ಬಂದವರ ಮನೆಯೊಳಗೆ ಕರೆದು ಕೂಡಿಸಬೇಕು
ಯೋಗಕ್ಷೇಮದ ಬಗ್ಗೆ ಕೇಳಬೇಕು
ಕೊಡದಿದ್ದರೇನಾಯ್ತು ನುಡಿಗಳೆರಡಿಂತಿರಲಿ
ಸೌಜನ್ಯಕಿದೆ ಸಾಕ್ಷಿ – ಎಮ್ಮೆತಮ್ಮ
ಶಬ್ಧಾರ್ಥ
ಯೋಗಕ್ಷೇಮ = ಆರೋಗ್ಯ ಮತ್ತು ಸೌಖ್ಯದ ವಿಚಾರಣೆ
ಸೌಜನ್ಯ = ಔದಾರ್ಯ, ಒಳ್ಳೆತನ
ತಾತ್ಪರ್ಯ
ಯಾರೆ ಮನೆ ಬಾಗಿಲಿಗೆ ಬರಲಿ, ಬಂದವರನ್ನು ಮೊದಲು
ಕರೆದು ಮನೆಯಲ್ಲಿ ಕೂಡಿಸಬೇಕು. ಅವರ ಆರೋಗ್ಯಭಾಗ್ಯ
ಮತ್ತು ಸೌಖ್ಯದ ಬಗ್ಗೆ ವಿಚಾರಿಸಬೇಕು. ಏಕೆಂದರೆ ನಮ್ಮ
ಮನೆಗೆ ಬಂದ ಅತಿಥಿಗಳು ದೇವರ ಸಮಾನ. ಅದಕ್ಕಾಗಿ ನಮ್ಮ ಹಿರಿಯರು ಅತಿಥಿ ದೇವೋ ಭವ ಎಂದು ನಾಣ್ನುಡಿ
ಹೇಳಿದ್ದಾರೆ. ನಿನ್ನ ಮನೆಯಲ್ಲಿ ಸತ್ಕರಿಸಲು ಏನೂ ಇಲ್ಲದಿದ್ದರು ಪರವಾಗಿಲ್ಲ, “ಒಳಗೆ ಬನ್ನಿರಿ; ಆರಾಮ ಇದ್ದೀರಾ “ಎಂಬ ಎರಡು ಮಾತನಾಡಿದರೆ ಸಾಕು. ಅದು ನಿನ್ನ ಒಳ್ಳೆತನವನ್ನು ಸಾಬೀತುಪಡಿಸುತ್ತದೆ. ಅದನ್ನೆ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೀಗೆ ಹೇಳಿದ್ದಾರೆ”ಏನಿ ಬಂದಿರಿಹದುಳವಿದ್ದಿರೆ ಎಂದಡೆ ನಿಮ್ಮ ಮೈಸಿರಿ ಹಾರಿ ಹೋಹುದೆ,ಕುಳ್ಳಿರೆಂದಡೆ ನೆಲ ಕುಳಿಹೋಹುದೆ, ಒಡನೆ ನುಡಿದಡೆ ಶಿರ ಹೊಟ್ಟೆಯೊಡೆವುದೆ,ಕೊಡಲಿಲ್ಲದಿದ್ದಡೊಂದು ಗುಣವಿಲ್ಲದ್ದಡೆಕೆಡವಿಮೂಗ ಕೊಯ್ವುದ
ಮಾಬನೆ ಕೂಡಲಸಂಗಮದೇವ.” ಅತಿಥಿಗಳನ್ನು ತಿರಸ್ಕರಿಸಿದರೆ ದೇವನ ಶಾಪ ಉಂಟಾಗುತ್ತದೆ.
ಅದಕ್ಕೆ ಅತಿಥಿಗಳಿಗೆ ಕೊಡಲು ನಿನ್ನ ಮನೆಯಲ್ಲಿ ಏನು ಇಲ್ಲದಿದ್ದರು ಪರವಾಗಿಲ್ಲ, ನಿನ್ನ ಬಾಯಿಯಲ್ಲಿ ಎರಡು ಒಳ್ಳೆಯ ಮಾತುಗಳಿಗೆ ಬಡತನವಿಲ್ಲವಲ್ಲ. ಎರಡು ಮಾತನಾಡು ಸಾಕು,ದೇವರು ಸಂಪ್ರೀತನಾಗುತ್ತಾನೆ.
ರಚನೆ ಮತ್ತು ವಿವರಣೆ
ಎನ್.ಶರಣಪ್ಪ ಮೆಟ್ರಿ
ಮೊ. 9449030990