ನಮ್ಮ ಭಾರತ ವೈವಿಧ್ಯತೆಯ ದೇಶ. ನಮ್ಮಲ್ಲಿರುವ ಸಂಪ್ರದಾಯ, ಹಬ್ಬ, ಆಚರಣೆಗಳಿಗೆ ಬಹಳ ಮಹತ್ವವಿದೆ. ಅದೇ ರೀತಿ ರೈತ ವರ್ಗಕ್ಕೇ ಹಲವಾರು ಹಬ್ಬಗಳಿವೆ. ರೈತರ ಉಸಿರೇ ಮಣ್ಣು ಮತ್ತು ಜಾನುವಾರುಗಳು.
ಮಣ್ಣೆತ್ತಿನ ಅಮಾವಾಸ್ಯೆ ಸಾಮಾನ್ಯ ಜನರಿಗೆ ವಿಶೇಷ ಇಲ್ಲದಿದ್ದರೂ ರೈತನಿಗೆ ಅತ್ಯಂತ ಮೆಚ್ಚಿನ ಹಬ್ಬ. ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸುವ ಹಬ್ಬವೇ ಈ ಮಣ್ಣೆತ್ತಿನ ಅಮಾವಾಸ್ಯೆ. ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ರೈತನ ಬೆನ್ನೆಲುಬು ಆಗಿ ಜಮೀನು ಹದಗೊಳಿಸುವಲ್ಲಿ ದುಡಿಯುವ ಎತ್ತುಗಳಿಗೆ ಗೌರವ ಸಲ್ಲಿಸುವ ಹಬ್ಬ ಸಹ ಇದಾಗಿದೆ. ಮಣ್ಣು ಹಾಗೂ ಎತ್ತು- ಇವೆರಡೂ ಅನ್ನದಾತನ ಬದುಕಿಗೆ ಮಹತ್ವವಾದುದು. ಭೂತಾಯಿ ರೂಪವಾದ ಮಣ್ಣು ಹಾಗೂ ಬೇಸಾಯಕ್ಕೆ ಹೆಗಲು ಕೊಡುವ ಮಿತ್ರ ಎತ್ತು ಇವೆರಡರ ಸಂಗಮವಾದ ಮಣ್ಣೆತ್ತನ್ನು ಪೂಜಿಸುವ ಸಂಪ್ರದಾಯ ಬೆಳೆದುಬಂದಿದೆ. ಮಣ್ಣೆತ್ತಿನ ಪೂಜೆ ಮಾಡಿದರೆ ರೈತರ ಬದುಕು ಹಸನಾಗುತ್ತದೆ. ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಗ್ರಾಮೀಣ ಭಾಗದಲ್ಲಿದೆ. ಯಾಕೆ ಗೊತ್ತಾ ಈಗ ಇದರ ಬಗ್ಗೆ ಮಾತಾನಾಡುತ್ತಿದ್ದೀನಿ ಅಂದುಕೊಂಡ್ರಾ ಹೇಳುತ್ತೀನಿ ಕೇಳಿ ನನ್ನ ಬಾಲ್ಯದ ದಿನದ ಮಣ್ಣಿತ್ತಿನ ಅಮವಾಸ್ಯೆ ಬಗ್ಗೆ.
ಮಣ್ಣೆತ್ತಿನ ಅಮವಾಸ್ಯೆ ಅಂದ ತಕ್ಷಣ ನನಗೆ ಬಾಲ್ಯದ ನೆನಪು ಮರುಕಳಿಸುತ್ತದೆ. ಬಾಲ್ಯದಲ್ಲಿ ಮಣ್ಣೆತ್ತಿನ ಅಮವಾಸ್ಯೆ ಬಂದರೆ ಎಲ್ಲಿಲ್ಲದ ಸಡಗರ, ಸಂತೋಷ, ಸಂಭ್ರಮ. ಅದರ ಹಿಂದಿನ ದಿನ ನಮಗೆ ಸೂರ್ಯೋದಯ ಯಾವಗ ಆಗುತ್ತೋ ಎಂಬ ಕುತೂಹಲ. ಆ ದಿನ ಉತ್ತಿನ ಮಣ್ಣು ಎಲ್ಲಿ ತರಬೇಕು ಅಂತ ನಮ್ಮ ಸ್ನೇಹಿತರ ಜೊತೆ ಯೋಜನೆ ಹಾಕಿಕೊಳ್ಳುತ್ತಿದ್ದೇವು. ಮರುದಿನ ಸ್ನೇಹಿತರ ಜೊತೆ ಒಂದು ಕುರ್ಚಗಿ, ಪುಟ್ಟಿ ತೆಗೆದುಕೊಂಡು ಉತ್ತಿನ ಮಣ್ಣು ತರಲು ಹೊಲಗಳ ಮೇರಿಯ ಜಾಡನ್ನು ಹಿಡಿದು ಪ್ರಯಾಣ ಬೆಳೆಸುತ್ತಿದ್ದೇವು. ಕಾರಣ ಬಸವಣ್ಣನನ್ನು ತಯಾರಿಸಲು ಉತ್ತಿನ ಮಣ್ಣು ಶ್ರೇಷ್ಠವಾದುದು ಹಾಗೂ ಮಣ್ಣಿನ ಕಲಾಕೃತಿಗಳನ್ನು ಮಾಡಲು ಮೃದುವಾದುದು. ಉತ್ತಿನ ಮಣ್ಣು ಕಂಡ ಕ್ಷಣ ಸಂತೋಷಕ್ಕೆ ಪಾರವೇ ಇರಲ್ಲೊ. ಮಣ್ಣಿಗೆ ನಮಸ್ಕರಿಸಿ ಮಣ್ಣನ್ನು ಅಗೆಯಲು ಪ್ರಾರಂಭಿಸುವಾಗ ಹಾವುಗಳ ಭಯವೋ ಭಯ. ಹೇಗೋ ಭಯದಲ್ಲೇ ಮಣ್ಣುನ್ನು ಅಗೆದು ಪುಟ್ಟಿಯಲ್ಲಿ ತುಂಬಿಕೊಂಡು ಮನೆಯ ಕಡೆಗೆ ತೆರುಳುತಿದ್ದೇವು. ಮನೆಗೆ ಬಂದ ತಕ್ಷಣ ನಮ್ಮ ಅಜ್ಜಿಯವರು ಮಣ್ಣನ್ನು ತೆಗೆದುಕೊಂಡು ಹತ್ತಿ ಹಾಗೂ ನೀರನ್ನು ಹಾಕಿ ಮಣ್ಣನ್ನು ಹದ ಮಾಡುತ್ತಿದ್ದರು. ಎತ್ತನ್ನು ತಯಾರಿಸಲು ಪಕ್ಕದ ಮನೆಯವರು ಬಂದು ಅಜ್ಜಿ ನಮಗೂ ಸ್ವಲ್ಪ ಮಣ್ಣು ಕೊಡಿ ಎಂದು ಒಬ್ಬಬ್ಬರೇ ಮಣ್ಣು ಆಗುವವರೆಗೂ ತೆಗೆದುಕೊಂಡು ಹೋಗುತ್ತಿದ್ದರು. ನಮ್ಮಜ್ಜಿ ಪ್ರೀತಿಯಿಂದ ಕೊಡುತ್ತಿದ್ದರು. ಮಣ್ಣು ಹದವಾದ ನಂತರ ಕಟ್ಟೆಯ ಮೇಲೆ ಕುಳಿತುಕೊಂಡು ಒಂದು ಬಟ್ಟಲಲ್ಲಿ ನೀರನ್ನು ಇಟ್ಟುಕೊಂಡು ಎತ್ತನ್ನು ತಯಾರಿಸಲು ಆರಂಭಿಸುತ್ತಿದ್ದರು. ಆಗ ನಮಗೆ ಸಂತೋಷವೋ ಸಂತೋಷ.
ನಾವು ಅಜ್ಜಿಗೆ ಬೇಕಾದ ಎಲ್ಲಾ ಸಹಾಯ ಮಾಡುತ್ತಿದ್ದೇವು. ಎತ್ತುಗಳು ತಯಾರಾದ ಮೇಲೆ ನಮ್ಮದು ಒಂದು ಕೈ ಇರಲಿ ಅಂತ, ಅದಕ್ಕೆ ನೀರನ್ನು ಲೇಪಿಸಿ ನಾವು ಮಾಡಿದ್ದು ಅಂತ ನಮ್ಮ ಸ್ನೇಹಿತರ ಜೊತೆ ಹೇಳಿಕೊಳ್ಳುವುದರಲ್ಲಿಯೂ ಆನಂದವಿದೆ. ಅಜ್ಜಿಯು ಸುಂದರವಾದ, ಕಲೆಗಾರನನ್ನೂ ಮೀರಿಸುವ ಜೋಡಿ ಎತ್ತುಗಳನ್ನು ಹಾಗೂ ಮಣ್ಣೆತ್ತಿನ ಜೋಡಿಗೆ ಗ್ವಾಂದಲಿಗಳನ್ನು ನಿರ್ಮಿಸಿದಾಗ ಸಡಗರವೋ ಸಡಗರ. ಪಕ್ಕದ ಮನೆಯವರು ಬಂದು ನಮಗೂ ಒಂದು ಜೋಡಿ ಬಸವಣ್ಣ ತಯಾರಿಸಿ ಅಜ್ಜಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಅವರಿಗೂ ಸಹ ಪ್ರೀತಿಯಿಂದ ತಯಾರಿಸಿಕೊಡುತ್ತಿದ್ದರು. ನಂತರ ಮಣ್ಣಿನ ಬಸವಣ್ಣಗಳನ್ನು ದೇವರ ಜಗಲಿ ಮೇಲೆ ಇಟ್ಟು, ಪೂಜೆ ಸಲ್ಲಿಸಿ,ಮನೆಯಲ್ಲಿ ತರಹೇವಾರಿ ಭಕ್ಷ್ಯಗಳನ್ನು ಅಂದರೆ ಹೋಳಿಗೆ, ಹುಗ್ಗಿ, ಬೆಲ್ಲದ ಬೇಳೆ, ಕರಿಗಡಬು, ಸಂಡಿಗೆ, ಹಪ್ಪಳ, ಭಜಿ ಇತ್ಯಾದಿಗಳನ್ನು ಮಾಡಿ ಮಣ್ಣೆತ್ತಿಗೆ ನೈವೇದ್ಯ ಮಾಡುವ ಮೂಲಕ ನಮ್ಮ ಕುಟುಂಬವು ಎತ್ತುಗಳಿಗೆ ದೈವಿ ಸ್ವರೂಪ ನೀಡಿದೆ. ಮನೆಯಲ್ಲಿನ ಎಲ್ಲ ದನ ಕರುಗಳ ಮೈ ತೊಳೆದು, ಹೂಗಳಿಂದ ಸಿಂಗರಿಸಿ, ಪೂಜೆ ಮಾಡಲಾಗುತ್ತದೆ. ಹೊಲದಲ್ಲಿ ಸದಾಕಾಲ ದುಡಿದು ಬಸವಳಿದ ಎತ್ತುಗಳಿಗೆ ಈ ದಿನ ವಿಶ್ರಾಂತಿ ಕೊಡಲಾಗುತ್ತದೆ. ಕೃಷಿಯಲ್ಲಿ ಎತ್ತುಗಳ ಮಹತ್ವ ಮತ್ತು ಅವುಗಳ ಪಾತ್ರ ಸಾರುವ ಮಣ್ಣಿತ್ತಿನ ಅಮಾವಾಸ್ಯೆ ಆಚರಣೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಮರೆಯುತ್ತಿರುವುದು ಶೋಚನೀಯ ಸ್ಥಿತಿಯಾಗಿದೆ. ಈಗಿನ ಪೀಳಿಗೆಗೆ ಹಬ್ಬಗಳ ಮಹತ್ವವನ್ನು ತಿಳಿಯಪಡಿಸಬೇಕಿದೆ.
ಡಿ. ವೀರೇಶ, ಸಂಶೋಧನಾರ್ಥಿ,
ಶಾಸನಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ