ಅಡವಿಯಲಿ ಮನೆಕಟ್ಟಿ ವಾಸಮಾಡಿದ ಬಳಿಕ
ಅಲ್ಲಿರುವ ಮೃಗಗಳಿಗೆ ಹೆದರಲೇಕೆ?
ಹುಟ್ಟಿದ್ದ ಬಳಿಕಿಲ್ಲಿ ಸ್ತುತಿನಿಂದೆ ಬಂದಲ್ಲಿ
ಸಮಚಿತ್ತವನು ತಾಳು – ಎಮ್ಮೆತಮ್ಮ
ಶಬ್ಧಾರ್ಥ
ಅಡವಿ = ಅರಣ್ಯ.ಮೃಗ =ಕಾಡಿನಲ್ಲಿಯ ದುಷ್ಟ ಪ್ರಾಣಿ
ತಾತ್ಪರ್ಯ
ಹುಲಿ, ಚಿರತೆ, ಸಿಂಹ, ಕಾಡಾನೆ, ಕಾಡುಕೋಣ,ತೋಳ, ಕರಡಿ ಮುಂತಾದ ಕಾಡುಪ್ರಾಣಿಗಳಿಂದ ಕೂಡಿದ ದಟ್ಟವಾದ ಕಾಡಿನಲ್ಲಿ ಮನೆಕಟ್ಟಿಕೊಂಡು ವಾಸಮಾಡಿದ ಬಳಿಕ
ಅವುಗಳಿಗೆ ಅಂಜುವುದು ತರವಲ್ಲ. ಅವುಗಳ ಉಪಟಳಕ್ಕೆ
ಬೇಸತ್ತು ಹಿಂಜರಿಯಬಾರದು. ಅವುಗಳ ದಾಳಿಯನ್ನು
ಎದುರಿಸಲು ಸಿದ್ಧನಾಗಬೇಕು. ಹಾಗೆ ನಾವು ವಾಸಮಾಡುವ ಈ ಭೂಮಿಯಲ್ಲಿ ದುಷ್ಟರು, ನೀಚರು, ಚಾಡಿಕೋರರು, ಕಳ್ಳರು, ಮೋಸಗಾರರು, ವಂಚಕರು, ನಿಂದಕರು, ಸ್ತುತಿಸುವವರು ಮುಂತಾದ ಜನರು ಇರುತ್ತಾರೆ. ಅವರ ಟೀಕೆ ಟಿಪ್ಪಣೆ, ನಿಂದನೆ, ತೆಗಳಿಕೆ, ಹೊಗಳಿಕೆ, ಪ್ರಶಂಸೆ, ಮೋಸ, ವಂಚನೆ, ಚಾಡಿ, ಕಳ್ಳತನ ಮುಂತಾದವುಗಳನ್ನು ಕಂಡು
ಮಾನಸಿಕವಾಗಿ ಕುಗ್ಗಿಹೋಗದೆ ಸೈರಣೆ,ತಾಳ್ಮೆ, ಸಮಾಧಾನ
ಚಿತ್ತದಿಂದ ಇರಬೇಕು. ಈ ದೇಹ ಕೂಡ ಒಂದು ದಟ್ಟಡವಿ.
ಇದರಲ್ಲಿ ಕಾಮ, ಕ್ರೋಧ, ಮೋಹ, ಲೋಭ,ಮದ, ಮತ್ಸರ ,
ಸತ್ವ, ರಾಜಸ, ಸಾತ್ವಿಕ , ಮುಂತಾದ ಗುಣಗಳೆಂಬ ಮೃಗಗಳು
ದೇಹದಲ್ಲಿ ಇವೆ. ಅವುಗಳ ಉಪಟಳವನ್ನು ನಿಗ್ರಹಿಸುವ
ಶಕ್ತಿಯನ್ನು ಪಡೆದುಕೊಳ್ಳಬೇಕು. ಹಾಗಾದರೆ ಮಾತ್ರ ನೆಮ್ಮದಿ
ಶಾಂತಿಯಿಂದ ಬದುಕಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ
ಅವುಗಳ ಧಾಳಿಯಿಂದ ಕಷ್ಟನಷ್ಟಗಳನ್ನು, ತೊಂದರೆಗಳನ್ಮು ಅನುಭವಿಸಬೇಕಾಗುತ್ತದೆ.
ರಚನೆ ಮತ್ತ ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ: 944903099