ಜೀವನದಲ್ಲಿ ಪ್ರವಾಸ ತನ್ನದೆ ಅದ ಅನುಭೂತಿಯನ್ನು ನೀಡುತ್ತದೆ. ನಾನು ನನ್ನ ಹಳೆಯ ಅಲ್ಬಂ ನೋಡುವ ಸಂದರ್ಭದಲ್ಲಿ ಇತ್ತೀಚಿಗೆ ಕುಂದಾಪುರ ಪೋಟೋಗಳನ್ನು ನೋಡಿದೆ. ತಟ್ಟನೇ ನೆನಪಾಗಿದ್ದು ಅಲ್ಲಿನ ಕುಂದೇಶ್ವರ ದೇವಾಲಯ.
ಪೆಬ್ರುವರಿ ೨೮ ಮತ್ತು ಮಾರ್ಚ ೧ ೨೦೧೫ ರಲ್ಲಿ ನಾನು ಕುಂದಾಪುರದ ದೃಶ್ಯ ಮತ್ತು ಶ್ರವ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಾಚನಾಭಿರುಚಿ ಕಮ್ಮಟದ ಶಿಬಿರಾರ್ಥಿಯಾಗಿ ಪಾಲ್ಗೊಂಡಿದ್ದೆ.
ನನಗೆ ಭಂಡಾರ್ಕಸ್ ಕಾಲೇಜಿಗೆ ಸಮೀಪವಿರುವ ಲಾಜಿಂಗ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಸರಕಾರದ ಅನ್ಯ ಕಾರ್ಯ ನಿಮಿತ್ತ ರಜೆ ಅನುಕೂಲ ಕಲ್ಪಿಸಿದ ಕಾರ್ಯಕ್ರಮವಾದ ಕಾರಣ ನನಗೆ ಪ್ರವಾಸಕ್ಕೆ ಅವಕಾಶ ಒದಗಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ.
ಬೆಳಿಗ್ಗೆ ೧೦ ರಿಂದ ಮದ್ಯಾಹ್ನ ೩ ರ ತನಕ ಶಿಬಿರ. ನಂತರ ರೂಮಿಗೆ ಬಂದು ಸ್ವಲ್ಪ ಕಾಲ ವಿಶ್ರಾಂತಿ ಸಂಜೆ ಎಲ್ಲಿಯಾದರೂ ಸುತ್ತಾಡಿದರಾಯಿತು ಎಂದುಕೊಂಡು ಮೊದಲು ನಾನು ಹೋಗಿದ್ದು ಕುಂದಾಪುರದ ಕುಂದೇಶ್ವರ ದೇವಾಲಯಕ್ಕೆ. ಅಲ್ಲಿದ್ದ ಎರಡು ದಿನಗಳು ಕೂಡ ಬೆಳಗಿನ ಜಾವ ದೇವಾಲಯಕ್ಕೆ ಹೋಗಿ ಪೂಜಾ ಸಮಾರಂಭ ವೀಕ್ಷಿಸಿ ರೂಮಿಗೆ ತೆರಳುತ್ತಿದೆ. ನಮ್ಮ ರೂಮಿಗೆ ಅದು ಹತ್ತಿರವಿದ್ದ ಕಾರಣ ಅನುಕೂಲ ಆಗುತ್ತು.
ಉಡುಪಿ ಜಿಲ್ಲೆಯ ತಾಲೂಕು ಕೇಂದ್ರವಾದ ಕುಂದಾಪುರವು ಉಡುಪಿಯಿಂದ ೩೫ ಕಿಲೋ ಮೀಟರ್ ದೂರದಲ್ಲಿದೆ. ಸುಮಾರು ೪೫ ಕಿ.ಮೀ. ಸಮುದ್ರದ ಅಂಚನ್ನೂ ಹೊಂದಿದ್ದು ಸಮುದ್ರ ಮಟ್ಟದಿಂದ ೨೬ ಅಡಿ ಎತ್ತರದಲ್ಲಿದ್ದು ತತ್ಸಂಬಂಧಿತ ನಿಸರ್ಗ ಸೌಂದರ್ಯವನ್ನೂ ಹೊಂದಿರುವ ತಾಲೂಕು ಕುಂದಾಪುರ. ಇದರ ಸಮತಟ್ಟಾದ ಒಳಪ್ರದೇಶದಲ್ಲಿ ಕೆಲವು ಕಾಡು ಪ್ರಾಣಿಗಳನ್ನು ಹೊಂದಿರುವ ದಟ್ಟವಾದ ಅರಣ್ಯ ಪ್ರದೇಶವೂ ಉಂಟು. ಇಲ್ಲಿನ ಯಕ್ಷಗಾನ, ಕುಣಿತ, ನಾಟಕ ಹಾಗೂ ಇತ್ತೀಚಿನ ವರ್ಷಗಳಲ್ಲಿ ಇಡೀ ದೇಶದ ಗಮನವನ್ನೇ ಸೆಳೆಯುತ್ತಿರುವ ಕಂಬಳ ಹಾಗೂ ಕೋಳಿ ಅಂಕ ಪ್ರವಾಸಿಗರನ್ನು ಆಕರ್ಷಿಸುವ ಅಂಶಗಳು.
ಕುಂದಾಪುರ ಕುರಿತು:
ತಾಲೂಕ ಕೇಂದ್ರವಾದ ಕುಂದಾಪುರ ಒಂದು ಬಂದರು ಹಾಗೂ ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ. ಈ ಊರಿನ ಬಳಿಯಲ್ಲಿಯೇ ೫ ನದಿಗಳ ಸಂಗಮ (ಪಂಚ ಗಂಗಾವಳಿ)ದಿಂದುಟಾದ ಗಂಗೊಳ್ಳಿ ನದಿ ಇದೆ. ಇತಿಹಾಸವನ್ನು ಅವಲೋಕಿಸಿದಾಗ ವಿಜಯನಗರದ ಅರಸರ ಅನಂತರ ಬಂದ ಬೈಂದೂರು ಅರಸರಿಗೆ ಕುಂದಾಪುರ ಒಂದು ವಾಣಿಜ್ಯ ಕೇಂದ್ರವಾಗಿತ್ತು ಅಷ್ಟೇ ಅಲ್ಲ ೧೬ ನೇ ಶತಮಾನದಲ್ಲಿ ಪೋರ್ಚುಗೀಸರಿಗೆ ಮತ್ತು ಕ್ರೈಸ್ತ ಮಿಷನರಿಗಳಿಗೆ ಆಶ್ರಯ ನೀಡಿದ ತಾಣವಾಗಿತ್ತು.
ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕುಂದೇಶ್ವರ ದೇವಾಲಯವನ್ನು ಕಟ್ಟಿಸಿದ್ದರಿಂದ ಈ ಪ್ರದೇಶಕ್ಕೆ ಕುಂದಾಪುರವೆಂಬ ಹೆಸರು ಬಂತೆಂಬ ಪ್ರತೀತಿ ಇದೆ. ಈ ಗುಡಿಯಲ್ಲಿ ಆಳುಪರ ಕಾಲದ ಶಿಲಾಶಾಸನಗಳಿವೆ. ಪೋರ್ಚುಗೀಸರು ಕಟ್ಟಿದ ಕೋಟೆಯ ಅವಶೇಷಗಳಿವೆ.
ಕುಂದಾಪುರದಲ್ಲಿ ಹಲವಾರು ದೇವಾಲಯಗಳಿವೆ. ಆದರೆ ಪ್ರಮುಖವಾದುದು ಕುಂದೇಶ್ವರ. ತಲೆ-ತಲಾಂತರಗಳಿಂದ ಬಂದ ಅಭಿಪ್ರಾಯದಂತೆ ಕುಂದೇಶ್ವರ ಕುಂದಾಪುರದ ಹೆಸರಿಗೆ ಕಾರಣ.ಬಸ್ ನಿಲ್ದಾಣದಿಂದ ಮುಂದೆ ಬಂದು ತಿರುವಿನಲ್ಲಿ ಬಲಕ್ಕೆ ನಡೆದರೆ ಕುಂದೇಶ್ವರ ದೇವಾಲಯ ಮಹಾದ್ವಾರ ಕಾಣುತ್ತದೆ.
ಅಲ್ಲಿಂದ ಎದುರುಗಡೆ ದೇವಾಲಯ ಗೋಚರಿಸತೊಡಗುತ್ತದೆ. ಹತ್ತಾರು ಹೆಜ್ಜೆ ನಡೆದು ಬರುವಾಗ ಮಾರ್ಗಮಧ್ಯದಲ್ಲಿ ಗುರು ರಾಘವೇಂದ್ರರಾಯರ ಮಠ ಹಾಗೂ ಹೃಷಿಕೇಶ ಮಾದರಿಯ ಧ್ಯಾನಸ್ಥ ಶಿವನ ಗಂಗಾವತರಣ ವಿಗ್ರಹ ಹೊಂದಿದ ಕೆರೆ ಕಾಣುವುದು.ಇವೆರಡರ ಮುಂದೆ ದೇವಾಲಯ ಇತಿಹಾಸದ ನೆನಪಿನೊಂದಿಗೆ ಎದುರಿಗೆ ಇರುವುದು.
ಸ್ಥಳನಾಮ ಹಿನ್ನೆಲೆ:
ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದಲ್ಲಿ ‘ಕುಂದವರ್ಮನೆಂಬ ಅರಸ ಪಂಚಗಂಗಾವಳಿಯ ಹತ್ತಿರ ಕಟ್ಟಿಸಿದ ಕುಂದೇಶ್ವರ ದೇವಾಲಯದಿಂದ ಇದಕ್ಕೆ ಕುಂದಾಪುರವೆಂದು ಹೆಸರಾಯಿತು’- ಎನ್ನಲಾಗಿದೆ.
‘ದಕ್ಷಿಣದ ಸಿರಿನಾಡು’ ಎಂಬ ಗ್ರಂಥದಲ್ಲಿ ‘ಪೋರ್ಚುಗೀಸರು ಕುಂದಾಪುರಕ್ಕೆ ಕಾಲಿಡುವ ಮೊದಲು ಕುಂದಾಪುರ ಕುಂದವರ್ಮನೆಂಬ ತುಂಡರಸನ ಆಧಿಪತ್ಯಕ್ಕೆ ಸೇರಿತ್ತು. ಕುಂದೇಶ್ವರ ಇವನ ಮನೆದೇವರು. ಇಂದಿನ ಕುಂದೇಶ್ವರ ದೇವಾಲಯ ಶಿವಭಕ್ತನಾದ ಇವನ ಸೃಷ್ಠಿ. ಕುಂದೇಶ್ವರನಿಂದಲೇ ಈ ಊರಿಗೆ ಕುಂದಾಪುವೆಂದು ನಾಮಕರಣವಾಗಿದೆ’- ಎಂದು ಉಲ್ಲೇಖಿಸಲಾಗಿದೆ.
ದೇವಾಲಯದ ವಿಶೇಷತೆ:
ಈ ದೇವಾಲಯವು ಈಗ ಜೀರ್ಣೋದ್ಧಾರ ಹೊಂದಿದ್ದರೂ ಕೆಲವು ಅವಶೇಷಗಳ ಆಧಾರದಿಂದ ಈ ದೇಗುಲದ ಮೂಲ ರಚನೆ ಹೊಯ್ಸಳರ ಕಾಲದ ಮಧ್ಯಭಾಗಕ್ಕಂತೂ ನಿಸ್ಸಂದೇಹವಾಗಿ ಅನ್ವಯಿಸುತ್ತದೆ ಎಂದು ಹೇಳಬಹುದು.ಸಮುದ್ರ ತೀರದಿಂದ ಪೂರ್ವಕ್ಕೆ ಈ ದೇವಾಲಯವನ್ನು ನಿರ್ಮಿಸಲಾಗಿದೆ.
ಸಾಕಷ್ಟು ವಿಶಾಲವಾದ ಹೊರಪ್ರಾಕಾರ; ಮಹಾದ್ವಾರಕ್ಕೆ ಎದುರಾಗಿ ಬಲಿಪೀಠ; ಒಳ ಪ್ರಾಕಾರದಲ್ಲಿ ಒಂದು ನಂದಿ ಮಂಟಪ ಮತ್ತು ಪ್ರದಕ್ಷಿಣಾಪಥದ ಸುತ್ತಲೂ ಚಂದ್ರಶಾಲೆ(ಒಳಪೌಳಿ); ಒಳ ಪ್ರಾಕಾರದ ನಡುವೆ ಗರ್ಭಗೃಹ. ಇವು ದೇವಾಲಯದ ಮುಖ್ಯ ಅಂಗಗಳು.
ಗರ್ಭಗೃಹದ ಒಳಗೆ ನೆಲಕ್ಕೆ ಕಗ್ಗಲ್ಲ ಚಪ್ಪಡಿಗಳನ್ನು ಹಾಸಿ ಸದೃಢಗೊಳಿಸಲಾಗಿದೆ. ಇಲ್ಲಿ ಸ್ಥಳಾವಕಾಶ ತೀರ ಕಡಿಮೆ. ಇದರ ಕೇಂದ್ರ ಭಾಗದಲ್ಲಿ ಸರಳ ರೀತಿಯಲ್ಲಿ ಕೆತ್ತಲ್ಪಟ್ಟ ಕಲ್ಲಿನ ದೊಡ್ಡ ಪಾಣಿಪೀಠ. ತೀರ್ಥ ಹರಿದು ಹೋಗಲು ಇರುವ ಸೋಮಸೂತ್ರದ ಭಾಗವೂ ಸರಳವಾಗಿದ್ದು ನೇರವಾಗಿ ಕತ್ತರಿಸಲ್ಪಟ್ಟ ಮೂತಿಯನ್ನು ಹೊಂದಿದೆ. ಪಾಣೀಪೀಠದಲ್ಲಿ ಶ್ರೀ ಕುಂದೇಶ್ವರನ ಪ್ರತಿಷ್ಠೆ. ಈ ಶಿವಲಿಂಗವನ್ನು ರುದ್ರಾಕ್ಷ ಶಿಲೆಯಿಂದ ಮಾಡಿದ್ದು, ಇದರ ಹೊರಮೈ ತುಂಬ ಸೊಗಸಾಗಿದೆ. ಇದರ ಶಿರೋಭಾಗ ಅಡ್ಡಕ್ಕೆ ತುಂಡರಿಸಲ್ಪಟ್ಟ ಕಂಬದಂತೆ ಚಪ್ಪಟೆಯಾಗಿದೆ. ಹಾಗಾಗಿ ಇದೊಂದು ಅಪೂರ್ವ ಶಿವಲಿಂಗ.
ಗರ್ಭಗುಡಿ ಎದುರಿಗೆ ಪ್ರತ್ಯೇಕವಾದ ನಂದಿ ಮಂಟಪ; ಎತ್ತರವಾದ ಜಗುಲಿ; ಇದರ ಮೇಲೆ ನಾಲ್ಕು ಕಂಬಗಳು. ಇವುಗಳ ಮೇಲೆ ಮಂಟಪದ ಮಾಡು. ಕರಿಶಿಲೆಯಲ್ಲಿ ಕಡಿದಿರುವ ನಂದಿ ಚಿಕ್ಕದಾದರೂ ಸುಂದರವಾಗಿದೆ. ಹಿತ-ಮಿತವಾದ ಆಭರಣ. ನಡುವಿನಲ್ಲಿ ದೇಹ ಸುತ್ತಿ ಬಳಸಿರುವ ಒಂದು ವಸ್ತ್ರದ ಪಟ್ಟಿ. ಈ ಮಂಟಪಕ್ಕೀಗ ಹೊಸ ರೂಪ ಬಂದಿದೆ.
ಹೊಸ ಸೃಷ್ಟಿ:
ಇತ್ತೀಚಿನ ವರ್ಷಗಳಲ್ಲಿ ಶ್ರೀ ಕುಂದೇಶ್ವರ ದೇವಸ್ಥಾನದಲ್ಲಿ ಹೊಸ ಸೃಷ್ಟಿಕಾರ್ಯವೇ ನಡೆದಿದ್ದು, ಇಡೀ ದೇವಸ್ಥಾನ ಮರುಹುಟ್ಟು ಪಡೆದಿದೆ. ಗರ್ಭಗುಡಿ, ಗಣಪತಿ-ಅಮ್ಮನವರು-ನಾಗದೇವರು-ಅಯ್ಯಪ್ಪ ಸ್ವಾಮಿಯ ಗುಡಿಗಳು, ಒಳಪೌಳಿ ಮತ್ತು ಚಂದ್ರಶಾಲೆಗಳು, ನೈವೇದ್ಯದ ಮನೆ, ನಂದಿಮಂಟಪ, ಬಲಿಶಿಲೆಗಳು, ಪ್ರದಕ್ಷಿಣ ಪಥ ಇವೆಲ್ಲ ಹೊಸ ರೂಪ ಪಡೆದಿವೆ. ಹೊರಭಾಗದಲ್ಲಿ ಅಷ್ಟ ದಿಕ್ಪಾಲಕ ವಿಗ್ರಹಗಳಿಂದ ಕಂಗೊಳಿಸುವ ಮತ್ತು ಕಿರುಗೋಪುರಗಳಿಂದ ಶೋಭಿಸುವ ಹೆಬ್ಬಾಗಿಲು, ಶಿಲೆಯ ಬಾಗಿಲು, ದ್ವಾರಪಾಲಕರ ವಿಗ್ರಹಗಳು- ಇವೆಲ್ಲ ಹೊಸ ಸೃಷ್ಟಿ.
ದೇವಾಲಯದ ಹೊರಾವರಣದಲ್ಲಿ ಇರುವ ಕೆರೆಯ ಹೂಳೆತ್ತಿ, ಹಳೆ ನೀರನ್ನೆಲ್ಲ ತೆಗೆದು ಶುದ್ಧೀಕರಿಸಲಾಗಿದೆ. ಕೆರೆಯ ಪ್ರವೇಶ ದ್ವಾರದಲ್ಲಿ ಅಲಂಕೃತ ಗೋಪುರ, ಸದೃಢ ಗೇಟು ಮತ್ತು ಪಾಗಾರ ರಚಿಸಲಾಗಿದ್ದು, ಕೆರೆಗೆ ಪ್ರದಕ್ಷಿಣೆ ಬರಲು ಮತ್ತು ಕೆರೆಯಲ್ಲಿ ನಡೆಯುವ ತೆಪ್ಪೋತ್ಸವ ಮತ್ತಿತರ ಉತ್ಸವಗಳನ್ನು ವೀಕ್ಷಿಸಲು ಮೀಸಲಾಗಿರಿಸಿದ್ದ ಸುಮಾರು ಹತ್ತು – ಹನ್ನೆರಡು ಅಡಿಗಳಷ್ಟು ವಿಸ್ತೀರ್ಣದ ನಾಲ್ಕೂ ದಿಕ್ಕಿನ ಪ್ರದಕ್ಷಿಣ ಪಥವನ್ನು ಸುಸ್ಥಿತಿಗೆ ತಂದು ಅದಕ್ಕೆ ಪಾಗಾರ ನಿರ್ಮಿಸಲಾಗಿದೆ. ಹೃಷಿಕೇಶ ಮಾದರಿಯ ಧ್ಯಾನಸ್ಥ ಶಿವನ ಗಂಗಾವತರಣ ವಿಗ್ರಹ ಸ್ಥಾಪಿಸಿ, ವಿದ್ಯುದ್ದೀಪಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕ ಶ್ರದ್ಧಾಳುಗಳಿಗಾಗಿ ‘ಶ್ರಾದ್ಧಗೃಹ’ ಒಂದನ್ನು ನಿರ್ಮಿಸಲಾಗಿದೆ.
ದೇವಸ್ಥಾನದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳು ಮತ್ತು ಉತ್ಸವಗಳು:
ತ್ರಿಕಾಲ ಪೂಜೆ:
ಬೆಳಗ್ಗೆ: ಶ್ರೀ ಕುಂದೇಶ್ವರ ಮತ್ತು ಪರಿವಾರದೇವತೆಗಳಿಗೆ ಅಭಿಷೇಕ, ಪೂಜೆ, ಮಂಗಳಾರತಿ.
ಮಧ್ಯಾಹ್ನ: ಶ್ರೀ ಕುಂದೇಶ್ವರ ದೇವರಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಅರ್ಚನೆ, ಮಹಾನೈವೇದ್ಯ ಮತ್ತು ಮಹಾಮಂಗಳಾರತಿ, ಪರಿವಾರದೇವತೆಗಳಿಗೆ ಪೂಜೆ, ನೈವೇದ್ಯ ಮತ್ತು ಮಂಗಳಾರತಿ.
ರಾತ್ರಿ: ಎಲ್ಲ ದೇವರಿಗೂ ಪೂಜೆ, ಮಂಗಳಾರತಿ.
ವಿಶೇಷೋತ್ಸವಗಳು:
- ಯುಗಾದಿ ಆಚರಣೆ: ಪ್ರತಿವರ್ಷ ಮೇಷ ಸಂಕ್ರಾಂತಿಯಂದು ಸೌರ ಯುಗಾದಿ ಆಚರಣೆ. ವಿಶೇಷ ಪೂಜೆ, ಸಂಜೆ ಪಂಚಾಂಗ ಶ್ರವಣ.
- ಶ್ರೀ ಶಂಕರ ಜಯಂತಿ: ವೈಶಾಖ ಶುದ್ಧ ಪಂಚಮಿಯಂದು ಶ್ರೀ ಶಂಕರ ಭಗವತ್ಪಾದರ ಸನ್ನಿಧಿಯಲ್ಲಿ ಹೋಮ-ಹವನ, ಧಾರ್ಮಿಕ ಪ್ರವಚನ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಇತ್ಯಾದಿ.
- ಆಯರ್ಕೊಡ ಅಭಿಷೇಕ: ಜ್ಯೇಷ್ಠ ಬಹುಳ ಅಮವಾಸ್ಯೆಯಂದು ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಆಯರ್ಕೊಡ ಅಭಿಷೇಕ, ಹರಿವಾಣ ನೈವೇದ್ಯ, ಮಹಾಪೂಜೆ ಮತ್ತು ಪ್ರಾರ್ಥನೆ.
- ಸೋಣೆ ಆರತಿ: ಸಿಂಹಮಾಸದ ಎಲ್ಲ ದಿನಗಳ ಸಂಜೆ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಸೋಣೆ ಆರತಿ. ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ.
- ನಾಗಪಂಚಮಿ: ಶ್ರಾವಣಶುದ್ಧ ಪಂಚಮಿಯಂದು ಶ್ರೀ ನಾಗದೇವರ ಸನ್ನಿಧಿಯಲ್ಲಿ ತನು ಎರೆಯುವುದು ಮತ್ತು ವಿಶೇಷ ಪೂಜೆ
- ಋಗುಪಾಕರ್ಮ: ಸಿಂಹಮಾಸದ ಶ್ರವಣ ನಕ್ಷತ್ರದಂದು ಸೌರ ಋಗುಪಾಕರ್ಮ, ಹೋಮ-ಹವನ, ನೂತನ ಯಜ್ಞೋಪವೀತಧಾರಣೆ ಮತ್ತು ಶ್ರೀ ಕುಂದೇಶ್ವರ ಸನ್ನಿಧಿಯಲ್ಲಿ ಮಹಾಮಂಗಳಾರತಿ.
- ಗಣೇಶೋತ್ಸವ: ಭಾದ್ರಪದ ಶುದ್ಧ ಚತುರ್ಥಿಯಿಂದ ನಾಲ್ಕು ದಿನ ಸಾರ್ವಜನಿಕ ಗಣೇಶೋತ್ಸವ, ಗಣಪತಿ ಪ್ರತಿಷ್ಠೆ, ಪ್ರತಿದಿನ ಪೂಜೆ, ಗಣಹೋಮ, ಮಂಗಳಾರತಿ, ಸಂಜೆ ರಂಗಪೂಜೆ, ಮಂಗಳಾರತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು, ಕೊನೆಯ ದಿನ ಮೆರವಣಿಗೆ ಮತ್ತು ವಿಸರ್ಜನೆ.
- ಶರನ್ನವರಾತ್ರಿ: ಆಶ್ವಯುಜ ಶುದ್ಧ ಪ್ರತಿಪದೆಯಿಂದ ದಶಮಿವರೆಗೆ ಅಮ್ಮನವರ ಸನ್ನಿಧಿಯಲ್ಲಿ ವಿಶೇಷಪೂಜೆ; ಕುಂಕುಮಾರ್ಚನೆ; ಮಂಗಳಾರತಿ.
- ಕದಿರು ಹಬ್ಬ ಆಚರಣೆ: ಆಶ್ವಯುಜ ಶುದ್ಧ ಬಿದಿಗೆ ಎರಡನೆ ನವರಾತ್ರಿಯಂದು ಕದಿರು ಹಬ್ಬ; ಹೊಸತು ಆಚರಣೆ.
- ದೀಪೋತ್ಸವ: ಕಾರ್ತಿಕ ಬಹುಳ ಅಮಾವಾಸ್ಯೆಯಂದು ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ. ಮಧ್ಯಾಹ್ನ ಪಂಚಾಮೃತಾಭಿಷೇಕ; ಶತರುದ್ರಾಭಿಷೇಕ; ಹರಿವಾಣ ನೈವೇದ್ಯ; ಮಹಾಪೂಜೆ; ಮಹಾಮಂಗಳಾರತಿ; ಅನ್ನಸಂತರ್ಪಣೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ರಂಗಪೂಜೆ; ಮಹಾಮಂಗಳಾರತಿ; ಶ್ರೀ ದೇವರ ಬೀದಿ ಮೆರವಣಿಗೆ; ಲಕ್ಷದೀಪೋತ್ಸವ; ಕುಂದೇಶ್ವರ ಕೆರೆಯಲ್ಲಿ ತಪ್ಪೋತ್ಸವ.
- ಅಯ್ಯಪ್ಪಸ್ವಾಮಿ ಪೂಜೆ: ಮಕರ ಸಂಕ್ರಮಣದಂದು ಶ್ರೀ ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ; ಭಜನೆ; ಮಹಾಮಂಗಳಾರತಿ.
- ಮಹಾಶಿವರಾತ್ರಿ: ಮಾಘ ಬಹುಳ ತ್ರಯೋದಶಿಯಂದು ಮಹಾಶಿವರಾತ್ರಿ ಶ್ರೀ ಕುಂದೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ; ರುದ್ರಾಭಿಷೇಕ; ರಾತ್ರಿ ರಂಗಪೂಜೆ; ಮಹಾಮಂಗಳಾರತಿ; ಸಾಂಸ್ಕೃತಿಕ ಕಾರ್ಯಕ್ರಮಗಳು.
ಈ ರೀತಿಯಲ್ಲಿ ಕುಂದೇಶ್ವರ ಹಾಗೂ ಸನ್ನಿಧಿಯಲ್ಲಿ ಬರುವ ಎಲ್ಲ ದೇವರುಗಳ ಪೂಜಾ ಕಾರ್ಯಗಳು ಉತ್ಸವಗಳು ಜರುಗುತ್ತವೆ. ವರ್ಷವಿಡೀ ಯಾವುದೇ ಮಾಸದಲ್ಲಿ ಕುಂದಾಪುರಕ್ಕೆ ಬರಬಹುದು. ಉತ್ಸವಗಳಂದು ಬಂದರೆ ಇಲ್ಲಿನ ಸಂಭ್ರಮದಲ್ಲಿ ಪಾಲ್ಗೊಳ್ಳಬಹುದು. ನೀವು ಒಮ್ಮೆಯಾದರೂ ಈ ದೇಗುಲಕ್ಕೆ ಭೇಟಿ ನೀಡಿ ಪುನೀತರಾಗಿ.
ವೈ.ಬಿ.ಕಡಕೋಳ