ಸಿಂದಗಿ: ಉಪಚುನಾವಣೆಯಲ್ಲಿ ಐತಿಹಾಸಿಕ ಜಯ ಸಾಧಿಸಿದ ಶಾಸಕ ರಮೇಶ ಭೂಸನೂರ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ರಾಜ್ಯದ ಮುಖ್ಯಮಂತ್ರಿಗಳು ಮುನ್ನುಡಿ ಬರೆಯಬೇಕೆಂದು ಬಿಜೆಪಿಯ ಮುಖಂಡ ಸಿದ್ದಣ್ಣ ಚೌಧರಿ ಹಾಗೂ ಬಿಜೆಪಿ ಜಿಲ್ಲಾ ಖಜಾಂಚಿ ಶಾರದಾ ರವೀಂದ್ರನಾಥ ಮಂಗಳೂರು ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಇರ್ವರೂ ಮುಖಂಡರು, ರಮೇಶ ಭೂಸನೂರ ಮೂರನೇಯ ಬಾರಿಗೆ ಸುಮಾರು 31 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿ ಬಿಜೆಪಿ ಸಿಂದಗಿ ಕ್ಷೇತ್ರದ ಭದ್ರ ಬುನಾದಿ ಎಂದು ಸಾಬೀತುಪಡಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರಲ್ಲಿ ರಮೇಶ ಭೂಸನೂರ ಅವರು ಹಿರಿಯರಾಗಿದ್ದು ತಮ್ಮ ರಾಜಕಿಯ ಜೀವನದಲ್ಲಿ ಇಲ್ಲಿಯವರೆಗೆ ಯಾವುದೇ ಕಪ್ಪು ಚುಕ್ಕೆ ಬರದಂತೆ ಉತ್ತಮ ಆಡಳಿತ ನೀಡಿದ್ದಾರೆ. ಆದ ಕಾರಣ ಭೂಸನೂರ ಅವರಿಗೆ ಸಚಿವ ಸ್ಥಾನ ನೀಡುವುದರ ಮೂಲಕ ವಿಜಯಪುರ ಜಿಲ್ಲೆಯ ಸಚಿವ ಸ್ಥಾನದಿಂದ ವಂಚಿತವಾಗಿದೆ ಎಂಬ ಹಣೆ ಪಟ್ಟಿಯಿಂದ ತೆಗೆದು ಹಾಕಬೇಕು ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳು ಬಹಳಷ್ಟು ಇರುವದರಿಂದ ಸಚಿವ ಸ್ಥಾನ ನೀಡಿದರೆ ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಿದಂತಾಗುತ್ತದೆ ಎಂದು ಆಗ್ರಹಿಸಿದ್ದಾರೆ.