ವೇಮನ ಮಹಾಕವಿ, ಪರಮ ಯೋಗಿ, ದಾರ್ಶನಿಕ, ಮಹಾಯೋಗಿ 16ನೇ ಶತಮಾನದ ತೆಲುಗು ಕವಿಗಳಲ್ಲಿ ಪ್ರಮುಖ. ಕನ್ನಡದ ಸರ್ವಜ್ಞ ತಮಿಳಿನ ತಿರುವಳ್ಳುವರ ಅವರಂತೆ ತೆಲುಗಿಗೆ ವೇಮನ ಮಹಾಕವಿ ಮಹಾಯೋಗಿಯಾಗಿದ್ದಾನೆ ಎಂದು ಉಪನ್ಯಾಸಕರಾದ ಪ್ರೊ. ಶಾರದಮ್ಮ ಪಾಟೀಲ ಅವರು ತಮ್ಮ ಉಪನ್ಯಾಸ ಪ್ರಾರಂಭ ಮಾಡಿದರು.
ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ವಿಶೇಷ ದತ್ತಿಉಪನ್ಯಾಸದ 11 ನೆಯ ದಿವಸದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೇಮನರ ಷಟ್ಪದಿಯಲ್ಲಿ ಅನುಭಾವ ಹೆಚ್ಚು ಸೂಕ್ತವಾಗುತ್ತದೆ, ಎನ್ನುವುದನ್ನು ಹೇಳುತ್ತಾ, ಇಂದ್ರಿಯಾತೀತ ಅನುಭಾವ, ಲಿಂಗಾoಗ ಸಾಮರಸ್ಯ, ಲೋಕಪರಿವೀಕ್ಷಣೆ, ಪ್ರತ್ಯಕ್ಷ ಅನುಭವ, ನಡೆ -ನುಡಿ, ಅಂತರಂಗ -ಬಹಿರಂಗ ಒಂದೇ ರೀತಿಯಲ್ಲಿರುವುದೇ ಅನುಭಾವ ಎನ್ನುವ ಮಾತನ್ನು ಒತ್ತಿ ಹೇಳಿದರು.
ವೇಮನರು 3800 ವಚನಗಳನ್ನು ಬರೆದಿದ್ದಾರೆ ಎನ್ನುವುದನ್ನು ಉಲ್ಲೇಖಿಸುತ್ತ, ಬಹಳಷ್ಟು ವಚನಗಳನ್ನು ಅರ್ಥ ಸಮೇತ ವಿವರಿಸಿದರು. ಉಪ್ಪು ಮತ್ತು ಕರ್ಪೂರ ನೋಡಲು ಬೆಳ್ಳಗೆ ಒಂದೇ ಥರ ಕಾಣುತ್ತವೆ.ಆದರೆ ಗುಣಧರ್ಮ ಬೇರೆ ಬೇರೆ, ಹಾಗೆಯೇ ಸಮಾಜದಲ್ಲಿ ಪುಣ್ಯಪುರುಷರು, ಅಸಾಮಾನ್ಯರು, ಸ್ಮರಣೀಯರು, ಅದ್ವಿತೀಯರು ತಮ್ಮದೇ ಆದ ವಿಶೇಷವಾದ ಸ್ಥಾನದಲ್ಲಿ ಇರುತ್ತಾರೆ ಎನ್ನುವ ಭಾವವನ್ನು ವ್ಯಕ್ತಪಡಿಸಿದರು.
ಬಸವಣ್ಣನವರ ಮತ್ತು ವೇಮನರ ತೌಲನಾತ್ಮಕ ನಿಲುವಿನಲ್ಲೂ ಅತ್ಯಂತ ಪ್ರಬುದ್ಧವಾಗಿ ತಮ್ಮ ಉಪನ್ಯಾಸದ ಮೂಲಕ ಕಟ್ಟಿಕೊಟ್ಟರು.ನಂತರ ಡಾ. ಉಮಾಕಾಂತ ಶೇಟ್ಕರ ಅವರು ತಮ್ಮ ಮಾರ್ಗದರ್ಶನದಲ್ಲಿ ಉಪನ್ಯಾಸಕರನ್ನು ತುಂಬು ಹೃದಯದಿಂದ ಹೊಗಳಿ, ಅವರ ಜೊತೆಗೆ ಸಂವಾದ ರೂಪದಲ್ಲಿ ಮಾತುಕತೆಯನ್ನಾಡಿದರು.ತೆಲುಗು ಸಾಹಿತ್ಯದಲ್ಲಿ ಬಳಕೆಯ ಭಾಷೆಯ ಸೊಗಸನ್ನು ಪದ್ಯರಚನೆಗೆ ಅಂಟಿಸಿದ ಮೊದಲಿಗ ವೇಮನ. ಜನರ ಬಾಯಲ್ಲೇ ಉಳಿದುಕೊಂಡು ಬಂದಿದ್ದ ವೇಮನನ ಪದಗಳನ್ನು ಮೊದಲ ಬಾರಿಗೆ 1829 ರಲ್ಲಿ ಸಂಗ್ರಹಿಸಿ,ಸಂಪಾದಿಸಿ, ಇಂಗ್ಲಿಷ್ ಗೆ ಅನುವಾದ ಮಾಡಿ ಪ್ರಕಟಿಸಿದ್ದು ಚಾರ್ಲ್ಸ್ ಫಿಲಿಪ್ ಬ್ರೌನ್ ಎಂಬುವವರು ಎನ್ನುವುದನ್ನು ನೆನಪಿಸಿಕೊಂಡರು.
ಕಡೆಯಲ್ಲಿ ಡಾ. ಶಶಿಕಾಂತ ಪಟ್ಟಣ ಅವರು ಸರ್ವಜ್ಞ ಮತ್ತು ವೇಮನರು ಇಬ್ಬರೂ ಅನುಭಾವಿಗಳೂ, ಸಮಾಜಮುಖಿಗಳೂ, ಜ್ಞಾನಮುಖಿಗಳೂ ಹಾಗೂ ಮಹೋನ್ನತ ಪ್ರತಿಭೆಯುಳ್ಳವರು ಎಂದು ಉಲ್ಲೇಖಿಸುತ್ತಾ,ರಾಮಸ್ವಾಮಿ ಪೆರಿಯಾರ್, ತಿರುವಳ್ಳವರ್, ನಾರಾಯಣ ಗುರು, ನಾಮದೇವ, ಜ್ಞಾನೇಶ್ವರರು, ಸಂತ ತುಕಾರಾಂ ಅವರ ಬಗೆಗೆ ಬಹಳಷ್ಟು ಮಾಹಿತಿಗಳನ್ನು ತಿಳಿಯಪಡಿಸಿದರು.
ಶರಣ ಮಂಜು ಮಡಿವಾಳ ಅವರ ವಚನ ಪ್ರಾರ್ಥನೆ, ಡಾ. ಸಾವಿತ್ರಿ ಕಮಲಾಪುರ ಅವರ ಸ್ವಾಗತ, ಪ್ರಾಸ್ತಾವಿಕ, ಪರಿಚಯ, ಶರಣೆ ಸ್ಮಿತಾ ಪಾವಟೆ ಅವರ ಶರಣು ಸಮರ್ಪಣೆ,
ಜಯಶ್ರೀ ಆಲೂರ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ನಡೆಯಿತು. ಡಾ. ಸರೋಜಾ ಜಾಧವ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ