spot_img
spot_img

ಮಲೆನಾಡ ಸಂಭ್ರಮ; ಸ್ವಾಣೆ ಹಬ್ಬ ಅಥವಾ ಅಜ್ಜ ಅಜ್ಜಿ ಹಬ್ಬ

Must Read

spot_img
- Advertisement -

ಮಲೆನಾಡು ವಿಶಿಷ್ಟ ವಿಸ್ಮಯ. ಅದೊಂದು ಹಲವು ಭಿನ್ನ ಸಂಸ್ಕ್ರತಿಗಳ ಆಗರ.ಇಲ್ಲಿನ ಆಚರಣೆಗಳು ತುಂಬ ವಿಭಿನ್ನ ಮತ್ತು ವಿಶೇಷ.ಇಲ್ಲಿನ ಹಬ್ಬ ಹರಿದಿನಗಳು ಕೂಡ ವಿಶಿಷ್ಟ. ಅವುಗಳಿಗೆ ಬೇರೆ ಬೇರೆ ರೀತಿಯ ಆಯಾಮ ಕೊಡುತ್ತ ಬಂದಿದ್ದಾರೆ.

ಇಲ್ಲಿ ವಾಸಿಸುವ ಜನರು ಪ್ರಕೃತಿ ಆರಾಧಕರು.ಮಳೆಗಾಲದ ದಿನದಲ್ಲಿ ಬರುವ ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಆಚರಿಸುವ ಒಂದು ಹಬ್ಬ. ಇದನ್ನು ಮುಖ್ಯವಾಗಿ ಮಲೆನಾಡಿನ ದೀವರು ಎಂದು ಕರೆದುಕೊಳ್ಳುವ ಈಡಿಗ ಜನಾಂಗದ ಸಮುದಾಯ ಆಚರಿಸುತ್ತದೆ. ಆ ದಿನ ತಮ್ಮ ಗದ್ದೆಗಳಲ್ಲಿ ಭತ್ತವನ್ನು ನಾಟಿ ಮಾಡಿ ಮುಗಿದ ಮೇಲೆ ಈ ಹಬ್ಬಕ್ಕೆ ಕಾಲಿಡುತ್ತಾರೆ.ಇದನ್ನು ಚಿಕ್ಕ ಮಕ್ಕಳು ಅಜ್ಜ ಅಜ್ಜಿ ಹಬ್ಬ ಎಂದು ಕರೆಯುತ್ತವೆ.ದೊಡ್ಡವರು ಸ್ವಾಣೆ ಹಬ್ಬ ಎನ್ನುತ್ತಾರೆ.

ಇದರ ನಿಜವಾದ ಹೆಸರು ಶ್ರಾವಣ ಅಜ್ಜಿ ಹಬ್ಬ ಎಂದು. ಆದರೆ ಕಾಲಕ್ರಮೇಣ ಆಡು ಭಾಷೆಯಲ್ಲಿ ಸ್ವಾಣೆ ಯಾಗಿ ಪರಿವರ್ತನೆಯಾಗಿದೆ ಎನ್ನುತ್ತಾರೆ.ಗದ್ದೆ ನಾಟಿ ಮುಗಿದ ಮೇಲೆ ಒಂದು ದಿನ ಇದನ್ನು ಆಚರಿಸುತ್ತಾರೆ. ಇದು ತಮ್ಮ ಪೂರ್ವಜರನ್ನು ನೆನಪಿಸುವ ಹಬ್ಬ. ಒಂದು ಅರ್ಥದಲ್ಲಿ ಹೇಳುವುದಾದರೆ ಇದು ಪಿತೃ ಪಕ್ಷ ,ಹಿರಿಯರ ಹಬ್ಬ, ಎಂದು ಹೇಳಬಹುದು.ಈ ದಿನ ವಿಶೇಷವಾಗಿ ಮದರಂಗಿ ಗಿಡವನ್ನು ಬೇರು ಸಹಿತ ಕಿತ್ತು ತಂದು ಅದರ ಬುಡಕ್ಕೆ ಬೆಳಿಗ್ಗೆ ಕೆಸುವಿನ ಸೊಪ್ಪಿನ ಎಲೆಯನ್ನು ತಂದು ಮದರಂಗಿ ಗಿಡಕ್ಕೆ ಕಟ್ಟುತ್ತಾರೆ.

- Advertisement -

ಇದು ಅಜ್ಜಿಯ ಸಂಕೇತ. ಈ ಪೂಜೆಯಲ್ಲಿ ಸಾಂಪ್ರದಾಯಿಕವಾಗಿ ಇದನ್ನು ಅಜ್ಜಿ ಎಂದು ಕರೆಯುತ್ತಾರೆ.ಪಕ್ಕದಲ್ಲಿ ಒಂದು ಉದ್ದವಾದ ಕೋಲಿಗೆ ಅಡಕೆ ಮರದ ಹಾಳೆಯಿಂದ ಮಾಡಿದ ಟೊಪ್ಪಿಗೆಯನ್ನು ಹಾಕಿರುತ್ತಾರೆ ಇದು ಅಜ್ಜ ಎಂದು ಕರೆಯುತ್ತಾರೆ. ನಾವು ವೃಕ್ಷವನ್ನು ಹೆಣ್ಣಿಗೆ ಹೋಲಿಸಿದ್ದೇವೆ.ಅದನ್ನೇ ಇಲ್ಲಿ ಸಾಂಪ್ರದಾಯಿಕವಾಗಿ ಹೇಳಿದ್ದಾರೆ.ಇನ್ನೂ ಗಂಡು ಮಗು ಯಾವಾಗಲೂ ರಕ್ಷಕ ಅಲ್ಲವೇ ಹಾಗಾಗಿ ಅವನಿಗೆ ಸಾಂಕೇತಿಕವಾಗಿ ಕೋಲನ್ನು ತೋರಿಸಲಾಗಿದೆ.

ಮಲೆನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ಅಡಕೆ ಮರದ ಹಾಳೆಯಿಂದ ಮಾಡಿದ ಟೋಪಿ ಧರಿಸುತ್ತಾರೆ. ಇದು ಎಲ್ಲ ಕಾಲದಲ್ಲಿ ತಲೆಯನ್ನು ರಕ್ಷಣೆ ಮಾಡುತ್ತದೆ. ಹಾಗೆ ಹೆಣ್ಣಾದ ನನ್ನನ್ನು ನೀನು ಯಾವತ್ತು ರಕ್ಷಣೆ ಮಾಡು ಎನ್ನುವ ಸಾಂಕೇತಿಕ ಅರ್ಥವನ್ನು ಕೊಡುತ್ತದೆ.

ರಾತ್ರಿ ಮನೆಯವರು ಎಲ್ಲರೂ ಸೇರಿ ಅಕ್ಕಿ ಹಿಟ್ಟಿನ ತಂಬಿಟ್ಟು ಮಾಡುತ್ತಾರೆ. ಹಲಸಿನ ಹಣ್ಣಿನ ಬೀಜವನ್ನು ಎರಡು ಭಾಗಗಳಾಗಿ ಮಾಡಿ ಬೇಳೆಯಂತೆ ಮಾಡಿ ಸುಡುತ್ತಾರೆ. ಭತ್ತದ ಹದ್ದಲು ( ಒಂದು ಬಗೆಯ ಖಾದ್ಯ) ಮಾಡಿ ಕಾಡಿನಲ್ಲಿ ಸಿಗುವ ವಿವಿಧ ರೀತಿಯ ಎಲೆಗಳ ಕುಡಿಗಳನ್ನು ತಂದು ಒಂದು ವಿಧದ ಸಾಗು ಮಾಡುತ್ತಾರೆ. ಜೊತೆಗೆ ಅದೇ ರೀತಿ ಸೊಪ್ಪಿನ ಪಲ್ಯ ಬಡವರ ಪಾಲಕ್ ಎಂದೇ ಹೆಸರಾದ ಕೆಸವಿನ ಸೊಪ್ಪಿನ ಪಲ್ಯ ಮಾಡುತ್ತಾರೆ.

- Advertisement -

ಹಲಸಿನ ಬೇಳೆ,ಭತ್ತದ ಹದ್ಲು, ಸಾಗು, ಸೊಪ್ಪಿನ ಪಲ್ಯ ಎಲ್ಲವನ್ನೂ ನೈವೇದ್ಯ ಮಾಡಿ ಪೂಜೆ ಸಲ್ಲಿಸುತ್ತಾರೆ. ನಂತರ ಮನೆಯ ಯಜಮಾನ ಮತ್ತು ಯಜಮಾನಿ ಎಂದರೆ ಹಿರಿಯರು ಇಬ್ಬರೂ ಸೇರಿ ಮನೆಯಲ್ಲಿನ ಕಳಸಕ್ಕೆ ಪೂಜೆ ಸಲ್ಲಿಸುತ್ತಾರೆ.

ನಂತರ ಮನೆಯಲ್ಲಿನ ಮಕ್ಕಳು ಅಜ್ಜಿಯನ್ನು ಎಂದರೆ ಬೆಳಿಗ್ಗೆ ಕಟ್ಟಿದ ಮದರಂಗಿ ಗಿಡವನ್ನೂ,ಕೋಲಿಗೆ ಅಡಕೆ ಮರದ ಟೋಪಿ ಹಾಕಿ ನಿಲ್ಲಿಸಿದ ಅಜ್ಜನನ್ನು ಎತ್ತಿಕೊಂಡು ಗಂಟೆ,ಜಾಗಟೆಗಳ ಮೂಲಕ ಮನೆಯವರೆಲ್ಲರೂ ಸೇರಿ ಅಜ್ಜ ಅಜ್ಜಿಯರನ್ನು ಮನೆಗೆ ತರುತ್ತಾರೆ. ಇದರ ಅರ್ಥ ನಮ್ಮ ಮನೆಗೆ ನಮ್ಮ ಪೂರ್ವಜರು ಬರಲಿದ್ದಾರೆ ಎಂಬುದನ್ನು ಸೂಚಿಸುತ್ತದೆ.

ಮನೆಯೊಳಗೆ ತುಂಬಿಕೊಳ್ಳುತ್ತಾರೆ.ಮನೆಯ ಮುಂಬಾಗಿಲನ್ನು ತಳಿರು ತೋರಣಗಳಿಂದ ಅಲಂಕೃತಗೊಳಿಸಿ ಪೂರ್ವಜರನ್ನು ಸಾಂಪ್ರದಾಯಿಕವಾಗಿ ಆರತಿ ಮಾಡಿ ಒಳಕ್ಕೆ ಭಕ್ತಿಯಿಂದ ಬರಮಾಡಿಕೊಳ್ಳುತ್ತಾರೆ. ನಂತರ ಪೂಜೆ ನೆರವೇರಿಸಿ ಊಟ ಮಾಡುತ್ತಾರೆ.


ಶ್ರೀಮತಿ ಗಂಗಾ ಕೆ ಎಮ್ ಸುಳ್ಳಳ್ಳಿ
ಸಾಹಿತಿಗಳು ಸುಳ್ಳಳ್ಳಿ
ಸಾಗರ ತಾ.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group