ಕಂಗಳೆರಡೊಂದಾಗಿ ಕಣ್ಣಾಲಿಗಳು ನಿಂತು
ಉಸಿರಾಟಹೃದಯ ಬಡಿತಗಳು ನಿಂತು
ಚಿತ್ತವೃತ್ತಿಯು ನಿಂತು ಮನದೊಳಾನಂದವಿರೆ
ಯೋಗ ಸಿದ್ಧಿಸಿದಂತೆ – ಎಮ್ಮೆತಮ್ಮ
ಶಬ್ಧಾರ್ಥ
ಕಂಗಳು = ಕಣ್ಣುಗಳು. ಚಿತ್ತವೃತ್ತಿ = ಮನದ ಚಂಚಲತೆ
ತಾತ್ಪರ್ಯ
ದೃಷ್ಟಿಯನ್ನು ಭ್ರೂಮಧ್ಯದ ಕಡೆಗೆ ಅಂದರೆ ಮೂಗಿನ ತುದಿಯನ್ನು ಅಥವಾ ಇಷ್ಟಲಿಂಗವನ್ನು ಆಲಿ ಬಡಿಯದೆ ನೋಡುತ್ತಿದ್ದರೆ ಉಸಿರಾಟದ ವೇಗ ಕಡಿಮೆಯಾಗುತ್ತದೆ. ಉಸಿರಾಟ ಕಡಿಮೆಯಾದಂತೆ ಮನಸು ನಿಲ್ಲುತ್ತದೆ. ಕಣ್ಣಾಲಿ, ಉಸಿರಾಟ ಮತ್ತು ಮನಸಿಗೆ ನೇರ ಸಂಬಂಧವಿದೆ.
ಆಲಿ ನಿಂದಡೆ ಸುಳಿದು ಸೂಸುವ|ಗಾಳಿ ನಿಲುವುದು ಗಾಳಿ ನಿಲೆ ಮನ| ಮೇಲೆ ನಿಲುವುದು ಮನವು ನಿಂದಡೆ ಬಿಂದು ನಿಲ್ಲುವುದು | ಲೀಲೆಯಿಂದಲಿ ಬಿಂದು ನಿಂದಡೆ| ಕಾಲ ಕರ್ಮವ ಗೆದ್ದು ಮಾಯೆಯ| ಹೇಳ ಹೆಸರಿಲ್ಲೆನಿಸಬಹುದಗೈ ಬಸವ ಕೇಳೆಂದ|| ಎಂದು ಪ್ರಭುಲಿಂಗಲೀಲೆಯಲ್ಲಿ ಚಾಮರಸ ಅಲ್ಲಮನ ಮುಖಾಂತರ ಬಸವಣ್ಣನಿಗೆ ಹೇಳಿಸುತ್ತಾನೆ. ಆಲಿಯೆ ಸಾಧನಕ್ಕೆ ಸಾಧನವಾಗಿದೆ.ಅದಕ್ಕೆ ಕಣ್ಣ ರೆಪ್ಪೆ ಬಡಿಯದೆ ನೋಡುತ್ತಿದ್ದರೆ ಉಸಿರಾಟ ಹೃದಯದ ಬಡಿತಗಳು ನಿಧಾನವಾಗುತ್ತ ಮನಸು ನಿಲ್ಲುತ್ತದೆ.
ಮನಸು ನಿಂತರೆ ಯೋಚನೆಗಳು ನಿಲ್ಲುತ್ತದೆ. ಆಗ ವಿಶ್ವಶಕ್ತಿ
ದೇಹಕ್ಕೆ ಇಳಿದು ಆನಂದ ಉಂಟಾಗುತ್ತದೆ. ಹೀಗೆ
ಹೃದಯದಲ್ಲಿ ಆನಂದ ಶಾಂತಿ ನೆಲೆಗೊಂಡರೆ ಅದುವೆ
ನಿಜವಾದ ಯೋಗಸಿದ್ಧಿ. ಮನುಷ್ಯನಿಗೆ ಕಾಲ ಕಳೆವುದೆ
ಒಂದು ಸವಾಲು. ಕಾಲ ನಿಲಿಸುವುದೆ ಕಾಲನ(ಯಮನ)
ಗೆದ್ದಂತೆ ಮತ್ತು ಕಾಲನ(ಶಿವನ) ಸಾಕ್ಷಾತ್ಕಾರವಾದಂತೆ.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990