spot_img
spot_img

ಕನಕದಾಸರ ನೆನೆಯುವ ಕವಿತೆಗಳು

Must Read

- Advertisement -

(ಡಾ. ಮಹೇಂದ್ರ ಕುರ್ಡಿ, ವಿದ್ಯಾ ರೆಡ್ಡಿ, ಎಮ್ಮಾರ್ಕೆ, ಶುಭನುಡಿ, ಶೈಲಜಾ ಹಿರೇಮಠ )

ದಾಸ ಶ್ರೇಷ್ಠರು

ದಾಸ ಶ್ರೇಷ್ಠರು ಇವರಯ್ಯ

ಮಾನವ ಕುಲಕ್ಕೆ ಮಾದರಿಯಾಗಿ

- Advertisement -

ಮಹಾನ್ ಸಂತ ಸಾರಥಿಯಾದ

ದಾಸ ಶ್ರೇಷ್ಠರು ಇವರಯ್ಯ.

ಹರಿ ಭಕ್ತ ಮಹಾಮಹಿಮರು

- Advertisement -

ಕಾಗಿನೆಲೆಯ ಆದಿಕೇಶವ ನಾಮಾಂಕಿತರು

ಮೌಢ್ಯವ ಅಳಿಸಲು ಮುಂದಾದ

ದಾಸ ಶ್ರೇಷ್ಠರು ಇವರಯ್ಯ.

ಸವಿನುಡಿಯ ದಾರಿ ದೀಪವಾಗಿ

ಅಂಧಕಾರದ ಜ್ಞಾನ ಜ್ಯೋತಿಯಾಗಿ

ಭಕ್ತಿಯ ಬೆಳಕು ಚೆಲ್ಲಿದ

ದಾಸ ಶ್ರೇಷ್ಠರು ಇವರಯ್ಯ.

ತಂಬೂರಿಯ ಸ್ವರ ನುಡಿಸಿ

ಜನಮನಗಳ ಹೃದಯ ತಲ್ಲಣಿಸಿ

ಭೋಗ ವೈಭೋಗದ ನೀತಿ ಸಾರಿದ

ದಾಸ ಶ್ರೇಷ್ಠರು ಇವರಯ್ಯ.

ಕೀರ್ತನೆಗಳ ಹಾಡುತ ಸಾಗಿ

ಕುಲವೆಂಬ ಮೂಢರ ಕೂಗಿ

ಕುಲದ ನೆಲೆ ಹುಡುಕಿರೆಂದ

ದಾಸ ಶ್ರೇಷ್ಠರು ಇವರಯ್ಯ.

ಕನಕದ ಗುಣ ತನ್ನೊಳಗಿತ್ತು

ಚಿನ್ನದ ನುಡಿಮುತ್ತುಗಳ ನಾಡಿಗಿತ್ತು

ಕನಕದಾಸ ಎಂಬ ಮಹಾತ್ಮನಾದ

ದಾಸ ಶ್ರೇಷ್ಠರು ಇವರಯ್ಯ.

ಡಾ. ಮಹೇಂದ್ರ ‍ಕುರ್ಡಿ


ದಾಸಶ್ರೇಷ್ಠ

ಹರಿನಾಮವ ನೆನೆಯುತಾ

ಕುಲದ ನೆಲೆಯ ಅರುಹಿ

ಕಡಲನ್ನೇ ಕನ್ನಡಿಯಾಗಿಸಿದ 

ಸಂತ… ಕನಕದಾಸ…

ತೊರೆಯಾಗಿ ಹರಿದು 

ಕಡಲಾಗಿ ಮೊರೆದು

ಅಂಬರದ ರವಿಯಂತೆ 

ಮಿಂಚಿ ಮರೆಯಾದ ಹರಿಕಾರ…ಕನಕದಾಸ….

ತನುವ ನೇಗಿಲ ಮಾಡಿ

ಹೃದಯವನ್ನೇ ಹೊಲ ಮಾಡಿ

ಸಮಾನತೆಯ ಬಿತ್ತಿ ಬೆಳೆದ ಸಾಧಕ….

ಸಮಾಜಕೆ ತಮ್ಮಕೀರ್ತನೆಗಳಿಂದಲೆ

ಸಾರ್ವಕಾಲಿಕ ಸಂದೇಶಗಳ ಸಾರಿ….

ತಾನಿದ್ದಲ್ಲಿಯೇ ದೇವರ ಕಂಡ ಭಕ್ತಕವಿ… ಕನಕದಾಸ 

ಅರಿತವರಿಗಿಂತ ನುರಿತವನು ಮೇಲೆಂದು

ಎದೆಯ ದನಿಗೆ ಕಿವಿಯಾಗಿ

ಭಾವ ಡಂಗುರ ಸಾರಿದ ದಾಸಶ್ರೇಷ್ಠ

ಕಾಗಿನೆಲೆಯ ಆದಿಕೇಶವನ ಶಿಷ್ಯ…ಕನಕದಾಸ…..

ವಿದ್ಯಾ ರೆಡ್ಡಿ, ಗೋಕಾಕ.


ಜೈ ಕನಕ

ಜೈ ಕನಕ……

ಅಜರಾಮರವು ನೀ ಕೊನೆತನಕ

ಬಾಡದಲಿ ಜನಿಸಿದೆ ಬಾಡದ ಹೂ ಎನಿಸಿದೆ

ಕಾಗಿನೆಲೆ ಕ್ಷೇತ್ರದೊಳು ಕಲ್ಪವೃಕ್ಷವೆನಿಸಿದೆ

ಜೈಕಾರವ ಹಾಕಬೇಕು

ಕೈ ಎತ್ತಿ ಮುಗಿಯಬೇಕು

ನಿನ್ನ ಹಿರಿಮೆ….ನಿನ್ನ ಗರಿಮೆ……

ಕೊಂಡಾಡಲು ಪದಗಳೇ ಸಾಲದುಪ

ಬೀರಪ್ಪ ಬಚ್ಚಮ್ಮರ ಮುದ್ದಿನ ಸಂತಾನವು

ತಿಮ್ಮಪ್ಪನ ಹರಕೆಯ ಅದ್ಭುತ ಪ್ರಸಾದವು

ಹೆಸರದು ತಿಮ್ಮಪ್ಪ ನಾಯಕ

ಬಂಕಾಪುರದ ದಂಡನಾಯಕ 

ಮಾಡುತಲಿ ನಿಸ್ವಾರ್ಥ ಕಾಯಕ

ಎನಿಸಿದೆ ಸಮತೆಯ ಮಹಾಸಾಧಕ

ಮೇಲು ಕೀಳೆಂಬುದ ನೀ ಅಳಿಸಿದೆ

ಕುಲದ ನೆಲೆಯನ್ನು ನೀ ತಿಳಿಸಿದೆ

ಬೀಸೋ ಗಾಳಿ…ಹರಿಯೋ ನೀರು

ಎಂದಾದರೂ ಕೇಳಿತೇ ಈ ಕುಲಗಳ೧

ವ್ಯಾಸರಾಯರ ಅಚ್ಚು ಮೆಚ್ಚಿನ ಶಿಷ್ಯರು

ಆದಿಕೇಶವರಾಯನ ಪರಮ ಸದ್ಭಕ್ತರು

ಅಕ್ಕಿ ರಾಗಿಯ ಆ ಬೇಧವ

ದೂರ ಮಾಡಿದೆ ನೀ ಮಾಧವ

ನಳದಮಯಂತಿಯ ಆ ಪ್ರೇಮಕೆ

ನಳಚರಿತ್ರೆಯೇ ಒಂದು ಕಾಣಿಕೆ

ಕೀರ್ತನೆ ಕೇಳಿ ಈ ಕಿವಿಗಳು ಧನ್ಯ

ಕೇಳುವುದೇ ನಮ್ಮ ಎಲ್ಲರ ಪುಣ್ಯ

ನಿನ್ನ  ಸ್ಮರಣೆ….ನಿನ್ನ ಕರುಣೆ……

ನಮ್ಮ ಮೇಲಿರಲಯ್ಯ ಹೀಗೆಯೇ೨

ಎಮ್ಮಾರ್ಕೆ


ಕನಕದಾಸ

ಕರವನು ಮುಗಿಯುವೆ ಕನಕದಾಸನೆ

ವರವನು ನೀಡಿ ಕೃಪೆಯಾಗು.

ಕನ್ನಡ ನಾಡಿನ ಹೆಮ್ಮೆಯ ಕಂದ

ಭವಕ್ಕೆ ಬಂದೆ ಬೆಳಕಾಗಿ….1

ಜ್ಞಾನದ ಜ್ಯೋತಿ ಹಚ್ಚಿದೆ

ನೀನು ಭೇದ ಭಾವ ನಿನಗಿಲ್ಲ.

ಹಸಿವು ತೃಷೆಯನ್ನು ಅರಿಯದಲೆ  

ತಿರುಗಿದ ಪಾದ ಸಂಚಾರಿ….2

ಹೆಗಲಿಗೆ ಕರಿಯ ಕಂಬಳಿಯ ಹಾಕಿ

ಕರದೊಳು ತಂಬೂರಿ ಯನ್ನು ಹಿಡಿದು.

ಹರಿಯನ್ನು ನೆನೆಯುತ ಅಲೆ ಅಲೆದಾಡಿ

ತಿರುಗಿದೆ ಪುಣ್ಯಕ್ಷೇತ್ರಗಳ…..3

ಬಿಸಿಲು ಮಳೆಗೆ ಅಂಜದಲೆ

ಗಂಡೆದೆ ಸಾಹಿತ್ಯ ರಚಿಸಿದೆ.

ಶಾರದ ಸುತನೆ ಬ್ರಹ್ಮ ಜ್ಞಾನಿಯೆ

ಪಾರು ಮಾಡು ಭವದಿಂದ…..4

ಜ್ಞಾನಕೆ ಎಂದು ಜಾತಿಯು ಇಲ್ಲ

ನೀತಿಯು ಒಂದೇ  ಹೊಂಗಿರಣ. 

ಉಡುಪಿ ಕೃಷ್ಣನ ದರ್ಶನ  ಪಡೆದೆ

ಕನಕನ ಕಿಂಡಿಯ ಇತಿಹಾಸ ….5

ಶುಭನುಡಿ


ಕನಕ ಕೃಷ್ಣರೇ ಸತ್ಯ

ಕುರಿ ಕಾಯುವ ಕನಕ,

ಕೊಳಲನೂದುವ ಕೃಷ್ಣ,

ಕಣ್ಣು-ರೆಪ್ಪೆಯಂತೆ ಒಂದಾದರು, 

ಉಳಿದಿದೆಲ್ಲವೂ  ಮಿಥ್ಯ

ಕನಕಕೃಷ್ಣರೇ ಸತ್ಯ….

ಕುಲ-ಕುಲವೆಂದು ಹೊಡೆದಾಡದಿರಿ 

ಎಂದ ಕನಕ, 

ಕಾರುಣ್ಯದ ನುಡಿಗಳಿಗೆ 

ಸೋತು ಶರಣಾದ ಈ ಕೃಷ್ಣ, 

ಇಬ್ಬರಲೂ ಇರುವುದು 

ಒಂದೆ ಆತ್ಮವೆಂಬ ಪರಮಾತ್ಮ…….

ಜಾತಿಭೀತಿಗಳ ಮೆಟ್ಟಿ 

ಇವರಿಬ್ಬರನು ಬೆಸೆಯಿತು ಅಧ್ಯಾತ್ಮ…..

ಪದಗಳ  ಶಾಂತ ಸಾಲುಗಳನು 

ಕಟ್ಟಿದನು ಕನಕ, 

ಅದನಾಲಿಸಲು ತವಕಿಸಿದ 

ಕೊಳಲ ಶ್ರೀ  ಕೃಷ್ಣ, 

ಪದಗಳಿಂದ ಮನುಕುಲದ 

ಕುಲಭೇದಗಳನು ಕಿತ್ತೊಗೆದು 

ಮಾನವೀಯತೆಯ ಬೆಳಗಿದನು ಕನಕ,

ಕುರಿಕಾಯುವವನೊಬ್ಬ 

ಜಗಕೆ ಸಾರಿದ ನೀತಿಯ ಬೆಳಕ……

ಕಷ್ಣನನು ಕಾಣ ಬಯಸಿದ ಕನಕ, 

ನಿನ್ನಿಂದ  ದೂರ ಇರಲಾರೆ ಎಂದ ಕೃಷ್ಣ, 

ಬ್ರಾಹ್ಮಣ್ಯದ ಬಂಧಗಳ ಕಿತ್ತೊಗೆದು, 

ಕಿಂಡಿಯಲಿ ಕನಕನನು ಕಂಡ ಕೃಷ್ಣ ಹೇಳಿದ, 

ಕನಕ ನಿನ್ನ ಕಂಡ ನಾನೇ ಪುನೀತ

ನಾನೇ ಪುನೀತ…..

ಉಳಿದದೆಲ್ಲವೂ ಮಿಥ್ಯ 

ಕನಕ -ಕೃಷ್ಣನ ಮಿಲನವೇ 

ಪರಮಸತ್ಯ…..

ಕನಕಕೃಷ್ಣರೇ ಸತ್ಯ

ಮನದಿ ನೆನೆಯಬೇಕು 

ಕನಕದಾಸನನು ದಿನನಿತ್ಯ….

ಶೈಲಜಾ ಹಿರೇಮಠ. ಗಂಗಾವತಿ.

- Advertisement -
- Advertisement -

Latest News

Yuva Movie: ಯುವ ರಾಜ್‌ಕುಮಾರ್ ಅವರ ಚಿತ್ರದ ಕಥೆ ಲೀಕ್ ಆಯ್ತಾ?

ಕನ್ನಡ ಚಲನಚಿತ್ರ "ಯುವ" ಮಾರ್ಚ್ 2024 ರಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದಲ್ಲಿ ಪ್ರಸಿದ್ಧ ಕನ್ನಡ ನಟ ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್...
- Advertisement -

More Articles Like This

- Advertisement -
close
error: Content is protected !!
Join WhatsApp Group