spot_img
spot_img

ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ

Must Read

spot_img
- Advertisement -

ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಒಂದು ಮಹತ್ತರ ಘಟ್ಟ. ಹೊಸದೊಂದು ಬಾಳಿಗೆ ಕಾಲಿಡುವ ಸುಸಮಯ. ಚೆಂದದ ಬದುಕನ್ನು ಮತ್ತಷ್ಟು ಚೆಂದಗಾಣಿಸುವ ಕನಸು ಮೂಡಿಸುವುದೇ ವಿವಾಹ ಮಹೋತ್ಸವ. ಮಧುರ ಸುಂದರ ಸವಿಸವಿ ರಸಗಳ ಅಮೃತದಂಥ ಅನುಭವಗಳ ನೀಡುವ ವಿವಾಹ, ಬದುಕಿನ ಅದ್ಭುತ ತಿರುವೇ ಸರಿ.ಅದೂ ಹೆಣ್ಣಿನ ಬಾಳಲ್ಲಂತೂ ನಿರ್ಣಾಯಕ ಘಟ್ಟವೇ! ಹಲವೊಮ್ಮೆ ಮದುವೆ ಮಹದಾನಂದ ಸೃಷ್ಟಿಸದೆ, ಮಗ್ಗಲು ಮುಳ್ಳಿನಂತೆ ಚುಚ್ಚುತ್ತದೆ.ಜೀವನದ ಸೌಖ್ಯವನ್ನೇ ಕಳೆದು ಬಿಡುತ್ತದೆ. ನಿಗದಿತ ವಯಸ್ಸಿನಲ್ಲಿ ಆಗುವ ಮದುವೆಗಳೇ ವಿಚ್ಛೇದನಗಳಲ್ಲಿ ಅಂತ್ಯ ಕಾಣುತ್ತಿರುವಾಗ ಬಾಲ್ಯ ವಿವಾಹಗಳ ಗತಿ ಇನ್ನೇನಾದೀತು? ಅದು ನರಕ ಸದೃಶ ಎಂದೆನಿಸದಿರದು.

ರಾಜ್ಯದಲ್ಲಿಯೇ ಅತಿ ಹೆಚ್ಚು ಬಾಲ್ಯ ವಿವಾಹ ನಡೆದಿರುವ ಜಿಲ್ಲೆ ಎನ್ನುವ ಕುಖ್ಯಾತಿಗೆ ಒಳಗಾಗಿದ್ದ ಕೊಪ್ಪಳದಲ್ಲೀಗ ಬಾಲ್ಯ ವಿವಾಹ ತಡೆಗಟ್ಟುವ ಕಾರ್ಯ ಚುರುಕಿನಿಂದ ನಡೆಯುತ್ತಿದೆ.ಬಾಲ್ಯ ವಿವಾಹಕ್ಕೆ ಪ್ರೋತ್ಸಾಹಿಸಿದ ಆರೋಪಕ್ಕೆ ಸಂಬಂಧಿಸಿ ಬಾಲಕ ಹಾಗೂ ಬಾಲಕಿ ಹೆತ್ತವರಿಗೆ ರಾಜ್ಯದಲ್ಲಿಯೇ ಗರಿಷ್ಟ ಪ್ರಮಾಣದ ದಂಡ ಹಾಗು ಶಿಕ್ಷೆ ವಿಧಿಸಲಾಗಿದೆ.   ತೆಲಂಗಾಣದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ವಿವಾಹ ನೋಂದಣಿ ಮಾಡುತ್ತಿರುವುದರಿಂದ ಅಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಾಗಿದೆ.ಯೂನಿಸೆಫ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಳೆದ ನಾಲ್ಕು ವರ್ಷಗಳಲ್ಲಿ ಸಾವಿರಕ್ಕಿಂತಲೂ  ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಯಶಸ್ವಿಯಾಗಿವೆ.  ಆದರೂ ನಾನಾ ಕಾರಣಗಳಿಂದ ಅಲ್ಲಲ್ಲಿ ಬಾಲ್ಯ ವಿವಾಹಗಳನ್ನು ಕದ್ದು ಮುಚ್ಚಿ ನೆರವೇರಿಸಲಾಗುತ್ತಿದೆ. 

ಬಾಲ್ಯ ವಿವಾಹ ಎಂದರೆ…? 

21 ವರ್ಷದೊಳಗಿನ ಹುಡುಗ 18 ವರ್ಷದೊಳಗಿನ ಹುಡುಗಿಯ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿರದಿದ್ದರೂ ಇಂಥ ವಿವಾಹವನ್ನು ಬಾಲ್ಯ ವಿವಾಹ ಎಂದು ಪರಿಗಣಿಸಲಾಗುತ್ತದೆ. 

- Advertisement -

ಕಾರಣಗಳು, ಹೆಣ್ಣು ಮಗುವೇ ಒಂದು ಆರ್ಥಿಕ ಹೊರೆ ಎಂದು ಭಾವಿಸಿರುವುದು. ಹೆಣ್ಣುಮಕ್ಕಳ ಬಗೆಗಿನ ತಿರಸ್ಕಾರ. ಬೇಗ ಮದುವೆ ಮಾಡಬೇಕೆನ್ನುವ ಪಾಲಕರ ಬಯಕೆ. ಸಾಯುವ ಮುನ್ನ ಮದುವೆ ಮಾಡಬೇಕು ಎನ್ನುವ ಹಿರಿಯರ ತವಕ. ಸಾಂಸ್ಕೃತಿಕ ಪದ್ದತಿ ಹಾಗೂ ಸಾಮಾಜಿಕ ಸಂಪ್ರದಾಯಗಳು  ಮದುವೆ ಮಾಡಿ ಬಹು ಬೇಗ ಜವಾಬ್ದಾರಿ ಮುಗಿಸಿದರಾಯಿತು. ನಿರಾಳವಾಗಿ ಉಸಿರಾಡಿಸಬಹುದೆಂಬ ಆಲೋಚನೆ. ಅನಕ್ಷರತೆ, ಬಡತನ,ಮೂಢನಂಬಿಕೆ ಹಾಗೂ ಅರಿವಿನ ಕೊರತೆಯಿಂದಾಗಿ ಇನ್ನೂ ಬಾಲ್ಯ ವಿವಾಹಗಳು ಜರುಗುತ್ತಿವೆ

ಬಾಲ್ಯ ವಿವಾಹಕ್ಕೊಳಗಾದ ಮಕ್ಕಳಿಗೆ ಸಾಮಾಜಿಕ ಮಾನಸಿಕ ದೈಹಿಕ ಸಮಸ್ಯೆಗಳು ಆಗುವುದರಿಂದ ಇವುಗಳನ್ನು ತಡೆಗಟ್ಟುವುದು ಅವಶ್ಯಕವಾಗಿದೆ 

ದೂರನ್ನು ಯಾರಿಗೆ ನೀಡುವುದು?

ಬಾಲ್ಯ ವಿವಾಹ ತಯಾರಿ ನಡೆಸುವುದು ಇಲ್ಲವೇ ಬಾಲ್ಯ ವಿವಾಹ ನಡೆಯುವುದು ಗೊತ್ತಾದ ತಕ್ಷಣ ಯಾರು ಬೇಕಾದವರು ಕೆಳಕಂಡವರಿಗೆ ಲಿಖಿತವಾಗಿ ಅಥವಾ ತಮ್ಮ ಹೆಸರನ್ನು ತಿಳಿಸದೆ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ವಿಷಯವನ್ನು ತಿಳಿಸಬಹುದು. 

- Advertisement -

ಶಾಲಾ ಮುಖ್ಯೋಪಾದ್ಯಾಯರು, ಪಿಡಿಓ, ಗಾಮ ಲೆಕ್ಕಾಧಿಕಾರಿ,ಬಿಇಓ, ತಾಲೂಕಾ ಪಂಚಾಯತ್ ಸಿಇಓ, ತಹಶೀಲ್ದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹತ್ತಿರದ ಪೋಲಿಸ್ ಠಾಣೆ, ಪಿಎಸ್‍ಐ, ಜಿಲ್ಲಾಧಿಕಾರಿಗಳು,ಎಸ್‍ಪಿ, ಡಿಐಜಿಪಿ, ಜಿಲ್ಲಾ ಪಂಚಾಯತ್‍ನ ಸಿಇಓ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರು, ಉಪನಿರ್ದೇಶಕರು, ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ,ನಿರ್ದೇಶಕರು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಇನ್ನೂ ಇತರೆ ಇಲಾಖೆಗಳು ಹಾಗೂ ಸರಕಾರದ ಕಾರ್ಯದರ್ಶಿಗಳಿಗೂ ತಿಳಿಸಬಹುದು. 

ದುಷ್ಪರಿಣಾಮಗಳು

ಮಕ್ಕಳು ಭಯಭೀತರಾಗುತ್ತಾರೆ. ಖಿನ್ನತೆ ಉಂಟಾಗುತ್ತದೆ. ಬಾಲ್ಯದಲ್ಲೇ ಮದುವೆಯಾಗುವುದರಿಂದ ಸಮರ್ಪಕ ಶಿಕ್ಷಣದ ಕೊರತೆ ಉಂಟಾಗಿ ಉತ್ತಮ ಉದ್ಯೋಗ ಸಿಗದೇ ಶಾಶ್ವತ ಬಡತನಕ್ಕೆ ತುತ್ತಾಗುತ್ತಾರೆ. ದೌರ್ಜನ್ಯಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ದೈಹಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ವಯಸ್ಸಿಗೆ ಮೀರಿದ ಜವಾಬ್ದಾರಿ ಹೇರಿದಂತಾಗುತ್ತದೆ.

ಮಾನಸಿಕ ದೌರ್ಬಲ್ಯತೆಗೆ ಒಳಗಾಗುತ್ತಾರೆ. ಮಾನಸಿಕ ಸ್ಥೈರ್ಯವನ್ನೂ ಕಳೆದುಕೊಳ್ಳುತ್ತಾರೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಯಾಗುವುದರಿಂದ ದೈಹಿಕವಾಗಿ ಬಲ ಹೊಂದಿಲ್ಲದೇ ಪ್ರಸವ ಸಮಯದಲ್ಲೇ ಮರಣ ಹೊಂದುವ ಸಂಭವ ಹೆಚ್ಚಿರುತ್ತದೆ.

ಗರ್ಭ ಚೀಲಕ್ಕೆ ಪೆಟ್ಟು, ಗರ್ಭಪಾತಗಳ ನೋವಲ್ಲಿ ಬಳಲುವುದು.  ವಿಕಲಾಂಗ ಮಕ್ಕಳು ಹುಟ್ಟುವ ಸಂಭವ, ರಕ್ತ ಹೀನತೆಯಿಮದ ಕಡಿಮೆ ತೂಕದ ಮಗುವಿನ ಜನನ. ಎಳೆ ವಯಸ್ಸಿನಲ್ಲಿ ಮದುವೆಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡುಗುವುದರಿಂದ ಬಹು ಬೇಗನೆ ಮಕ್ಕಳಾಗಿ ರೋಗಗಳಿಗೆ ತುತ್ತಾಗುವ ಸಂಭವಗಳೂ ಹೆಚ್ಚಿವೆ.

ಸ್ಥಾನಮಾನದ ಅರಿವಿರದ, ಪ್ರೌಢಾವಸ್ಥೆಯನ್ನು ತಲುಪದ ಹೆಣ್ಣುಮಕ್ಕಳು ಬಾಲ್ಯ ವಿವಾಹದಿಂದ ಸಾಮಾಜಿಕ ಪ್ರತ್ಯೇಕತೆಗೆ ಗುರಿಯಾಗುತ್ತಾರೆ. ಚಿಕ್ಕ ವಯಸ್ಸಿನ ತಾಯ್ತನವು ತಾಯಿ ಮತ್ತು ಮಗುವನ್ನು ಅಪಾಯದಂಚಿನಲ್ಲಿ ತಳ್ಳುತ್ತದೆ. ಇದರಿಂದ ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ. 

ಕ್ರಮಗಳು 

ಬಾಲ್ಯವಿವಾಹ ನಿಷೇಧಾಧಿಕಾರಿಗಳು ಪೋಲಿಸ್ ಸಿಬ್ಬಂದಿಯೊಂದಿಗೆ ಬಾಲ್ಯ ವಿವಾಹ ನಡೆಸುತ್ತಿರುವವರ ಮನೆಗೆ ಭೇಟಿ ನೀಡುತ್ತಾರೆ. ಸಂಬಂಧಿಸಿದ ಸಾಕ್ಷಿಗಳನ್ನು ಸಂಗ್ರಹಿಸುತ್ತಾರೆ. ಪೋಷಕರಿಗೆ ಬಾಲ್ಯ ವಿವಾಹ ನಿಷೇಧದ ಕುರಿತು ಅರಿವು ಮೂಡಿಸುತ್ತಾರೆ. 

ತಪ್ಪಿತಸ್ಥರು:

ಅಪ್ರಾಪ್ತ ಹೆಣ್ಣು ಮಗಳನ್ನು ಮದುವೆಯಾಗುವ ವಯಸ್ಕ ವ್ಯಕ್ತಿ, ವಿವಾಹಕ್ಕೆ ಕುಮ್ಮಕ್ಕು ನೀಡುವ ವ್ಯಕ್ತಿ ಇಲ್ಲವೇ ಸಂಸ್ಥೆ,ಹೆತ್ತವರು, ಪೋಷಕರು, ಸಂರಕ್ಷಕರು,ವಿವಾಹವನ್ನು ಏರ್ಪಡಿಸುವವರು, ಭಾಗವಹಿಸುವವರು, ಕಾಯ್ದೆಯಡಿ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು.

ಶಿಕ್ಷೆ – ಎರಡು ವರ್ಷಗಳವರೆಗೆ ಕಠಿಣ ಜೈಲುವಾಸ ಅಥವಾ 1 ಲಕ್ಷ ರೂ ವರೆಗೆ ದಂಡ ಅಥವಾ ಎರಡೂ. ಅಪರಾಧಿ ಮಹಿಳೆಯಾದಲ್ಲಿ ಜೈಲು ಶಿಕ್ಷೆ ವಿಧಿಸುವಂತಿಲ್ಲ. ಹೆತ್ತವರಿಂದ ಮುಚ್ಚಳಿಕೆ ಬರೆಯಿಸಿಕೊಂಡು ಬಾಲಕಿಯನ್ನು ಮನೆಗೆ ಕಳಿಸಿಕೊಡುವುದು ಇದುವರೆಗಿನ ಪರಿಪಾಠವಾಗಿತ್ತು ಆದರೆ ಈಗ ಅನಿಷ್ಟ ಪದ್ಧತಿಗೆ ಕೈ ಜೋಡಿಸುವ ಪಾಲಕರನ್ನು ಜೈಲಿಗೆ ಕಳಿಸಲಾಗುತ್ತಿದೆ. 

ಸಮಿಕ್ಷೆ ವರದಿಗಳು  

2009 ರ ಯೂನಿಸೆಫ್ ‘ಸ್ಟೇಟ್ ಆಫ್ ದಿ ವರ್ಲ್ಡ್ ಚಿಲ್ಡ್ರನ್’ ವರದಿಯ ಪ್ರಕಾರ ವಿಶ್ವದಲ್ಲಿ ನಡೆಯುವ ಬಾಲ್ಯ ವಿವಾಹಗಳಲ್ಲಿ 40% ಭಾರತದಲ್ಲೇ ನಡೆಯುತ್ತವೆ ಎನ್ನುವ ಕಳವಳಕಾರಿ ವರದಿ ಹೊರಬಿದ್ದಿದೆ.  47% ರಷ್ಟು ಭಾರತೀಯ ಮಹಿಳೆಯರು ಕಾನೂನಿನ ವಿರೋಧವಾಗಿ 18 ವಯಸ್ಸಿನೊಳಗೆ ಮದುವೆ ಆಗಿದ್ದಾರೆ. ಶೇ 56ರಷ್ಟು ಮಹಿಳೆಯರು ಗ್ರಾಮೀಣ ಪ್ರದೇಶದವರು ಎಂಬುದು ಗಮನಾರ್ಹ ಮತ್ತು ಗಂಭೀರವಾಗಿ ಪರಿಗಣಿಸಬೇಕಾದ ಸಂಗತಿ.  

2015 ರ ಎನ್ ಎಫ್ ಎಚ್ ಎಸ್ ವರದಿ ಪ್ರಕಾರ ಕರ್ನಾಟಕ ರಾಜ್ಯದ ಬಾಲ್ಯ ವಿವಾಹದ ಅಂಕಿ ಅಂಶಗಳು 20-24 ವರ್ಷದೊಳಗಿನ ಮಹಿಳೆಯರನ್ನು ಸಮೀಕ್ಷೆ ಮಾಡಿ ಅವರಲ್ಲಿ 18 ವರ್ಷದೊಳಗೆ ವಿವಾಹವಾದವರ ಅಂಕಿ ಅಂಶ 23.2%ಹಾಗೂ 25-29ರ ಪುರುಷರನ್ನು ಸಮೀಕ್ಷೆ ಮಾಡಿದಾಗ ಅವರಲ್ಲಿ 21 ವರ್ಷದೊಳಗೆ ವಿವಾಹವಾದವರ ಅಂಕಿ ಅಂಶ 10.9% ಇರುತ್ತದೆ. 

2012-13 ನೇ ಸಾಲಿನಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ.ಎಲ್ಲ ಮಕ್ಕಳು ಆರೈಕೆ ಹಾಗೂ ರಕ್ಷಣೆಯ ಮೂಲಕ ಅಭಿವೃದ್ಧಿ ಹೊಂದಲು ಹಾಗೂ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ಹಕ್ಕನ್ನು ಹೊಂದಿರುತ್ತಾರೆ ಆದರೆ ಈ ಬಾಲ್ಯ ವಿವಾಹವು ಎಲ್ಲ ಹಕ್ಕುಗಳನ್ನು ಉಲ್ಲಂಘಿಸುತ್ತದೆ.  

ಭಾರತ ಸರಕಾರದ ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಪ್ರಕಟಿಸಿರುವಂತೆ  2005 ರ ನ್ಯಾಶನಲ್ ಪ್ಲಾನ್ ಆಫ್ ಆಕ್ಷನ್ ಫಾರ್ ಚಿಲ್ಡ್ರನ್ 2010ರಷ್ಟು ಹೊತ್ತಿಗೆ ಬಾಲ್ಯ ವಿವಾಹ ಏರ್ಪಡಿಸುವುದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಗುರಿಯನ್ನು ಹೊಂದಲಾಗಿತ್ತು. ಭಾರತದ ಭಾರೀ ಜನಸಂಖ್ಯೆಯ ಪರಿಣಾಮವಾಗಿ ಪ್ರತಿ ಮಗುವನ್ನು ಗಮನಿಸುವುದು ಕಷ್ಟವೆನಿಸಿದರೂ ಬಹುತೇಕವಾಗಿ ಯಶಸ್ಸು ಕಂಡಿದೆ. 

ಈ ಅನಿಷ್ಟ ಪದ್ಧತಿಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಹಿಮಾಚಲ ಪ್ರದೇಶ ಆಂಧ್ರ ಪ್ರದೇಶ ಬಿಹಾರ ಗುಜರಾತ ಆಂಧ್ರಪ್ರದೇಶ ರಾಜಸ್ಥಾನಗಳಲ್ಲಿ ಮದುವೆಯಾಗುವ ಗಂಡು ಹೆಣ್ಣಿನ ವಯಸ್ಸುಗಳನ್ನು ದೃಢ ಪಡಿಸಲು ಮತ್ತು ನ್ಯಾಯಬದ್ಧಗೊಳಿಸಲು ವಿವಾಹ ನೋಂದಣಿ ಮಾಡಿಸುವ ಕ್ರಮವನ್ನು ಕಡ್ಡಾಯಗೊಳಿಸಲಾಗಿದೆ. ಹೀಗಿದ್ದಾಗ್ಯೂ ಸಾಮೂಹಿಕ ವಿವಾಹಗಳಲ್ಲಿ ಬಾಲ್ಯವಿವಾಹ ನುಸುಳಿದ್ದರೆ ಅದು ಅಧಿಕಾರಿಗಳಿಂದ ಸಾರ್ವಜನಿಕರಿಂದ ನಿರ್ಲಕ್ಷಿಸಲ್ಪಡುತ್ತದೆ. 

ಸರ್ವೋಚ್ಛ ನ್ಯಾಯಾಲಯದ ತೀರ್ಪು  

ಭಾರತೀಯ ದಂಡ ಸಂಹಿತೆಯ ಪರಿಚ್ಛೇದ 325 ಸೆಕ್ಷನ್ 2 ಪ್ರಕಾರ ಇದುವರೆಗೆ ಪತಿಯು 15 ವರ್ಷದೊಳಗಿನ ಪತ್ನಿಯ ಜೊತೆಗೆ ಹೊಂದಿರುವ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗಿತ್ತು. 

11-10-2017 ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಪ್ರಕಾರ ಈ ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಹೆಚ್ಚಿಸಲಾಗಿದೆ ಮತ್ತು ಇದಕ್ಕಾಗಿ ಪತಿಗೆ ಜೈಲು ಮತ್ತು ದಂಡ ಶಿಕ್ಷೆ ಇರುತ್ತದೆ. 

ಈ ತೀರ್ಪನ್ನು ಹಾಗೂ ಪೋಕ್ಸೋ ಕಾಯ್ದೆಯ ಸಂಬಂಧಿಸಿದ ಪರಿಚ್ಛೇದಗಳನ್ನೂ ಕೂಡ ಬಾಲ್ಯ ವಿವಾಹದ ಕುರಿತು ಪೋಲಿಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಮಾಡುವಾಗ ಉಪಯೋಗಿಸಬಹುದಾಗಿದೆ.  

ಮಗುವಿನ ಪುರ್ನವಸತಿಗಾಗಿ ಕ್ರಮ ಹಾಗೂ ಬಾಲ್ಯ ವಿವಾಹ ತಡೆಯಲು ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಾರೆ.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲು ಶ್ರಮವಹಿಸುವುದು. ಬಾಲ್ಯ ವಿವಾಹದ ನಿರ್ದಿಷ್ಟ ಬೋಧನೆಗೆ ಧಾರ್ಮಿಕ ನಾಯಕರ ಸಹಕಾರ ಮತ್ತು ಬೆಂಬಲ ಪ್ರಮುಖವಾದ ಪಾತ್ರವಹಿಸುತ್ತದೆ. 

1955 ರ ಹಿಂದೂ ವಿವಾಹ ಕಾಯ್ದೆ ಪ್ರಕಾರ ಮದುವೆ ಹಣ್ಣಿಗೆ 18 ವರ್ಷ ಗಂಡಿಗೆ 21 ವರ್ಷ ವಯಸ್ಸಾಗಿರಬೇಕು. ಈ ಕಾನೂನಿನ ಉಲ್ಲಂಘನೆ ಮಾಡಿದವರ ವಿರುದ್ಧ ಸೆಕ್ಷನ್ 11 ಮತ್ತು 12ರ ಅಡಿ ಕೇಸ್ ದಾಖಲಿಸಬಹುದು. ಅಷ್ಟೇ ಅಲ್ಲ ಸೆಕ್ಷನ್ 13ರ ಅಡಿ ವಿಚ್ಛೇದನ ಪಡೆಯಲು ಅವಕಾಶವಿದೆ. 

ಕೊನೆ ಹನಿ 

ಸಾಮಾಜಿಕ ಪಿಡುಗು ಬಾಲ್ಯ ವಿವಾಹವನ್ನು ತಡೆಗಟ್ಟಲು ಸರಕಾರ, ಸಾವಿರಾರು ಸಂಘ ಸಂಸ್ಥೆಗಳು ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿವೆ. ಇವುಗಳಿಗೆ ಪುಷ್ಟಿ ನೀಡುವಂತೆ ಕಾನೂನು ಇದ್ದೇ ಇದೆ.ಮಾಹಿತಿ ನೀಡುವ ತಿಳುವಳಿಕೆ ನೀಡುವ ಕಾರ್ಯಕ್ರಮಗಳು ಬರೀ ಪುಸ್ತಕದ ವರದಿಗಳಿಗೆ ಸೀಮಿತವಾಗುತ್ತಿವೆ. ಅಲ್ಲದೇ ಯೋಜನೆ ವ್ಯವಸ್ಥೆಯನ್ನು ಕಲ್ಪಿಸಿದರೆ ಸಾಲದು. ಅದರ ನಿಷೇಧ ನಮ್ಮ ಮನಸ್ಸಿನಿಂದಲೇ ಆಗಬೇಕಿದೆ. ನಮ್ಮ ಬದ್ಧತೆಯೂ ಮುಖ್ಯವಾಗಿ ಬೇಕಿದೆ.

ಗ್ರಾಮೀಣ, ಕೂಲಿಕಾರರ, ಕಾರ್ಮಿಕರ  ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ಹೆಣ್ಣುಮಕ್ಕಳ ಜೀವನಕ್ಕೆ ಕುತ್ತು ತರುವ ಸಾಂಸ್ಕೃತಿಕ ಪದ್ಧತಿಗಳನ್ನು ಬದಲಾಯಿಸುವ ಅಗತ್ಯ ಇದೆ. ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮಗಳಿಗೆ ಬೆಂಬಲಿಸುವುದು. ನಿಷೇಧದ ಕುರಿತು ಹಮ್ಮಿಕೊಂಡ ಕಾರ್ಯಕ್ರಮಗಳ ಮೌಲ್ಯಮಾಪನ ಮಾಡಿ ಅವುಗಳ ಸಫಲತೆಯನ್ನು ಸ್ಪಷ್ಟಪಡಿಸಿಕೊಳ್ಳುವುದು.

ಬಾಲ್ಯ ವಿವಾಹ ತಡೆ ಮಕ್ಕಳಿಗೆ ಪ್ರತಿಜ್ಞಾ ಬೋಧನಾ ವಿಧಿ ನಡೆ. ಬಾಲ್ಯ ವಿವಾಹ ತಡೆ ಪ್ರತಿಯೊಬ್ಬರ ಜವಾಬ್ದಾರಿ. ಶಿಕ್ಷಣದಿಂದ ಬಾಲ್ಯವಿವಾಹ ನಿರ್ಮೂಲನೆಯಂಥ ಕಾರ್ಯಕ್ರಮಗಳನ್ನು ಆಯೋಜಿಸುವುದು. ಹೆಣ್ಣುಮಕ್ಕಳ ಹಕ್ಕುಗಳ ರಕ್ಷಣೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಆಗ ಮಾತ್ರ ಬಾಲ್ಯ ವಿವಾಹಗಳ ನಿಷೇಧ ಸಾಧ್ಯ. ಗಿಡದಲ್ಲಿರುವ ಮೊಗ್ಗನ್ನು ಬಲವಂತವಾಗಿ ಹೂವಾಗಿಸಲು ಪ್ರಯತ್ನಿಸಿದಂತೆ ಬಾಲ್ಯ ವಿವಾಹ. ಮದುವೆಯೆಂಬ ಮಲ್ಲಿಗೆಯ ಮೊಗ್ಗು ಹಿಗ್ಗಲಿ ತಾನಾಗಿ.ಆಗ ಹೆಚ್ಚುವುದು ಅದರ ಅಂದ ಚೆಂದ ಪರಿಮಳ. ಜೀವನ ಮಲ್ಲಿಗೆ ಅರಳಲಿ ಮೆಲ್ಲಗೆ ಬದುಕಿನ ಕಂಪು ಸೂಸಲಿ ಮೂಲೆ ಮೂಲೆಗೆ. 


ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ                                9449234142

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group