ನೆನಪಿದೆಯೆ ನೀನಳುತ ಧರೆಗಿಳಿದು ಬಂದಾಗ
ಬಂಧುಬಾಂಧವರೆಲ್ಲ ನಕ್ಕರಂದು
ನೆನಪಿರಲಿ ಲೋಕವನು ಬಿಡುವಾಗ ಜನರಳಲಿ
ನಗೆಮೊಗದಿ ನೀ ಸಾಗು – ಎಮ್ಮೆತಮ್ಮ
ಶಬ್ಧಾರ್ಥ
ಧರೆ = ಭೂಮಿ
ತಾತ್ಪರ್ಯ
ತಾಯಿಯ ಗರ್ಭದಲ್ಲಿ ಅನೇಕ ಹುಳುಗಳ ಕಡಿತದಿಂದ ಒದ್ದಾಡಿ ಮಲಮೂತ್ರದ ಹೊಲಸಿನಲ್ಲಿ ಹೊರಳಾಡಿ ಪ್ರಸೂತಿ ವಾಯು ಜೋರಾಗಿ ಬರಸಿಡಿಲಿನಂತೆ ಹೊಡೆಯೆ ನೋವಿನಿಂದ ಹೊರಬಂದೆ. ತಾಯಿಯ ಹೊಟ್ಟೆಯಲ್ಲಿ ಬೆಚ್ಚಗಿದ್ದು ಹೊರಬಂದ ಕೂಡಲೆ ತಣ್ಣನೆಯ ಅನುಭವವಾಗಲು, ಉಸಿರು ಮೊದಲ ಬಾರಿಗೆ ತೆಗೆದುಕೊಳ್ಳಲು ಕಷ್ಟವಾಗಲು ಮತ್ತು ಹಸಿವಿನಿಂದ ಬಳಲುತ್ತ ಅಳತೊಳಗಿದೆ. ನಿನ್ನ ಬರುವಿಕೆಯನ್ನು ತಂದೆ ತಾಯಿ ಬಂಧುಬಾಂಧವರೆಲ್ಲ ಸಿಹಿಹಂಚಿ ಸಂತೋಷ ಹಂಚಿಕೊಂಡರು ಮತ್ತು ಮಂದಹಾಸ ಬೀರಿ ನಗತೊಡಗಿದರು.ಇಲ್ಲಿ ಬಂದ ಮೇಲೆ ನೀನು ಸಾರ್ಥಕ ಜೀವನವನ್ನು ನಡೆಸಿ ನಾಲ್ಕುಮಂದಿಗೆ ಸಹಾಯ ಸೇವೆ ಮಾಡುತ್ತ ಮತ್ತು ಆಧ್ಯಾತ್ಮ ಸಿದ್ಧಿ ಪಡೆದು ಇಚ್ಛಾಮರಣಿಯಾಗಿ ಮರಣವನ್ನು ಗೆದ್ದು ನಗುಮುಖದಿಂದ ಸಂತೃಪ್ತಿಯಿಂದ ಹೋದರೆ,ಎಲ್ಲ ಜನರು ನಿನ್ನ ಸಹಾಯ ಸಹಕಾರವನ್ನು ನೆನೆಸಿಕೊಂಡು ಅಳುತ್ತಾರೆ. ಅದನ್ನೆ ಜನಪದರು ಹೀಗೆ ಹಾಡಿದ್ದಾರೆ. ಮಂದಿಮಕ್ಕಳೊಳಗ ಚಂದಾಗಿ ಇರಬೇಕು| ನಂದಿಯ ಶಿವನ ದಯದಿಂದ| ಹೋಗಾಗ| ಮಂದಿ ಬಾಯಾಗ ಇರಬೇಕ|| ಹಾಗೆ ನಾಕು ಮಂದಿಗೆ ಬೇಕಾದರೆ ಕೊನೆಗೆ ನಿನ್ನ ಹೊತ್ತೊಯ್ಯಲು ನಾಕು ಮಂದಿ ಬರುತ್ತಾರೆ. ಕಣ್ಣೀರುಗರೆದು ಉತ್ತರಕ್ರಿಯೆ ನೆರವೇರಿಸುತ್ತಾರೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990