ನೆರೆ ಪರಿಹಾರಕ್ಕಾಗಿ ಬೀದಿಗಿಳಿದ ಅನ್ನದಾತರು
ಮುಧೋಳ – ತಾಲೂಕಿನಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಅಪರ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಮುಧೋಳ ತಾಲೂಕಿನ ೩೪ ಹಳ್ಳಿಗಳ ರೈತರು ಸೋಮವಾರ ದಿ.೧೨ ರಂದು ಮುಧೋಳ ಬಂದ್ ಗೆ ಕರೆ ಕೊಟ್ಟಿದ್ದಾರೆ.
ರೈತ ಮುಖಂಡ ಬಸವಂತ ಕಾಂಬಳೆಯವರು ಈ ಬಗ್ಗೆ ಮಾತನಾಡಿ, ಮುಳುಗಡೆಯಾಗಿರುವ ೩೦ ಹಳ್ಳಿಗಳ ಎಲ್ಲಾ ರೈತರು, ಕರ್ನಾಟಕ ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ ಹಾಗೂ ಉತ್ತರ ಕರ್ನಾಟಕ ಮುಳುಗಡೆ ಮತ್ತು ನೆರೆ ಸಂತ್ರಸ್ತರ ಸಂಘಗಳು ವಿವಿಧ ಸಂಘಟನೆಗಳು, ಮುಧೋಳ ವ್ಯಾಪಾರಸ್ಥರ ನೆರವಿನೊಂದಿಗೆ ಮುಧೋಳ ಬಂದ್ ಹಮ್ಮಿಕೊಳ್ಳಲಾಗಿದೆ ಎಂದರು.
ಸೋಮವಾರದ ಮುಧೋಳ ಬಂದ್ ಗೆ ಎಲ್ಲರೂ ಸಹಕರಿಸುತ್ತಲಿದ್ದು, ಮುಖ್ಯಮಂತ್ರಿಗಳು, ಕೃಷಿ ಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಕ್ಷಣವೇ ಸಭೆ ಸೇರಿ ಚರ್ಚಿಸಿ ತಡಮಾಡದೇ ರೈತರಿಗೆ ಪ್ರವಾಹ ಹಾನಿಯ ಪರಿಹಾರ ಕೊಡಬೇಕು. ತಡ ಮಾಡಿದರೆ ರೈತರಿಗೆ ಉಳಿಗಾಲವಿಲ್ಲ ಎಂದು ಕಾಂಬಳೆ ಹೇಳಿದರು.
ಇದೇ ಸಂದರ್ಭದಲ್ಲಿ ಇನ್ನೊಬ್ಬ ರೈತ ಮುಖಂಡ ಮುತ್ತಪ್ಪ ಕುಂಬಾರ ಮಾತನಾಡಿ ನೆರೆ ಸಂತ್ರಸ್ತ ರೈತರಿಗೆ ಪರಿಹಾರ ಕೊಡಲೇಬೇಕು ಎಂದು ಆಗ್ರಹಿಸಿದರು.
ರೈತರು ಈಗಾಗಲೇ ಮುಧೋಳ ಶಹರದಲ್ಲಿ ಠಿಕಾಣಿ ಹೂಡಿದ್ದು ತಮ್ಮ ಎತ್ತು- ಬಂಡಿಗಳನ್ನು ತೆಗೆದುಕೊಂಡು ಬಂದು ಸೋಮವಾರದ ಮುಧೋಳ ಬಂದ್ ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.