ಶಂಭೋ ಶಂಕರ
ದಯಾಮಯಿ ಪರಮೇಶ
ನಿನ್ನ ನಂಬಿಹೆವಯ್ಯ
ಅನುದಿನದಿ ನಿನ್ನ ಸ್ಮರಣೆ
ಶಿಶಿರ ಋತುವು ಕೃಷ್ಣ ಪಕ್ಷ
ಬಹುಳ ಚತುರ್ದಶಿಯ ಶಿವರಾತ್ರಿ
ಶಿವ ಸ್ಮರಣೆಯ ಜಾಗರಣೆಯ ಶುಭರಾತ್ರಿ
ಅಗ್ನಿ ಕಂಭದ ಶಿರದಿ
ಇಳಿಯುವ ಕೇತಕಿ ಪುಷ್ಪದಿ
ಬ್ರಹ್ಮ ವಿಷ್ಣುವಿನ ಅಗ್ನಿ ಕಂಬದ
ಶಿರ ಭಾಗದ ಹುಡುಕಾಟದಿ
ಮಾಘ ಮಾಸದಿ ಲಿಂಗ ರೂಪವ
ತಾಳಿದ ಪರಶಿವನ ಶಿವರಾತ್ರಿ
ಹಗಲುಗಳಲಿ ಜರಗುವವು ಎಲ್ಲ ಪೂಜೆಗಳು
ಜಾಗರಣೆಯ ಪೂಜೆಯ ವಿಶೇಷ ಶಿವರಾತ್ರಿ
ಓಂ ನಮಃ ಶಿವಾಯ ಪಠಣದೊಳು
ಪರಶಿವನ ಸ್ಮರಿಸುತಲಿ
ಜಗದ ಒಳಿತನು ಕಾಣುತಲಿ
ಭಕ್ತ ಸಮೂಹ ಸ್ಮರಿಸುವ ಶುಭರಾತ್ರಿ
ಬಿಲ್ವಪತ್ರಿ.ತಿಲಗಿ ಪುಷ್ಪ.ತುಳಸಿಯ
ಮಾಲೆಯೊಳು ಅರ್ಪಿಸುತಲಿ
ಪರಶಿವಗೆ ಓಂ ನಮಃ ಶಿವಾಯ
ಓಂ ನಮಃ ಶಿವಾಯ.ಓಂ ನಮಃ ಶಿವಾಯ
ಭಕ್ತಿ ಭಾವದಿ ರಾತ್ರಿಯಿಡೀ ಜಾಗರಣೆಯೊಳು
ಶಿವ ಸ್ಮರಣೆಯ ಶಿವರಾತ್ರಿ
ಶಿವಭಕ್ತರಿಗಿದು ಮಂಗಳಕರ ರಾತ್ರಿ
ದಿನವಿಡೀ ಉಪವಾಸದಿ ಶುಭ ದಿನವು
ಶಿವಪುರಾಣದೊಳು ವಿಷಕಂಠನ
ಕತೆಯ ಆಲಿಸುತಲಿ.ಪಾರ್ವತಿ
ಪರಶಿವನ ವಿವಾಹಮಹೋತ್ಸವ ಕತೆಯ
ಕೇಳುತಲಿ ಭಕ್ತಿ ಭಾವದಿ ಸ್ಮರಿಪ ಶಿವರಾತ್ರಿ
ತ್ರಯೋದಶಿಯು ಶಕ್ತಿರೂಪ
ಚತುರ್ದಶಿಯು ಶಿವರೂಪ
ತ್ರಯೋದಶಿಯೊಳು ಚತುರ್ದಶಿಯ
ಅಂತರ್ಗತವಾಗಿರಲು ಶಿವಶಕ್ತಿಯೋಗ
ಬೇಡರ ಕಣ್ಣಪ್ಪನಿಗೊಲಿದ ಶಿವಸ್ವರೂಪ
ಶಿವಗುಣರೂಪವ ಸ್ಮರಿಸುವ ಶಿವರಾತ್ರಿ
ವೈ.ಬಿ.ಕಡಕೋಳ
ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮುನವಳ್ಳಿ ೫೯೧೧೧೭