ಪರರ ಚಿಂತೆಯ ಮಾಡಿ ಪರಿತಪಿಸಿ ಫಲವಿಲ್ಲ
ನಿನ್ನಾತ್ಮ ಚಿಂತನೆಯ ಮೊದಲು ಮಾಡು
ಲೋಕವನು ತಿದ್ದುವುದು ದುಸ್ಸಾಧ್ಯ ದೇವರಿಗು
ನಿನ್ನನೀ ತಿದ್ದಿಕೋ – ಎಮ್ಮೆತಮ್ಮ||೯೩||
ಶಬ್ಧಾರ್ಥ
ಪರಿತಪಿಸು = ಅತಿಯಾಗಿ ದುಃಖಿಸು .ದುಸ್ಸಾಧ್ಯ – ಕಷ್ಟಸಾಧ್ಯ
ತಾತ್ಪರ್ಯ
ತಂದೆತಾಯಿ,ಅಣ್ಣತಮ್ಮ,ಅಕ್ಕತಂಗಿ, ಮಡದಿಮಕ್ಕಳು,
ಬಂಧುಬಳಗ, ಗೆಳೆಯಬಳಗ ಇವರಿಗಾಗಿ ಚಿಂತೆ ಮಾಡಿ ದುಃಖಿಸುವುದು ತರವಲ್ಲ. ಮೊದಲು ನಿನ್ನ ಬಗ್ಗೆ ಚಿಂತನೆ ಮಾಡಿ ನಿನ್ನೇಳ್ಗೆಗಾಗಿ ಪ್ರಯತ್ನಮಾಡು. ನೀನು ಬೆಳೆದು
ಯಶಸ್ಸನ್ನು ಗಳಿಸಿದರೆ ಎಲ್ಲರು ಬರುತ್ತಾರೆ. ಮೊದಲು ನಿನ್ನ
ಆತ್ಮೋದ್ಧಾರಕ್ಕಾಗಿ ಕಾರ್ಯ ಪರವೃತ್ತನಾಗು. ಬೇರೆಯವರ
ಉದ್ಧಾರ ಮಾಡಲು ಹೋಗಿ ನೀನು ಹಾಳಾಗಬೇಡ. ಅವರನ್ನು ಸರಿದಾರಿಗೆ ತರಲು ನಿನ್ನಿಂದ ಶಕ್ಯವಿಲ್ಲ. ಹುಟ್ಟಿಸಿದ ದೇವರಿಗೆ ಅವರನ್ನು ತಿದ್ದಲು ಕಷ್ಟಸಾಧ್ಯ. ಹೀಗಿರುವಾಗ ಅವರನ್ನು ತಿದ್ದಲು ನಿನ್ನಿಂದ ಸಾಧ್ಯವಿಲ್ಲ. ಮೊದಲು ನಿನ್ನನ್ನು ನೀನು ತಿದ್ದಿಕೊಂಡು ಗುರಿ ಸಾಧನೆ ಮಾಡು. ನೀನು ತಿದ್ದಿಕೊಂಡು ನಡೆನುಡಿ ಸರಿಯಾದರೆ ನಿನ್ನ ನೋಡಿ ಜನ ಬದಲಾಗುತ್ತಾರೆ. ಮೊದಲು ನಿನ್ನನ್ನು ನೀನು ಪ್ರೀತಿಸು. ಆಗ ತನ್ನಿಂದ ತಾನೆ ಜಗತ್ತನ್ನು ಪ್ರೀತಿಸುವೆ.ಆಗ ಜಗತ್ತೆಲ್ಲ ನಿನ್ನನ್ನು ಪ್ರೀತಿಸಲು ಶುರುಮಾಡುತ್ತದೆ. ಮೊದಲು ನೀನು ಸರಿಯಾದರೆ ಜಗವೆಲ್ಲ ಸರಿಯಾಗುತ್ತದೆ. ಜನರನ್ನು ತಿದ್ದುವ ಗೋಜಿಗೆ ಹೋಗಬೇಡ. ನಿನ್ನ ನಡತೆ ಸರಿಯಾಗಿದ್ದರೆ ನಿನ್ನ ನೋಡಿ ಜನ ಕಲಿಯುತ್ತಾರೆ.ಮಾತಿನಿಂದ ಹೇಳುವುದಕಿಂತ ನೀನು ಮಾಡಿ ತೋರಿದರೆ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನುಡಿಗಿಂತ ನಡೆ ಲೇಸು.
ರಚನೆ ಮತ್ತು ವಿವರಣೆ ಎನ್.ಶರಣಪ್ಪ ಮೆಟ್ರಿ
ಮೊ. 9449030990