ದಿನಕ್ಕೊಂದು‌ ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

0
121

 

ನಂದನಿಗೆ ಮಗನಾಗಿ ಕಂಸನಿಗೆ ಹಗೆಯಾಗಿ
ಗೋಪಿಕಾಸ್ತ್ರೀಯರಿಗೆ ಪ್ರೇಮಿಯಾಗಿ
ಪಾರ್ಥನಿಗೆ ಸಖನಾಗಿ‌ ಕಂಡು ಬಂದ‌ನು‌ ಕೃಷ್ಣ
ಭಾವಕ್ಕೆ ತಕ್ಕಂತೆ – ಎಮ್ಮೆತಮ್ಮ

ಶಬ್ಧಾರ್ಥ
ಹಗೆ = ವೈರಿ. ಸಖ = ಗೆಳೆಯ

ತಾತ್ಪರ್ಯ
ಶ್ರೀಕೃಷ್ಣ ಸೆರೆಮನೆಯಲ್ಲಿ ಎಂಟನೆಯ ಮಗನಾಗಿ ವಸುದೇವ
ದೇವಕಿಯರಿಗೆ ಜನಿಸಿದನು. ಆದರೆ‌‌ ಆತನು‌ ಬಾಲ್ಯದಲ್ಲಿ
ನಂದ ಮತ್ತು ಯಶೋದೆಯರ‌ ಪೋಷಣೆಯಲ್ಲಿ‌ ಮಗನಾಗಿ
ಬೆಳೆದ‌ನು. ಆತನ ತಂದೆ ತಾಯಿಗಳನ್ನು‌ ಸೆರೆಮನೆಯಲ್ಲಿಟ್ಟ
ಸೋದರ ಮಾವ ಕಂಸನಿಗೆ‌ ವೈರಿಯಾಗಿ‌ ಬೆಳೆದನು. ತಾನು
ಬೆಳೆದ ಗೋಕುಲದಲ್ಲಿ ಗೋಕುಲಾಸ್ತ್ರೀಯರಿಗೆ‌ ಪ್ರೀತಿಯ
ಕಂದನಾಗಿ ಬೆಳೆದನು.ಹದಿನಾರು‌ ಸಾವಿರ ಗೋಪಿಕಾಸ್ತ್ರೀಯರ ಬಂಧನ ಬಿಡಿಸಿ ಅವರನ್ನು‌ ಮದುವೆಯಾಗಿ ಪ್ರೇಮಿಯಾದನು.

ಅರ್ಜುನನಿಗೆ‌ ಮಹಾಭಾರತ ಯುದ್ಧದಲ್ಲಿ ರಥಿಕನಾಗಿ
ಸಖನಾಗಿ ಭಗವದ್ಗೀತೆ ಬೋಧೆ ಮಾಡಿದನು.‌ಹೀಗೆ‌ ಕೃಷ್ಣ
ಒಬ್ಬೊಬ್ಬರಿಗೆ ಅವರ ಭಾವಕ್ಕೆ ತಕ್ಕಂತೆ ಕಾಣಿಸಿಕೊಂಡನು.
ದೇವರನ್ನು ಕೆಲವರು ಕಂದನಂತೆ ಕಂಡವರುಂಟು, ಕೆಲವರು
ವೈರಿಯಂತೆ ಕಂಡವರುಂಟು, ಕೆಲವರು ಕೈಹಿಡಿದ ಗಂಡನೆಂದು
ಕಂಡವರುಂಟು ಮತ್ತು ಕೆಲವರು ತನ್ನ‌ ‌ಆತ್ಮೀಯ ಗೆಳೆಯನಂತೆ ಕಂಡವರುಂಟು.ಯಾರ್ಯಾರು‌‌ ಯಾವ್ಯಾವ‌ ಭಾವದಲ್ಲಿ ಕಂಡು ಧ್ಯಾನಿಸಿದರೊ‌ ಆವ್ಯಾವ ರೂಪದಲ್ಲಿ‌ ದೇವರು‌ ಅವರಿಗೆ ದರ್ಶನ ಕೊಡುತ್ತಾನೆ.ಅವರು ಭಾವಸಿದ ರೂಪದಲ್ಲಿ ಭಗವಂತ ಅವರಿಗೆ‌ ಕಾಣಿಸಿಕೊಳ್ಳುತ್ತಾನೆ. ಭಕ್ತಿಗೆ ಭಾವನೆಯ ಮುಖ್ಯ.

ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಗಂಗಾವತಿ
9449030990

LEAVE A REPLY

Please enter your comment!
Please enter your name here