spot_img
spot_img

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

Must Read

- Advertisement -

‘ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು.’ ಎಂಬ ಜನಪ್ರಿಯ ಗೀತೆಯನ್ನು ಕೇಳುತ್ತಿದ್ದರೆ ಮತ್ತೆ ತಾಯಿಯ ಮಡಿಲಲ್ಲಿ ಕಂದನಾಗಿ ಮಲಗುವ ಹಂಬಲ ಬಲಗೊಳ್ಳದೇ ಇರದು. ಆಕೆಯ ಜೊತೆ ಮಾತೇ ಸಂಗೀತ, ಮಮತೆಯ ಸೆಳೆತ, ಮೌನ, ಮುನಿಸು, ಸೀರೆಯ ಸೆರಗು ಹಿಡಿದು ಹೆಜ್ಜೆಗಳ ಮೇಲೆ ಹೆಜ್ಜೆಗಳ ಪ್ರಯಾಣ, ನೋವಿಗೆಲ್ಲ ಮಿಡಿದ ಕ್ಷಣ ಕ್ಷಣಗಳ ಕೂಡಿಸುತ್ತ  ಕಳೆದು ಹೋಯಿತು ಬಾಲ್ಯ.  ಹೂವಿನಂತೆ ಅರಳಿ ನಮ್ಮ ಬದುಕಿನಲ್ಲಿ ಗಂಧ ಹರಡುವವಳು.

ಆಕೆ ನಮ್ಮೊಳಗೆ ಇಳಿದು ಬೇರುಗಳನ್ನು ಹಬ್ಬಿಸಿ ಹೂವಾಗಿ ಮುದ್ದಿಸಿದ ಕ್ಷಣಗಳಿಗೇನು ಕೊರತೆಯೇ? ಅತ್ತು ನಕ್ಕು ನಲಿದು ಮುದ ಹರಡಿದ ಕಂದಮ್ಮಗಳಿಗೆ ಇವಳು ಜೀವ ಸೆಲೆಯಾದಾಕೆ.

ಆಕೆ ನಮ್ಮನ್ನು ಪಾಲನೆ ಮಾಡಿದ್ದು ಪೋಷಿಸಿದ್ದು ಒಂದೇ, ಎರಡೇ, ಆ ಎಲ್ಲ ನೆನಪುಗಳನ್ನು ಕೆಣಕಿದಂತೆಲ್ಲ ರೋಮಾಂಚನ. ನೋವೆಲ್ಲ ಮರೆಸಿ ಬದುಕಿಗೆ ನಲಿವು ನೀಡಿದ ಜೀವ. ಇವಳು ಇಳೆ ಬಾನು ತುಂಬಿ ಹರಡಿದ ಬೆಳದಿಂಗಳು. ತಾಯಿ ಎಂಬ ದೊಡ್ಡ ಜೀವ ಜೊತೆಗಿದ್ದರೆ ಸಾಕು, ಜಗವನ್ನೇ ಗೆಲ್ಲಬಲ್ಲೆ ಎಂಬ ಭಾವ. ಸಾವಿರ ಪಟ್ಟು ಬೀಸಿ ಬಂದ ಚಂಡಮಾರುತದಂತಹ ಕಷ್ಟಗಳನ್ನು ಮೆಟ್ಟಿ ನಿಲ್ಲಬಲ್ಲೆ ಎಂಬ ಆತ್ಮವಿಶ್ವಾಸ.

- Advertisement -

ನುಗ್ಗಿಬರುವ ಸವಾಲುಗಳಿಗೆ, ಆಪತ್ತಿಗೆ ಒದಗಿ ಬರುವ ಶ್ರೀಮಂತ ಹೃದಯಿ. ಈವರೆಗೂ ಅಮ್ಮನ ಬಗ್ಗೆ  ಹೇಳಿದ್ದೆಲ್ಲ ಕೇವಲ ಕೆಲವೇ ಕೆಲವು ಪ್ರಮುಖ ಅಂಶಗಳು. ವಾಸ್ತವ ಏನೆಂದರೆ ನಾವು ಯಾವತ್ತೂ ನಮ್ಮ ಬುದ್ಧಿಯ ಮೇಲೆ ಸಾಮಥ್ರ್ಯದ ಮೇಲೆ ನಂಬಿಕೆ ಇಡಲು ಕಾರಣ ಆಕೆ.

ತಾಯಂದಿರ ದಿನ:

ಇತ್ತೀಚಿಗಂತೂ. ಜಯಂತಿಗಳು, ಜಾಗತಿಕ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ದಿನಾಚರಣೆಗಳು ಹಬ್ಬ ಹರಿದಿನಗಳು ಇದ್ದೇ ಇರುತ್ತವೆ. ಹೀಗೆ ಒಂದಲ್ಲ ಒಂದು ಕಾರಣದಿಂದ ಪ್ರತಿ ದಿನವೂ ವಿಶೇಷವೇ. ಹೀಗಿರುವಾಗ ಅವರವರು ತಮಗೆ ಸಂಬಂಧಿಸಿದ ದಿನಾಚರಣೆಗಳನ್ನು ನೆನಪಿಟ್ಟು ಆಚರಿಸಿಕೊಳ್ಳುವುದು ರೂಢಿಯಾಗಿದೆ. ಇದೇ ದಾರಿಯಲ್ಲಿ ಅಮ್ಮನನ್ನು ನೆನೆಯಲು ಒಂದು ದಿನ ನಿಗದಿಗೊಳಿಸಲಾಗಿದೆ.  ಇದು  ಈಗಿನ ಜಗತ್ತಿನ ಜನಜೀವನದ ಭಾಗವಾಗಿದೆ.

- Advertisement -

ಆಧುನಿಕ ಅಮ್ಮ:

ತಾನು ತನ್ನ ಕುಟುಂಬ, ಮನೆಗೆಲಸ, ತನ್ನ ಗಂಡ ಎಂದಿದ್ದ ತಾಯಿ ಎಂಬ ಜೀವಕೆ ಈಗ ಎಲ್ಲಿಲ್ಲದ ಜವಾಬ್ದಾರಿಗಳ ಹೊರೆ ತಲೆ ಮೇಲಿದೆ. ಅದರಲ್ಲೂ ಆಧುನಿಕ ತಾಯಿಯ ಪ್ರಪಂಚ ವಿಭಿನ್ನತೆಯಿಂದ ಕೂಡಿದೆ.

ಮಕ್ಕಳ ಓದು, ಪರೀಕ್ಷೆ, ಸಂಬಂಧಿಕರ ಮದುವೆ ಮುಂಜಿವೆಗಳಲ್ಲಿ ಹಾಜರಿ, ಏಕತಾನತೆಯನ್ನು ಮುರಿಯಲು ಕುಟುಂಬದ ಜೊತೆ ಪಿಕ್ನಿಕ್ ಟೂರ್‍ಗೆ ಸಮಯ ಹೊಂದಾಣಿಕೆ, ನಾಲ್ಕಾರು ತಲೆಮಾರುಗಳಿಗೆ ಆಸ್ತಿ ಕಲೆ ಹಾಕುವ ಜವಾಬ್ದಾರಿ, ಬೆಳಿಗ್ಗೆ ಮನೆಯವರಿಗೆ ಎನರ್ಜಿ ಜ್ಯೂಸ್, ಮಗಳಿಗೆ ಡ್ರೈ ಫ್ರೂಟ್ ಸಲಾಡ್, ಮಗನಿಗೆ ಮೂರೂ ಹೊತ್ತು ಚಪಾತಿ ಜೊತೆಗೆ ವೈರೈಟಿ ಚಾಟ್ಸ್, ಟಿಫನ್, ಉಳಿದವರಿಗೆಲ್ಲ ಮಧ್ಯಾಹ್ನಕ್ಕೆ ಚಪಾತಿ ಪಲ್ಯ, ರಾತ್ರಿಗೆ ರೊಟ್ಟಿ ಮುದ್ದೆ ಅನ್ನ ಸಾರು, ಫ್ರೂಟ್ ಸಲಾಡ್, ಮಜ್ಜಿಗೆ ಹೀಗೆ ಒಂದೇ ಎರಡೇ! ಈ ಎಲ್ಲ ಸಿದ್ಧಪಡಿಸುವ ಕೈಗಳು ಎರಡೇ ಅವು ಅಮ್ಮನವೇ! ತನ್ನ ಆರೋಗ್ಯಕ್ಕೆಂದು ಬೇಗ ಎದ್ದು ಒಂದಷ್ಟು ವಾಕಿಂಗ್, ಎಕ್ಸಸೈಜ್,ಕೆಲವೊಮ್ಮೆ ಕಚೇರಿಯಲ್ಲಿ ಕೆಲಸದೊತ್ತಡವಿರುವಾಗ ಸ್ವಿಗ್ಗಿ ಜೊಮ್ಯಾಟೊಗಳ ರೆಡಿಮೇಡ್ ಪಾರ್ಸಲ್‍ಗೂ ಇವಳೇ ಕರೆ ಮಾಡಬೇಕು.

ವೇಗದ ಬದುಕಿಗೆ ಬಸ್ಸು ಹಿಡಿದು ಕಾದು ಹೋಗುವ ತಾಳ್ಮೆ ತೋರಬೇಕು. ಟ್ರಾಫಿಕ್‍ನಲ್ಲಿ ಸಿಕ್ಕಿ ಹಾಕಿಕೊಂಡಾಗ ಕೆಲಸದವರಿಗೆ ಫೋನಿನಲ್ಲೇ ಕೆಲಸ ಹೇಳುವುದು. ತಾನು ಕೆಲಸದ ಸ್ಥಳದಲ್ಲಿ ಅನುಭವಿಸುವ ಕಷ್ಟಗಳು ಒಂದಾ ಎರಡಾ! ಅವರಿವರ ಮನೆಯಲ್ಲಿ ಪಾತ್ರೆ ಮುಸುರೆ ತೊಳೆದು, ಸಿಕ್ಕ ಸಣ್ಣ ಪುಟ್ಟ ಕೆಲಸ ಮಾಡಿ ಹಲವಾರು ವರ್ಷ ಆದಾಯ ತಂದರೆ ಮಕ್ಕಳ ಜೀವನ ಮೇಲ್ಮಟ್ಟಕ್ಕೆ ಏರುತ್ತದೆ ಎನ್ನುವ ತಾಯಂದಿರ ಬೆವರಿನ ಹನಿಗಳಿಗೆ ಬೆಲೆ ಕಟ್ಟುವುದಾದರೂ ಹೇಗೆ? 

ಎಕ್ಸಪ್ರೆಸ್ ಟ್ರೇನ್‍ನಂತೆ!

ವಿಷಮ ಪರಿಸ್ಥಿತಿಗಳಲ್ಲಿ ಆಕೆ ಕೊಡುವ ಮಾನಸಿಕ ಬೆಂಬಲ ಸಹಕಾರ ಅತ್ಯಂತ ಶ್ಲಾಘನೀಯ. ಮನೆಯಲ್ಲಿ ನಾಲ್ಕು ಜನರಿಗೆ ನಾಲ್ಕು ರೀತಿಯ ಅಡುಗೆ ತಯಾರಿಸಿ ತನಗೆ ಸರಿಯಾಗಿ ತಿನ್ನಲು ಸಮಯವಿಲ್ಲ. ಅದು ಅವಳಿಗೆ ಮಾಮೂಲಿ ಬಿಡಿ. ಹಬ್ಬ ಹರಿದಿನಗಳಲ್ಲಂತೂ ದಿನದ ಅಡುಗೆ ಜೊತೆಗೆ ಹುಗ್ಗಿ, ಹೋಳಿಗೆ, ಪಾಯಸ, ಸಂಡಿಗೆ, ಹಪ್ಪಳ ಹೀಗೆ ಎಂಟ್ಹತ್ತು ಕೈಗಳು ಮಾಡುವ ಕೆಲಸವನ್ನು ಇವೆರಡೇ ಕೈಗಳೇ ಮಾಡಬೇಕು ವಾರಕ್ಕೊಂದು ದಿನ ರಜೆ ಸಿಕ್ಕರೂ ಅದು ಮನೆಯ ಸ್ವಚ್ಛತೆಯಲ್ಲಿ ಕಳೆದು ಹೋಗುತ್ತದೆ. ಇಲ್ಲವೇ ಅದೂ ಒಂದು ದಿನ ಮಲ್ಟಿಪ್ಲೆಕ್ಸ್, ಮಾಲ್‍ಗಳಿಗೆ ಕಾಯ್ದಿರಿಸಬೇಕಾಗುತ್ತದೆ. ಮನೆಗೆ ಬೇಕಾದ ಸಾಮಗ್ರಿಗಳ ಖರೀದಿಯನ್ನೂ ಆಕೆಯೇ ಮಾಡಬೇಕು. ಕುಟುಂಬದ ಕೆಲಸಗಳೆಲ್ಲ ಈಕೆಗೇ ಸಂಬಂಧಿಸಿದ್ದು. ಅಬ್ಬಬ್ಬಾ! ಮನೆ, ಮಕ್ಕಳು, ಗಂಡ, ಹೊರಗಿನ ಪ್ರಪಂಚ ಸಾಕಪ್ಪ ಸಾಕು ಅನಿಸಿದರೂ. ಎಕ್ಸಪ್ರೆಸ್ ಟ್ರೇನ್‍ನಂತೆ ಓಡಲೇಬೇಕು. ಈ ಪರಿವರ್ತನೆಗೆ ಸ್ತ್ರೀ-ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸಮಾನತೆಯೂ ಒಂದು ಕಾರಣವಿರಬಹುದು. 

ಭಾರತೀಯ ಸಂಸ್ಕೃತಿ:

ಭಾರತೀಯ ಸಂಸ್ಕೃತಿಯಂತೆ ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ’ ಹೀಗಿರುವಾಗ ತವರಿನ ದರ್ಶನ ಸಂದರ್ಶನ ವಿರಳವೇ. ಅಗೋಚರ ಗೆರೆಯೊಂದು ಸಂಬಂಧಗಳ ಮಧ್ಯೆ ಮೂಡಿ ಆತ್ಮೀಯತೆಗಿಂತ ಔಪಚಾರಿಕತೆಗೆ ಹೆಚ್ಚು ಒತ್ತು ಕೊಟ್ಟಂತೆ ಕಂಡು ಬರುತ್ತದೆ. ಕುಟುಂಬದ ಆಗು ಹೋಗುಗಳಿಗೆಲ್ಲ ಆಕೆಯನ್ನೇ ಹೊಣೆಯನ್ನಾಗಿಸಿದ ಅದೆಷ್ಟೋ ನಿದರ್ಶನಗಳಿವೆ. ಇತ್ತೀಚೆಗೆ ನ್ಯೂಕ್ಲಿಯರ್ ಕುಟುಂಬಗಳ ಸಂಖ್ಯೆ ಹೆಚ್ಚುತ್ತಿರುವಾಗ ಒಂದೋ ಎರಡೋ ಮಕ್ಕಳಿರುವ ಪೋಷಕರು ಅನಿವಾರ್ಯವಾಗಿ ಹತ್ತಿರ ಇರುವ ಮಕ್ಕಳು ಹೆಣ್ಣಾಗಲಿ ಗಂಡಾಗಲಿ ಅವರ ಮೇಲೆ ಅವಲಂಬಿತರಾಗಬೇಕಾದ ಅನಿವಾರ್ಯತೆ ಬಂದೊದಗಿದೆ. ಕೂಡುಕುಟುಂಬಗಳ ಪರಿಕಲ್ಪನೆಯೇ ಮಾಯವಾಗಿರುವಾಗ ಅತ್ತೆ ಮಾವ, ಅಪ್ಪ ಅಮ್ಮನನ್ನು ನೋಡಿಕೊಳ್ಳುವ ಹೊಣೆಯಿಂದ ನುಣುಚಿಕೊಳ್ಳುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಅತ್ತೆ ಮಾವಂದಿರನ್ನು ತಂದೆ ತಾಯಿಯೆಂದು ತಿಳಿದು ಸೇವೆ ಮಾಡಬೇಕು ಎಂದಿದೆ. ಆದರೆ ಗಂಡಿಗೆ ಆ ಕಟ್ಟುಪಾಡಿಲ್ಲ.

ಓಡುವ ನದಿಯಂತೆ:

ಕಾನನ ಬರಲಿ ಕೊರಕಲೆ ಇರಲಿ

ಓಡುವ ನದಿಯು ಸಾಗುವ ಹಾಗೆ 

ಹೂಬನವಿರಲಿ  ಮರಭೂಮಿ ಬರಲಿ

ನಿಲ್ಲದೆ ಗಾಳಿ ಬೀಸುವ ಹಾಗೆ 

ಕಾಡುಮೇಡೋ, ಗಿಡಗಂಟೆಗಳೋ, ಕಲ್ಲು ಬಂಡೆಗಳೋ, ಗಿರಿಕಂದರಗಳೋ, ನದಿ ತನ್ನ ಹಾದಿ ಹಿಡಿದು ಓಡುತ್ತಲೇ ಇರುವಂತೆ. ಕಷ್ಟ ಸಾವಿರಿದ್ದರೂ, ನೋವನ್ನು ನುಂಗಿ ನಲಿನಷ್ಟೇ ಹಂಚುವ ನಿಸ್ವಾರ್ಥಿ ಮನಸ್ಸು ತಾಯಿಯದು. ಜೀವನದ ಏರಿಳಿತಗಳು ಏನೇ ಇರಲಿ ತಾಯಿಯೆಂಬ ಜೀವನದಿ ಅಮೃತವಾಹಿನಿಯಾಗಿ ಸಾಗುತ್ತಲೇ ಇರುತ್ತದೆ

ಎಂಬುದು ಅಪ್ಪಟ ಸತ್ಯ. ಜಾಗತಿಕ ಮಟ್ಟದಲ್ಲಿ ಬಹು ದೊಡ್ಡ ಸಾಹಿತಿಗಳು, ದಾರ್ಶನಿಕರು,ತತ್ವಜ್ಞಾನಿಗಳು, ವಿಜ್ಞಾನಿಗಳು, ಸಂತರು, ಮಹಂತರು, ಮಹಾತ್ಮರು, ಮಹಾಪುರುಷರು, ವಿಭೂತಿಪುರುಷರು  ಅನಿಸಿಕೊಂಡವರ ಮೇಲೆ ಅಮ್ಮನ ಪ್ರಭಾವ ಅಪಾರವಾದುದು. 

ಪ್ರೀತಿಭರಿತ ಎರಡು ಮಾತು:

ಮೊದಲೆಲ್ಲ ಅಮ್ಮ, ಅಪ್ಪನ ಕೀಲುಗೊಂಬೆಯಂತೆ ಇರುತ್ತಿದ್ದಳು. ಈಗೀಗ ಆಕೆಯ ಮಾತಿಗೆ ಬೆಲೆ ಬಂದಿರುವುದು ಆರೋಗ್ಯಕಾರಿ ಬೆಳವಣಿಗೆ. ಕಾಣದ ದೇವರುಗಳ ಹುಡುಕುತ್ತ ಹೋಗುವುದಕ್ಕಿಂತ ನಮ್ಮೆಲ್ಲ ತಪ್ಪುಗಳನ್ನು ಕ್ಷಮಿಸಿ ಮುದ್ದಿಸುವ, ಸರಿ ದಾರಿಯಲ್ಲಿ ನಡೆಯುವಂತೆ ದೀಪವಾಗಿರುವ, ಕಾಣುವ ದೇವತೆಯಾಗಿರುವ,  ಅಮ್ಮನನ್ನು ಅಸಲಿಗೆ ಪ್ರೀತಿಸಬೇಕಿದೆ. ಹೃದಯ ಸಿರಿಯ ಅರಸಿಯಂತಿರುವ  ಆಕೆಯ ಹೃದಯದ ಪಿಸುಮಾತುಗಳ,ಚಿಕ್ಕಪುಟ್ಟ ಆಸೆಗಳ ಬಗ್ಗೆ ಉಡಾಫೆ ಬಿಡಬೇಕಿದೆ. ಅವಳೆದೆಯಲಿ ಮುಖ ಹುದುಗಿಸಿ ದಣಿದು ತಣಿದ ಮೈ ಮನಗಳನು ತಾಜಾಗೊಳಿಸಬೇಕಿದೆ. ಆಕೆಗೇನು ರಾಜ ವೈಭೋಗದ ಸುಖಸುಪ್ಪತ್ತಿಗೆಯಲ್ಲಿ ಮೆರೆಸಬೇಕೆಂದಿಲ್ಲ. ಬಂಗಾರ ಕೊಡಿಸಬೇಕಿಂದಿಲ್ಲ ಬಂಗಾರ ಬಣ್ಣದ ಸೀರೆ ರವಿಕೆ ಇಲ್ಲವೇ ಆಕೆ ಇಷ್ಟ ಪಡುವ ಏನನ್ನಾದರೂ ಕೈಯಲ್ಲಿಟ್ಟರೆ ಸಾಕು. ಆಕೆಗಾಗಿ ದಿನದ ಕೆಲ ಗಂಟೆಗಳು ಬೇಕಿಲ್ಲ. ಪ್ರೀತಿಭರಿತ ಎರಡು ಮಾತು ಸಾಕು.

ಮತ್ತಾವ ಭಾಗ್ಯವಿದೆ?

ಹತ್ತು ಮಕ್ಕಳ ಸಾಕುವ ಹೆತ್ತ ತಾಯಿ ಸಾಕಲು ಸಮಯವಿಲ್ಲ ಎಂಬ ನೆಪವೊಡ್ಡಿ ವೃದ್ಧಾಶ್ರಮದ ಕತ್ತಲೆ ಕೋಣೆಗೆ  ಸಾಗಹಾಕುವುದು ಬೇಡ. ಆಕೆ ಕಣ್ಣೀರು ಕೆನ್ನೆಗಳ ಹಾದಿಗುಂಟ ಹರಿಸುವುದ ಬೇಡ. ಕೆಡುಕುಗಳಿಂದ ಪಾರಾಗಿಸಿ ಒಳಿತಾದೊಂದು ಬದುಕನ್ನು ನೀಡಿದ  ಜನ್ಮದಾತೆಯ ದುಃಖವನು ಹಾಳೆಯ ಮಸಿಯಂತೆ ಹರಡಿಸುವುದು ಬೇಡ. ಮಾತೆ ಮಮತೆಯ ಸೀರೆಯ ಚುಂಗು ಹಿಡಿದು ‘ಅಮ್ಮ ನೀನು ನಕ್ಕರೆ ನಮ್ಮ ಬಾಳೇ ಸಕ್ಕರೆ.’ ಅಮ್ಮ, ನಿನ್ನ ನಗುವಿಲ್ಲವಾದರೆ ಈ ಮನೆ ಖಾಲಿ ಖಾಲಿ. ಬದುಕು ಬೇಸರ ಭಾರ ಅಂದರೆ ಅಷ್ಟೇ ಸಾಕು. ಈ ಜೀವಕ್ಕೆ ಜೀವ ನೀಡಿದ ಆ ಜೀವಕೆ ಬೆಚ್ಚನೆಯ ಭದ್ರತೆಯ ಸ್ಥಾನವಿತ್ತರೆ ಮಾನಸಿಕ ತೊಳಲಾಟಗಳು ಅನುಭವಿಸುವ ತಲ್ಲಣಗಳು ಶೂನ್ಯವಾಗುತ್ತವೆ. ‘ಅಮ್ಮಂದಿರ ದಿನಾಚರಣೆ’ ಒಂದು ದಿನವಲ್ಲ, ದಿನವೂ ಅವಳದ್ದೇ ದಿನ. ಮೇಲ್ನೋಟಕ್ಕೆ ಅಮ್ಮ ಒಂದು ಪಾತ್ರದಂತೆ ಕಂಡರೂ ಒಳ ಇಳಿದಂತೆಲ್ಲ ಅದು ಬಿಚ್ಚಿಡುವ ಲೋಕ ದಂಗು ಬಡಿಸುತ್ತದೆ. ಮನೆಯ ಮೂಲೆಯಲ್ಲಿ ಹಚ್ಚಿಟ್ಟ ಅಗರಬತ್ತಿಯಂತೆ ಅಮ್ಮ. ಆಕೆ ಮನೆಯಲಿದ್ದರೆ ಸುಖ ಸಂತೋಷದ ಪರಿಮಳ ಮನೆತುಂಬ ಸೂಸುವುದಲ್ಲವೇ? ನಾವು ಎಷ್ಟೇ ದೊಡ್ಡವರಾಗಿ ಬೆಳೆದರೂ ತಾಯಿಯ ಪಾಲಿಗೆ ಸಣ್ಣ ಮಕ್ಕಳೇ ಎಂಬುದನ್ನು ಮರೆಯುವಂತಿಲ್ಲ. ನಮ್ಮ ಏಳ್ಗೆ ಕಂಡಾಗ ಆಕೆಯ ಖುಷಿ ಹೇಳತೀರದು.

ಬದುಕು ಕೊಟ್ಟ ದೇವತೆ, ಕೈ ಹಿಡಿದು ನಡೆಸುವ ಮಹಾಮಾತೆ ಅಮ್ಮನ ಬಗ್ಗೆ ಹೇಳಲು ಪದಕೋಶಗಳಲ್ಲಿನ ಪದಗಳು ಸಾಲವು. ಸ್ನೇಹ ಪ್ರೇಮದ ಅಮೃತ ಉಣಿಸುವ, ಸತ್ಯ, ನ್ಯಾಯ ಮಾರ್ಗದಲ್ಲಿ ನಡೆಸುವ ಅಮ್ಮನನ್ನು ಸಂತೋಷವೆಂಬ ಹೂಗುಚ್ಛ ಕೊಟ್ಟು ಅಭಿನಂದಿಸುವುದಕ್ಕಿಂತ ಮತ್ತಾವ ಭಾಗ್ಯವಿದೆ ಅಲ್ಲವೇ?ಜಯಶ್ರಿ.ಜೆ. ಅಬ್ಬಿಗೇರಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group