯೋಗ ಪ್ರಾಪ್ತಿಗೆ ಶಕ್ತಿ ಸಾಮರ್ಥ್ಯ ಪ್ರತಿಭೆಗಳನ್ನು ಸುಧಾರಿಸಲು ಹಣ ಬಳಸುವುದೂ ಶ್ರೇಯಸ್ಕರ. ಪ್ರತಿಯೊಂದು ದಿನವೂ ಸ್ವಾವಲಂಬಿ ಭವಿಷ್ಯತ್ತಿಗೆ ರೂಪಿತವಾಗಲು ಅವಕಾಶಗಳನ್ನು ನೀಡುತ್ತಿರುತ್ತದೆ. ಅವುಗಳನ್ನು ಅವಲೋಕಿಸಿ ಶಕ್ತಿಮೀರಿ ಶ್ರದ್ಧೆಯಿಂದ ಪ್ರಯತ್ನಿಸುವುದೇ ಹೆಚ್ಚಿನ ಗಳಿಕೆಗೆ ರಾಜಮಾರ್ಗ.

ಗುರಿ ಗುರುತಿಸುವಿಕೆ

ಬದುಕಿನಲ್ಲಿ ಸದಾ ಎರಡು ಮಾರ್ಗಗಳಿರುತ್ತವೆ. ಯಾರಿಗೂ ಬೇಡವಾಗಿ ಇನ್ನೊಬ್ಬರ ಆಸರೆಯಲ್ಲಿ ಬದುಕುವುದು. ಮತ್ತೊಂದು ಎಲ್ಲರಿಗೂ ಬೇಕಾಗಿ ಸುಂದರ ಬಾಳು ಕಟ್ಟಿಕೊಂಡು ಇತರರ ಬದುಕಿಗೆ ಬೆಳಕಾಗಿ ಜೀವನ ಧನ್ಯತೆ ಪಡೆಯುವುದು ಎಷ್ಟೋ ಸಲ ಸ್ವಾವಲಂಬಿತನ ಬದುಕು ನಮ್ಮತ್ತ ಕಣ್ಣು ಹೊರಳಿಸಿ ನೋಡದಿರಲು ಮುಖ್ಯ ಕಾರಣ ಸರಿಯಾದ ಗುರಿ ಗುರುತಿಸದಿರುವುದು. ನೀವೇನಾಗಲು ಬಯಸುತ್ತೀರಿ? ನಿಮಗೇನು ಬೇಕು? ಎನ್ನುವುದನ್ನು ಮೊದಲೇ ಸ್ಪಷ್ಟವಾಗಿ ತಿಳಿಸುಕೊಳ್ಳಿ. ಗುರಿಯನ್ನು ದೊಡ್ಡದಾದ ಅಕ್ಷರಗಳಲ್ಲಿ ಬರೆಯಿರಿ.ಅದರ ಚಿತ್ರವನ್ನು ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಳ್ಳಿ. ತದನಂತರ ಯೋಜನೆಗಳ ಮೂಲಕ ಕಾರ್ಯಪ್ರವೃತ್ತರಾಗಿ. ಆಗ ನೋಡಿ, ಪರಾವಲಂಬಿತನದ ಚಿಂತೆ ತಾನೇ ಮಂಜಿನಂತೆ ಕರಗುತ್ತದೆ. ಮತ್ತೊಬ್ಬರ ಮೇಲೆ ಅವಲಂಬಿತ ಬದುಕು ಸಂಪೂರ್ಣ ಮರೆಯಾಗಿ ಜೀವನ ವಾತ್ಸಲ್ಯದ ಸಾಗರವಾಗಿ ಬದಲಾಗುತ್ತದೆ.


ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ

- Advertisement -
- Advertisement -

Latest News

ರೈತ ಆತ್ಮಹತ್ಯೆ ; ಶಾಸಕರ ಸಾಂತ್ವನ

ಸಿಂದಗಿ; ಸಾಲದ ಬಾಧೆಗೆ ಆತ್ಮಹತ್ಯೆ ಪರಿವಾರವಲ್ಲ. ಕಾಲದ ವೈಪರೀತ್ಯದಿಂದ ಮಳೆಯಾಗದೇ ಇಂತಹ ದುಸ್ತರ ಪರಿಸ್ಥಿತಿ ಬಂದೊದಗಿದ್ದು ರೈತರ ಕಷ್ಟಗಳಿಗೆ ಸರಕಾರ ಸ್ಪಂದಿಸುತ್ತದೆ ಅಲ್ಲದೆ ನಿಮ್ಮ ಕಷ್ಟಕ್ಕೆ...
- Advertisement -

More Articles Like This

- Advertisement -
close
error: Content is protected !!
Join WhatsApp Group