ಮಾತಿನಲಿ ಮೃದುವಿರಲಿ ಹಿತವಿರಲಿ ಮಿತವಿರಲಿ
ಘಾಸಿ ಮಾಡದೆಯಿರಲಿ ಯಾರ ಮನಸು
ನಯವಿನಯ ತುಂಬಿರಲಿ ದುರ್ವಾಕ್ಯ ದೂರಿರಲಿ
ಇದುವೆ ವಾಙ್ಮಯತಪವು – ಎಮ್ಮೆತಮ್ಮ
ಶಬ್ಧಾರ್ಥ
ಘಾಸಿ = ತೊಂದರೆ . ದುರ್ವಾಕ್ಯ = ಕೆಟ್ಟ ನುಡಿ
ವಾಙ್ಮಯತಪ = ಮಾತಿನಿಂದ ಕೂಡಿದ ತಪ, ವಾಚಿಕ ತಪ
ತಾತ್ಪರ್ಯ
ಮಾತು ಮಾನವನಿಗೆ ದೇವರು ಕೊಟ್ಟ ವರ.ಅದು ಮುತ್ತು
ಆಗಬಲ್ಲದು ಮತ್ತೆ ಮೃತ್ಯುವಾಗಬಲ್ಲದು.ಮಾತಿನಲ್ಲಿ ಬಂಧು, ಬಳಗ, ಸಂಪತ್ತು ಮತ್ತು ಮೃತ್ಯು ಇದೆ. ಆದಕಾರಣ
ಮಾತು ಮೃದುಮಧುರ ಹಿತಮಿತವಾಗಿರಬೇಕು. ಯಾರ
ಮನಸ್ಸನ್ನು ನೋವು ಮಾಡುವ ರೀತಿಯಲ್ಲಿ ಮಾತಾಡಬಾರದು. ಮಾತಿನಿಂದ ನಮಗೆ ಪಾಪ ಕರ್ಮ
ಸುತ್ತಿಕೊಳ್ಳುತ್ತದೆ. ಬಾಯಿಯಿಂದ ಆಡಿ ಬೆನ್ನಿಗೆ ಮೂಲ
ಎಂಬ ಗಾದೆ ಇದೆ. ಅಹಂಕಾರದಿಂದ ಮಾತನಾಡದೆ
ನಯ ವಿನಯ ವಿನಮ್ರತೆಯಿಂದ ಮಾತಾಡಬೇಕು.ಅದಕ್ಕೆ
ಬಸವಣ್ಣನವರು ಮೃದುವಚನವೆ ಸಕಲ ಜಪಂಗಳಯ್ಯ
ಮೃದುವಚನವೆ ಸಕಲ ತಪಂಗಳಯ್ಯ ಮೃದುವಚನವೆ
ಸದಾಶಿವನೊಲುಮೆಯಯ್ಯ ಎಂದಿದ್ದಾರೆ. ಯಾರಿಗೆ ಕೆಟ್ಟ
ಶಬ್ಧಗಳನ್ನು ಬಳಸಬಾರದು. ನಾಲಿಗೆ ನಿನ್ನೊಳಗಿನ
ಅಂತರಂಗ ಹೇಗಿದೆಯೆಂದು ತೋರಿಸುತ್ತದೆ.ಇಂಗ್ಲೀಷನಲ್ಲಿ
Talk to me I say what you are( ನನ್ನೊಡನೆ ಮಾತಾಡು
ನೀನಾರೆಂಬುದನ್ನು ಹೇಳುವೆ) ಎಂಬ ನಾಣ್ಣುಡಿ ಇದೆ.
ಮಾತು ಕೂಡ ತಪಸ್ಸಿನ ಸಾಧನ. ನುಡಿದರೆ ಲಿಂಗ ಮೆಚ್ಚಿ ಅಹುದಹುದೆನ್ನಬೇಕು. ಒಳ್ಳೆಯದನ್ನು ಮಾತಾಡಿದರೆ
ಒಳ್ಳೆಫಲ , ಕೆಟ್ಟದ್ದನ್ನು ಮಾತಾಡಿದರೆ ಕೆಟ್ಟಫಲ ದೊರಕುತ್ತದೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ