ಹೆದ್ದೆರೆಗಳೆಬ್ಬಿಸುತ ಮೇಲೆ ತಳಮಳಿಸುತಿದೆ
ಒಳಹೊಕ್ಕು ನೋಡಿದರೆ ಮೌನ ಕಡಲು
ತೊಳಲಾಟ ಬಳಲಾಟ ಗೋಳಾಟ ಬಾಳೆಲ್ಲ
ಒಳಗಿಹುದು ನಿಶ್ಯಬ್ಧ – ಎಮ್ಮೆತಮ್ಮ
ಶಬ್ಧಾರ್ಥ
ಹೆದ್ದೆರೆ -ದೊಡ್ಡ ತೆರೆ.ತಳಮಳಿಸು – ಸಂಕಟಪಡು, ಸದ್ದುಮಾಡು
ತಾತ್ಪರ್ಯ
ಸಮುದ್ರವು ಮೇಲೆ ದೊಡ್ಡ ದೊಡ್ಡ ತೆರೆಗಳನ್ನು ಎಬ್ಬಿಸುತ ಭೋರ್ಗೆಯುತ್ತದೆ.ಆದರೆ ಅದರ ಆಳದಲ್ಲಿ ನೀರವ ಮೌನ.
ಒಳಗೆ ಶಾಂತವಾಗಿ ಇರುತ್ತದೆ. ಹಾಗೆ ಮಾನವನ ಬದುಕು ಎಚ್ಚರದಲ್ಲಿ ದುಃಖದುಮ್ಮಾನಗಳು, ಚಿಂತೆವ್ಯಥೆ ಗಳು
ಕಷ್ಟಕಾರ್ಪಣ್ಯಗಳು ತುಂಬಿ ಗೊಂದಲಮಯವಾಗಿದೆ.
ಆದರೆ ಹೃದಯದಾಳದಲ್ಲಿ ಶಾಂತಿ ನೆಮ್ಮದಿ ಆನಂದಗಳು
ಸದಾ ತುಂಬಿಕೊಂಡಿರುತ್ತದೆ.ಅವುಗಳನ್ನು ಈ ಗೊಂದಲಗಳು ಬಂದು ಮರೆಮಾಚಿವೆ. ಅದಕ್ಕೆಲ್ಲ ಕಾರಣ ನಕಾರಾತ್ಮಕ
ಯೋಚನೆಗಳು. ಆ ಯೋಚನೆಗಳನ್ನು ನಿಲ್ಲಿಸಿದರೆ ಸಾಕು
ಒಳಗಿರುವ ಶಾಂತಿ ಆನಂದ ಹೊರಹೊಮ್ಮುತ್ತದೆ. ಅದಕ್ಕೆ
ಚಿತ್ತವೃತ್ತಿ ನಿರೋಧ ಯೋಗ ಎಂದು ಕರೆಯುತ್ತಾರೆ. ನಿಶ್ಯಬ್ಧ
ಇರುವುದೆ ನಿಜಯೋಗ. ಧ್ಯಾನ ಮಾಡುವದರಿಂದ ಯೋಚನೆಗಳು ಕಡಿಮೆಯಾಗುತ್ತ ಹೋದಂತೆ ಆನಂದದ
ಬುಗ್ಗೆ ಚಿಮ್ಮತೊಡಗುತ್ತದೆ. ಅದನ್ನೆ ಬ್ರಹ್ಮಾನಂದ ಎಂದು
ಕರೆಯುತ್ತಾರೆ. ತಲೆಯ ಮರದಲ್ಲಿ ಯೋಚನೆಯ ಹಕ್ಕಿಗಳು
ಚಿಲಿಪಿಲಿಗುಟ್ಟಿ ಗದ್ದಲ ಎಬ್ಬಿಸುತ್ತವೆ. ಆ ಗದ್ದಲ ನಿಂತರೆ
ಸಾಕು ಶಾಂತಿಸಮಾಧಾನಗಳ ಅನುಭವ ಆಗುತ್ತದೆ. ಧ್ಯಾನ
ಮಾಡುತ್ತ ಮೌನದ ಮಹತ್ವ ಅರಿಯಬೇಕು.
ರಚನೆ ಮತ್ತುವಿವರಣೆ
ಎನ್.ಶರಣಪ್ಪ ಮೆಟ್ರಿ